ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 18ರ ರಾತ್ರಿ 8.30ಕ್ಕೆ ಸರಿಯಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಟಿವಿಯಲ್ಲಿ ನೇರ ಪ್ರಸಾರವಾಯಿತು. ಮೊದಲಿಗೆ ಅವರು ಹೇಳಿದ್ದು ಇಷ್ಟೇ: “ನಾನು ದೇಶದ ತಾಯಂದಿರು ಮತ್ತು ಮಹಿಳೆಯರ ಜೊತೆ ಮಾತನಾಡಲು ಬಂದಿದ್ದೇನೆ” ಅಂತ ಹೇಳಿ ಆಮೇಲೆ ನೇರವಾಗಿ ಕ್ಷಮೆ ಕೇಳಿದರು, “ನಾನು ದೇಶದ ತಾಯಂದಿರು ಹಾಗೂ ಮಹಿಳೆಯರ ಕ್ಷಮೆ ಕೇಳುತ್ತೇನೆ” ಅಂದರು. ಕೊನೆಗೆ ನಾರೀಶಕ್ತಿ ಬಗ್ಗೆ ಮಾತನಾಡುತ್ತಾ, “ನಿನ್ನೆ ಸಂಸತ್ತಿನ ಮೇಲೆ ದೇಶದ ಚಿತ್ತ ಇತ್ತು. ಆದರೆ ಅಲ್ಲಿ ನಾರೀಶಕ್ತಿ ವಂದನಾ ವಿಫಲವಾಗಿದೆ. ಇದಕ್ಕೆ ವಿಪಕ್ಷಗಳು ಕಾರಣ” ಎಂದು ಟೀಕಿಸಿದರು. “ಅವರು ಕೇವಲ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಈಗ ದೇಶದ ಜಾಗೃತ ಮಹಿಳೆಯರು ವಿರೋಧ ಪಕ್ಷಗಳಿಗೆ ಸೂಕ್ತ ಉತ್ತರ ನೀಡಲು ಸಿದ್ಧರಾಗಿದ್ದಾರೆ” ಎಂದು ಎಚ್ಚರಿಸಿದರು.
ಈ ಭಾಷಣ ಕೇಳಿದ ಜನರು ಅದೇ ಕಾಮೆಂಟ್ ಬಾಕ್ಸ್‌ನಲ್ಲಿ ನೂರಾರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾಗಿ ಕ್ಷಮಾಪಣೆನಾ? ಅಥವಾ ಮತ್ತೊಂದು ರಾಜಕೀಯ ನಾಟಕನಾ? ಅಂತ. ಇದು ರಾಜಕೀಯವಾಗಿ ಆಯ್ಕೆ ಮಾಡಿಕೊಂಡ ಕ್ಷಮಾಪಣೆ ಎನ್ನುವ ಭಾವನೆ ಬಹುತೇಕ ಜನರಲ್ಲಿ ಮೂಡಿದೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳು ಸಹಕರಿಸಲಿಲ್ಲ ಎಂದು ಟಿವಿಯಲ್ಲಿ ಮೊಸಳೆ ಕಣ್ಣೀರು ಸುರಿಸುವ ಬದಲು, ಪತ್ರಿಕಾ ಗೋಷ್ಠಿ ನಡೆಸಿ ವಿವರಿಸಲು ಪ್ರಧಾನಿ ಮೋದಿ ಅಥವಾ ಯಾವುದೇ ಕೇಂದ್ರ ಮಂತ್ರಿಗೆ ಧೈರ್ಯವಿಲ್ಲ ಏಕೆ? ನಿಜವಾಗಿ ಮೋದಿ ಅವರು ಕ್ಷಮೆ ಕೇಳಬೇಕಾದ್ದು ಇದೊಂದಕ್ಕೆ ಮಾತ್ರವೇ? ದೇಶದಲ್ಲಿ ಮೋದಿ ಸರ್ಕಾರದಿಂದ ಎಷ್ಟೆಲ್ಲಾ ದೊಡ್ಡ ದೊಡ್ಡ ಅಧ್ವಾನಗಳು ನಡೆದಿವೆ. ಅವುಗಳಿಗೆಲ್ಲಾ ಕ್ಷಮೆ ಕೇಳಿದ್ದಾರಾ? ಇಲ್ಲ ಕೇಳಿಲ್ಲ, ಯಾಕೆ ಕೇಳಿಲ್ಲ?
