ಮಹಾರಾಷ್ಟ್ರ | ಬಿಜೆಪಿ ಗೆಲುವಿನಲ್ಲಿ ಆರ್‌ಎಸ್‌ಎಸ್‌ ಪಾತ್ರ; ಕಾಂಗ್ರೆಸ್‌ ಕಲಿಯಬೇಕಾದ ಪಾಠ

Date:

Advertisements
ಕಾಂಗ್ರೆಸ್ ಚುನಾವಣೆ ದಿನಾಂಕ ಪ್ರಕಟವಾದ ನಂತರ ಒಂದಿಷ್ಟು ಚುರುಕಾಯಿತೆ ವಿನಾ ಬಿಜೆಪಿ ನೇತೃತ್ವದ ಮಹಾಯುತಿ ಚುನಾವಣಾ ತಂತ್ರಗಳತ್ತ ಗಮನ ಹರಿಸಲಿಲ್ಲ. ತಾವೂ ಎರಡೂವರೆ ವರ್ಷ ಅಧಿಕಾರದಲ್ಲಿ ಮಾಡಿದ್ದ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರಿಗೆ ಅರಿವು ಮೂಡಿಸಲಿಲ್ಲ. ಬಿಜೆಪಿಯ ದ್ವೇಷ ಭಾಷಣವನ್ನು ಜನರಿಗೆ ಮುಟ್ಟುವ ಕೆಲಸವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಗೆಲುವು ನಮ್ಮದೇ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದರೆ ಹೊರತು ಅದಕ್ಕೆ ತಕ್ಕಂತ ಕಾರ್ಯತಂತ್ರವನ್ನು ರೂಪಿಸಲಿಲ್ಲ.

ಮಹಾರಾಷ್ಟ್ರದಲ್ಲಿ ಕೇವಲ 6 ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ನೇತೃತ್ವದ ‘ಮಹಾಯುತಿ’ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಅಮೋಘ ಸಾಧನೆ ಮಾಡಿದ್ದ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಈಗ ವಿಪಕ್ಷಗಳ ಸ್ಥಾನದಷ್ಟು ಸೀಟು ಪಡೆಯಲು ವಿಫಲವಾಗಿ ನೆಲಕಚ್ಚಿವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ ಒಕ್ಕೂಟವೊಂದು 234 ಸ್ಥಾನ ಗಳಿಸಿರುವುದು ಇದೆ ಮೊದಲಾಗಿದೆ. ಅದಲ್ಲದೆ ಬಿಜೆಪಿ ಗಳಿಸಿದ 132 ಸ್ಥಾನ ಕೂಡ 1990ರ ದಶಕದ ನಂತರ ಯಾವುದೇ ಪಕ್ಷ ಇಷ್ಟು ಸ್ಥಾನಗಳನ್ನು ದಾಖಲಿಸಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು 48 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟದ ಎಂವಿಎ 30 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ‘ಮಹಾಯುತಿ’ ಒಕ್ಕೂಟ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕೇವಲ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಕೇವಲ ಆರು ತಿಂಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ‘ಮಹಾಯುತಿ’ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅದಲ್ಲದೆ ವಿಧಾನಸಭೆ ಗೆಲುವಿನಲ್ಲಿ ತಂತ್ರ ಹೆಣೆದು ಪ್ರಮುಖ ಪಾತ್ರ ವಹಿಸಿದ್ದವರು ಯಾರು ಎಂಬ ಬಗ್ಗೆ ಕೂಡ ಚರ್ಚೆ ಶುರುವಾಗಿದೆ.

ಮಹಾಯುತಿ ಇತಿಹಾಸ ನಿರ್ಮಿಸಿದ್ದರೂ ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ಈಗ ಮುನ್ನೆಲೆಗೆ ಬರುತ್ತಿದೆ. ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಬಿಜೆಪಿಗೆ ಆರ್‌ಎಸ್‌ಎಸ್‌ ಬೆಂಬಲದ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು. ನಡ್ಡಾ ಹೇಳಿಕೆ ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ತಾನು ಶಿಫಾರಸುಗೊಳಿಸಿದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧ ಹಳಸಿದ್ದ ಕಾರಣ ನಡ್ಡಾ ಈ ಹೇಳಿಕೆ ನೀಡಿದ್ದರು. ಲೋಕಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಜಯಗಳಿಸಲೇಬೇಕೆಂದು ಪಣವನ್ನು ತೆಗೆದುಕೊಂಡಿತ್ತು. ಇದರ ಭಾಗವಾಗಿ ಮಹಾರಾಷ್ಟ್ರ ಚುನಾವಣೆಗೂ ಮೊದಲು ಮುಂಬೈನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಮಹತ್ವದ ಸಮನ್ವಯ ಸಭೆ ನಡೆಸಿದ್ದರು.

