ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ವ್ಯಕ್ತಿಯೊಬ್ಬ ತನ್ನ Social capital ಪ್ರಭಾವದಿಂದ ಬೃಹತ್ ಬಂಡವಾಳಶಾಹಿಯಾಗಿ ಬೆಳೆಯುವುದು ನಿಜಕ್ಕೂ ದೊಡ್ಡ ಸಾಧನೆ ಅಲ್ಲವೇ ಅಲ್ಲ. ಮೇಲ್ಜಾತಿಯಾದ ಕಾರಣಕ್ಕೆ ಹಾಗೂ ಸರ್ಕಾರದ ಸಖ್ಯವಿದ್ದ ಕಾರಣಕ್ಕೆ ದೇಶದ ಸಂಪನ್ಮೂಲಗಳ ಬಳಕೆಯಲ್ಲಿ bargain ಮಾಡಿಕೊಂಡು ಕೋಟಿ ಕೋಟಿ ಸಂಪಾದಿಸಿ, ಅದರಿಂದ ಒಂದಷ್ಟು ಜನಕ್ಕೆ ಉದ್ಯೋಗ ಹಾಗೂ ದೇಶದ ಉತ್ಪಾದನಾ ರಂಗಕ್ಕೆ ವೇಗ ಕೊಡುವುದೂ ಸಹ ದೊಡ್ಡಸ್ಥಿಕೆ ಏನಲ್ಲ. ಅದರಲ್ಲೂ ಕೃಷಿಕರೇ ಹೆಚ್ಚಿದ್ದ 60-90ರ ದಶಕದಲ್ಲಿ ದೇಶದ ಬೆನ್ನೆಲುಬಾಗಿದ್ದವರು ರೈತರೇ. ಈಗಲೂ ಸಹ ಭಾರತದ ಜಿಡಿಪಿಯಲ್ಲಿ ರೈತರು, ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ MSMEಗಳ ಪಾಲೇ ಹೆಚ್ಚು. ಈ ಕೋಟ್ಯಾಧಿಪತಿ ಕಾರ್ಪೊರೇಟಿಗರು ಸೃಷ್ಟಿಸಿರುವ ಉದ್ಯೋಗ ತೀರ ಕಡಿಮೆ. ಆದರೆ, ಗಳಿಸಿರುವ ಲಾಭ ಬೆಟ್ಟದಷ್ಟು. ಭಾರತದ ಒಂದೆರಡು ವರ್ಷದ ಬಜೆಟ್ಟಿಗೆ ಸಮನಾಗುವಷ್ಟು.
ಇಂತಹ ಬಂಡವಾಳಶಾಹಿಗಳು ಯಾವುದೇ ಕಾಲವಿರಲಿ, ಮತ್ತಷ್ಟು ಬಲಿತು ಬೆಳೆಯುತ್ತಾರೆಯೇ ಹೊರತು ಇಳಿಯುವುದಿಲ್ಲ. ಕಳೆದ ದಶಕದಲ್ಲಿ ಅಂಬಾನಿ-ಅದಾನಿಗಳು ಟಾಟಾ-ಬಿರ್ಲಾರನ್ನು replace ಮಾಡಿದರೇ ಹೊರತು ದೇಶದ ಬಡತನ, ಜಾತೀಯತೆ, ಪುರುಷಾಧಿಪತ್ಯ ಕಡಿಮೆ ಮಾಡುವಲ್ಲಿ ಇವರ ಪಾಲೇನೂ ಇಲ್ಲ. ಬದಲಾಗಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇವರ ಕಾಣಿಕೆ ಸಾಕಷ್ಟಿದೆ.
ಈ ವರದಿ ಓದಿದ್ದೀರಾ?: ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?
ಈ ಅತಿ ಶ್ರೀಮಂತರು ತಾವು ಅಕ್ರಮವಾಗಿ ಗಳಿಸಿದ (ಅವರು ಗಳಿಸಿರುವ ಎಲ್ಲವೂ ಅಕ್ರಮವೇ) ಪ್ರತಿ ನೂರು ರೂಪಾಯಿಯಲ್ಲಿ ಒಂದು ಪೈಸೆಯನ್ನು ತಮ್ಮದೇ ಹೆಸರಿನ ಚಾರಿಟಿಯಿಂದ ಸಮಾಜದ ಪ್ರಗತಿಗೆ ದೇಣಿಗೆಯಾಗಿ ನೀಡುತ್ತಾ ಉಳಿದಂತೆ ಮಿಗುತಾಯವಾದ 99.99 ರೂಪಾಯಿ ಬೆವರಿಲ್ಲದ ಲಾಭವನ್ನು ಜೇಬಿಗೆ ಹಾಕಿಕೊಂಡಿರುವುದನ್ನು ಮರೆಮಾಚಿಸುತ್ತಾರೆ. ಸಾಮಾನ್ಯ ಜನರ ಬಾಯಲ್ಲಿ ದೇವರಾಗಿ ಬಿಡುತ್ತಾರೆ. ಆದರೆ, ಪ್ರಜ್ಞಾವಂತರು ಈ ಖೆಡ್ಡಾಕೆ ಬೀಳಬಾರದು. ಏಕೆಂದರೆ, ಇಂದಿಗೂ direct tax ಕಡಿಮೆ ಕಟ್ಟುವುದು ಉದ್ಯಮಿಗಳೇ. indirect tax ಹೆಚ್ಚು ಕಟ್ಟುವುದು ಬಡವರೇ.
ಒಂದು ಜೀವವಾಗಿ ಟಾಟಾ ಗೌರವಾರ್ಹರು. ಆದರೆ, ಉದ್ಯಮಿಯಾಗಿ ದುಡಿವ ಜನರ ಬೆವರಿನ ಪಾಲನ್ನು ಕಿತ್ತುಕೊಂಡು ತಮ್ಮ ಜೇಬಿಗೆ ಹಾಕಿಕೊಂಡು ಐಷಾರಾಮಿ ಜೀವನ ಸಾಗಿಸಿದ, ಶ್ರಮಿಕರನ್ನು ಶೋಷಿಸಿದ, ದೇಶದ ಬಡತನವನ್ನು ಹೆಚ್ಚಿಸಿದ ಬಂಡವಾಳಶಾಹಿ ಎಂಬುದನ್ನು ನಾವು ಮರೆಯಬಾರದು.