ಬಡವರಿಗೆ ನೀಡಿದರೆ ‘ಬಿಟ್ಟಿ’, ಕೋಟ್ಯಾಧೀಶರಿಗೆ ನೀಡಿದರೆ ‘ಪ್ರೋತ್ಸಾಹಕ’…!

Date:

ಅತ್ಯಲ್ಪ ಮೊತ್ತದಲ್ಲಿ ಅತೀ ಹೆಚ್ಚು ಜನರಿಗೆ ಅಲ್ಪಸ್ವಲ್ಪ ನೆರವು ನೀಡುವ 5 ಗ್ಯಾರಂಟಿಗಳ ಬಗ್ಗೆ ಚರ್ಚಿಸದ, ಟೀಕಿಸದ, ವ್ಯಂಗ್ಯ ಮಾಡದ ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾವನ್ನು ನೋಡಲು ಸಾಧ್ಯವಿಲ್ಲ. ನಮ್ಮ ಅರ್ಥ, ರಾಜಕೀಯ, ಸಮಾಜ ಮತ್ತು ಸಂಸ್ಕೃತಿಗಳ ಬುನಾದಿ ಕೂಡ ಇದೇ ತಳಸ್ತರದ ಜನರೆನ್ನುವ ಕಲ್ಪನೆ ಕೂಡ ಇಲ್ಲದವರೇ ಇಂದು ಮಾಧ್ಯಮಗಳಲ್ಲಿ ತುಂಬಿದ್ದಾರೆನ್ನುವ ಶಂಕೆ ಕಾಡುತ್ತಿದೆ

ತಳಸ್ತರದ ಜನರಿಗೆ ನೀಡಿದರೆ ಫ್ರೀಬೀಸ್ (ಉಚಿತ) ಕೋಟ್ಯಧೀಶರಿಗೆ ನೀಡಿದರೆ ಸ್ಟಿಮ್ಯುಲಸ್ (ಪ್ರೋತ್ಸಾಹ). ಬಡವರಿಗೆ ನೀಡಿದರೆ ಅನ್‍ಪ್ರೊಡಕ್ಟಿವ್ ಕೋಟ್ಯಧೀಶರಿಗೆ ನೀಡಿದರೆ ಪ್ರೊಡಕ್ಟಿವ್. ಬಡವರಿಗೆ ನೀಡಿದರೆ ಅರ್ಥ ವ್ಯವಸ್ಥೆ ಹದಗೆಡುತ್ತದೆ ಕೋಟ್ಯಧೀಶರಿಗೆ ನೀಡಿದರೆ ಅರ್ಥ ವ್ಯವಸ್ಥೆ ಚೇತರಿಸುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲಿರುವ ಇಬ್ಬಂದಿತನ. ಇದು ಉಳ್ಳವರ ಕಣ್ಣಲ್ಲಿ ಲೋಕ ನೋಡುವ ಪ್ರವೃತ್ತಿ. ಇದು ಅನುಕೂಲಸ್ಥರ ಪಾದತಳದಲ್ಲಿ ಪರಾಮರ್ಶೆಯನ್ನು ಸಮರ್ಪಿಸುವ ದಾಸ್ಯ ಮನೋಭಾವ. ಇತ್ತೀಚಿನ ಎರಡು ಬೆಳವಣಿಗೆಗಳಲ್ಲಿ ಈ ಇಬ್ಬಂದಿತವನ್ನು ನೋಡಬಹುದು. ಕರ್ನಾಟಕ ಸರಕಾರದ 5 ಗ್ಯಾರಂಟಿಗಳು ಮತ್ತು ಅನುಕೂಲಸ್ಥರ ಸಾಲಮನ್ನಾ – ನಮ್ಮ ಸಂಸ್ಕೃತಿಯ ಇಬ್ಬಂದಿತನವನ್ನು ಎತ್ತಿ ತೋರಿಸುವ ಇತ್ತೀಚಿನ ಎರಡು ಬೆಳವಣಿಗೆಗಳು. ಈ ಎರಡು ಬೆಳವಣಿಗೆಗಳಿಗೆ ನಮ್ಮ ಮಾಧ್ಯಮ, ಅನುಕೂಲಸ್ಥ ವರ್ಗ, ರಾಜಕೀಯ ಪಕ್ಷಗಳು ತೋರಿಸಿದ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮಲ್ಲಿರುವ ಇಬ್ಬಂದಿತನ ಅರ್ಥವಾಗಬಹುದು.

ಗ್ಯಾರಂಟಿಗಳು: ಈ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರಕಾರ ಸುಮಾರು 50 ಸಾವಿರ ಕೋಟಿ ರೂಗಳನ್ನು ವಿನಿಯೋಜಿಸಬಹುದು. ಈ 50 ಸಾವಿರ ಕೋಟಿ ರೂಗಳ ವಿನಿಯೋಜನೆ ಶೇ.70ರಷ್ಟು ಜನರಿಗೆ ಒಂದಿಷ್ಟು ನೆಮ್ಮದಿಯ ಬದುಕು ನೀಡಬಹುದು. ಇನ್ನೊಂದು ಬೆಳವಣಿಗೆ ಏನಪ್ಪಾ ಅಂದರೆ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರ ರೂ.12 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಿದೆ. ಯಾರಿಗೆ ಮನ್ನಾ ಮಾಡಿದೆ? ಮೂರು ಹೊತ್ತಿನ ಊಟಕ್ಕೆ ಪರದಾಡುವವರ ಸಾಲ ಮನ್ನಾ ಮಾಡಿಲ್ಲ. ನಮ್ಮ ದೇಶದ ಬೆರಳಣಿಕೆಯಷ್ಟಿರುವ ಅತ್ಯಂತ ಶ್ರೀಮಂತ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದು. ಇದು ಸಾಲದೆಂದು ಉದ್ದೇಶಪೂರಿತವಾಗಿ ಮತ್ತು ಮೋಸ ಮಾಡುವ ಉದ್ದೇಶದಿಂದ ಸಾಲಬಾಕಿ ಇಟ್ಟವರೊಂದಿಗೆ ಚರ್ಚಿಸಿ ಅವರ ಬಾಕಿಸಾಲಕ್ಕೆ ಇತಿಶ್ರೀ ಹಾಡಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜೂನ್ ತಿಂಗಳ ಸುತ್ತೋಲೆ ಬ್ಯಾಂಕ್‍ಗಳಿಗೆ ಆದೇಶಿಸಿದೆ. ಈ ಎರಡು ಬೆಳವಣಿಗೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸುವ.

