2026ರ ನೈಋತ್ಯ ಮುಂಗಾರು (ಜೂನ್-ಜುಲೈ) ಈ ಬಾರಿ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಕರ್ನಾಟಕವೂ ಮಳೆ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತ ಹವಾಮಾನ ಇಲಾಖೆ (IMD) ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಎಸ್‌ಬಿಐ ರಿಸರ್ಚ್ ವರದಿಯ ಪ್ರಕಾರ, ಈ ವರ್ಷದ ಜೂನ್-ಜುಲೈ ಅವಧಿಯ ಮುಂಗಾರು ಕಳೆದ 126 ವರ್ಷಗಳಲ್ಲೇ ಐದನೇ ಅತಿ ಕಡಿಮೆ ಮಳೆ ದಾಖಲಿಸಿದ ಅವಧಿಯಾಗಿದೆ. ದೇಶಾದ್ಯಂತ ಸಾಮಾನ್ಯ ಪ್ರಮಾಣಕ್ಕಿಂತ ಶೇ.24ರಷ್ಟು ಮಳೆ ಕೊರತೆ ದಾಖಲಾಗಿದೆ.
ಮಳೆ ಕೊರತೆಯಿಂದ ಅತಿ ಹೆಚ್ಚು ಬಾಧಿತವಾಗಿರುವ ರಾಜ್ಯಗಳ ಪೈಕಿ ಬಿಹಾರ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ 38 ಜಿಲ್ಲೆಗಳ ಪೈಕಿ ಶೇ.95ರಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ದಾಖಲಾಗಿದೆ. ನಂತರದ ಸ್ಥಾನಗಳಲ್ಲಿ ಕೇರಳ (ಶೇ.86) ಮತ್ತು ತೆಲಂಗಾಣ (ಶೇ.85) ಇವೆ. ಆಂಧ್ರಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್ ಹಾಗೂ ಪಂಜಾಬ್ ರಾಜ್ಯಗಳಲ್ಲಿಯೂ ಶೇ.64ರಿಂದ ಶೇ.81ರಷ್ಟು ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ.
ರಾಜ್ಯವಾರು ಮಳೆ ಕೊರತೆಯ ಅಂಕಿ-ಅಂಶಗಳ ಪ್ರಕಾರ, ಬಿಹಾರದಲ್ಲಿ ಶೇ.46ರಷ್ಟು, ಪಂಜಾಬ್‌ನಲ್ಲಿ ಶೇ.38ರಷ್ಟು, ಹಾಗೂ ಕೇರಳ ಮತ್ತು ತೆಲಂಗಾಣದಲ್ಲಿ ಶೇ.33ರಿಂದ 34ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜೂನ್ ತಿಂಗಳಿನಿಂದಲೂ ಈ ರಾಜ್ಯಗಳು ಗಂಭೀರ ಕೊರತೆಯನ್ನು ಅನುಭವಿಸುತ್ತಿವೆ.
ಆದಾಗ್ಯೂ, ಮುಂಗಾರು ಆರಂಭ ದುರ್ಬಲವಾಗಿದ್ದರೂ ಆಹಾರ ಹಣದುಬ್ಬರದ ಮೇಲೆ ಇದರ ಪರಿಣಾಮ ಸೀಮಿತವಾಗಿರಬಹುದು ಎಂದು ಎಸ್‌ಬಿಐ ರಿಸರ್ಚ್ ಅಂದಾಜಿಸಿದೆ. “ಮಳೆ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಮಳೆಯ ಪ್ರಮಾಣಕ್ಕಿಂತಲೂ ಅದು ಯಾವ ಪ್ರದೇಶದಲ್ಲಿ, ಯಾವ ತಿಂಗಳಲ್ಲಿ ಹೇಗೆ ಹಂಚಿಕೆಯಾಗಿದೆ ಎಂಬುದೇ ಮುಖ್ಯ” ಎಂದು ವರದಿ ಸ್ಪಷ್ಟಪಡಿಸಿದೆ.
