‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಪುರಾಣ ಪಯಣ: ಸಾಮಾಜಿಕ ನೆಲೆಗಳು ವಿಷಯ ಕುರಿತು ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದಿಂದ ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ಹಮ್ಮಿಕೊಂಡಿದ್ದು, ನಗರದ ಅಮಾನಿಕೆರೆ ಹತ್ತಿರದ ಕನ್ನಡ ಭವನದಲ್ಲಿ ಏಪ್ರಿಲ್ 25ರ ಬೆಳಿಗ್ಗೆ 10.30ರಿಂದ ಸಂಜೆಯವರೆಗೂ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಲೇಖಕ ಸಚಿನ್ ಕುಂದಾಪುರ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ವಸ್ತುಗಳ ಸೃಜನಶೀಲ ನಿರ್ವಹಣೆ ಕುರಿತು ವಿಷಯ ಮಂಡಿಸಲಿದ್ದು, ಬಳ್ಳಾರಿಯ ಡಾ.ದಸ್ತಗೀರ್ ಸಾಬ್ ದಿನ್ನಿ ಕನ್ನಡ ಸಾಹಿತ್ಯ: ಸಾಮಾಜಿಕ ಚರಿತ್ರೆಯ ಪಯಣ ಪ್ರಜ್ಞೆ ವಿಷಯ ಕುರಿತು ವಿಷಯ ಮಂಡಿಸುತ್ತಾರೆ. ಚಿತ್ರದುರ್ಗದ ಡಾ.ತಾರಿಣಿ ಶುಭದಾಯಿನಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಎರಡನೇ ಹಂತದ ಗೋಷ್ಠಿ ಆರಂಭವಾಗಲಿದ್ದು, ಕದಿರೇಹಳ್ಳಿ ಸೋಮಶೇಖರ್ ಕನ್ನಡ ಸಾಹಿತ್ಯ: ಪುರಾಣ ವಸ್ತುವಿನ ಪುನರ್ ಪಯಣದ ಸ್ವರೂಪ ವಿಷಯ ಮಂಡಿಸಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಡಾ.ತಿಪ್ಪೇಸ್ವಾಮಿ ಕನ್ನಡ ಜನಪದ ಸಾಹಿತ್ಯ: ಜನ ಪುರಾಣಗಳ ಪಯಣ ವಿಷಯದ ಕುರಿತು ಉಪನ್ಯಾಸ ಮಂಡಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾ. ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಸೂಯ ಕಾಂಬ್ಳೆ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿಪುರುಷ ಬಸವಣ್ಣ: ಬಸವಲಿಂಗ ಸ್ವಾಮೀಜಿ
ಅಪರಾಹ್ನ 3.30ಕ್ಕೆ ಡಾ.ಸತ್ಯಮಂಗಲ ಮಹದೇವ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಎಚ್ ಗೋವಿಂದಯ್ಯ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಸಂಜೆ 5.30ಕ್ಕೆ ಲೇಖಕಿ ಬಾ ಹ ರಮಾಕುಮಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಾಹಿತಿ ಡಾ. ಎಲ್ ಹನುಮಂತಯ್ಯ ಸಮಾರೋಪ ನುಡಿಗಳನ್ನಾಡಲಿದ್ದು, ಕಾರ್ಯಕ್ರಮದಲ್ಲಿ ಲೇಖಕಿ ಶೈಲಾ ನಾಗರಾಜ್ ಭಾಗವಹಿಸಲಿದ್ದಾರೆ.