ಅತ್ಯಲ್ಪ ಮೊತ್ತದಲ್ಲಿ ಅತೀ ಹೆಚ್ಚು ಜನರಿಗೆ ಅಲ್ಪಸ್ವಲ್ಪ ನೆರವು ನೀಡುವ 5 ಗ್ಯಾರಂಟಿಗಳ ಬಗ್ಗೆ ಚರ್ಚಿಸದ, ಟೀಕಿಸದ, ವ್ಯಂಗ್ಯ ಮಾಡದ ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾವನ್ನು ನೋಡಲು ಸಾಧ್ಯವಿಲ್ಲ. ಸವಲತ್ತುಗಳನ್ನು ಉಚಿತ ನೀಡುವುದು ಸರಿಯೇ? ಉಚಿತ ನೀಡುವುದರಿಂದ ನಮ್ಮ ಅರ್ಥ ವ್ಯವಸ್ಥೆ ಹದಗೆಡುವುದಿಲ್ಲವೇ? ಈ ಸವಲತ್ತುಗಳ ಅಭಿವೃದ್ಧಿ ಕೊಡುಗೆ ಏನು? ಸವಲತ್ತುಗಳನ್ನು ನೀಡಿ ನಮ್ಮ ಅರ್ಥ ವ್ಯವಸ್ಥೆ ಕೂಡ ಶ್ರೀಲಂಕಾ, ಪಾಕಿಸ್ತಾನ ರೀತಿಯಲ್ಲಿ ದಿವಾಳಿಯಾಗುವುದಿಲ್ಲವೇ? ಹೀಗೆ ಸಾಲುಸಾಲು ಪ್ರಶ್ನೆಗಳು. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳ ಸುತ್ತಾ ಚರ್ಚೆ ನಡೆಯುವುದು ಆರೋಗ್ಯಕರ. ಆದರೆ ಇವುಗಳಲ್ಲಿ ಬಹುತೇಕ ಚರ್ಚೆಗಳು ವನ್ ಸೈಡೆಡ್ ಆಗಿವೆ. ಎಷ್ಟು ವನ್ ಸೈಡೆಡ್ ಆಗಿವೆ ಎಂದರೆ ಚರ್ಚಿಸುವ ಬಹುತೇಕರಿಗೆ ಇಂತಹ ಸವಲತ್ತು ಪಡೆಯುವ ತಳಸ್ತರದ ಜನರೇ ನಮ್ಮ ಸರಕಾರಗಳ ಖಜಾನೆ ತುಂಬುವುದೆನ್ನುವ ಕನಿಷ್ಠ ಸತ್ಯದ ಅರಿವೂ ಇಲ್ಲ. ನಮ್ಮ ಅರ್ಥ, ರಾಜಕೀಯ, ಸಮಾಜ ಮತ್ತು ಸಂಸ್ಕೃತಿಗಳ ಬುನಾದಿ ಕೂಡ ಇದೇ ತಳಸ್ತರದ ಜನರೆನ್ನುವ ಕಲ್ಪನೆ ಕೂಡ ಇಲ್ಲದವರೇ ಇಂದು ಮಾಧ್ಯಮದಲ್ಲಿ ತುಂಬಿದ್ದಾರೆನ್ನುವ ಶಂಕೆ ಕಾಡುತ್ತಿದೆ. ಈ ಪರವಿರೋಧ (ವಿರೋಧವೇ ಹೆಚ್ಚು) ಚರ್ಚೆ ಚುನಾವಣೆಗೆ ಸೀಮಿತವಾಗಿಲ್ಲ; ಅನುಷ್ಠಾನಕ್ಕೂ ವಿಸ್ತರಿಸಿದೆ. ಮಹಿಳೆಯರ ಜಿರೋ ಟಿಕೇಟ್ ಬಸ್ ಪ್ರಯಾಣ ಮೊದಲು ಅನುಷ್ಠಾನಗೊಂಡ ಯೋಜನೆ. ಅನುಷ್ಠಾನಗೊಂಡ ಕೆಲವೇ ದಿನಗಳಲ್ಲಿ ಪ್ರಯಾಣಿಸಿದ ಒಟ್ಟು ಮಹಿಳೆಯರು ಮತ್ತು ಅದರಿಂದ ಕೆಎಸ್‍ಆರ್‌ಟಿಸಿಗೆ ಆದ ಹಲವು ಕೋಟಿ ರೂಗಳ ನಷ್ಟದ ಲೆಕ್ಕಾಚಾರ ಎಲ್ಲರಿಗೂ ತಲುಪಿದೆ.

