ಸಂವಿಧಾನದ 19ನೇ ವಿಧಿಯು ದೇಶದ ಜನರಿಗೆ ಶಾಂತಿಯುತವಾಗಿ ಸಭೆ ಸೇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಈ ಸಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಮೊಟಕುಗೊಳಿಸುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲ. ಆದರೆ, ಮೋದಿ ಸರ್ಕಾರವು ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ. ಪ್ರತಿಭಟನೆಗಳನ್ನು ದಮನಿಸುತ್ತಿದೆ. 1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಮರುಳಿಸುವಂತೆ ಮಾಡಿದೆ.
ಕೇವಲ ಮೂರು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮೋದಿ ಸರ್ಕಾರದ ನಿದ್ರೆಗೆಡಿಸಿದೆ. ‘ಸಿಜೆಪಿ’ ಯುವ ಧ್ವನಿಗೆ ಮೋದಿ ಸರ್ಕಾರ ಅಕ್ಷರಶಃ ಹೆದರಿದೆ. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಎಸ್‌ಐಅರ್ ಅಕ್ರಮಗಳನ್ನು ಪ್ರಶ್ನಿಸಿ ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ ಬೀದಿಗಿಳಿದಿರುವ ಯುವ ನಾಗರಿಕರ ಧ್ವನಿಯನ್ನು ಅಡಗಿಸಲು ಮೋದಿ ಸರ್ಕಾರ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶನಿವಾರ ಇಡೀ ರಾಜಧಾನಿಯನ್ನೇ ಪೊಲೀಸ್ ಕೋಟೆಯನ್ನಾಗಿ ಪರಿವರ್ತಿಸಿದೆ. ಪ್ರತಿಭಟನೆಯ ಮುಂಚೂಣಿ ನಾಯಕರನ್ನು ಬಂಧಿಸಲಾಗುತ್ತಿದೆ. ಪ್ರತಿಭಟನಾಕಾರರ ಮೇಲೆ ದಮನಗಳು ನಡೆಯುತ್ತಿವೆ. ಇದೆಲ್ಲವೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ. ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸುವುದು ಯಾವುದೇ ದೇಶದ ಜಾಗೃತ ನಾಗರಿಕರ ನ್ಯಾಯಸಮ್ಮತ ಹಕ್ಕು. ಈ ಹಕ್ಕನ್ನು ಚಲಾಯಿಸಿಯೇ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಅಕ್ಟೋಬರ್ 10ರಂದು ಸಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ, ದೇಶದ ಯುವ ನಾಗರಿಕರು ಶನಿವಾರ ದೆಹಲಿಯಲ್ಲಿ ನೆರೆಯಲಾರಂಭಿಸಿದ್ದು. ಆದರೆ, ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಎಸಗುತ್ತಿರುವ ದೌರ್ಜನ್ಯ-ದಮನಗಳು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಮೀರುವಂತಿವೆ.
ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಹೊರಟ ನಾಗರಿಕರನ್ನು ತಡೆಯಲು ರೈಲುಗಳನ್ನು ರದ್ದುಪಡಿಸಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಮುಚ್ಚಿ, ರಸ್ತೆಗಳಿಗೆ ಕಬ್ಬಿಣದ ಬ್ಯಾರಿಕೇಡ್‌ಗಳು ಮತ್ತು ಮೊಳೆಗಳನ್ನು ಹಾಕಿ ಜನಸಾಮಾನ್ಯರ ಸಂಚಾರವನ್ನೇ ಸ್ತಬ್ಧಗೊಳಿಸಲಾಗಿದೆ. ಲಕ್ಷಾಂತರ ಜನರು ತಮ್ಮ ದಿನನಿತ್ಯದ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅವಲಂಬಿಸಿರುವ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಲಾಗಿದೆ. ಒಂದು ಪ್ರತಿಭಟನೆಯನ್ನು ತಡೆಯಲು ಇಡೀ ಮಹಾನಗರದ ಜನಜೀವನವನ್ನು ಸಂಕಷ್ಟಕ್ಕೆ ದೂಡಲಾಗಿದೆ.
ಮೋದಿ ಸರ್ಕಾರದ ಈ ದುಷ್ಕೃತ್ಯಗಳನ್ನು ಕಂಡ ಸುಪ್ರೀಂ ಕೋರ್ಟ್, ”ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ನಾಗರಿಕರ ಸಂಚಾರದ ಹಕ್ಕನ್ನು ಬಲಿಕೊಡಲು ಸಾಧ್ಯವಿಲ್ಲ. ಸೊಳ್ಳೆ ಹೊಡೆಯಲು ಸುತ್ತಿಗೆ ಬಳಸಿದಂತೆ ಇಡೀ ನಗರದ ಸಂಚಾರವನ್ನು ಅಸ್ತವ್ಯಸ್ತಗೊಳಿಸುವುದು ಸರಿಯಲ್ಲ” ಎಂದು ಹೇಳಿತ್ತು.