ಮೋದಿ ಅವರು ನಾರೀಶಕ್ತಿಗೆ ಕ್ಷಮೆ ಕೇಳುತ್ತಿದ್ದಾರೆ. ಆದರೆ ದೇಶದ ಸಾಮಾನ್ಯ ಜನರಿಗೆ ನೀಡಿದ ಭರವಸೆಗಳು ಈಗ ಎಲ್ಲಿವೆ? ಅವುಗಳ ಬಗ್ಗೆ ಒಂದು ಮಾತೂ ಇಲ್ಲ. ಬನ್ನಿ, ಒಂದೊಂದಾಗಿ ನೋಡೋಣ.
ನೋಟು ರದ್ದತಿ :2016ರಲ್ಲಿ ಮೋದಿ ಅವರು ರಾತ್ರಿ ಒಮ್ಮೆಗೆ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಮಾಡಿದರು. “ಕಪ್ಪು ಹಣ ಉಳಿಸುವುದಿಲ್ಲ, ಭ್ರಷ್ಟಾಚಾರ ನಿಲ್ಲಿಸುತ್ತೇವೆ, ಉಗ್ರರಿಗೆ ಬಂದೂಕು ತುಂಬುವ ಹಣವನ್ನ ತಡೆಯುತ್ತೇವೆ” ಎಂದು ಹೇಳಿದರು. ಆದರೆ ಏನಾಯಿತು? ಸಾಮಾನ್ಯ ಜನರು ಬ್ಯಾಂಕ್ ಮುಂದೆ ಕ್ಯೂ ನಿಂತರು. ರೈತರು ಬೆಳೆ ಮಾರಲು ಕಷ್ಟಪಟ್ಟರು. ಸಣ್ಣ ವ್ಯಾಪಾರಿಗಳು ಅಂಗಡಿಗಳನ್ನ ಮುಚ್ಚುವಂತಾಯಿತು. ಲಕ್ಷಾಂತರ ಜನ ತೊಂದರೆ ಅನುಭವಿಸಿದರು. ಉದ್ದೇಶಿತ ಗುರಿ ಏನೂ ಈಡೇರಲಿಲ್ಲ. ಕಪ್ಪು ಹಣ ಅನ್ನೋದು ಹಣದ ರೂಪದಲ್ಲಿ ಇಲ್ಲ ಬದಲಿಗೆ ಅದು ಚಿನ್ನ, ಭೂಮಿಯ ರೂಪದಲ್ಲಿ ಇದೆ ಅಂತ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟರೂ ಅದನ್ನ ಕ್ಯಾರೆ ಮಾಡಿಲ್ಲ.

ಇದೇ ನೋಟು ರದ್ದತಿ ಬಗ್ಗೆ ಜಂಭ ಕೊಚ್ಚಿಕೊಂಡಿದ್ದ ಮೋದಿ ಮೋಪಾ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, “ನಾನು ಕೇವಲ 50 ದಿನಗಳ ಕಾಲಾವಕಾಶವನ್ನು ಕೇಳಿದ್ದೇನೆ. ಡಿಸೆಂಬರ್ 30 ರವರೆಗೆ ನನಗೆ ಸಮಯ ನೀಡಿ. ಅದರ ನಂತರ, ನನ್ನ ಉದ್ದೇಶ ಅಥವಾ ನನ್ನ ಕಾರ್ಯಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ, ದೇಶ ನೀಡುವ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ” ಅಂತ ಹೇಳಿದ್ದರು. ಇದಕ್ಕೆ ಮೋದಿ ಅಥವಾ ಅವರ ಪಕ್ಷದವರು ಒಂದು ಬಾರಿ ಆದರೂ ಕ್ಷಮೆ ಕೇಳಿದ್ದಾರಾ? ಇಲ್ಲ. ಏಕೆ?