ನಷ್ಟದ ಲೆಕ್ಕಚಾರ ಮಾತ್ರವಲ್ಲ; ಪ್ರಯಾಣಿಸುವ ಮಹಿಳೆಯರ ಬಗ್ಗೆ ಟೀಕೆಗಳು, ವ್ಯಂಗ್ಯಗಳು ಹರಿದು ಬಂದವು. ಮಹಿಳೆಯರ ನೂಕುನುಗ್ಗಲಿನಲ್ಲಿ ಮುರಿದ ಬಸ್‍ನ ಬಾಗಿಲು, ಕಿಟಕಿ ಮೂಲಕ ಬಸ್ ಏರುವ ಮಹಿಳೆಯರು, ಚಾಲಕರ ಸೀಟನ್ನೂ ಆಕ್ರಮಿಸಿದ ಮಹಿಳೆಯರು, ಮಹಿಳೆಯರಿಂದ ತುಂಬಿದ ಬಸಲ್ಲಿ ಪುರುಷರು ಪ್ರಯಾಣಿಸಲು ಪರದಾಡುವುದು, ಮಹಿಳೆ ಸತತ ಪ್ರಯಾಣಿಸುವುದರಿಂದ ಮನೆಯಲ್ಲೂ ಪರದಾಡುವ ಪುರುಷರು, ಜಿರೋ ಟಿಕೆಟ್ ಪ್ರಯಾಣದಿಂದ ನೊಂದ ಆಟೋ ಚಾಲಕನ ಪ್ರಲಾಪ, ಜಿರೋ ಟಿಕೆಟ್ ಪ್ರಯಾಣದಿಂದ ನಷ್ಟ ಅನುಭವಿಸುವ ಖಾಸಗಿ ಬಸ್ ಮಾಲೀಕರು ಹೀಗೆ ಸಾಲು ಸಾಲು ಟೀಕೆಗಳು, ವ್ಯಂಗ್ಯಗಳು ಟಿವಿ, ಪತ್ರಿಕೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸತತ ಹರಿದಾಡುತ್ತಲೇ ಇವೆ. ಹೀಗೆ ಮಹಿಳೆಯರ ಜಿರೋ ಟಿಕೇಟ್ ಪ್ರಯಾಣ ಎಂದರೆ ಸರಕಾರಕ್ಕೆ ನಷ್ಟ, ಪುರುಷರಿಗೆ ಅನನುಕೂಲ, ಅನುತ್ಪಾದಕ ಎನ್ನುವ ಚಿತ್ರಣ ಕೊಡಲು ಮಿಡಿಯಾಗಳು ಸತತ ಪ್ರಯತ್ನಿಸುತ್ತಿವೆ.

ಜುಲೈ ಮೊದಲ ವಾರದಲ್ಲಿ ಆರಂಭಿಸಬೇಕಿದ್ದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರವೇ ಅಡ್ಡಿಪಡಿಸುತ್ತಿದೆ. ರಾಜ್ಯದ ಅನ್ನಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಮಾಸಿಕ 2.28 ಲಕ್ಷಟನ್ ಅಕ್ಕಿ ಬೇಕಿದೆ. ಇದನ್ನು ಕೆಜಿಗೆ ರೂ.36.60 ದರದಲ್ಲಿ ಪೂರೈಸಲು ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‍ಸಿಐ) ಒಪ್ಪಿತ್ತು. ಆದರೆ ಕೇಂದ್ರ ಸರಕಾರದ ಸೂಚನೆ ಮೇರೆಗೆ ಈಗ ಪೂರೈಸಲು ನಿರಾಕರಿಸುತ್ತಿದೆ. ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಅವರದ್ದೇ ಕೇಂದ್ರ ಸರಕಾರವನ್ನು ಅಕ್ಕಿ ಕೊಡಲು ಒತ್ತಾಯಿಸುವ ಬದಲು ಬಿಜೆಪಿ ನಾಯಕರು ರಾಜ್ಯ ಸರಕಾರವನ್ನು ಯೋಜನೆ ಅನುಷ್ಟಾನಗೊಳಿಸಲು ಒತ್ತಾಯಿಸುತ್ತಿದ್ದಾರೆ. ಹೀಗೆ ಅನ್ನಭಾಗ್ಯ ಯೋಜನೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಹೇಳಿಕೆಗಳಲ್ಲಿ ಲಾಜಿಕ್ ಹುಡುಕುವುದೇ ಕಷ್ಟವಾಗಿದೆ. ಇವೆಲ್ಲ ನಮ್ಮ ಸಮಾಜದ ಬಹುತೇಕರಿಗೆ ತಲುಪುವ ಅಲ್ಪಸ್ವಲ್ಪ ನೆರವುಗಳಿಗೆ ನಮ್ಮ ಮಾಧ್ಯಮ, ಅನುಕೂಲಸ್ಥ ವರ್ಗ, ಹಾಗು ರಾಜಕೀಯ ಪಕ್ಷಗಳು ತೋರಿಸುವ ಪ್ರತಿಕ್ರಿಯೆ.

