ತೆಲಂಗಾಣ ದಲ್ಲಿ ಎರಡು ಬಾರಿ ಸುಲಭವಾಗಿ ಗೆದ್ದು ಗದ್ದುಗೆ ಹಿಡಿದಿದ್ದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಹ್ಯಾಟ್ರಿಕ್ ಗೆಲುವಿನ ಆಸೆಯೊಂದಿಗೆ ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಈ ಬಾರಿ ಬಿಆರ್‌ಎಸ್‌ಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ. ಇವರ ನಡುವೆ ರಾಷ್ಟ್ರೀಯ ಪಕ್ಷವಾಗಿದ್ದರೂ ಕಳೆದೆರಡು ಚುನಾವಣೆಗಳಲ್ಲಿ ದಯನೀಯ ಸ್ಥಿತಿಯಲ್ಲಿದ್ದ ಬಿಜೆಪಿ ಸದ್ಯ ಕೊಂಚ ಬಲ ಗಳಿಸಿಕೊಂಡಿದ್ದು, ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಗೆ ಕಾರಣವಾಗಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಅಲ್ಲಿ ಮೂರನೇ ಬಾರಿಗೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದ 119 ಸ್ಥಾನಗಳಿಗಾಗಿ ಒಂದೇ ಹಂತದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಬಿಆರ್‌ಎಸ್ ಎಲ್ಲ 119 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 118 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಒಂದು ಸ್ಥಾನವನ್ನು (ಕೊತ್ತಗೂಡೆಂ) ತನ್ನ ಮಿತ್ರಪಕ್ಷವಾದ ಸಿಪಿಐಗೆ ಬಿಟ್ಟುಕೊಟ್ಟಿದೆ. ಬಿಜೆಪಿ 111 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದ 8 ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷವಾದ ಜನಸೇನಾಗೆ ಬಿಟ್ಟುಕೊಟ್ಟಿದೆ. ಕಣದಲ್ಲಿರುವ ಬಹುಜನ ಸಮಾಜವಾದಿ ಪಕ್ಷವು 107 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಹಾಗೆಯೇ ಸಿಪಿಎಂ 19 ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ನಿಲ್ಲಿಸಿದೆ. ಎಐಎಂಐಎಂ 9 ಸ್ಥಾನಗಳಿಗೆ ಆಯ್ಕೆ ಬಯಸಿ ಕಣಕ್ಕಿಳಿದಿದೆ.
2014ರ ಚುನಾವಣೆಯಲ್ಲಿ 119 ವಿಧಾನಸಭಾ ಸ್ಥಾನಗಳ ಪೈಕಿ ಬಿಆರ್‌ಎಸ್ 63 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 21, ಟಿಡಿಪಿ 15, ಎಐಎಂಐಎಂ 7, ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದವು. 2018ರಲ್ಲಿ ಒಂಬತ್ತು ತಿಂಗಳ ಮುಂಚೆಯೇ ವಿಧಾನಸಭೆ ವಿಸರ್ಜಿಸಿದ್ದ ಕೆಸಿಆರ್, ಆಗ 88 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮತ್ತೆ ಮುಖ್ಯಮಂತ್ರಿ ಕುರ್ಚಿ ಏರಿದ್ದರು. ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2, ಬಿಜೆಪಿ 1 ಸ್ಥಾನ ಗಳಿಸಿದ್ದವು. ಹಲವು ಉಪಚುನಾವಣೆಗಳ ಗೆಲುವಿನ ನಂತರ ಬಿಆರ್‌ಎಸ್ ಸಾಮರ್ಥ್ಯ 104ಕ್ಕೆ ಏರಿತ್ತು.
ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ತಂದಿದ್ದು ತಾನೇ ಎಂದು ಪ್ರತಿಪಾದಿಸುತ್ತಾ ಕೆಸಿಆರ್ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಬಾರಿಸಲು ಮುಂದಾಗಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ನೀಡಿದ್ದು ತಾನು ಎಂದು ಕಾಂಗ್ರೆಸ್ ಈ ಬಾರಿ ಅದರ ಕ್ರೆಡಿಟ್ ಪಡೆದುಕೊಳ್ಳಲು ಮೊದಲ ಬಾರಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಹೀಗಾಗಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಅರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿ ಕೂಡ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದು, ರಾಜ್ಯದ ನಲವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ರಾಜ್ಯದ ಸುಮಾರು 40 ಕ್ಷೇತ್ರಗಳಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಂಡಿದೆ. ಉಳಿದ 79 ಸ್ಥಾನಗಳಲ್ಲಿ ಬಿಆರ್‌ಎಸ್-ಕಾಂಗ್ರೆಸ್ ನೇರ ಹೋರಾಟದ ಸಾಧ್ಯತೆಯಿದೆ. ನಿಜಾಮಾಬಾದ್, ಕರೀಂನಗರ, ಅದಿಲಾಬಾದ್, ಗ್ರೇಟರ್ ಹೈದರಾಬಾದ್, ಮೆಹಬೂಬ್ ನಗರ ಮತ್ತು ವಾರಂಗಲ್ ಮುಂತಾದ ಬಿಜೆಪಿಗೆ ಬಲವಿರುವ ಜಿಲ್ಲೆಗಳಲ್ಲಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.