ಕಠೋರ ಆರ್‌ಎಸ್‌ಎಸ್‌ ಕಾರ್ಯಕರ್ತ ಅತುಲ್‌ ಲಿಮಾಯೆ

Advertisements

ಜನಗಳ ಮಧ್ಯೆ ಇಷ್ಟೆಲ್ಲ ದ್ವೇಷಗಳನ್ನು ಹರಡಿ ಬಿಜೆಪಿಗೆ ಮತಗಳಾಗಿ ಪರಿವರ್ತಿಸಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅತುಲ್‌ ಲಿಮಾಯೆ ಎಂಬ ಕಠೋರ ಆರ್‌ಎಸ್‌ಎಸ್‌ ಕಾರ್ಯಕರ್ತ. ಸಮನ್ವಯ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈತ ನಾಸಿಕ್‌ ಮೂಲದವ. 54 ವರ್ಷದ ಅತುಲ್ ಸಂಘ ಪರಿವಾರ ಸೇರುವ ಮೊದಲು 1990ರ ದಶಕದಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆರ್‌ಎಸ್‌ಎಸ್‌ನ ಪಶ್ಚಿಮ ಪ್ರಾಂತದ ಮುಖ್ಯಸ್ಥನ ಹುದ್ದೆ ನಿಭಾಯಿಸಿದ್ದ ಅತುಲ್‌ ಅವರನ್ನು ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಲು ನೇಮಿಸಲಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರಲ್ಲದೆ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಸಂಯೋಜಕ ಅರುಣ್ ಕುಮಾರ್ ಅವರೊಂದಿಗೆ ಲಿಮಾಯೆ ನಿರಂತರ ಸಮನ್ವಯತೆಯೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಆರೆಸ್ಸೆಸ್‌ನ ಪ್ರಚಾರ ವಿಭಾಗಕ್ಕೆ ಸಂಬಂಧಿಸಿದ ಮುಖಂಡರ ಬೃಹತ್ ಸಮಾವೇಶ ನಡೆಸುವ ಮೂಲಕ ಮಹಾರಾಷ್ಟ್ರ ಚುನಾವಣೆಗೆ ತಯಾರಿ ಆರಂಭಿಸಿ, ಸಂಘದ ಶಾಖಾ ಮಟ್ಟದ ಕಾರ್ಯಕರ್ತರನ್ನೆಲ್ಲ ಒಗ್ಗೂಡುವಂತೆ ನೋಡಿಕೊಂಡಿದ್ದವರು ಅತುಲ್.

ಸಮನ್ವಯ ಸಭೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಆರ್‌ಎಸ್‌ಎಸ್‌ ನಾಯಕರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನ ಕುರಿತ ವಿವರಣೆ, ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ, ದುರ್ಬಲವಾದ ಕ್ಷೇತ್ರಗಳಲ್ಲಿ ಯಾವ ರೀತಿ ಸುಧಾರಿಸುವುದು ಎಂಬುದರ ಕುರಿತು ಚರ್ಚೆ ನಡೆಸಲಾಗಿತ್ತು. ನಂತರ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ನಿರ್ಧರಿಸಲಾಯಿತು. ಪ್ರತಿ ಗ್ರಾಮ, ನಗರಗಳಿಗೆ ಒಂದಷ್ಟು ಮಂದಿಯ ಸ್ವಯಂಸೇವಾ ಸಂಘದ ಗುಂಪು ರಚಿಸಿ ಮನೆಮನೆಗೆ ತೆರಳಿ ವಿಪಕ್ಷಗಳ ಎಂವಿಎ ಒಕ್ಕೂಟದ ಬಗ್ಗೆ ಅಪಪ್ರಚಾರ ಮಾಡಲು ಗುಂಪುಗಳಿಗೆ ತಿಳಿಸಲಾಯಿತು.