ಸಾಲಮನ್ನಾ: ಎರಡನೇ ಬೆಳವಣಿಗೆ – ಅನುಕೂಲಸ್ಥರ ಸಾಲಮನ್ನಾದ ಬಗ್ಗೆ ಟಿವಿ, ಪತ್ರಿಕೆಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟು ಚರ್ಚೆ ಆಗಿದೆ? ಇವುಗಳ ಬಗ್ಗೆ ಟೀಕೆಗಳು, ವಿಡಂಬನೆಗಳು ಎಷ್ಟು ಬಂದಿವೆ? ಎಷ್ಟು ಜನರಿಗೆ ಈ ಸಾಲಮನ್ನಾದ ಬಗ್ಗೆ ಕನಿಷ್ಠ ಮಾಹಿತಿ ಇದೆ? ಏನೇನೂ ಇಲ್ಲ ಎನ್ನುವಷ್ಟು ಕಡಿಮೆ ಚರ್ಚೆ ನಡೆದಿದೆ. ಆದುದರಿಂದ ಮೊದಲು ಅನುಕೂಲಸ್ಥರ ಸಾಲಮನ್ನಾದ ಮೇಲೆ ಗಮನ ಹರಿಸುವ. ಕೆಟ್ಟ ಸಾಲಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದೆ. ಇಂಟರ್‌ನ್ಯಾಷನಲ್ ಮನಿಟರಿ ಫಂಡ್ (ಐಎಮ್‍ಎಫ್) ರಿಪೋರ್ಟ್ 2021ರ ಪ್ರಕಾರ ಅಮೆರಿಕ, ಬ್ರಿಟನ್‍ಗಳಲ್ಲಿ ಒಟ್ಟು ಸಾಲದ ಶೇ.1ರಷ್ಟು ಕೆಟ್ಟ ಸಾಲ ಇತ್ತು. ನಮ್ಮ ನೆರೆಕರೆಯ ದೇಶಗಳಾದ ಮಲೇಶಿಯಾದಲ್ಲಿ ಶೇ.1.7%, ಇಂಡೊನೇಶಿಯಾದಲ್ಲಿ ಶೇ.2.6 ಮತ್ತು ಚೈನಾದಲ್ಲಿ ಶೇ.1.7%ರಷ್ಟು ಕೆಟ್ಟ ಸಾಲ ಇತ್ತು. ಅನುಕೂಲಸ್ಥ ದೇಶಗಳ ಪೈಕಿ ರಷ್ಯಾದಲ್ಲಿ ಅತೀ ಹೆಚ್ಚು (ಶೇ.8.3) ಕೆಟ್ಟ ಸಾಲ ಇತ್ತು. ಇವರೆಲ್ಲರಿಗೆ ಹೋಲಿಸಿದರೆ ಭಾರತದ ಕೆಟ್ಟ ಸಾಲದ ಪ್ರಮಾಣ 2018ರಲ್ಲಿ ಅತೀ ಹೆಚ್ಚು (ಶೇ.11.46) ಇತ್ತು. ಕೆಟ್ಟ ಸಾಲ ಇತ್ತೀಚಿನ ಸಮಸ್ಯೆಯಲ್ಲ. ಹಿಂದಿನಿಂದಲೂ ಇತ್ತು. ಹಿಂದೆ ಸಾವಿರ ಕೋಟಿಗಳಲ್ಲಿದ್ದ ಕೆಟ್ಟ ಸಾಲ ನಂತರದ ದಿನಗಳಲ್ಲಿ ಲಕ್ಷ ಕೋಟಿ ದಾಟಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ವರ್ಷ ರೂ.263015 ಕೋಟಿ ಇದ್ದ ಕೆಟ್ಟ ಸಾಲ 2020ರ ವೇಳೆಗೆ ಅದು ರೂ.896082 ಕೋಟಿಗೆ ಏರಿದೆ.

ಅತೀ ಹೆಚ್ಚು ಕೆಟ್ಟ ಸಾಲ ಸೃಷ್ಟಿಸಿದವರು ಯಾರು? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2018ರ ಮಾಹಿತಿ ಪ್ರಕಾರ ದೇಶದ ಅತೀ ದೊಡ್ಡ 100 ಸಾಲಗಾರರು 446158 ಕೋಟಿ (ಪ್ರತಿಯೊಬ್ಬರು ರೂ.4461 ಕೋಟಿ ಮತ್ತು ಒಟ್ಟು ಸಾಲದ ಶೇ.50ರಷ್ಟು) ರೂಗಳ ಕೆಟ್ಟಸಾಲ ಸೃಷ್ಟಿಸಿದ್ದಾರೆ. 2016ರಲ್ಲಿ ಶೇ.58ರಷ್ಟು ಸಾಲ ದೊಡ್ಡ ಸಾಲಗಾರರಿಗೆ ಹೋಗಿದೆ ಮತ್ತು ಶೇ.86ರಷ್ಟು ಕೆಟ್ಟಸಾಲವನ್ನು ಇವರೇ ಸೃಷ್ಟಿಸಿದ್ದಾರೆ. ನಂತರದ ವರ್ಷಗಳಲ್ಲಿ (2018ರಲ್ಲಿ) ಇವರಿಗೆ ನೀಡಿದ ಸಾಲದ ಪ್ರಮಾಣ ಶೇ.53ಕ್ಕೆ ಇಳಿದಿದೆ. ಆದರೆ ಇವರು ಸೃಷ್ಟಿಸಿದ ಕೆಟ್ಟ ಸಾಲದ ಪ್ರಮಾಣ ಇಳಿಕೆ ಕಂಡಿಲ್ಲ; ಶೇ.82ರಷ್ಟಿತ್ತು. 2020ರ ವೇಳೆಗೆ ಇವರಿಗೆ ನೀಡಿದ ಸಾಲದ ಪ್ರಮಾಣ ಶೇ.51ಕ್ಕೆ ಇಳಿದಿತ್ತು ಮತ್ತು ಇವರು ಸೃಷ್ಟಿಸಿದ ಕೆಟ್ಟ ಸಾಲದ ಪ್ರಮಾಣ ಶೇ.74ಕ್ಕೆ ಇಳಿದಿತ್ತು. ಈ ಎಲ್ಲ ಅಂಕಿಅಂಶಗಳು ಒಂದೆರಡು ಅಂಶಗಳತ್ತ ಬೊಟ್ಟು ಮಾಡುತ್ತಿವೆ. ಒಂದು, ಸರಕಾರಿ ಬ್ಯಾಂಕ್‍ಗಳ ಸಾಲದ ಬಹುಪಾಲು ಅತೀ ಕಡಿಮೆ ಸಂಖ್ಯೆಯಲ್ಲಿರುವ ದೊಡ್ಡ ಕೃಷಿ, ವ್ಯಾಪಾರ, ಉದ್ದಿಮೆಗಳ ಪಾಲಾಗುತ್ತಿದೆ. ಎರಡು, ಇವರು ಸಾಲ ಪಡೆಯುವುದರಲ್ಲಿ ಮುಂದೆ ಇದ್ದರೂ ಸಾಲ ಕಟ್ಟುವುದರಲ್ಲಿ ಹಿಂದೆ ಇದ್ದಾರೆ. ಮೂರು, ಇದರಿಂದಾಗಿ ಅತೀ ಹೆಚ್ಚು (ಶೇ.80ರಷ್ಟು) ಕೆಟ್ಟ ಸಾಲವನ್ನು ಇವರೇ ಸೃಷ್ಟಿಸಿದ್ದಾರೆ.