ಅದಿಲಾಬಾದ್ ಜಿಲ್ಲೆಯ ಸಿರ್ಪುರ್ ಕಾಗಜ್‌ನಗರ ಕ್ಷೇತ್ರದಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಬಿಎಸ್ಪಿ ರಾಜ್ಯಾಧ್ಯಕ್ಷ ಆರ್.ಎಸ್.ಪ್ರವೀಣ್ ಕುಮಾರ್ ಅವರಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸ್ಥಾನಗಳಿರುವ ಅದೇ ಜಿಲ್ಲೆಯ ಖಾನಾಪುರ, ಬೋತ್ ಮತ್ತು ಮುಧೋಳದಂತಹ ಕ್ಷೇತ್ರಗಳಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಇದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕಾಮರೆಡ್ಡಿಯಿಂದ ಹಿಂದಿನ ನಿಜಾಮಾಬಾದ್ ಜಿಲ್ಲೆಗೆ ಬಂದಿರುವುದರ ಪ್ರಭಾವ ನೆರೆಯ ಕ್ಷೇತ್ರಗಳ ಮೇಲೂ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಪಿಸಿಸಿ ಅಧ್ಯಕ್ಷ ಎ. ರೇವಂತ್ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಅವಿಭಜಿತ ಖಮ್ಮಂ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ನೇರ ಸ್ಪರ್ಧೆ ಇದೆ. ಸಿಪಿಎಂ ಇಲ್ಲಿ ಎರಡೂ ಪಕ್ಷಗಳ ಮತಪ್ರಮಾಣವನ್ನು ಒಂದಿಷ್ಟು ಕಸಿಯುವ ಸಾಧ್ಯತೆಯಿದೆ. ಸಿಪಿಎಂ ಕೂಡ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕೊನೆ ಗಳಿಗೆವರೆಗೂ ಪ್ರಯತ್ನಿಸಿತ್ತಾದರೂ ಅದು ಫಲಪ್ರದವಾಗಿರಲಿಲ್ಲ. ನಲ್ಗೊಂಡ ಕಾಂಗ್ರೆಸ್‌ನ ಪ್ರಬಲ ಹಿಡಿತದಲ್ಲಿರುವ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ನೇರ ಹಣಾಹಣಿ ಇದೆ. ಸಿಪಿಎಂ ಕೂಡ ಒಂದಷ್ಟು ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ. ಸೂರ್ಯಪೇಟ್‌ನಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವೆ ಬಿಜೆಪಿ ಬರಲಿದ್ದು, ಅಲ್ಲಿ ಕೇಸರಿ ಪಾಳೆಯಕ್ಕೂ ಗಮನಾರ್ಹ ಬೆಂಬಲವಿದೆ.
ಅವಿಭಜಿತ ಮೆಹಬೂಬ್‌ನಗರ್ ಜಿಲ್ಲೆಯಲ್ಲಿ ಬಿಆರ್‌ಎಸ್ ದೊಡ್ಡ ಗೆಲುವುಗಳನ್ನು ಗಳಿಸುವ ಭರವಸೆಯಲ್ಲಿದೆ. ಆದರೆ 2009 ರವರೆಗೆ ಅಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದ ಕಾಂಗ್ರೆಸ್ ಮತ್ತೆ ಇಲ್ಲಿ ನೆಲೆ ಕಂಡುಕೊಂಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಇಲ್ಲಿಯವರೇ. ಆದರೆ ಅವರ ಕ್ಷೇತ್ರವಾದ ಕೊಡಂಗಲ್ ಈಗ ವಿಕಾರಾಬಾದ್ ಜಿಲ್ಲೆಗೆ ಸೇರಿದೆ.