ವಿದೇಶದ ಕಪ್ಪು ಹಣ :- 2014ರ ಚುನಾವಣೆಯಲ್ಲಿ ಮೋದಿ ಅವರು ಗಾಳಿಯಲ್ಲಿ ಗುಂಡನ್ನ ಹೊಡೆದಿದ್ದೋ ಹೊಡೆದಿದ್ದು. “ವಿದೇಶದಲ್ಲಿ ಇರುವ ಕಪ್ಪು ಹಣ ತಂದು ಪ್ರತಿ ಭಾರತೀಯನ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ” ಅಂತ. ಪಾಪ ನಮ್ಮ ಜನರು ಕಣ್ಣು ಮುಚ್ಚಿ ನಂಬಿದರು. ಆದರೆ ಇಂದು 12 ವರ್ಷಗಳು ಕಳೆದಿವೆ. ಯಾರ ಅಕೌಂಟ್‌ಗೂ ಒಂದು ಪೈಸೆಯೂ ಬಂದಿಲ್ಲ. ಬದಲಿಗೆ ಬಡವರು ಬಡತನದಲ್ಲಿ ಮುಳುಗಿದ್ದಾರೆ. ಶ್ರೀಮಂತರು ಇನ್ನೂ ಶ್ರೀಮಂತರಾಗಿದ್ದಾರೆ. ಈ ಮೋಸಕ್ಕೆ ಕ್ಷಮೆ ಕೇಳಬೇಕಲ್ಲವೇ? ಇಲ್ಲ. ಏಕೆ ಕೇಳಿಲ್ಲ?

ಎರಡು ಕೋಟಿ ಉದ್ಯೋಗ ಸೃಷ್ಟಿ:- “ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ” ಎಂದು ಮೋದಿ ಅವರು ಹೇಳಿದ್ದರು. ಯುವಕರು ಸಂತೋಷದಿಂದ ಕೈಚಾಚಿದರು. ಆದರೆ ಇಂದು ಹೇಳಲಾರದಷ್ಟು ಯುವಕರು ನಿರುದ್ಯೋಗದಲ್ಲಿ ಬಳಲುತ್ತಿದ್ದಾರೆ. ಪದವಿ ಪಡೆದವರು ರಸ್ತೆಯಲ್ಲಿ ಟೀ ಮಾರುತ್ತಿದ್ದಾರೆ. ಉದ್ಯೋಗ ಇಲ್ಲದೆ ಮದುವೆಯಾಗಲು ಕಷ್ಟ. ಕುಟುಂಬದ ಹೊರೆ ಹೆಚ್ಚಾಗಿದೆ. ಈ ಭರವಸೆ ಈಡೇರಲಿಲ್ಲ. ಆದರೆ ಕ್ಷಮೆ ಕೇಳಿದ್ದಾರಾ? ಇಲ್ಲ. ಏಕೆ?

ರೂಪಾಯಿ ಮತ್ತು ಡಾಲರ್ :- “ಡಾಲರ್ ಎದುರು ರೂಪಾಯಿಯನ್ನು 40 ರೂಪಾಯಿಗೆ ನಿಲ್ಲಿಸುತ್ತೇವೆ” ಎಂದು ಹೇಳಿದ್ದರು. ಆದರೆ ಇಂದು ಒಂದು ಡಾಲರ್‌ಗೆ 100 ರೂಪಾಯಿ ದಾಟಿದೆ. ರೂಪಾಯಿ ಕುಸಿದು ಬಿದ್ದಿದೆ. ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳ ಬೆಲೆ ಆಕಾಶ ಮುಟ್ಟಿದೆ. ಸಾಮಾನ್ಯ ಕುಟುಂಬದ ಕಷ್ಟ ಹೇಳತೀರದಾಗಿದೆ. ಮನೆಗೆ ತರುವ ಒಂದು ಕೆಜಿ ತರಕಾರಿ ಕೂಡ ದುಬಾರಿಯಾಗಿದೆ. ಈ ತಪ್ಪಿಗೆ ಕ್ಷಮೆ ಕೇಳಿದ್ದಾರಾ? ಇಲ್ಲ. ಏಕೆ?