ಕೆಟ್ಟ ಸಾಲವನ್ನು ಬ್ಯಾಂಕ್ ಬ್ಯಾಲೆನ್ಸ್‌ಶೀಟ್‍ನಿಂದ ಹೊರಗಿಡುವುದನ್ನು ಬ್ಯಾಂಕ್‍ಗಳ ಪರಿಭಾಷೆಯಲ್ಲಿ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡುವುದೆನ್ನುತ್ತಾರೆ. ಹಣಕಾಸು ಮಂತ್ರಿಗಳ ಪ್ರಕಾರ ರೈಟ್ ಆಫ್ ಅಂದರೆ ಸಾಲ ಮನ್ನಾ ಅಲ್ಲ. ಇವು ಬ್ಯಾಂಕ್ ಬ್ಯಾಲೆನ್ಸ್‌ಶೀಟ್‍ಲ್ಲಿ ಇರುವುದಿಲ್ಲ ಅಷ್ಟೇ. ಆದರೆ ಬ್ಯಾಂಕ್‍ಗಳ ಲೆಕ್ಕಪುಸ್ತಕಗಳಲ್ಲಿ ಇವುಗಳ ದಾಖಲೆ ಇರುತ್ತದೆ ಮತ್ತು ಬೇರೆ ಬೇರೆ ದಾರಿಗಳ ಮೂಲಕ ರೈಟ್ ಆಫ್ ಆಗಿರುವ ಕೆಟ್ಟ ಸಾಲವನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಲಾಗುತ್ತದೆ. ಕೆಟ್ಟ ಸಾಲದಂತೆ ಕೆಟ್ಟ ಸಾಲದ ರೈಟ್ ಆಫ್ ಕೂಡ ಹಿಂದೆ ಕೆಲವು ಸಾವಿರ ಕೋಟಿಗಳಲ್ಲಿತ್ತು – 2014ರಲ್ಲಿ ರೂ.32595 ಕೋಟಿ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಸಾಲದ ರೈಟ್ ಆಫ್ ಕೂಡ ಹೆಚ್ಚುತ್ತಿದೆ. ಕಳೆದ 5 ವರ್ಷಗಳಲ್ಲಿ ರೂ.991640 ಕೋಟಿ ಕೆಟ್ಟ ಸಾಲ ರೈಟ್ ಆಫ್ ಆಗಿದೆ. ಕೆಟ್ಟಸಾಲದ ರೈಟ್‍ಆಫ್ ಸಾಲಮನ್ನಾ ಅಲ್ಲ ಎನ್ನುವ ಸರಕಾರದ ವಾದ ಎಷ್ಟು ಸರಿ? 2014-15ರಿಂದ 2021-22ರ ಅವಧಿಯಲ್ಲಿ ಒಟ್ಟು ರೂ.66.5 ಲಕ್ಷ ಕೋಟಿ ಕೆಟ್ಟ ಸಾಲ ಸೃಷ್ಟಿಯಾಗಿದೆ. ಇದರಲ್ಲಿ ರೂ.14.5 ಲಕ್ಷ ಕೋಟಿ ಕೆಟ್ಟಸಾಲವನ್ನು ರೈಟ್ ಆಫ್ ಮಾಡಲಾಗಿದೆ. ರೈಟ್ ಆಫ್ ಆಗಿರುವ ಕೆಟ್ಟ ಸಾಲದ ಶೇ.13ರಷ್ಟು ಅಥವಾ ರೂ.2.9 ಲಕ್ಷ ಕೋಟಿ ಮಾತ್ರ ವಸೂಲಾಗಿದೆ. ಅಂದರೆ ಹೆಚ್ಚು ಕಡಿಮೆ ರೂ.12 ಲಕ್ಷ ಕೋಟಿಯಷ್ಟು ಕೆಟ್ಟ ಸಾಲ ಹಿಂದಕ್ಕೆ ಬರಲೇ ಇಲ್ಲ. ಇದು ಸಾಲ ಮನ್ನಾ ಅಲ್ಲವೇ?