ಆದರೂ, ಕೇಂದ್ರ ಸರ್ಕಾರ ತನ್ನ ಕೃತ್ಯಗಳನ್ನು ಮುಂದುವರೆಸಿದೆ. ಸಾರಿಗೆ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸಿದೆ. ಮುಖ್ಯವಾಗಿ, ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರು ದೆಹಲಿಗೆ ಬಂದಿಳಿದ ತಕ್ಷಣವೇ, ವಿಮಾನದೊಳಗೇ ಅವರನ್ನು ಪೊಲೀಸರು ಬಂಧಿಸಿದರು. ಖ್ಯಾತ ಯೂಟ್ಯೂಬರ್ ಧೃವ್ ರಾಠಿ ಅವರನ್ನು ಅವರ ನಿವಾಸದಿಂದಲೇ ಬಂಧಿಸಲಾಗಿದೆ. ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿದ್ದ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ದೆಹಲಿಯ ಕೇರಳ ಭವನದಲ್ಲಿಯೇ ವಶಕ್ಕೆ ಪಡೆಯಲಾಗಿದೆ. ಸಾವಿರಾರು ಯುವಜನರನ್ನು ಮಾರ್ಗ ಮಧ್ಯೆಯೇ ತಡೆದು, ಬಂಧನಕ್ಕೆ ಒಳಪಡಿಸಲಾಗಿದೆ.
ವಿದ್ಯಾರ್ಥಿಗಳು, ವಕೀಲರು, ರಾಜಕೀಯ ನಾಯಕರು ಹಾಗು ಸಾಮಾಜಿಕ ಕಾರ್ಯಕರ್ತರು ದೆಹಲಿಯ ಬೀದಿಗಳಲ್ಲಿ ಪೊಲೀಸ್ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆವರಣದಿಂದ ಮೆರವಣಿಗೆ ಹೊರಟವರನ್ನೂ ಸಹ ಬಿಡದೆ ಬಂಧಿಸಿ, ನಾಗರಿಕ ಸ್ವಾತಂತ್ರ್ಯದ ಮೇಲಿನ ನೇರ ಪ್ರಹಾರ ನಡೆಸಲಾಗಿದೆ.
ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ ಸೇರಿದಂತೆ ನೂರಾರು ವಿದ್ಯಾರ್ಥಿ ನಾಯಕರು ಪೊಲೀಸರ ಕಪಿಮುಷ್ಟಿಯಲ್ಲಿ ಬಂಧಿಯಾಗಿದ್ದಾರೆ. ಸಿಪಿಐ(ಎಂ) ನಾಯಕರಾದ ಎಂ.ಎ. ಬೇಬಿ ಮತ್ತು ಬೃಂದಾ ಕಾರಟ್ ಅವರಂತಹ ಹಿರಿಯ ನಾಯಕರಿಗೂ ಪ್ರತಿಭಟನೆಯ ಹಕ್ಕನ್ನು ನಿರಾಕರಿಸಲಾಗಿದೆ. ದೆಹಲಿಯಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಬಂಧನ ಕೇಂದ್ರಗಳಿಗೆ ಕಳಿಸಲಾಗಿದೆ.
ಕ್ರೀಡಾಂಗಣಗಳನ್ನೇ ತಾತ್ಕಾಲಿಕ ಬಂಧನ ಕೇಂದ್ರಗಳನ್ನಾಗಿ ಪರಿವರ್ತಿಸಿ ಸಾವಿರಾರು ಜನರನ್ನು ಅಲ್ಲಿ ಕೂಡಿಹಾಕಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಇಡೀ ದೆಹಲಿಯನ್ನು ಯುದ್ಧಭೂಮಿಯಂತೆ ಬದಲಾಯಿಸಲಾಗಿದೆ. ಮಾತ್ರವಲ್ಲದೆ, ಪ್ರತಿಭಟನೆಯ ವರದಿ ಮಾಡಲು ತೆರಳಿದ ಮಾಧ್ಯಮದವರಿಗೂ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.
ಇದು, ಮೋದಿ ಸರ್ಕಾರವು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ಅಪಾಯಕಾರಿ ಶತ್ರುಗಳಂತೆ ಬಿಂಬಿಸುವುದರ ಕೃತ್ಯಕ್ಕೆ ಕನ್ನಡಿ ಹಿಡಿದಿದೆ. ಮಾತ್ರವಲ್ಲ, ಇಂತಹ ಕೃತ್ಯಗಳನ್ನು ಎಸಗುತ್ತಿರುವ ಮೋದಿ ಸರ್ಕಾರವು, ಯುವ ಧ್ವನಿಗೆ ಹೆದರಿರುವ ಸೂಚನೆಯೂ ಆಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ, ಈ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಆಡಳಿತವು ಪೊಲೀಸ್ ಬಲವನ್ನು ದುರುಪಯೋಗ ಮಾಡಿಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು.