ಗ್ಯಾಸ್ ಸಿಲಿಂಡರ್ :- “ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕಡಿಮೆ ಮಡುತ್ತೇವೆ” ಎಂದು ಹೇಳಿದ್ದರು. ಆದರೆ ಇಂದು ಬೆಲೆ 1200-1300 ರೂಪಾಯಿ ದಾಟಿದೆ. ಆಟೋ ಗ್ಯಾಸ್‌ಗಾಗಿ ಜನರು ರಾತ್ರಿಯೆಲ್ಲಾ ಗ್ಯಾಸ್ ಬಂಕ್ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಬಡತನ, ಅಪೌಷ್ಟಿಕತೆ, ಹಸಿವಿನ ರ‍್ಯಾಂಕ್‌ನಲ್ಲಿ ಭಾರತವನ್ನು ಜಗತ್ತಿನಲ್ಲಿ ಕೊನೆಯ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಜನರು ರೊಟ್ಟಿ ತಿನ್ನಲು ಕೂಡ ಕಷ್ಟಪಡುತ್ತಿದ್ದಾರೆ. ಇದಕ್ಕೆ ಕ್ಷಮೆ ಕೇಳಿದ್ದಾರಾ? ಇಲ್ಲ.

ಎಲೆಕ್ಟೋರಲ್ ಬಾಂಡ್ :- ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿತ್ತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ಬಾಂಡ್ ರದ್ದು ಮಾಡಿತು. ಆದರೆ ಮೋದಿ ಅವರು ಕ್ಷಮೆ ಕೇಳಿದ್ದಾರಾ? ಇಲ್ಲ. ಬದಲಿಗೆ ಮತ್ತೆ ಮತ್ತೆ “ನಾವು ಭ್ರಷ್ಟಾಚಾರ ನಿಲ್ಲಿಸಿದ್ದೇವೆ” ಎಂದು ಹೇಳುತ್ತಾರೆ.

ಕೋವಿಡ್ ಲಾಕ್‌ಡೌನ್ :- ಕೊವಿಡ್ ಸಮಯದಲ್ಲಿ ನೀವು ತೆಗೆದುಕೊಂಡಿದ್ದ ಏಕಪಕ್ಷೀಯ ನಿರ್ಧಾರಕ್ಕೆ ನೀವು ಕೇವಲ ಕ್ಷಮೆ ಕೇಳುವುದು ಮಾತ್ರವನ್ನ, ನೈತಿಕ ಹೊಣೆಹೊತ್ತು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಹಠಾತ್ತನೆ ಲಾಕ್ ಡೌನ್ ಘೋಷಣೆ ಮಾಡಿದಿರಿ. ಕೂಲಿಗೆಂದು ಪಟ್ಟಣಕ್ಕೆ ಬಂದಿದ್ದ ಲಕ್ಷಾಂತರ ಜನರು ಮರಳಿ ತಮ್ಮ ತಮ್ಮ ಊರುಗಳಿಗೆ ವಲಸೆ ಹೊರಟರು. ಲಕ್ಷಾಂತರ ಬಡವರು ನೂರಾರು ಕಿಮೀ ನಡೆದು ತಮ್ಮ ಊರುಗಳ ತಲುಪಿದರು. ಹಲವರು ನಡುರಸ್ತೆಯಲ್ಲೇ ಅನಾಥ ಶವವಾದರು. ಈಗ ನಿಮ್ಮ ಆತ್ಮವನ್ನ ನೀವೇ ಪ್ರಶ್ನಿಸಿಕೊಳ್ಳಿ. “ಈ ಪ್ರಧಾನಿ ಸ್ಥಾನಕ್ಕೆ ನಾನು ಅರ್ಹನೇ?” ಎಂದು.