ಈ ಸಂಬಂಧ 2018ರ ಉದಾಹರಣೆಯನ್ನು ವರದಿ ಉಲ್ಲೇಖಿಸಿದ್ದು, ಆ ವರ್ಷವೂ ಸರಾಸರಿಗಿಂತ ಕಡಿಮೆ ಮಳೆ ದಾಖಲಾಗಿದ್ದರೂ, ಮಳೆಯ ಹಂಚಿಕೆ ಸಮರ್ಪಕವಾಗಿದ್ದ ಕಾರಣ ಆಹಾರ ಹಣದುಬ್ಬರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರಲಿಲ್ಲ ಎಂದು ತಿಳಿಸಿದೆ.
ಇದಕ್ಕೆ ವಿರುದ್ಧವಾಗಿ, 2009ರ ಎಲ್ ನಿನೋ ವರ್ಷ ಮಾತ್ರ ಅಪವಾದವಾಗಿತ್ತು. ಆ ವರ್ಷ ಆಹಾರ ಹಣದುಬ್ಬರ ಶೇ.13.1ಕ್ಕೆ ಏರಿಕೆಯಾಗಿತ್ತು. ಆದರೆ, ಅದಕ್ಕೆ ಕೇವಲ ಮಳೆ ಕೊರತೆಯೇ ಕಾರಣವಾಗಿರಲಿಲ್ಲ. ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಶೇ.40ರಷ್ಟು ಹೆಚ್ಚಳ, ಆರನೇ ವೇತನ ಆಯೋಗದ ಶಿಫಾರಸುಗಳಿಂದ ಶೇ.23.5ರಷ್ಟು ವೇತನ ಹೆಚ್ಚಳ, ಹಾಗೂ ಸುಮಾರು ₹60,000 ಕೋಟಿ ಮೌಲ್ಯದ ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಅಂಶಗಳು ಒಟ್ಟಾಗಿ ಹಣದುಬ್ಬರವನ್ನು ಹೆಚ್ಚಿಸಿದ್ದವು ಎಂದು ಎಸ್‌ಬಿಐ ರಿಸರ್ಚ್ ವಿಶ್ಲೇಷಿಸಿದೆ.
ಇದನ್ನೂ ಓದಿ: ಅರಸೀಕೆರೆ | ಮಳೆ ಕೊರತೆ: ಬಿತ್ತನೆ ಮಾಡಲಾಗದೆ ಆಕಾಶದತ್ತ ಮುಖ ಮಾಡಿ, ಕಾದು ಕುಳಿತ ರೈತರು
ಈ ವರ್ಷದ ಜೂನ್‌ನಿಂದ ಸೆಪ್ಟೆಂಬರ್ ಅವಧಿಗೆ ಸರಾಸರಿ ಆಹಾರ ಹಣದುಬ್ಬರ ಶೇ.6ರಷ್ಟಿರಬಹುದು ಎಂದು ವರದಿ ಅಂದಾಜಿಸಿದೆ. ಇದು 2023ರಲ್ಲಿ ದಾಖಲಾಗಿದ್ದ ಶೇ.7.7 ಹಾಗೂ 2024ರ ಶೇ.8.2 ಆಹಾರ ಹಣದುಬ್ಬರಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಪ್ರಸ್ತುತ ಜುಲೈ 12ರಂತೆ ತಟಸ್ಥವಾಗಿರುವ (ಮೈನಸ್ 0.06 ಡಿಗ್ರಿ ಸೆಲ್ಸಿಯಸ್) ಹಿಂದೂ ಮಹಾಸಾಗರ ದ್ವಿಧ್ರುವಿ (Indian Ocean Dipole) ಯು ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಧನಾತ್ಮಕ (Positive) ಹಂತಕ್ಕೆ ತಿರುಗುವ ಸಾಧ್ಯತೆಯಿದೆ. ಇದು ಮಳೆಗಾಲದ ದ್ವಿತೀಯಾರ್ಧದಲ್ಲಿ ಮುಂಗಾರು ಚೇತರಿಸಿಕೊಳ್ಳಲು ನೆರವಾಗಲಿದೆ. ಆದರೂ, ಈ ಬದಲಾವಣೆಯ ಸಮಯ ಮತ್ತು ತೀವ್ರತೆಯಲ್ಲಿ ವ್ಯಾಪಕ ವ್ಯತ್ಯಾಸವಿರಲಿದೆ ಎಂದು ವರದಿ ಎಚ್ಚರಿಸಿದೆ.





