ಹೊಸೂರು ಜಿಲ್ಲೆಯನ್ನು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ಪ್ರಯತ್ನದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ವಿಧಾನಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸೂರಿನಲ್ಲಿ ವಾರ್ಷಿಕ ಮೂರು ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದರು.
ವಿಧಾನಸಭೆಯಲ್ಲಿ ನಿಯಮಾವಳಿ 110ರ ಅಡಿಯಲ್ಲಿ ಘೋಷಿಸಿದ ಸ್ಟಾಲಿನ್, ಇತ್ತೀಚಿನ ವರ್ಷಗಳಲ್ಲಿ ಹೊಸೂರು ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುತ್ತಾ ಬಂದಿದೆ. ಆದ ಕಾರಣ ಹೊಸೂರು ಸುತ್ತಮುತ್ತಲು ಹಲವು ತಯಾರಿಕಾ ಕೇಂದ್ರಗಳು ಹಾಗೂ ಕೈಗಾರಿಕಾ ಘಟಕಗಳನ್ನು ಹೆಚ್ಚಿಸುವ ಅಗತ್ಯವನ್ನು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
ರಾಜ್ಯ ಸರ್ಕಾರವು ಹೊಸೂರಿನಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಿಸಲು ಹಲವು ದೂರದೃಷ್ಟಿಯುಳ್ಳ ಕ್ರಮಗಳನ್ನು ಕೈಗೊಳ್ಳಲಿದೆ. ಹೊಸೂರಿಗಾಗಿ ನೂತನ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸ್ಟಾಲಿನ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಮುದಾಯವಾರು ಡಿಸಿಎಂ ಬೇಡಿಕೆಯೂ, ಮುಖ್ಯಮಂತ್ರಿಗಳ ಮೌನವೂ
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಕೃಷ್ಣಗಿರಿ ಹಾಗೂ ಧರ್ಮಪುರಿ ಪ್ರದೇಶಗಳಲ್ಲಿ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಸರ್ಕಾರ ಭಾವಿಸಿದೆ ಎಂದು ಸ್ಟಾಲಿನ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಟಿಆರ್‌ಬಿ ರಾಜ, “ನೂತನ ವಿಮಾನ ನಿಲ್ದಾಣವು ಬೆಂಗಳೂರಿನ ಜೊತೆಗೆ ಅವಳಿ ನಗರ ಪರಿಸರ ವ್ಯವಸ್ಥೆಗೆ ಉತ್ತೇಜನ ಹೊಂದಲಿದೆ. ಕರ್ನಾಟಕ ಹಾಗೂ ತಮಿಳುನಾಡು ಅಭಿವೃದ್ಧಿ ಹೊಂದುತ್ತದೆ. ಈ ಯೋಜನೆಯು ಸಂಪರ್ಕ ವೃದ್ಧಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಹೊಸೂರಿನ ಜೊತೆ ನೆರೆಯ ಜಿಲ್ಲೆಗಳಾದ ಧರ್ಮಪುರಿ ಹಾಗೂ ಸೇಲಂ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಹಾಗೆಯೇ ಬೆಂಗಳೂರಿನ ಹಲವು ಭಾಗಗಳಿಗೆ ಪ್ರಯೋಜನವಾಗಲಿದೆ” ಎಂದು ತಿಳಿಸಿದರು.