ಬ್ಯಾಂಕ್ ಸುಧಾರಣೆ: ಅನುಕೂಲಸ್ಥರ ಕೆಟ್ಟ ಸಾಲದಿಂದ ಬಸವಳಿದ ಬ್ಯಾಂಕ್‍ಗಳನ್ನು ಸುಧಾರಿಸಲು ಎರಡು ದಾರಿಗಳನ್ನು ಅನುಸರಿಸಲಾಗಿದೆ. ಒಂದು, ಸರಕಾರಿ ಬ್ಯಾಂಕ್‍ಗಳಿಗೆ ಸಾಮಾನ್ಯ ಜನರು ಕಟ್ಟುವ ತೆರಿಗೆ ಹಣ ತುಂಬುವುದು. ಎರಡು, ಬ್ಯಾಂಕಿನ ಸಾಮಾನ್ಯ ಗ್ರಾಹಕರಿಂದ ಹಲವು ವಿಧದ ಸೇವಾ ಶುಲ್ಕಗಳನ್ನು ವಸೂಲು ಮಾಡವುದು. ಜನ ಸಾಮಾನ್ಯರ ತೆರಿಗೆ ಹಣವನ್ನು ಅನುಕೂಲಸ್ಥರು ಬರಿದು ಮಾಡಿದ ಬ್ಯಾಂಕ್ ಖಜಾನೆ ಭರ್ತಿ ಮಾಡಲು ಬಳಸಲಾಗಿದೆ. 2008-2013ರ ನಡುವೆ ರೂ.47734 ಕೋಟಿಯಷ್ಟು ತೆರಿಗೆ ಹಣವನ್ನು ಸರಕಾರಿ ಬ್ಯಾಂಕ್‍ಗಳಿಗೆ ತುಂಬಲಾಗಿದೆ. ಕೇಂದ್ರ ಸರಕಾರದ ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಫಿನಾನ್ಸ್ ಅವರ ಹೇಳಿಕೆ ಪ್ರಕಾರ 2016-17 ಮತ್ತು 2020-21ರ ನಡುವೆ ಸರಕಾರ ರೂ.3.10 ಲಕ್ಷ ಕೋಟಿ ಹಣವನ್ನು ಬ್ಯಾಂಕ್‍ಗಳಿಗೆ ತುಂಬಿದೆ. ಇದರಲ್ಲಿ ರೂ.34997 ಕೋಟಿ ಬಜೆಟ್ ಅಲೊಕೇಶನ್ ಮತ್ತು ರೂ.2.76 ಲಕ್ಷ ಕೋಟಿ ರಿಕ್ಯಾಪಿಟಲೈಸೇಷನ್ ಬಾಂಡ್. ಬಾಂಡ್ ಮೂಲಕ ಬಂಡವಾಳ ತುಂಬುವುದೆಂದರೆ ಸಾಲ ಮಾಡಿ ತುಂಬುವುದೆನ್ನುವ ಅರ್ಥ. ಸರಕಾರ ನೀಡುವ ಬಾಂಡ್‍ನ ಮೊತ್ತ ಮುಂದಿನ ವರ್ಷಗಳಲ್ಲಿ ಸರಕಾರವೇ ತೆರಿಗ ಹಣದಿಂದ ಸಂದಾಯ ಮಾಡಬೇಕು. ಇನ್ನೊಂದು ಮೂಲದ ಅಂಕಿಅಂಶ ಪ್ರಕಾರ 2014-2020ರ ನಡುವೆ ಸರಕಾರ ರೂ.340375 ಕೋಟಿ ತೆರಿಗೆ ಹಣವನ್ನು ಬ್ಯಾಂಕ್‍ಗಳಿಗೆ ಸರಕಾರ ತುಂಬಿದೆ.

ಎರಡನೇ ವಿಧಾನ ಸಾಮಾನ್ಯ ಗ್ರಾಹಕರಿಂದ ಸೇವಾಶುಲ್ಕ ಸಂಗ್ರಹಿಸುವುದು. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಕ್ಲಿಯರೆನ್ಸ್ ಚಾರ್ಜ್ (ರೂ.150), ಡುಪ್ಲಿಕೇಟ್ ಪಾಸ್ ಬುಕ್ ಚಾರ್ಜ್ (ರೂ.50-150), ಕಾರ್ಡ್ ರಿಪ್ಲೇಸ್‍ಮೆಂಟ್ ಚಾರ್ಜ್ (ರೂ.50-100) ಹೀಗೆ ಇವತ್ತು ಬ್ಯಾಂಕ್‍ಗಳಲ್ಲಿ ಎಲ್ಲ ಸೇವೆಗಳಿಗೂ ಶುಲ್ಕ ಇದೆ. ಊಳಿತಾಯ ಖಾತೆ ಹೊಂದಿರುವ ಗಿರಾಕಿಗಳಿಗೆ ವರ್ಷಕ್ಕೆ ಅಥವಾ ಆರು ತಿಂಗಳಿಗೆ 25 ಚೆಕ್‍ಲೀಫ್‍ಗಳು ಮಾತ್ರ ಉಚಿತ. ಇದಕ್ಕಿಂತ ಹೆಚ್ಚಿನ ಚೆಕ್‍ಲೀಫ್‍ಗಳು ಬೇಕಿದ್ದರೆ ಗಿರಾಕಿಗಳು ಪ್ರತಿ ಚೆಕ್‍ಬುಕ್‍ಗೆ ರೂ.75 ಸಂದಾಯ ಮಾಡಬೇಕಾಗಿದೆ. ಡೆಬಿಟ್ ಕಾರ್ಡ್ ಹೊಂದಿದವರು ಪ್ರತಿ ವ್ಯವಹಾರಕ್ಕೂ ಸಂದೇಶ (ಎಸ್‍ಎಮ್‍ಎಸ್) ಪಡೆಯಲು ರೂ.15 ಸಂದಾಯ ಮಾಡಬೇಕು. ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತವನ್ನು ಏರಿಸಲಾಗಿದೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಜಮೆ ಮಾಡಿರುವ ಉಳಿತಾಯ ಖಾತೆದಾರರು ರೂ.100 ದಂಡ ತೆರಬೇಕಾಗಿದೆ. ಲಾಕರ್ ಚಾರ್ಚ್‍ಗಳನ್ನು ಏರಿಸಲಾಗಿದೆ – ಸಣ್ಣ ಲಾಕರ್‍ಗಳಿಗೆ ರೂ.1500 ಮತ್ತು ದೊಡ್ಡ ಲಾಕರ್‍ಗಳಿಗೆ ರೂ.9000 ಬಾಡಿಗೆ ಪಾವತಿಸಬೇಕು. ಖಾತೆದಾರರು ಮೂರನೇ ವ್ಯಕ್ತಿಗೆ ರೂ.25000ಕ್ಕಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲು ರೂ.150 ಶುಲ್ಕ ನೀಡಬೇಕು.

