ಪರಿಸರವಾದಿ, ಲಡಾಖ್ ಜನರ ಹಕ್ಕುಗಳ ಹೋರಾಟಗಾರ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸೋನಮ್ ವಾಂಗ್‌ಚುಕ್ ತಮ್ಮನ್ನು ತಾವು ‘ಗೌರವಾನ್ವಿತ ಜಿರಳೆ’ ಎಂದು ಕರೆದುಕೊಂಡಿದ್ದಾರೆ. ಈ ಮೂಲಕ ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಹಾಗೆಯೇ ಆನ್‌ಲೈನ್‌ನಲ್ಲಿ ಸೃಷ್ಟಿಯಾಗುವ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಬದಲು ಕೇಂದ್ರ ಸರ್ಕಾರವು ಯುವಜನರು ಎತ್ತಿರುವ ಪ್ರಶ್ನೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವ್ಯವಸ್ಥೆಯನ್ನು ಪ್ರಶ್ನಿಸುವ ನಿರುದ್ಯೋಗಿ ಯುವಕರನ್ನು ಜಿರಳೆ ಎಂದು ಕರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ನಕಲಿ ಪದವಿ ಪಡೆಯುವವರನ್ನು ಉದ್ದೇಶಿಸಿ ಹೇಳಿದ್ದಾಗಿ ಸಿಜೆಐ ಹೇಳಿದ್ದಾರೆ. ಆದರೆ ನಿರುದ್ಯೋಗಿ ಯುವಕರು ಜಿರಳೆಗಳಂತೆ ಎಂಬ ಸಿಜೆಐ ಹೇಳಿಕೆ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ.
ಇದನ್ನು ಓದಿದ್ದೀರಾ? ಕಾರ್ಗಿಲ್‌ನಲ್ಲಿ ಸೋನಮ್ ವಾಂಗ್‌ಚುಕ್‌ಗೆ ಆತ್ಮೀಯ ಸ್ವಾಗತ: ಲಡಾಖ್ ಏಕತೆಗೆ ಕರೆ ನೀಡಿದ ಹೋರಾಟಗಾರ
ಸದ್ಯ ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿ ನಡೆಯುತ್ತಿದೆ. ವಿಶೇಷವಾಗಿ ದೇಶದ Gen-Z ಯುವ ಪೀಳಿಗೆಯನ್ನು ಈ ಕಾಕ್ರೋಚ್ ಜನತಾ ಪಾರ್ಟಿ ಸೆಳೆದಿದ್ದು, ಕೇವಲ ಐದಾರು ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 2.5 ಕೋಟಿಗೂ ಹೆಚ್ಚು ಫಾಲೋವರ್ಸ್ ಪಡೆದಿದೆ. ಬಿಜೆಪಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಹಿಂದಿಕ್ಕಿದೆ. ಅದಾಗುತ್ತಿದ್ದಂತೆ ಈ ಖಾತೆ ಸೃಷ್ಟಿಸಿದ ಅಭಿಜೀತ್ ದೀಪ್ಕೆಗೆ ಬಿಜೆಪಿ ಕಾರ್ಯಕರ್ತರು ಜೀವ ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಖಾತೆಯನ್ನು ಹ್ಯಾಕ್ ಮಾಡುವ ಪ್ರಯತ್ನಗಳು ನಡೆದಿವೆ. ಕೇಂದ್ರ ಸರ್ಕಾರವು ಎಕ್ಸ್ ಖಾತೆಯನ್ನು ಬ್ಯಾನ್ ಮಾಡಿದೆ. ಇವೆಲ್ಲವುದರ ನಡುವೆ ಕಾಕ್ರೋಚ್ ಜನತಾ ಪಾರ್ಟಿ ನಿರುದ್ಯೋಗ, ಪರೀಕ್ಷಾ ಪತ್ರಿಕೆ ಸೋರಿಕೆ ಮೊದಲಾದ ಸಮಸ್ಯೆಗಳನ್ನು ಪ್ರಶ್ನಿಸುತ್ತಿದೆ.
