ಹಾಸನ ಜಿಲ್ಲೆಯಲ್ಲಿಯೂ ಮಳೆ ಕೊರತೆ ಉಂಟಾಗಿದ್ದು, ಮಲೆನಾಡಿನಲ್ಲಿಯೂ ಬರ ಆವರಿಸುವ ಭೀತಿ ಎದುರಾಗಿದೆ. ಅಂತೆಯೇ ಅರಸೀಕೆರೆ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜೂನ್ ಅಂತ್ಯಕ್ಕೆ 6.5 ಸಾವಿರದಿಂದ 7 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯಿದ್ದರೂ ಈವರೆಗೆ ಕೇವಲ ಒಂದೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಪ್ರಸ್ತುತ ಬಿತ್ತನೆಯಾಗಿರುವ ಬೆಳೆಗೂ ಹಾಗೂ ಬಿತ್ತನೆ ಆಗಬೇಕಾಗಿರುವ ಪ್ರದೇಶಕ್ಕೂ ಮಳೆಯ ಅವಶ್ಯಕತೆ ಇದೆ. ಆದರೆ ಮಳೆ ಮಾತ್ರ ಬೀಳುತ್ತಿಲ್ಲ. ಅಂತರ್ಜಲಗಳೂ ಬತ್ತುತ್ತಿವೆ. ಮಳೆ ಇಲ್ಲದಿದ್ದರೆ ಬರ ಎದುರಾಗಬಹುದೆಂಬ ಚಿಂತೆ ರೈತರನ್ನು ಆವರಿಸಿದೆ.
ಜೂನ್ ಅಂತ್ಯದವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 22 ಸೆಂ.ಮೀ. ಮಳೆ ಬಿದ್ದಿದೆ. ಆದರೆ, ಕೆಲವೇ ಪ್ರದೇಶಗಳಲ್ಲಿ ಮಳೆಯಾಗಿದ್ದು, ಇನ್ನೂ ಹಲವೆಡೆ ಮಳೆಯ ಕೊರತೆ ಎದುರಾಗಿದೆ. ಬಹುತೇಕ ಕೃಷಿಕರು ಭೂಮಿ ಹದ ಮಾಡುವ ಕಾರ್ಯದಲ್ಲೇ ತೊಡಗಿದ್ದಾರೆ. ತಾಲೂಕಿನಲ್ಲಿ 2 ರಿಂದ 3 ಹದ ಮಳೆಯಾದರೆ, ಪೂರ್ಣ ಪ್ರಮಾಣದ ಬಿತ್ತನೆ ಕಾರ್ಯ ಮಾಡುತ್ತಾರೆ. ಇಲ್ಲದಿದ್ದರೆ ಕೃಷಿಯನ್ನೇ ನಂಬಿರುವ ರೈತರು ಯೋಚಿಸುವಂತಾಗುತ್ತದೆ.
ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕಿನ ರೈತರಿಗೆ ಕೊರತೆ ಆಗದಷ್ಟು ಬೇಡಿಕೆಗೆ ಅನುಗುಣವಾಗಿ ವಿವಿಧ ಬೆಳೆಗಳ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಳೆ ಬೀಳದಿರುವ ಕಾರಣ ರೈತರು ಮುಂಗಡವಾಗಿ ರಸಗೊಬ್ಬರ ತಂದಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯೇ ಬಾರದೆ ಬಿತ್ತನೆ ಮಾಡುವುದಾದರೂ ಹೇಗೆ ಎಂದು ಚಿಂತಿಸತೊಡಗಿದ್ದಾರೆ.
ರೈತ ಚಂದ್ರಶೇಖರ್ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಮೊದಲ ಮಳೆಗೆ ಹೊಲಗಳನ್ನು ಹಸನು ಮಾಡಿ, ಅಲಸಂದೆ ಮತ್ತು ನೆಲಗಡಲಡಯನ್ನು ಬಿತ್ತನೆ ಮಾಡಿದ್ದೇವೆ. ಆದರೆ ಮಳೆ ಇಲ್ಲದ ಕಾರಣ ಬಹುತೇಕ ಬಿತ್ತನೆ ಬೀಜಗಳು ಮೊಳಕೆಯೊಡೆಯದೇ ಭೂಮಿಯಲ್ಲೇ ಉಳಿದಿವೆ. ಇನ್ನು ಸಮರ್ಪಕವಾಗಿ ಮಳೆಯಾದರೆ ಮೆಕ್ಕೆಜೋಳ ಮತ್ತು ರಾಗಿ ಬಿತ್ತನೆ ಮಾಡಬೇಕೆಂದು ಕಾದು ಕುಳಿತಿದ್ದೇವೆ, ಆದರೂ ಮಳೆ ಬಾರದಿರುವುದರಿಂದ ಊಟಕ್ಕೂ ತೊಂದರೆಯಾಗುವುದೇನೋ ಎನ್ನುವ ಭೀತಿ ಶುರುವಾಗಿದೆ. ರಾಗಿ ಬೆಳೆದುಕೊಂಡರೆ ಮನೆಯಲ್ಲಿ ಆಹಾರದ ಕೊರತೆ ಇಲ್ಲ ಎನಿಸುತ್ತದೆ. ರಾಗಿಯನ್ನೇ ಬೆಳಿಯದಿದ್ದರೆ, ತಿನ್ನಲು ಕೂಳೂ ಇಲ್ಲ ಎನ್ನುವಂತಾಗುತ್ತದೆ. ಈ ಬಾರಿ ಮಳೆರಾಯ ಏನು ಮಾಡ್ತಾನೋ ನೋಡಬೇಕು” ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ರಾಯಚೂರು | ಮಳೆ ಕೊರತೆ: ಭೂಮಿಯಲ್ಲೇ ಉಳಿದ ಬಿತ್ತನೆಬೀಜ, ರೈತರಲ್ಲಿ ಹೆಚ್ಚಿದ ಭೀತಿ
ರೈತ ಕರಿಯಯ್ಯ ಎಂಬುವವರು ಮಾತನಾಡಿ, “ಮೊದಲ ಮಳೆ ಬೀಳುತ್ತಿದ್ದಂತೆ ಗೊಬ್ಬರಕ್ಕಾಗಿ ಅಲೆದಾಡಿದೆವು. ಗೊಬ್ಬರ ಸಿಗದೆ ಎಲ್ಲೆಲ್ಲೋ ಹೋಗಿ, ಕ್ಯೂ ನಿಂತು, ರಾತ್ರಿ ಎಲ್ಲ ಕಾದು ಹೇಗೋ ಒಂದು ಮೂಟೆ ಗೊಬ್ಬರ ತಂದು ಇಟ್ಟುಕೊಂಡಿದಿನಿ. ಈಗ ಮಳೆ ಕೈಕೊಟಿದೆ. ರಾಗಿ ಬಿತ್ತನೆ ಮಾಡಬೇಕು. ಮುಗಿಲು ನೋಡ್ತಾ ಕುಳಿತುಕೊಳ್ಳುವಂತಾಗಿದೆ. ಈ ಮಳೆ ಏನು ಮಾಡುತ್ತೋ ನೋಡಬೇಕು” ಎಂದು ಬೇಸರ ವ್ಯಕ್ತಪಡಿಸಿದರು.