ಬಿಡಿಬಿಡಿಯಾಗಿ ನೋಡಿದರೆ ಮೇಲಿನ ಶುಲ್ಕಗಳು ಸಣ್ಣ ಮೊತ್ತಗಳಾಗಿವೆ. ಆದರೆ ಬ್ಯಾಂಕ್ ಖಾತೆದಾರರ ಸಂಖ್ಯೆಯನ್ನು ನೋಡಿದರೆ ಈ ಶುಲ್ಕಗಳಿಂದ ಬ್ಯಾಂಕ್‍ಗಳು ಸಂಗ್ರಹಿಸುವ ಅಗಾಧ ಪ್ರಮಾಣದ ಸಂಪತ್ತಿನ ಅರಿವಾಗಬಹುದು. ಸೇವಾ ಶುಲ್ಕಗಳು ಕೆಲವು ನೂರು ರುಪಾಯಿಗಳಲ್ಲಿವೆ. ಆದರೆ ಹಲವು ಕೋಟಿ ಸಂಖ್ಯೆಯಲ್ಲಿರುವ ಗ್ರಾಹಕರಿಂದ ಕೆಲವು ನೂರು ರುಪಾಯಿ ಸೇವಾ ಶುಲ್ಕ ಸಂಗ್ರಹಿಸಿದರೆ ಕೆಲವು ಲಕ್ಷ ಕೋಟಿ ದಾಟಬಹುದು. ಒಬ್ಬರಿಂದ ನೂರು ರುಪಾಯಿಯಂತೆ ಸಂಗ್ರಹಿಸಿದರೂ ಒಂದು ಕೋಟ ಗ್ರಾಹಕರಿಂದ ಒಂದು ನೂರು ಕೋಟಿ ಸಂಗ್ರಹವಾಗುತ್ತದೆ. ಹತ್ತು ಕೋಟಿ ಗ್ರಾಹಕರಿಂದ ಒಂದು ಸಾವಿರ ಕೋಟಿ ಸಂಗ್ರಹವಾಗುತ್ತದೆ. ನೂರರ ಬದಲು ಒಬ್ಬರಿಂದ ಒಂದು ಸಾವಿರ ಸಂಗ್ರಹಿಸಿದರೆ ಹತ್ತು ಕೋಟಿ ಗ್ರಾಹಕರಿಂದ ಹತ್ತು ಸಾವಿರ ಕೋಟಿ ಸಂಗ್ರಹಿಸಬಹುದು. 2017ರ ವೇಳೆಗೆ ಕರೆಂಟ್ ಮತ್ತು ಸೇವಿಂಗ್ಸ್ ಎಕೌಂಟ್ ಸೇರಿಸಿ 122 ಕೋಟಿ ಖಾತೆಗಳಿದ್ದವು. ಇದರಿಂದ 31 ಕೋಟಿ ಜನಧನ್ ಖಾತೆಗಳನ್ನು ಮೈನಸ್ ಮಾಡಿದರೆ 91 ಕೋಟಿ ಬ್ಯಾಂಕ್ ಖಾತೆಗಳಿದ್ದವು. ಇದರಿಂದ 21 ಕೋಟಿ ಮಧ್ಯಮ ಮತ್ತು ಶ್ರೀಮಂತ ವರ್ಗದ ಖಾತೆಗಳನ್ನು ಮೈನಸ್ ಮಾಡಿದರೆ ಹೆಚ್ಚುಕಡಿಮೆ 70 ಕೋಟಿ ಸಾಮಾನ್ಯ ಗ್ರಾಹಕರ ಖಾತೆಗಳಿದ್ದವೆಂದು ಊಹಿಸಬಹುದು.