ಹೊತ್ತಿ ಉರಿಯುತ್ತಿರುವ ಮಣಿಪುರ :- ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದು ಮೋದಿ ಅಂತ ಜಾಹೀರಾತನ್ನ ಸಿದ್ಧಪಡಿಸಿ ಅದನ್ನ ಮನೆಮನೆಗೆ ತಲುಪಿಸಿದ್ದರು. ಆದರೆ ತನ್ನ ದೇಶದಲ್ಲೇ ಇರುವ ಮಣಿಪುರ ರಾಜ್ಯ ವರ್ಷಗಳಿಂದ ಉರಿಯುತ್ತಿದೆ. ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದಾಗಲೂ ಮೋದಿಯವರು ವಹಿಸಿದ ಮೌನವು ಅವರ “ನಾರೀ ಶಕ್ತಿ”ಯ ಘೋಷಣೆ ಎಷ್ಟು ಪೊಳ್ಳು ಎಂಬುದನ್ನು ಸಾಬೀತುಪಡಿಸಿತು. ಮಹಿಳೆಯರು ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಈಗಲೂ ನಿರಾಶ್ರಿತರ ಶಿಬಿರಗಳಲ್ಲಿ ದಿನಕಳೆಯುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಇಲ್ಲ ಅಲ್ಲಿನ ಹಿಂಸೆಯನ್ನ ನಿಲ್ಲಿಸಲು ಮೋದಿ ಸರ್ಕಾರದ ಬಳಿ ಸಾಧ್ಯವಾಗಿಲ್ಲ. ಇದಕ್ಕೆ ಕ್ಷಮೆ ಕೇಳಿದ್ದಾರಾ? ಇಲ್ಲ.

ಇನ್ನು ಗುಜರಾತ್ ದಂಗೆಯ ಸಂತ್ರಸ್ತೆಯ ಅತ್ಯಾಚಾರಿಗಳನ್ನು ‘ಸಂಸ್ಕಾರವಂತರು‘ ಎಂದು ಕರೆದು ಸನ್ಮಾನಿಸಿ ಬಿಡುಗಡೆ ಮಾಡಿದಾಗ ಮೋದಿಯವರ ಮೌನ ಸ್ತ್ರೀ ಕುಲಕ್ಕೆ ಮಾಡಿದ ದ್ರೋಹ. ಹತ್ರಾಸ್ ಮತ್ತು ಉನ್ನಾವೋ ಪ್ರಕರಣಗಳಲ್ಲಿ ಸಂತ್ರಸ್ತೆಯರ ಕುಟುಂಬಕ್ಕೆ ನ್ಯಾಯ ನೀಡುವ ಬದಲು, ವ್ಯವಸ್ಥೆಯು ಅವರನ್ನು ನಡೆಸಿಕೊಂಡ ರೀತಿ ಮತ್ತು ರಾತ್ರೋರಾತ್ರಿ ಶವ ಸಂಸ್ಕಾರ ಮಾಡಿದ ಘಟನೆ ಅಧಿಕಾರ ದುರುಪಯೋಗದ ಪರಮಾವಧಿ. ಅಷ್ಟೇ ಯಾಕೆ ಇತ್ತೀಚಿನ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದ್ದರೂ, ಚುನಾವಣಾ ಲಾಭಕ್ಕಾಗಿ ಅವರ ಪರವಾಗೇ ಮತ ಕೇಳಲು ಹೋಗಿದ್ದು ಇದೇ ಪ್ರಧಾನಿ ನರೇಂದ್ರ ಮೋದಿ. ಇದಕ್ಕೆ ಕ್ಷಮೆ ಕೇಳುವ ಧೈರ್ಯವಾದರೂ ನಿಮಗಿದೆಯಾ ಮೋದಿಜಿ?
