ತೆಲಂಗಾಣದ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಲೋಕಸಭಾ ಸದಸ್ಯ ಎ ಪಿ ಜಿತೇಂದರ್ ರೆಡ್ಡಿ ಅವರ ಟ್ವೀಟ್ವೊಂದು ವಿವಾದಕ್ಕೆ ಗುರಿಯಾಗಿದೆ. ಟ್ರಕ್ ಹತ್ತಲು ಮೊಂಡು ಹಿಡಿದ ಕಾಡು ಎತ್ತಿನ ಹಿಂಭಾಗಕ್ಕೆ ವ್ಯಕ್ತಿಯೊಬ್ಬರು ಒದೆಯುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ವಿಡಿಯೋ ಈಗ ವೈರಲ್ ಆಗಿದೆ.
‘ಈ ಚಿಕಿತ್ಸೆಯು ತೆಲಂಗಾಣ ಬಿಜೆಪಿ ನಾಯಕತ್ವಕ್ಕೆ ಅಗತ್ಯವಾಗಿದೆ” ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರೂ ಆದ ಜಿತೇಂದರ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಅದನ್ನು ಪಕ್ಷದ ಹಿರಿಯ ಮುಖಂಡರಾದ ಅಮಿತ್ ಶಾ, ಸುನಿಲ್ ಬನ್ಸಾಲ್, ಬಿ ಎಲ್ ಸಂತೋಷ್ ಮತ್ತು ಪಕ್ಷದ ಪ್ರಧಾನ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.
ತೆಲಂಗಾಣ ಬಿಜೆಪಿಯ ಹಿರಿಯ ನಾಯಕರಾದ ಈಟೆಲ ರಾಜೇಂದರ್ ಮತ್ತು ಕೋಮಟಿರೆಡ್ಡಿ ರಾಜ್ಗೋಪಾಲ್ ಅವರು ಕೂಡ ತಮ್ಮ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.
ತೆಲಂಗಾಣದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಬಗ್ಗೆ ಪಕ್ಷದ ಕೆಲವು ನಾಯಕರೇ ತಿರುಗಿಬಿದ್ದಿದ್ದಾರೆ. ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಜಿತೇಂದರ್ ರೆಡ್ಡಿ ಕೂಡ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ: ತೀಸ್ತಾ ಸೆಟಲ್ವಾಡ್ಗೆ ಜಾಮೀನು ನಿರಾಕರಿಸಿದ ಗುಜರಾತ್ ಹೈಕೋರ್ಟ್; ತಕ್ಷಣವೇ ಶರಣಾಗುವಂತೆ ಸೂಚನೆ
ಜಿತೇಂದರ್ ರೆಡ್ಡಿ ಅವರ ಟ್ವೀಟ್ ಸೇರಿದಂತೆ ಕಳೆದ ಕೆಲವು ದಿನಗಳಲ್ಲಿ ತೆಲಂಗಾಣ ಬಿಜೆಪಿ ನಾಯಕರು ನೀಡಿರುವ ಕೆಲವು ಹೇಳಿಕೆಗಳು ಪಕ್ಷದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿವೆ. “ಈ ರೀತಿಯ ಅಶಿಸ್ತು ನಮ್ಮ ಪಕ್ಷದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಪಕ್ಷವು ಎಚ್ಚರಿಸಿದೆ.
ಆದರೆ, ತಮ್ಮ ಟ್ವೀಟ್ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೆ ಉಲ್ಟಾ ಹೊಡೆದಿರುವ ಜಿತೇಂದರ್ ರೆಡ್ಡಿ, ‘ಬಂಡಿ ಸಂಜಯ್ ಅವರ ನಾಯಕತ್ವನ್ನು ಪ್ರಶ್ನಿಸುತ್ತಿರುವವರಿಗೆ ಯಾವ ಬಗೆಯ ಟ್ರೀಟ್ಮೆಂಟ್ ಕೊಡಬೇಕು ಎನ್ನುವ ಅರ್ಥದಲ್ಲಿ ತಾನು ಟ್ವೀಟ್ ಮಾಡಿದ್ದು, ತಮ್ಮ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದಿದ್ದಾರೆ.