ನವದೆಹಲಿ-ಎನ್‌ಸಿಆರ್ ಭಾಗದಲ್ಲಿ ತೀವ್ರ ಹೆಚ್ಚಾಗಿರುವ ವಾಯುಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬೆಳೆ ಅವಶೇಷ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಿದೆ.
ಸಂಜಯ್ ಕಿಶನ್ ಕೌಲ್ ಹಾಗೂ ಸುದಾಂಶು ದುಲಿಯಾ ಅವರಿದ್ದ ಪೀಠ, ವರ್ಷದಿಂದ ವರ್ಷಕ್ಕೆ ದೆಹಲಿಯನ್ನು ಮತ್ತಷ್ಟು ಹದಗೆಡುವುದಕ್ಕೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
“ದೆಹಲಿ ವಾಯು ಮಾಲಿನ್ಯವನ್ನು ಪ್ರತಿ ಬಾರಿಯೂ ರಾಜಕೀಯ ಚರ್ಚೆಯಾಗಿಸಲು ಸಾಧ್ಯವಿಲ್ಲ. ಈ ವಾಯುಗುಣಮಟ್ಟದ ಕುಸಿತವು ‘ಜನರ ಆರೋಗ್ಯದ ಹತ್ಯೆ” ಎಂದು ಸುಪ್ರೀಂ ಕೋರ್ಟ್ ಹೇಳಿತು.
“ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ಪ್ರತಿ ಚಳಿಗಾಲದಲ್ಲಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಕೃಷಿ ತ್ಯಾಜ್ಯ ಸುಡುವುದು ನಿಲ್ಲಬೇಕು. ನೀವು ಅದನ್ನು ಯಾವ ರೀತಿ ಮಾಡುತ್ತೀರೋ ಗೊತ್ತಿಲ್ಲ. ನಿಲ್ಲಿಸಬೇಕಿರುವುದು ನಿಮ್ಮ ಕೆಲಸ. ಏನಾದರೂ ತಕ್ಷಣ ಮಾಡಬೇಕು” ಎಂದು ನಾಲ್ಕು ರಾಜ್ಯಗಳ ಸರ್ಕಾರಕ್ಕೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳಿಗೆ ಸ್ಥಾನ
ಈ ರೀತಿಯ ಬೆಳೆಗಳನ್ನು ಈ ಅವಧಿಯಲ್ಲಿ ಬೆಳೆಯಬೇಕೇ ಎಂದು ಗಂಭೀರವಾದ ಅವಲೋಕನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
“15 ವರ್ಷಗಳ ಹಿಂದೆ ಈ ಪ್ರಮಾಣದ ಬೆಳೆ ಬೆಳೆಯದ ಕಾರಣ ಈ ಸಮಸ್ಯೆ ಉದ್ಭವಿಸಲಿಲ್ಲ. ಈ ರೀತಿ ಬೆಳೆ ಬೆಳೆಯುವುದು, ಪಂಜಾಬ್‌ನ ನೀರಿನ ಮಟ್ಟವನ್ನು ನಾಶಪಡಿಸಿದೆ ಮತ್ತು ದೆಹಲಿಯ ಸುತ್ತಮುತ್ತಲಿನ ಹವಾಮಾನದ ಮೇಲೆ ಅದು ಪರಿಣಾಮ ಬೀರುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಂಜಾಬ್‌ನ 20 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಹುಲ್ಲು ಸುಡುವ ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಪಂಜಾಬ್ ಹಾಗೂ ದೆಹಲಿಯ ಹಲವು ನಗರಗಳ ವಾಯು ಗುಣಮಟ್ಟ ಸೂಚ್ಯಂಕ ತೀರ ಕಳಪೆ ಮಟ್ಟವನ್ನು ತಲುಪಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಸಾರ್ವಜನಿಕ ಯೋಜನೆಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳನ್ನು ಮತ್ತು ಟ್ರಕ್‌ಗಳು ಹಾಗೂ ವಾಣಿಜ್ಯ ಬಳಕೆ ನಾಲ್ಕು ಚಕ್ರಗಳ ವಾಹನಗಳು ರಾಷ್ಟ್ರ ರಾಜಧಾನಿ ಪ್ರವೇಶಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ವಾಹನಗಳನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಪೀಠವು ದೆಹಲಿ ಸರ್ಕಾರವನ್ನು ಕೇಳಿದೆ. ನಗರದ ಮಾಲಿನ್ಯದ ಪ್ರಮುಖ ಮೂಲಗಳಲ್ಲಿ ವಾಹನ ಮಾಲಿನ್ಯವೂ ಒಂದಾಗಿದೆ.