ಈ ವಿವಾದದ ಬಗ್ಗೆ ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ವಾಂಗ್‌ಚುಕ್, “ಕೇಂದ್ರ ಸರ್ಕಾರವು ಈ ಅಭಿಯಾನವನ್ನು ಬೆದರಿಕೆಯಾಗಿ ನೋಡದೆ ಪ್ರಜಾಪ್ರಭುತ್ವದ ಪ್ರತಿಕ್ರಿಯೆಯಾಗಿ ನೋಡಬೇಕು. ನಾನು ಯುವಕರ ಈ ಪ್ರಯತ್ನದಿಂದ ಪ್ರಭಾವಿತನಾಗಿದ್ದೇನೆ. ನಮ್ಮ ಯುವಕರ ಇಂತಹ ಸೃಜನಶೀಲ ಅಭಿವ್ಯಕ್ತಿಯಿಂದ ಚಿಂತಿಸಬೇಕಾಗಿಲ್ಲ, ಭಯಪಡಬೇಕಾಗಿಲ್ಲ. ಸರ್ಕಾರವು ಯುವಕರನ್ನು ಆಲಿಸಬೇಕು. ಸಂದೇಶ ನೀಡುವವರನ್ನು ಕೊಂದರೆ, ಸಂದೇಶವನ್ನು ಕೊಂದಂತಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಎಕ್ಸ್ ಖಾತೆ ಬ್ಯಾನ್ ಮಾಡಿರುವುದನ್ನು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್ ಮೇಲೆ ಕೇಂದ್ರದ ಕೆಂಗಣ್ಣೇಕೆ?
ಇನ್ನು ತಾವು ಈ ಚಳವಳಿಗೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಂಗ್‌ಚುಕ್ ತಾವು ಸದಸ್ಯತ್ವಕ್ಕೆ ಅರ್ಹರಲ್ಲ ಎಂದರು. “ಈ ಬಗ್ಗೆ ಮಾತನಾಡುವಂತೆ ನನಗೆ ಹಲವರು ಹೇಳಿದರು. ನಾನೂ ಸದಸ್ಯನಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ನಾನು ನಿರುದ್ಯೋಗಿಯೂ ಅಲ್ಲ ಅಥವಾ ಸೋಮಾರಿಯೂ ಅಲ್ಲ. ಆದ್ದರಿಂದ ನಾನು ಸದಸ್ಯನಾಗಲು ಅರ್ಹನಲ್ಲ ಎಂಬುದು ದುಃಖಕರ. ಆದರೆ ನಾನು ನನ್ನನ್ನು ‘ಗೌರವಾನ್ವಿತ ಜಿರಳೆ’ ಎಂದು ಪರಿಗಣಿಸುತ್ತೇನೆ” ಎಂದರು.
“ಪತ್ರಿಕೆಗಳಲ್ಲಿ ಬರುವ ವ್ಯಂಗ್ಯಚಿತ್ರಗಳಲ್ಲಿ ಪ್ರಧಾನಿ, ಗೃಹ ಸಚಿವರು ಅಥವಾ ರಕ್ಷಣಾ ಸಚಿವರನ್ನು ವ್ಯಂಗ್ಯವಾಗಿ ಚಿತ್ರಿಸಿದರೆ ಪತ್ರಿಕೆಯವರಿಗೆ ಗುಂಡು ಹಾರಿಸಲಾಗುತ್ತದೆಯೇ? ಅದೇ ರೀತಿ, ಇದು ಕೂಡ ವಿಡಂಬನೆ” ಎಂದರು. ಹಾಗೆಯೇ ದೇಶದ ಯುವಜನರ ಚಳವಳಿಯ ಅಹಿಂಸಾತ್ಮಕ ಮತ್ತು ಕಲ್ಪನಾತ್ಮಕ ಮಾದರಿಯನ್ನು ಸೋನಮ್ ಶ್ಲಾಘಿಸಿದರು. “ದೇಶದ ಯುವಕರು ಬೀದಿಗಿಳಿಯುವ ಬದಲು ಡಿಜಿಟಲ್ ಸೃಜನಶೀಲತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಭಾರತವನ್ನು ‘ವಿಶ್ವ ಗುರು’ವನ್ನಾಗಿ ಮಾಡುವ ವಿಷಯವಾಗಿದೆ. ಇದನ್ನು ಸರ್ಕಾರ ಗೌರವಿಸಬೇಕು” ಎಂದರು.
ಈ ಸಂದರ್ಭದಲ್ಲಿ ಯುವಜನರು ಶಾಂತಿಯುತವಾಗಿಬೇಕು ಎಂದು ಮನವಿ ಮಾಡಿದರು. “ಆದರೆ ಸರ್ಕಾರ ಯುವಜನರನ್ನು ಮೂಲೆಗುಂಪು ಮಾಡಬಾರದು. ಇದು ಸರ್ಕಾರಕ್ಕೆ ನನ್ನ ಸಂದೇಶ. ಸರ್ಕಾರವು ಯುವಕರು ಹಿಂಸಾಚಾರದ ಹಾದಿಯನ್ನು ಹಿಡಿಯುವಂತೆ ಮಾಡಬಾರದು” ಎಂದು ಹೇಳಿದರು.