ಈ ಲೇಖನ ಓದಿದ್ದೀರಾ?: ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ
ಸಂವಿಧಾನದ 19ನೇ ವಿಧಿಯು ದೇಶದ ಜನರಿಗೆ ಶಾಂತಿಯುತವಾಗಿ ಸಭೆ ಸೇರುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಈ ಸಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಮೊಟಕುಗೊಳಿಸುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲ. ಆದರೆ, ಮೋದಿ ಸರ್ಕಾರವು ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ. ಪ್ರತಿಭಟನೆಗಳನ್ನು ದಮನಿಸುತ್ತಿದೆ. 1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಮರುಳಿಸುವಂತೆ ಮಾಡಿದೆ. ತನ್ನ ಕ್ರೌರ್ಯದ ನಿಜವಾದ ಮುಖವನ್ನು ತೋರಿಸಿದೆ.
ತುರ್ತು ಪರಿಸ್ಥಿತಿಯ ಕಾಲದಲ್ಲೂ ರೈಲುಗಳು ಎಂದಿನಂತೆ ಸಂಚರಿಸುತ್ತಿದ್ದವು. ಆದರೆ ಇಂದು ಪ್ರತಿಭಟನೆಗೆ ಹೆದರಿ ರೈಲುಗಳನ್ನೇ ರದ್ದುಪಡಿಸಿರುವುದು ಭಾರತೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ. ಮೋದಿ ಸರ್ಕಾರವು ತನ್ನ ವೈಫಲ್ಯಗಳು ಮತ್ತು ಷಡ್ಯಂತ್ರಗಳನ್ನು ಮುಚ್ಚಿಕೊಳ್ಳಲು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದು ಮೋದಿ ಸರ್ಕಾರದ ಹೇಡಿತನದ ಪರಮಾವಧಿಯನ್ನು ಅನಾವರಣಗೊಳಿಸಿದೆ.
ಸರ್ಕಾರವನ್ನು ಪ್ರಶ್ನಿಸುತ್ತಿರುವವರು ದೇಶದ ಪ್ರಜೆಗಳೇ ಹೊರತು ಯಾರಿಗೂ ಶತ್ರುಗಳಲ್ಲ. ಪ್ರತಿಭಟನಾಕಾರರನ್ನು ಬಂಧಿಸುವುದರಿಂದ ಸಾರ್ವಜನಿಕರ ಮನಸ್ಸಿನಲ್ಲಿರುವ ಪ್ರಶ್ನೆಗಳು ಎಂದಿಗೂ ಅಳಿದುಹೋಗುವುದಿಲ್ಲ. ರೈಲುಗಳನ್ನು ತಡೆಯುವುದರಿಂದ ಅಥವಾ ಇಂಟರ್ನೆಟ್ ಕಡಿತಗೊಳಿಸುವುದರಿಂದ ಜನರ ಆಕ್ರೋಶವನ್ನು ಶಾಶ್ವತವಾಗಿ ತಣ್ಣಗಾಗಿಸಲು ಸಾಧ್ಯವಿಲ್ಲ. ಇಂತಹ ದಮನಕಾರಿ ಕ್ರಮಗಳು ಯುವ ಧ್ವನಿಯನ್ನು ಮತ್ತಷ್ಟು ಒಗ್ಗೂಡಿಸುತ್ತವೆಯೇ ಹೊರತು, ಚದುರಿಸುವುದಿಲ್ಲ.
ಒಂದಂತೂ ಸ್ಪಷ್ಟ, ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಯುವಜನರನ್ನು ಒಗ್ಗೂಡಿಸುತ್ತಿರುವ ಹೊಸ ರಾಜಕೀಯ ಶಕ್ತಿಯು ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಭಯಗೊಂಡಿರುವ ಮೋದಿ ಸರ್ಕಾರ, ಯುವಶಕ್ತಿಯನ್ನು ದಮನಿಸಲು ತಂತ್ರ-ಕುತಂತ್ರಗಳನ್ನು ಹೆಣೆಯುತ್ತಿದೆ. ಈ ಸರ್ವಾಧಿಕಾರಿ ಧೋರಣೆ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಯುವಜನರೊಂದಿಗೆ, ಅವರ ಪೋಷಕರೂ ಬೀದಿಗಿಳಿಸುವ ದಿನಗಳು ಸಮೀಪದಲ್ಲೇ ಇವೆ. ಮೋದಿ ಸರ್ಕಾರದ ಅವನತಿಯೂ ಹತ್ತಿರದಲ್ಲೇ ಇದೆ!



