ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ 14 ಟ್ರಿಪ್‌ಗಳಿಗೆ ಸಂಚರಿಸುವ (ವಾರಕ್ಕೆ ಮೂರು ಬಾರಿ) ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06261/06262) ರೈಲುಗಳ ಸೇವೆ ರದ್ದುಪಡಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಎಸ್ಎಂವಿಟಿ ಬೆಂಗಳೂರಿನಿಂದ ಮೇ 29 ರಿಂದ ಜೂನ್ 27ರವರೆಗೆ ಮತ್ತು ಕಲಬುರಗಿಯಿಂದ ಮೇ 30 ರಿಂದ ಜೂನ್ 28 ಸಂಚರಿಸಲಿರುವ ವಿಶೇಷ ರೈಲುಗಳು ರದ್ದಾಗಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೇಸಿಗೆ ರಜೆ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿದಂದ ಈ ವಿಶೇಷ ರೈಲು ಆರಂಭಿಸಲಾಗಿತ್ತು.
ಇತರೆಡೆ ರೈಲು ಸಂಚಾರ ವ್ಯತ್ಯಯ
ಪ್ಲಾಟ್‌ಫಾರ್ಮ್ ವಿಸ್ತರಣೆಗಾಗಿ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಲ್ಲಿ 36 ಗಂಟೆಗಳ ಸಂಚಾರ ನಿರ್ಬಂಧವಿದೆ. ಹೀಗಾಗಿ, ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಮೇ 31 ಮತ್ತು ಜೂನ್ 2ರ ನಡುವೆ 69 ದೂರ ಸಂಚಾರದ ರೈಲುಗಳು ರದ್ದಾಗಿವೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಲ್ಲಿ 24 ಕೋಚ್ ಸಾಮರ್ಥ್ಯದ ರೈಲುಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದ ವಿಸ್ತರಣಾ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಪರಿಣಾಮ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಇತರ ರೈಲುಗಳ ಸಂಚಾರದ ಮೇಲೆಯೂ ಪರಿಣಾಮ ಬೀರಿದೆ.
ದಕ್ಷಿಣ ರೈಲ್ವೆಯು ಸದ್ಯ ಉಪನಗರ ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ. ಚೆನ್ನೈ ಬೀಚ್–ಚೆಂಗಲ್‌ಪೇಟ್ ಎಮು ಮೂಲಕ ಸಂಚರಿಸುವವರು ಚೆನ್ನೈ ಬೀಚ್‌ನಿಂದ ಹೊರಡುವುದು ಸಿಂಗಪೆರುಮಾಳ್ ಕೋಯಿಲ್‌ವರೆಗೆ ಮಾತ್ರ ಸಂಚರಿಸಬಹುದಾಗಿದೆ.
ದಕ್ಷಿಣ ರೈಲ್ವೆಯು ಭಾನುವಾರ ರಾತ್ರಿ ತಿರುಚ್ಚಿಯಿಂದ ಕುಂಭಕೋಣಂ ಮತ್ತು ಮೈಲಾಡುತುರೈ ಮೂಲಕ ತಾಂಬರಂಗೆ ಮೆಮು ವಿಶೇಷ ರೈಲನ್ನು ಓಡಿಸಲಿದೆ. ಆದರೆ, ಇದರಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇರುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಮಳೆ ನೀರು ಒಳಚರಂಡಿಗೆ ಹರಿಬಿಡುತ್ತಿರುವ ಜನರ ವಿರುದ್ಧ ಕ್ರಮ; ಜಲಮಂಡಳಿ ಅಧ್ಯಕ್ಷ
ಮೈಸೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳ ಪರಿಶೀಲನೆ
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ ಶ್ರೀವಾಸ್ತವ ಅವರು ಮೇ 27ರಂದು ಮೈಸೂರು ರೈಲು ನಿಲ್ದಾಣವನ್ನು ಪರಿಶೀಲನೆ ನಡೆಸಿದರು. ಮೈಸೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇರುವ ಸೌಲಭ್ಯಗಳನ್ನು ಪರಿಶೀಲನೆ ಮಾಡಿದರು.
ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಪ್ಲಾಟ್‌ಫಾರ್ಮ್‌ಗಳು, ಟ್ರ್ಯಾಕ್‌ಗಳು, ಕಟ್ಟಡಗಳು ಮತ್ತು ಇತರ ರಚನೆಗಳ ಸ್ಥಿತಿಗತಿ, ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ನಿಲ್ದಾಣದ ಆವರಣದ ಸ್ವಚ್ಛತೆ, ಪ್ಲಾಟ್‌ಫಾರ್ಮ್‌ಗಳು, ಕಾಯುವ ಪ್ರದೇಶಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಪ್ರಯಾಣಿಕರ ಸೌಲಭ್ಯಗಳು ಇತ್ಯಾದಿಗಳ ಕುರಿತು ಅವರು ತಮ್ಮ ತಪಾಸಣೆಯ ಸಮಯದಲ್ಲಿ ನಾನಾ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಮೈಸೂರಿನ ಹೊಸ ಗೂಡ್ಸ್ ಟರ್ಮಿನಲ್, ಮೇಟಗಳ್ಳಿ ಬ್ಲಾಕ್ ನಿಲ್ದಾಣ ಮತ್ತು ಬೆಳಗುಳ ನಿಲ್ದಾಣವನ್ನು ಪರಿಶೀಲಿಸಿದ ಅವರು, ಹೆಚ್ಚುವರಿಯಾಗಿ ಮೈಸೂರು ನಿಲ್ದಾಣ ಮತ್ತು ಅಂಗಳವನ್ನು ಸಮೀಕ್ಷೆ ಮಾಡಿದರು ಮತ್ತು ಟ್ರ್ಯಾಕ್ ನಿರ್ವಾಹಕರು ಮತ್ತು ಇತರ ಮುಂಚೂಣಿ ಸಿಬ್ಬಂದಿ ಜತೆಗೆ ಸಂವಾದ ನಡೆಸಿದರು.
ಪರಿಶೀಲನೆಯಲ್ಲಿ ಮೈಸೂರು ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ಶಿಲ್ಪಿ ಅಗರ್ವಾಲ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.