ಚುನಾವಣಾ ಪ್ರಚಾರಗಳಲ್ಲಿ “ನಾರೀ ಶಕ್ತಿ”ಯ ಬಗ್ಗೆ ಮಾತನಾಡುವ ಪ್ರಧಾನಿಯವರು, ತಮ್ಮದೇ ಪಕ್ಷದ ಪ್ರಭಾವಿ ನಾಯಕರಿಂದ ಮಹಿಳೆಯರಿಗೆ ದೌರ್ಜನ್ಯವಾದಾಗ ತೋರುವ ಮೌನ ಅತ್ಯಂತ ಭೀಕರವಾದುದು. ಕುಸ್ತಿಪಟುಗಳು ದೆಹಲಿಯ ಬೀದಿಯಲ್ಲಿ ಕಣ್ಣೀರಿಡುತ್ತಾ ಲೈಂಗಿಕ ಕಿರುಕುಳದ ವಿರುದ್ಧ ನ್ಯಾಯ ಕೇಳಿದಾಗ, ಆ ಕಣ್ಣೀರನ್ನು ಒರೆಸದ ಪ್ರಧಾನಿಯವರ ನಿಲುವು ದೊಡ್ಡ ಅಪಮಾನವಾಗಿ ಇತಿಹಾಸದಲ್ಲಿ ದಾಖಲಾಗಿದೆ. ಇಲ್ಲಿ ಸ್ತ್ರೀ ರಕ್ಷಣೆಗಿಂತ ಪಕ್ಷದ ನಾಯಕರ ರಕ್ಷಣೆಯೇ ಮೋದಿಯವರಿಗೆ ಮುಖ್ಯವಾಯಿತೇ ಎಂಬ ಪ್ರಶ್ನೆ ಏಳುತ್ತದೆ. ದೇಶಕ್ಕೆ ಕೀರ್ತಿ ತಂದ ಹೆಣ್ಣುಮಕ್ಕಳು ಲೈಂಗಿಕ ಕಿರುಕುಳದ ವಿರುದ್ಧ ರಸ್ತೆಯಲ್ಲಿ ಕುಳಿತು ನ್ಯಾಯ ಕೇಳಿದಾಗ, ಆರೋಪಿ ಸಂಸದನನ್ನು ರಕ್ಷಿಸಲು ಇಡೀ ಸರ್ಕಾರವೇ ನಿಂತಿದ್ದು ಮಹಿಳೆಯರಿಗೆ ಮಾಡಿದ ಬಹುದೊಡ್ಡ ಅಪಮಾನ. ಇದಕ್ಕಿಂತ ಕ್ರೂರವಾಗಿ ಯಾವ ಪ್ರಧಾನಿಯೂ ನಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟು ಕ್ರೂರವಾಗಿ ನೀವು ದೇಶದ ಮಹಿಳೆಯರ ಜೊತೆ ನಡೆದುಕೊಂಡಿದ್ದೀರಿ.
ಅಂಧಭಕ್ತರು ಇಷ್ಟೇ ಉದಾಹರಣೆಯಾ ಅಂತ ಕೇಳಬಹುದು, ಇನ್ನೂ ಇದೆ. ಸೋನಿಯಾ ಗಾಂಧಿಯವರನ್ನು “ವಿಧವಾ ಜರ್ಸಿ ಗಾಯ್” ಎಂದು ಕರೆದದ್ದು ಅಥವಾ ಶಶಿ ತರೂರ್ ಅವರ ಪತ್ನಿಯನ್ನು “50 ಕೋಟಿ ಗರ್ಲ್‌ಫ್ರೆಂಡ್” ಎಂದು ಲೇವಡಿ ಮಾಡಿದ್ದು ಒಬ್ಬ ದೇಶದ ಪ್ರಧಾನಿಗೆ ಶೋಭೆ ತರುವಂತಹದ್ದಲ್ಲ. ಅಧಿಕಾರಕ್ಕಾಗಿ ಮಹಿಳೆಯರ ವೈಯಕ್ತಿಕ ಜೀವನವನ್ನೂ ಅಪಹಾಸ್ಯ ಮಾಡುವ ಇಂತಹ ಕೀಳುಮಟ್ಟದ ಮಾತುಗಳನ್ನು ಭಾರತದ ಸ್ತ್ರೀಕುಲ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನೂ ಹಲವು ಉದಾಹರಣೆಗಳಿದೆ. ಆದರೆ ಇಲ್ಲಿ ಹೆಸರಿಸಿದ್ದು ಬೆರಳಣಿಕೆಯಷ್ಟು ಮಾತ್ರ.





