‘ಸ್ಟ್ಯಾಚ್ಯೂ ಆಫ್ ಯೂನಿಟಿ’ (ಏಕತಾ ಪ್ರತಿಮೆ) ಕಾಂಪ್ಲೆಕ್ಸ್‌ನಲ್ಲಿರುವ ಜಂಗಲ್ ಸಫಾರಿ ಎಂದು ಜನಪ್ರಿಯವಾಗಿರುವ ಸರ್ದಾರ್ ಪಟೇಲ್ ಝೂಲಾಜಿಕಲ್ ಪಾರ್ಕ್‌ನಲ್ಲಿ ಇತರ ರಾಜ್ಯಗಳು ಮತ್ತು ವಿದೇಶಗಳಿಂದ ತರಲಾದ 38 ಪ್ರಾಣಿಗಳು ಮತ್ತು ಪಕ್ಷಿಗಳು ಸಾವನ್ನಪ್ಪಿವೆ ಎಂದು ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಬಹಿರಂಗಪಡಿಸಿದೆ.
ಕಾಂಗ್ರೆಸ್ ಶಾಸಕ ಗುಲಾಬ್ ಸಿಂಗ್ ಚೌಹಾಣ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಜ್ಯ ಸರ್ಕಾರ, ಪ್ರಾಣಿ-ಪಕ್ಷಿಗಳ ಸಾವಿನ ಬಗ್ಗೆ ಒಪ್ಪಿಕೊಂಡಿದೆ. “ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಝೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಗೊಂಡ 295 ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ 2023ರ ಡಿಸೆಂಬರ್ 31ರವರೆಗೆ 38 ಸಾವನ್ನಪ್ಪಿವೆ” ಎಂದು ಹೇಳಿದೆ. ಪಾರ್ಕ್ ಒಟ್ಟು 940 ಪ್ರಾಣಿ-ಪಕ್ಷಿಗಳಿದ್ದವು.
ಪ್ರಾಣಿಗಳ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಉತ್ತರಿಸಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, “ಪಾರ್ಕ್‌ನಲ್ಲಿದ್ದ ಐದು ಅಲ್ಪಕಾಗಳಲ್ಲಿ ಮೂವರು ಸಾವನ್ನಪ್ಪಿದರೆ, ನಾಲ್ಕು ವಾಲಬಿಗಳಲ್ಲಿ ಎರಡು ಸಾವನ್ನಪ್ಪಿವೆ. ನಾಲ್ಕು ಸನ್ ಕೋನರ್‌ಗಳು, ಮೂರು ಹಸಿರು ಕೆನ್ನೆಯ ಕೋನರ್‌ಗಳು, ಏಳು ನೀಲಿ ಫೆಸೆಂಟ್‌ಗಳು, ಮೂರು ಸಿಲ್ವರ್ ಫೆಸೆಂಟ್‌ಗಳು, ಮೂರು ಕೆಂಪು ಕೊಕ್ಕಿನ ಟೌಕನ್‌ಗಳು, ಮೂರು ಥಯಾಮಿನ್ ಜಿಂಕೆಗಳು, ಮೂರು ಅಳಿಲು ಕೋತಿಗಳು ಹಾಗೂ ಒಂದು ಜವುಗು ಮೊಸಳೆ ಸಾವನ್ನಪ್ಪಿವೆ” ಎಂದು ತಿಳಿಸಿದ್ದಾರೆ.
ಹಂಚಿಕೊಂಡಿರುವ ವಿವರಗಳ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಇಂತಹ ವಿದೇಶಿ ಪಕ್ಷಿಗಳು ಮತ್ತು ಪ್ರಾಣಿಗಳಿಗೆ 34 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ.
