ಟಿಕೆಟ್‌ಗಳ ರದ್ದತಿಯಿಂದ ಭಾರತೀಯ ರೈಲ್ವೆ ಭಾರೀ ಆದಾಯವನ್ನು ಸಂಗ್ರಹಿಸಿದೆ. 2019ರಿಂದ 2023ರ ನಡುವೆ ಟಿಕೆಟ್ ರದ್ದತಿಯಿಂದಲೇ ರೈಲ್ವೆ 6112 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂಬುವುದು ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯಿಂದಾಗಿ ತಿಳಿದು ಬಂದಿದೆ.
ರಾಯಪುರ ಮೂಲದ ಸಾಮಾಜಿಕ ಕಾರ್ಯಕರ್ತ ಕುನಾಲ್ ಶುಕ್ಲಾ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಮನವಿಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಸಚಿವಾಲಯವು ರದ್ದತಿಯಿಂದ ಕಡಿತಗೊಳಿಸಲಾದ ವರ್ಷವಾರು ಮೊತ್ತವನ್ನು ಬಹಿರಂಗಪಡಿಸಿದೆ.
ಆರ್‌ಟಿಐ ಮಾಹಿತಿ ಪ್ರಕಾರ 2019-20ನೇ ಸಾಲಿನಲ್ಲಿ ಟಿಕೆಟ್ ರದ್ಧತಿ 1,724.44 ಕೋಟಿ ರೂ, 2020-21ನೇ ಸಾಲಿನಲ್ಲಿ 710.54 ಕೋಟಿ ರೂ, 2021-22ನೇ ಸಾಲಿನಲ್ಲಿ 1,569 ಕೋಟಿ ರೂ, 2022-23ನೇ ಸಾಲಿನಲ್ಲಿ ಟಿಕೆಟ್ ರದ್ದತಿಯಿಂದ 2109.74 ಕೋಟಿ ರೂ (ತಾತ್ಕಾಲಿಕ) ಸಂಗ್ರಹ ಮಾಡಲಾಗಿದೆ.
ಇದನ್ನು ಓದಿದ್ದೀರಾ? ರೈಲು ಅಪಘಾತದ ನಂತರ ಸಾವಿರಾರು ಟಿಕೆಟ್ ರದ್ದು; ಐಆರ್‌ಸಿಟಿಸಿ ನಿರಾಕರಣೆ
ಈ ನಾಲ್ಕು ವರ್ಷದ ಅವಧಿಯಲ್ಲಿಯೇ ಒಟ್ಟಾಗಿ ಭಾರತೀಯ ರೈಲ್ವೆಯು ಕೇವಲ ಟಿಕೆಟ್ ರದ್ದತಿಯಿಂದ 6,112 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು “ಕಳೆದ ಹತ್ತು ವರ್ಷಗಳಲ್ಲಿ ಪ್ರಯಾಣಿಕರ ದರ ಶೇಕಡ 85ರಷ್ಟು ಏರಿಸಲಾಗಿದೆ” ಎಂದು ಕುನಾಲ್ ಶುಕ್ಲಾ ಹೇಳಿದ್ದಾರೆ.
ವೇಟಿಂಗ್ ಲಿಸ್ಟ್‌ಗಾಗಿ ರೈಲ್ವೆ ಟಿಕೆಟ್‌ಗಳನ್ನು ರೈಲ್ವೇ ಕೌಂಟರ್ ಟಿಕೆಟ್ ಅಥವಾ ಆನ್‌ಲೈನ್ ಇ-ಟಿಕೆಟ್ ಮೂಲಕ ಪಡೆಯಬಹುದು. ಆದರೆ ಟಿಕೆಟ್ ರದ್ದು ಮಾಡಿದ ಕಾರಣಕ್ಕೆ ಶುಲ್ಕವಾಗಿ ಟಿಕೆಟ್ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಆದರೆ ಇದು ರೈಲ್ವೆಗೆ ಸೇರುವುದಿಲ್ಲ ಎಂದು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಸ್‌ನ (ಎಸ್‌ಇಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಕಾಸ್ ಕಶ್ಯಪ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು
“ಟಿಕೆಟ್ ರದ್ದತಿಯ ಸಂಪೂರ್ಣ ಮೊತ್ತವು ಸ್ವತಂತ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ರೈಲ್ವೆಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್‌ಗೆ (ಐಆರ್‌ಸಿಟಿಸಿ) ಹೋಗುತ್ತದೆ. ಭಾರತದಾದ್ಯಂತ ಪ್ರತಿದಿನ ಸುಮಾರು 70-80 ಲಕ್ಷದಷ್ಟು ಟಿಕೆಟ್‌ಗಳನ್ನು ನೀಡಲಾಗುತ್ತದೆ. ರದ್ದತಿಯಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಲ್ಲ” ಎಂದು ಕಶ್ಯಪ್ ಹೇಳಿದ್ದರು.
ಇನ್ನು ಇನ್ನೊಂದು ಆರ್‌ಟಿಐ ಅರ್ಜಿಯಿಂದ 2020ರಿಂದ ಏಪ್ರಿಲ್ 2023 ರವರೆಗೆ 67,600 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎಸ್‌ಇಸಿಎಆರ್ ಒಪ್ಪಿಕೊಂಡಿದೆ. ನಿರಂತರವಾಗಿ ರೈಲು ರದ್ದುಗೊಳಿಸುವುದರಿಂದಾಗಿ ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂದು ಹೇಳಿ ಕಮಲ್ ದುಬೆ ಎಂಬವರು ಬಿಲಾಸ್‌ಪುರದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.