ಜುಲೈ ತಿಂಗಳಲ್ಲಿ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಮತ್ತೆ ಚುರುಕುಗೊಳ್ಳುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ ಉತ್ತರ, ಪೂರ್ವ ಹಾಗೂ ಮಧ್ಯ ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಹೈ ಅಲರ್ಟ್ ಘೋಷಿಸಿದೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿಯೂ ಮಳೆ ಅಬ್ಬರ ಇರಲಿದೆ ಎಂದು ಇಲಾಖೆ ತಿಳಿಸಿದೆ. ಜುಲೈ 22ರ ನಂತರ ಮಳೆ ಅಬ್ಬರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನೂ ಇಲಾಖೆ ವಿವರಿಸಿದೆ.
ಅಂತೆಯೇ, ದೇಶಾದ್ಯಂತವೂ ಭಾರೀ ಮಳೆಯಾಗುತ್ತಿದೆ. ಈಶಾನ್ಯ ಭಾರತದಲ್ಲಿ ಮಳೆ ಚುರುಕುಗೊಳ್ಳುತ್ತಿದ್ದು, ಪೂರ್ವ, ಮಧ್ಯ ಮತ್ತು ಉತ್ತರ ಭಾರತದ ರಾಜ್ಯಗಳಿಗೂ ವ್ಯಾಪಿಸಲಿದೆ. ಕೆಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲವು ವಾರಗಳಿಂದ ಬಿಸಿಲಿನ ತಾಪ ಅನುಭವಿಸಿದ್ದ ಗಂಗಾ ಸಮತಟ ಪ್ರದೇಶಗಳು ಹಾಗೂ ಮಧ್ಯ ಭಾರತಕ್ಕೂ ಈ ತಿಂಗಳ ಮೊದಲ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದಿಂದ ಸಮುದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶಭರಿತ ಗಾಳಿ ಒಳನಾಡಿನತ್ತ ಬೀಸುತ್ತಿದೆ. ಇದು ಮಳೆಮೋಡಗಳ ರಚನೆಗೆ ಪೂರಕವಾಗಲಿದೆ. ಹೆಚ್ಚಿನ ಪ್ರಮಾಣದ ಮಳೆ ತರಲಿವೆ ಎಂದು ಇಲಾಖೆ ಮಾಹಿತಿ ನೀಡಿದೆ.



