ದೆಹಲಿ ಗಲಭೆ ಪ್ರಕರಣದಲ್ಲಿ ತಮಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಖಾಲಿದ್, ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಖಾಲಿದ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ
ಮುಸ್ಲಿಮರನ್ನು ಭಾರತೀಯ ಪೌರತ್ವದಿಂದ ಹೊರಗಿಡಲು ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಪ್ರಮುಖ ಧ್ವನಿಯಾಗಿದ್ದವರು ಉಮರ್ ಖಾಲಿದ್. ಅವರನ್ನು 2020ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧಿಸಲಾಗಿದೆ. ಖಾಲಿದ್ ಜಾಮೀನು ಅರ್ಜಿಯನ್ನು ಪದೇ ಪದೇ ವಜಾಗೊಳಿಸಲಾಗಿದ್ದು, ವಿಚಾರಣೆ ನಡೆಸದೆಯೇ ಕಳೆದ ಐದು ವರ್ಷಗಳಿಗೂ ಅಧಿಕ ಸಮಯದಿಂದ ಖಾಲಿದ್ ಜೈಲಿನಲ್ಲಿರಿಸಲಾಗಿದೆ.
2025ರ ಮಾರ್ಚ್‌ನಲ್ಲಿ ಮಾನವ ಹಕ್ಕುಗಳ ಪ್ರತಿಷ್ಠಾನ (HRF) ಖಾಲಿದ್ ಪರವಾಗಿ UNWGAD ಗೆ ಅರ್ಜಿ ಸಲ್ಲಿಸಿದೆ. ಬಂಧನವು ಕಾನೂನುಬದ್ಧವಾಗಿ ಆಧಾರರಹಿತ, ತಾರತಮ್ಯ ಮತ್ತು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ ಎಂದು HRF ವಾದಿಸಿದೆ. ಈ ಅರ್ಜಿ ಪರಿಶೀಲಿಸಿದ UNWGAD ತಜ್ಞರು ಖಾಲಿದ್ ಬಂಧನ ಅಕ್ರಮ. ಖಾಲಿದ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಗೆಯೇ ಉಮರ್ ಖಾಲಿದ್ ಬಂಧನವು ಸ್ವಾತಂತ್ರ್ಯದ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವುದು, ಸಂಘಟಿತರಾಗುವುದು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಅವರ ಹಕ್ಕುಗಳ ಹರಣವಾಗಿದೆ ಎಂದು UNWGAD ತೀರ್ಮಾನಕ್ಕೆ ಬಂದಿದೆ. ಆದರೆ ಈ ಸಂಬಂಧ ಈವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇಂದಿಗೂ UAPA ದುರುಪಯೋಗಕ್ಕೆ ಸಿಲುಕಿ ಉಮರ್ ಖಾಲಿದ್ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ.