ಹತ್ತರಿಂದ ಹನ್ನೆರಡರಷ್ಟಿದ್ದ ಗುಂಪು ಪ್ರತಿ ಮನೆ ಮನೆಗೆ ತೆರಳಿ ವಿಪಕ್ಷಗಳು ಹೇಗೆ ಜಾತಿ ಜಾತಿ ಹೆಸರಿನಲ್ಲಿ ಹಿಂದೂ ಸಮುದಾಯವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಕರಪತ್ರವನ್ನು ಹಂಚಲು ಆರಂಭಿಸಿದರು. ಲವ್‌ ಜಿಹಾದ್‌ನಿಂದ ಏನಾಗುತ್ತಿದೆ. ವಕ್ಫ್‌ ಬೋರ್ಡ್‌ ಹೇಗೆ ಜಾಗಗಳನ್ನು ಕಬಳಿಸುತ್ತಿದೆ. ಅಕ್ರಮ ವಲಸೆಯಿಂದ ಎಷ್ಟು ಸಮಸ್ಯೆ ಆಗುತ್ತಿದೆ ಇತ್ಯಾದಿ ಪ್ರಚೋದನಾಕಾರಿ ವಿವರಗಳನ್ನು ಕರಪತ್ರದಲ್ಲಿ ತಿಳಿಸಲಾಗಿತ್ತು.

Atul lamaye RSS 1

ರಾಹುಲ್‌ ಗಾಂಧಿ ಅವರು ತಮ್ಮ ಚುನಾವಣಾ ಪ್ರಚಾರದ ಭಾಷಣದಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಬಿಜೆಪಿ ಸಂವಿಧಾನ ಬದಲಾಯಿಸಲು ಹೋಗುತ್ತಿದೆ ಎಂದು ಆರೋಪಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅತುಲ್‌ ನೇತೃತ್ವದ ಆರ್‌ಎಸ್‌ಎಸ್ ಕಾರ್ಯಕರ್ತರ ಸಂಘ ‘ಹರ್ ಘರ್ ಸಂವಿಧಾನ’ ಎಂಬ ಅಭಿಯಾನ ಆರಂಭಿಸಿತ್ತು. ದಲಿತರ ಮನೆ ಮನೆಗೆ ಹೋಗಿ ಕಾಂಗ್ರೆಸ್‌ ಹೇಗೆ ಯಾವ ರೀತಿ ದಲಿತರಿಗೆ ಅನ್ಯಾಯ ಮಾಡುತ್ತಿದೆ? ಅಂಬೇಡ್ಕರ್‌ ಅವರನ್ನು ಯಾವ ರೀತಿ ನಡೆಸಿಕೊಂಡಿತ್ತು ಇತ್ಯಾದಿ ವಿಷಯಗಳ ಇಟ್ಟುಕೊಂಡು ತಳ ಮಟ್ಟದಲ್ಲಿ ಜನರ ಜೊತೆ ಸಭೆ ನಡೆಸಿ ಚುನಾವಣೆಯಲ್ಲಿ ಯಶಸ್ಸು ಕಂಡರು.

