ತಮಿಳುನಾಡಿನ ಸೇಲಂನ ಸಮೀಪದ ಓದಿಯತ್ತೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಕಲ್ಲುತೂರಾಟದಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಮತ್ತು ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಜಲಪಿರಂಗಿ ಹಾಗೂ ಲಘು ಲಾಠಿಪ್ರಹಾರ ನಡೆಸಬೇಕಾಯಿತು. ಬಳಿಕ ಘಟನಾ ಸ್ಥಳದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶನಿವಾರ ತಡರಾತ್ರಿ ಈ ಅಹಿತಕರ ಘಟನೆ ನಡೆದಿದೆ. ಕಾಲು ಮೇಲ್ಗಾಲು ಹಾಕಿ ಕುಳಿತಿರುವ ಭಂಗಿಯಲ್ಲಿರುವ ಅಂಬೇಡ್ಕರ್ ಅವರ ನೂತನ ಪ್ರತಿಮೆಯ ಅನಾವರಣವನ್ನು ಸ್ಥಳೀಯರ ಒಂದು ಗುಂಪು ತೀವ್ರವಾಗಿ ವಿರೋಧಿಸಿತ್ತು. ಪ್ರತಿಮೆಯ ಭಂಗಿ ಮತ್ತು ಸ್ಥಾಪನೆ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾದಾಗ, ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಸ್ಥಳೀಯ ಆಡಳಿತ ಮಧ್ಯಪ್ರವೇಶಿಸಿತ್ತು. ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ಶಮನಗೊಳಿಸಲು ಅಧಿಕಾರಿಗಳು ಪ್ರತಿಮೆಯ ಸುತ್ತಲೂ ತಗಡಿನ ಶೀಟ್‌ಗಳನ್ನು ಅಳವಡಿಸಿ ಮುಚ್ಚಿದ್ದರು.
ಆಡಳಿತದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೊಂದು ಗುಂಪು, ಸ್ಥಳದಲ್ಲಿ ಜಮಾಯಿಸಿ ಏಕಾಏಕಿ ತಗಡಿನ ಶೀಟ್‌ಗಳನ್ನು ತೆರವುಗೊಳಿಸಿದೆ. ಮತ್ತೆ ಪ್ರತಿಮೆಯನ್ನು ಮುಚ್ಚಲು ಅಧಿಕಾರಿಗಳು ಮುಂದಾದಾಗ, ಆಡಳಿತದ ಕ್ರಮವನ್ನು ಖಂಡಿಸಿ ತೀವ್ರ ಪ್ರತಿಭಟನೆ ಆರಂಭವಾಯಿತು.
ಕ್ಷಣಾರ್ಧದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ, ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಬೇಕಾಯಿತು.
ಈ ಗದ್ದಲ ಹಾಗೂ ಕಲ್ಲುತೂರಾಟದ ನಡುವೆ ಐವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಯಾಗದಂತೆ ತಡೆಯಲು ಓದಿಯತ್ತೂರು ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗಲಭೆಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.