2023ರ ಮಾರ್ಚ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಗುಜರಾತ್ ಸರ್ಕಾರ, 2021ರ ಫೆಬ್ರವರಿ 1ರಿಂದ 2023ರ ಜನವರಿ 31ರವರೆಗೆ 12 ಪ್ರಾಣಿಗಳು ಮತ್ತು ಪಕ್ಷಿಗಳು ಮೃಗಾಲಯದಲ್ಲಿ ಸಾವನ್ನಪ್ಪಿವೆ ಎಂದು ಹೇಳಿತ್ತು. ಇದೀಗ, ವಿಧಾನಸಭೆಯಲ್ಲಿ ನೀಡಿದ ಉತ್ತರದಲ್ಲಿ 38 ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ ಎಂದು ಹೇಳಿದೆ. ಅದಾಗ್ಯೂ, ಅಂತಹ ಸಾವುಗಳಿಗೆ ಕಾರಣಗಳನ್ನು ವಿವರಿಸಲಾಗಿಲ್ಲವಾದರೂ, ಕಳೆದ ವರ್ಷ ನೀಡಿದ್ದ ಕಾರಣಗಳಲ್ಲಿ ಉಸಿರಾಟದ ಸಮಸ್ಯೆ ಮತ್ತು ಕಾರ್ಡಿಯೋ-ಪಲ್ಮನರಿ ಅರೆಸ್ಟ್ ಪ್ರಮುಖ ಕಾರಣಗಳೆಂದು ಹೇಳಲಾಗಿತ್ತು.
ಪಕ್ಷಿಗಳು ಮತ್ತು ಪ್ರಾಣಿಗಳ ರಕ್ಷಣೆಯಲ್ಲಿ ಗುಜರಾತ್ ಸರ್ಕಾರ ಅಸಮರ್ಥವಾಗಿದೆ ಎಂದು ಕಾಂಗ್ರೆಸ್ ಶಾಸಕ ಮತ್ತು ಪರಿಸರವಾದಿ ಪಾರ್ಥಿವ್ ಕಥವಾಡಿಯಾ ಆರೋಪಿಸಿದ್ದಾರೆ. “ಮಧ್ಯಪ್ರದೇಶದ ಕುನೊದಲ್ಲಿ ಚಿರತೆಗಳು ಸತ್ತಿವೆ ಮತ್ತು ಈಗ ಗುಜರಾತ್‌ನಲ್ಲಿ ವಿದೇಶದಿಂದ ತಂದ ಪಕ್ಷಿಗಳು ಮತ್ತು ಪ್ರಾಣಿಗಳು ಸಾಯುತ್ತಿವೆ. ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸರಿಯಾದ ವಾತಾವರಣವನ್ನು ಒದಗಿಸಲು ಸರ್ಕಾರ ವಿಫಲವಾಗಿದೆ ಎಂಬುದು ವಿಮರ್ಶಾತ್ಮಕ; ಈ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಜನರ ಹಣದಲ್ಲಿ ತರಲಾಯಿತು; ಅವುಗಳ ಸಾವಿನ ಹೊಣೆಯನ್ನು ಸರಕಾರವೇ ಹೊರಬೇಕು” ಎಂದು ಹೇಳಿದ್ದಾರೆ.
“ಈ ಎಲ್ಲಾ ಪಕ್ಷಿಗಳು ಮತ್ತು ಪ್ರಾಣಿಗಳು ಏಕೆ ಸತ್ತವು ಎಂಬುದನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕು. ವೈಜ್ಞಾನಿಕ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸ್ಟ್ಯಾಚ್ಯೂ ಆಫ್ ಯೂನಿಟಿ ಕಾಂಪ್ಲೆಕ್ಸ್‌ನಲ್ಲಿರುವ ಸರ್ದಾರ್ ಪಟೇಲ್ ಝೂಲಾಜಿಕಲ್ ಪಾರ್ಕ್ ಮತ್ತು ಜಿಯೋಡೆಸಿಕ್ ಏವಿಯರಿ ಡೋಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್ 30 ರಂದು ಉದ್ಘಾಟಿಸಿದರು. ಉದ್ಘಾಟನೆಗೆ ಮುಂಚೆಯೇ, ಝೂಲಾಜಿಕಲ್ ಪಾರ್ಕ್‌ನಲ್ಲಿ ವಿದೇಶದಿಂದ ತಂದ ಪ್ರಾಣಿಗಳು ಸಾವನ್ನಪ್ಪಿದ ಬಗ್ಗೆ ಟೀಕೆಗೆ ಗುರಿಯಾಗಿತ್ತು.