ಈ ಸುದ್ದಿ ಓದಿದ್ದೀರಾ? ಐಪಿಎಲ್ ಜನಪ್ರಿಯತೆ | ಮನರಂಜನೆ, ಬಹುಕೋಟಿ ಆದಾಯ ಹಾಗೂ ಕರಾಳ ಮುಖ

ಆರ್‌ಎಸ್‌ಎಸ್‌ ಕಾರ್ಯಕರ್ತರು ಮನೆ ಮನೆ ಪ್ರಚಾರದ ಜತೆಗೆ ಇತರ ಹಿಂದುಳಿದ ವರ್ಗಗಳ, ಸಣ್ಣ ಸಮುದಾಯಗಳ ನಾಯಕರೊಂದಿಗೆ ಸಭೆ ಸಂವಾದವನ್ನು ಹೆಚ್ಚು ತೊಡಗಿಸಿಕೊಂಡರು. ಬಿಜೆಪಿಯಿಂದ ಕೆಲ ಸಮುದಾಯಗಳಿಗೆ ಚುನಾವಣಾ ರಾಜಕೀಯದಲ್ಲಿ ಸಾಕಷ್ಟು ಪ್ರಾತಿನಿಧ್ಯ ಮತ್ತು ಕಲ್ಯಾಣ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಮನವೊಲಿಸಿದರು. ಲಿಮಾಯೆ ತಂಡ ಸಣ್ಣಪುಟ್ಟ ಸಮುದಾಯದ ಹತ್ತಾರು ನಾಯಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದರು. ಮರಾಠ ನಾಯಕ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರನ್ನು ಸೆಳೆಯಲು ಲಿಮಾಯೆ ಮತ್ತು ಅವರ ತಂಡ ಪ್ರಮುಖ ಪಾತ್ರ ವಹಿಸಿತು. ಅಧಿಕಾರಕ್ಕೆ ಬಂದರೆ ಒಬಿಸಿ ಎಂದು ವರ್ಗೀಕರಿಸದೆ ಮರಾಠರಿಗೆ ಮೀಸಲಾತಿಯನ್ನು ನೀಡುತ್ತೇವೆ ಎಂದು ಭರವಸೆ ನೀಡಿ ಮನೋಜ್ ಜಾರಂಗೆ ಪರವಿದ್ದ ಮತಗಳನ್ನು ಕೂಡ ತಮ್ಮತ್ತ ಸೆಳೆದುಕೊಂಡರು. ಅತುಲ್‌ ಲಿಮಾಯೆ ವ್ಯವಸ್ಥಿತವಾದ ಕಾರ್ಯತಂತ್ರ ಹೆಣೆದು ಹಿಂದುಳಿದ, ದಲಿತ, ಇತರ ಸಣ್ಣಪುಟ್ಟ ಸಮುದಾಯಗಳ ನಾಯಕರೊಂದಿಗೆ ಸುಮಾರು 60 ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಇವೆಲ್ಲದರ ಜೊತೆ ಬೆಂಕಿ ಉಗುಳುವ ಯೋಗಿ ಆದಿತ್ಯನಾಥ್‌ರಂಥ ನಾಯಕರನ್ನು ಪ್ರಚಾರದಲ್ಲಿ ಹತ್ತಾರು ಬಾರಿ ಬಳಸಿಕೊಳ್ಳಲಾಯಿತು.   

ಕೇಂದ್ರದ ರಾಜಕೀಯ ಲೆಕ್ಕಾಚಾರ ಮತ್ತು ಲಡ್ಕಿ ಬಹಿನ್ ಯೋಜನೆ

ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಬಹುಮತ ಗಳಿಸಲು ಕೇಂದ್ರ ಸರ್ಕಾರದ ರಾಜಕೀಯ ಲೆಕ್ಕಾಚಾರ ಹಾಗೂ ”ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನೆ” ಕೂಡ ನೆರವಾಗಿದೆ. ಕಳೆದ ಬಾರಿ ಮಹಾರಾಷ್ಟ್ರದಲ್ಲಿ 2019ರಲ್ಲಿ ಸೆ 27ರಂದು ಅಧಿಸೂಚನೆ ಪ್ರಕಟವಾಗಿ ಅಕ್ಟೋಬರ್ 21ರಂದು ಚುನಾವಣೆ ನಡೆದು ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ ಈ ಬಾರಿ ಚುನಾವಣೆ ಮುಂದೂಡಿಕೆಯಾಗಿತ್ತು. ಕೇಂದ್ರ ಸರ್ಕಾರದ ಪ್ರಭಾವವಿರದೆ ಚುನಾವಣಾ ಆಯೋಗ ಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಯಾರಿಗೂ ತಿಳಿಯದ ವಿಷಯವಲ್ಲ. ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿರುವ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನೆ’ ಯೋಜನೆಯು ಚುನಾವಣೆ ಮುಂದೂಡಲು ಕಾರಣವಾಗಿತ್ತು. ಆಡಳಿತಾರೂಢ ಮಹಾಯುತಿ ಮೈತ್ರಿ ಸರ್ಕಾರಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಚುನಾವಣಾ ಆಯೋಗ ಪರೋಕ್ಷವಾಗಿ ನೆರವಾಗಿತ್ತು.