ಹತ್ತು ಕೋಟಿ ಗ್ರಾಹಕರಿಂದ ವಾರ್ಷಿಕ ಹತ್ತು ಸಾವಿರ ಕೋಟಿ ಸೇವಾ ಶುಲ್ಕ ಸಂಗ್ರಹಿಸಬಹುದಾದರೆ 70 ಕೋಟಿ ಗ್ರಾಹಕರಿಂದ 70 ಸಾವಿರ ಕೋಟಿ ಸಂಗ್ರಹಿಸಬಹುದು. ಈ ಊಹೆಯನ್ನ ಸಮರ್ಥಿಸುವ ಕೆಲವು ಅಂಕಿಅಂಶಗಳಿವೆ. 2017-18ರಲ್ಲಿ 21 ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳು ಮತ್ತು 3 ಖಾಸಗಿ ಬ್ಯಾಂಕ್‍ಗಳು ಒಂದೇ ವರ್ಷ ರೂ.5000 ಕೋಟಿಯಷ್ಟು ಮೊತ್ತವನ್ನು ಕನಿಷ್ಠ ಮೊತ್ತಕ್ಕಿಂತ ಕಡಿಮೆ ಜಮೆ ಇರುವ ಉಳಿತಾಯ ಖಾತೆದಾರರಿಂದ ಸಂಗ್ರಹಿಸಿದ್ದಾರೆ. 2015-18ರಲ್ಲಿ 5 ಬ್ಯಾಂಕ್‍ಗಳು ರೂ.10391 ಕೋಟಿಯಷ್ಟು ಸೇವಾ ಶುಲ್ಕವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ರೂ. 6246 ಕೋಟಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿರುವುದಕ್ಕೆ ಮತ್ತು ರೂ.4145 ಕೋಟಿ ಎಟಿಎಮ್ ಸೇವಾಶುಲ್ಕ. ಎಲ್ಲ ಸೇವಾಶುಲ್ಕಗಳನ್ನು ಸೇರಿಸಿದರೆ ಪ್ರತಿ ಬ್ಯಾಂಕ್ ಕೂಡ ಕೆಲವು ಸಾವಿರ ಕೋಟಿ ಆದಾಯವನ್ನು ಇಂತಹ ಸೇವಾ ಶುಲ್ಕದಿಂದಲೇ ಪಡೆಯುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿ ಪ್ರಧಾನಿ ಮೋದಿ ಅಮೆರಿಕ ಭೇಟಿಯಿಂದ ಗುಜರಾತಿಗೇ ಹೆಚ್ಚು ಲಾಭವಾಯಿತೇ?

ನಮ್ಮ ಸಮಾಜದ ತಳಸ್ತರಕ್ಕೆ ಸೇರಿದ ಶೇ.70ರಷ್ಟು ಜನರಿಗೆ 50 ಸಾವಿರ ಕೋಟಿ ವಿನಿಯೋಜಿಸಿ ನೀಡುವ ಗ್ಯಾರಂಟಿಗಳ ವಿರುದ್ಧ ಸತತ ಕಿರುಚಾಡುವ ಮಾಧ್ಯಮಗಳು, ಪಕ್ಷಗಳು ಬೆರಳಣಿಕೆಯಷ್ಟು ಕೋಟ್ಯಧೀಶ ಉದ್ಯಮಿಗಳಿಗೆ ನೀಡುವ ಲಕ್ಷ ಕೋಟಿ ಸಾಲಮನ್ನಾದ ಬಗ್ಗೆ ಚರ್ಚಿಸುವುದಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಸಾಲ ಮನ್ನಾ ಮತ್ತು ಇದು ನಮ್ಮ ಬ್ಯಾಂಕಿಂಗ್ ಮತ್ತು ಅರ್ಥ ವ್ಯವಸ್ಥೆ ಮಾಡುವ ಪರಿಣಾಮದ ಬಗ್ಗೆ ಚರ್ಚೆಗಳೇ ಇಲ್ಲ. ಇವರೆಲ್ಲ ಸಾಲ ಕಟ್ಟಲು ಸಾಮರ್ಥ್ಯ ಇಲ್ಲದವರಲ್ಲ; ಉದ್ದೇಶಪೂರಿತವಾಗಿಯೇ ಸಾಲ ಬಾಕಿ ಇಟ್ಟವರು. ಇದನ್ನು ಅರಿತೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವರೊಂದಿಗೆ ಚೌಕಾಶಿ ಮಾಡಿ ಏನು ಹಿಂದಕ್ಕೆ ಬರುತ್ತದೋ ಅದರಲ್ಲೇ ತೃಪ್ತಿ ಪಡಲು ಪ್ರಯತ್ನಿಸುತ್ತಿದೆ. ಇವರ ಸಾಲದಿಂದ ಬಸವಳಿದ ಬ್ಯಾಂಕ್‍ನ್ನು ಸುಧಾರಿಸಲು ನಮ್ಮ ತೆರಿಗೆ ಹಣವನ್ನು ಬಳಸಲಾಗುತ್ತಿದೆ. ಜೊತೆಗೆ ಸಾಮಾನ್ಯ ಗ್ರಾಹಕರಿಂದ ಸೇವಾಶುಲ್ಕದ ಹೆಸರಲ್ಲಿ ಕೋಟ್ಯಂತರ ರುಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಹೀಗೆ ತಳಸ್ತರದ ಜನರು ಕಟ್ಟುವ ಪರೋಕ್ಷ ತೆರಿಗೆಗಳು, ಇದೇ ಜನರು ಅತ್ಯಂತ ಕಡಿಮೆ ಸಂಬಳಕ್ಕೆ ಮಾರುವ ಶ್ರಮ, ತಮ್ಮ ಸ್ವಂತ ದುಡಿಮೆಯಿಂದ ಖರೀದಿಸುವ ಶಿಕ್ಷಣ, ಆರೋಗ್ಯಗಳು, ತಮ್ಮ ತೆರಿಗೆ ಹಣ ಹಾಗು ಗ್ರಾಹಕ ಶುಲ್ಕ ನೀಡಿ ಬ್ಯಾಂಕ್‍ಗಳು ದಿವಾಳಿ ಆಗುವುದನ್ನು ತಪ್ಪಿಸುವುದು ಇತ್ಯಾದಿ ಮಾರ್ಗಗಳ ಮೂಲಕ ತಳಸ್ತರದ ಜನರು ನಮ್ಮ ಅರ್ಥ ದಿವಾಳಿ ಆಗುವುದನ್ನು ತಪ್ಪಿಸುತ್ತಿದ್ದಾರೆ.

ಪ್ರೊ ಚಂದ್ರ ಪೂಜಾರಿ
+ posts

ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಚಂದ್ರ ಪೂಜಾರಿ
ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...