ಮಹಿಳೆಯರಿಗೆ 1500 ರೂ. ಮಾಸಿಕ ನೆರವು ನೀಡುವ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನೆ’ ಯೋಜನೆ ರಾಜ್ಯಾದ್ಯಂತ ಎಲ್ಲ ಅರ್ಹರಿಗೆ ತಲುಪಲು ಕನಿಷ್ಠ ಒಂದೆರಡು ತಿಂಗಳ ಅಗತ್ಯವಿತ್ತು. ಅಷ್ಟರೊಳಗೆ ಚುನಾವಣೆ ಘೋಷಣೆಯಾದರೆ ಯೋಜನೆಗೆ ಹಿನ್ನಡೆ ಉಂಟಾಗುತ್ತಿತ್ತು. ನೀತಿ ಸಂಹಿತೆ ಜಾರಿಯಾದಲ್ಲಿ ಬಿಜೆಪಿ- ಶಿವಸೇನೆ- ಎನ್‌ಸಿಪಿ ಸರ್ಕಾರದ ಉದ್ದೇಶ ವಿಫಲವಾಗುತ್ತಿತ್ತು. ಚುನಾವಣೆ ಮುಂದಕ್ಕೆ ಹೋದರೆ ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯಲು ಸಾಧ್ಯವಾಗಲಿದೆ ಎನ್ನುವ ಕಾರ್ಯತಂತ್ರ ಮೈತ್ರಿಕೂಟದ್ದಾಗಿತ್ತು. ಈ ಕಾರಣದಿಂದಲೇ ಚುನಾವಣೆ ಮುಂದೂಡಲಾಗಿದೆ ಎಂದು ಯೋಜನೆ ಆರಂಭಿಸಿದ ನಂತರ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ಮತದಾನಕ್ಕೂ ಕೆಲವು ದಿನ ಮುನ್ನ ಮಹಿಳೆಯರಿಗೆ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದ್ದು ಕೂಡ ಮಹಾಯುತಿ ಸರ್ಕಾರಕ್ಕೆ ಮತಗಳನ್ನು ತಂದುಕೊಡಲು ಮುಖ್ಯವಾಗಿ ನೆರವಾಗಿತ್ತು. ಇವೆಲ್ಲದರ ಪರಿಣಾಮ ಬಿಜೆಪಿಯೊಂದೆ 132 ಸ್ಥಾನಗಳನ್ನು ಗೆಲ್ಲುವುದರ ಜೊತೆ ಮಹಾಯುತಿ 234 ಸ್ಥಾನ ಗಳಿಸಿ ಐತಿಹಾಸಿಕ ಗೆಲುವನ್ನು ದಾಖಲಿಸಿತು.

ಕಾಂಗ್ರೆಸ್ ಕಲಿಯಬೇಕಾದ ಪಾಠ

ಎಲ್ಲ ಚುನಾವಣೆಗಳಂತೆ ಹೀನಾಯವಾಗಿ ಸೋತ ನಂತರ ಸೋಲಿಗೆ ಹೊಣೆ ಯಾರೆಂಬುದನ್ನು ಪಕ್ಷ ನಿರ್ಧರಿಸಬೇಕು ಮತ್ತು ಅದಕ್ಕೆ ಕಾರಣರಾದ ನಾಯಕರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಪಕ್ಷದೊಳಗಡೆ ಕೇಳಿ ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಅನಿರೀಕ್ಷಿತ ಮತ್ತು ಅವಮಾನಕರ ಸೋಲಿನ ನಂತರ, ಕಾಂಗ್ರೆಸ್ ನಾಯಕತ್ವವು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯೋಚಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸೋಲಿನ ಪರಾಮರ್ಶೆ ನಡೆಸಿದ ನಂತರ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಕಾಂಗ್ರೆಸ್ ಉಸ್ತುವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.

Kharge and rahul 1

ಮಹಾರಾಷ್ಟ್ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿರುವ ಕಾಂಗ್ರೆಸ್ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯಿಂದ ಹಲವು ಪಾಠಗಳನ್ನು ಕಲಿಯಬೇಕಿದೆ. ಸೀಟು ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಕಾಂಗ್ರೆಸ್ ಸುಮಾರು ತಪ್ಪುಗಳನ್ನು ಮಾಡಿತು. ಕಾಂಗ್ರೆಸ್ ರಾಜ್ಯದಲ್ಲಿ ಕೇವಲ 16 ಸ್ಥಾನಗಳಲ್ಲಿ ಜಯಗಳಿಸಲು ಸಾಧ್ಯವಾಗಿದೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕೂಡ ಸೋತಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕೇವಲ 208 ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಸೋಲಿಗೆ ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟ ವರ್ಸೊವಾ ಮತ್ತು ಬೈಕುಲ್ಲಾ ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟ ಕೊಡಲಾಯಿತು. ಮುಂಬೈನಲ್ಲಿ ಕೆಲವೇ ಸಂಖ್ಯೆಯ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತು. ಲೋಕಸಭೆಯಲ್ಲಿ ಪಕ್ಷದ ಯಶಸ್ಸಿನ ನಂತರ ಸ್ಥಳೀಯ ನಾಯಕರು ಹಿರಿಯ ನಾಯಕರೊಂದಿಗೆ ಚರ್ಚಿಸದೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು.

ಸ್ಥಾನ ಹಂಚಿಕೆ ಮತ್ತು ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯದಲ್ಲಿನ ಒಕ್ಕೂಟ ಮಹಾ ವಿಕಾಸ್‌ ಅಘಾಡಿಯಲ್ಲಿನ ಗೊಂದಲಗಳು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಿತು. ಪ್ರಮುಖ ಕಾಂಗ್ರೆಸ್ ನಾಯಕರಾದ ಚಂದ್ರಕಾಂತ್ ಹಂಡೋರ್, ಸುರೇಶ್ ಶೆಟ್ಟಿ, ಭಾಯ್ ಜಗತಾಪ್ ಮತ್ತು ಇತರ ಪ್ರಮುಖ ನಾಯಕರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದು ಕೂಡ ಅಭ್ಯರ್ಥಿಗಳ ಸೋಲಿಗೆ ಇನ್ನಷ್ಟು ಕಾರಣವಾಯಿತು. ಮುಂಬೈ ಅಧ್ಯಕ್ಷರಾದ ವರ್ಷಾ ಗಾಯಕ್‌ವಾಡ್‌ ವಿಧಾನಸಭೆಯ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಮಗೆ ಬೇಕಾದ ಅಭ್ಯರ್ಥಿಗಳಿಗಾಗಿ ಮಾತ್ರ ಕಣಕ್ಕಿಳಿಸಿ ಇತರ ಗೆಲ್ಲಬೇಕಾದ ಅಭ್ಯರ್ಥಿಗಳು ಹಾಗೂ ಕ್ಷೇತ್ರಗಳನ್ನು ನಿರ್ಲಕ್ಷಿಸಿದರು.

ಕಾಂಗ್ರೆಸ್ ಚುನಾವಣೆ ದಿನಾಂಕ ಪ್ರಕಟವಾದ ನಂತರ ಒಂದಿಷ್ಟು ಚುರುಕಾಯಿತೆ ವಿನಾ ಬಿಜೆಪಿ ನೇತೃತ್ವದ ಮಹಾಯುತಿ ಚುನಾವಣಾ ತಂತ್ರಗಳತ್ತ ಗಮನ ಹರಿಸಲಿಲ್ಲ. ತಾವೂ ಎರಡೂವರೆ ವರ್ಷ ಅಧಿಕಾರದಲ್ಲಿ ಮಾಡಿದ್ದ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರಿಗೆ ಅರಿವು ಮೂಡಿಸಲಿಲ್ಲ. ಬಿಜೆಪಿಯ ದ್ವೇಷ ಭಾಷಣವನ್ನು ಜನರಿಗೆ ಮುಟ್ಟುವ ಕೆಲಸವನ್ನು ಸರಿಯಾಗಿ ನಿರ್ವಹಿಸಲಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂಥ ಒಂದಿಷ್ಟು ಹಿರಿಯ ನಾಯಕರು ಮಾತ್ರ ಪ್ರಚಾರದ ಕೇಂದ್ರ ಬಿಂದುಗಳಾದರು. ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಹೆಚ್ಚು ಪ್ರಯತ್ನಿಸಲಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಶಕ್ತಿ ತುಂಬಲಿಲ್ಲ. ಸ್ಥಳೀಯ ನಾಯಕರು ಚುನಾವಣೆಯಲ್ಲಿ ತಾವು ಗೆದ್ದುಬಿಡುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದರೆ ಹೊರತು ಅದಕ್ಕೆ ತಕ್ಕಂತ ಕಾರ್ಯತಂತ್ರವನ್ನು ಮಾಡಲಿಲ್ಲ. ಹರಿಯಾಣದಲ್ಲೂ ಸೋಲುಂಡ ನಂತರ ಮಹಾರಾಷ್ಟ್ರದಲ್ಲಿ ಎಚ್ಚೆತ್ತುಕೊಳ್ಳಲಿಲ್ಲ. ಇನ್ನು ಮುಂದಾದರೂ ತಳ ಮಟ್ಟದಿಂದ, ಕಾರ್ಯಕರ್ತರಿಗೆ ಚೈತನ್ಯ ತುಂಬುತ್ತ, ಆಳುವವರ ಆಡಳಿತದ ಬಗ್ಗೆ ಜನರಿಗೆ ಮನಮುಟ್ಟುವ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಿದರೆ ಯಶಸ್ಸು ಸಾಧಿಸಲು ನೆರವಾಗಬಹುದು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X