ಬಿಆರ್‌ಎಸ್ ಗೆಲುವಿಗೆ ತೊಡಕಾಗಿರುವುದು ಆಡಳಿತ ವಿರೋಧಿ ಅಲೆ; ಆದರೂ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು ತಮ್ಮ ಕೈಹಿಡಿಯಲಿವೆ ಎಂದು ಕೆಸಿಆರ್ ಭಾವಿಸಿದ್ದಾರೆ. ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲೇಬೇಕೆನ್ನುವ ಛಲದಲ್ಲಿದೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿವೆ. ಕರ್ನಾಟಕದ ಚುನಾವಣೆಯ ಫಲಶ್ರುತಿ ಎಂಬಂತೆ, ಮುಸ್ಲಿಮರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಎಐಎಂಐಎಂ ಬಿಆರ್‌ಎಸ್ ಜೊತೆಗಿದೆ. 2018ರಲ್ಲಿ ರಾಜ್ಯದಾದ್ಯಂತ ಬಹುತೇಕ ಮುಸ್ಲಿಮರು ಬಿಆರ್‌ಎಸ್‌ಗೆ ಮತ ನೀಡಿದ್ದರು. ಈ ಬಾರಿ ಹೈದರಾಬಾದ್‌ನ ಹೊರಗೆ ಮುಸ್ಲಿಂ ಮತಗಳು ಬಿಆರ್‌ಎಸ್‌ನಿಂದ ಕಾಂಗ್ರೆಸ್‌ಗೆ ಶಿಫ್ಟ್ ಆಗಲಿವೆ. ಹಾಗಾಗಿಯೇ ಈ ಬಾರಿ ಬಿಆರ್‌ಎಸ್ ಕೇವಲ ಮೂವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಐವರು ಮುಸ್ಲಿಮರಿಗೆ ಟಿಕೆಟ್ ನೀಡಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಖಾನ್ ತೆಲಂಗಾಣದಲ್ಲಿ ಪ್ರಚಾರ ಮಾಡಿದ್ದು, ಕಾಂಗ್ರೆಸ್ ಗ್ಯಾರಂಟಿಗಳ ಪ್ರಚಾರ ಮಾಡಿದ್ದಾರೆ. ತಮ್ಮ ಚುನಾವಣಾ ಭಾಷಣಗಳಲ್ಲಿ ಕೆಸಿಆರ್ ಮತ್ತು ಅವರ ಮಗ ಕೆಟಿಆರ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸುತ್ತಿದ್ದು, ತಾನು ಭರವಸೆ ನೀಡಿದಂತೆ ಕಾಂಗ್ರೆಸ್ ರೈತರಿಗೆ 10 ಗಂಟೆ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಾಪ್ರಹಾರ ಮಾಡುತ್ತಿದ್ದಾರೆ.
ಗ್ರೇಟರ್ ಹೈದರಾಬಾದ್‌ನಲ್ಲಿ ಎಐಎಂಐಎಂ, ಬಿಆರ್‌ಎಸ್ ಮತ್ತು ಬಿಜೆಪಿ ಸಮಬಲ ಹೊಂದಿದ್ದು, ಪ್ರಬಲ ಪೈಪೋಟಿಯೊಂದಿಗೆ ಸ್ಪರ್ಧಿಸಿವೆ. 2014ರ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಆರ್‌ಎಸ್‌ಗೆ ಹೋಗಿದ್ದರಿಂದ ಕಾಂಗ್ರೆಸ್‌ಗೆ ನಗರದಲ್ಲಿ ಹೇಳಿಕೊಳ್ಳುವಂಥ ನೆಲೆಯಿಲ್ಲ.
ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ನಿಜವಾಗಿಯೂ ಕಂಟಕವಿರುವುದು ಬಿಆರ್‌ಎಸ್‌ನಿಂದ ಅಲ್ಲ, ಬಿಜೆಪಿಯಿಂದ. ಯಾಕೆಂದರೆ, ಬಿಜೆಪಿ ಈ ಬಾರಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ಮತಗಳನ್ನು ಪಡೆಯಲಿದ್ದು, ಅದರ ಮತಗಳ ಏರಿಕೆಯು ಆಡಳಿತ ವಿರೋಧಿ ಮತಗಳಿಗೆ ಕತ್ತರಿ ಹಾಕುತ್ತದೆ ಮತ್ತು ಆ ಮೂಲಕ ಆಡಳಿತ ಪಕ್ಷಕ್ಕೆ ಲಾಭ ಮಾಡಿಕೊಡುತ್ತದೆ. ಹಾಗೇನಾದರೂ ಆದಲ್ಲಿ ಬಿಆರ್‌ಎಸ್ ಹ್ಯಾಟ್ರಿಕ್ ಬಾರಿಸಲಿದೆ.
ಬಿಜೆಪಿ ಸದ್ಯದ ವಿಧಾನಸಭಾ ಚುನಾವಣೆಯನ್ನು ನಿರ್ಣಾಯಕವಾಗಿ ಪರಿಗಣಿಸಿದೆ. ಬಿಜೆಪಿಯು 2018ರ ವಿಧಾನಸಭಾ ಚುನಾವಣೆಯಲ್ಲಿ 6.98 ಮತಪ್ರಮಾಣವನ್ನು ಹಾಗೂ ನಾಲ್ಕು ತಿಂಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ 19.65 ಮತಪ್ರಮಾಣವನ್ನು ಪಡೆದಿತ್ತು. ಒಂದು ವಿಧಾನಸಭಾ ಸ್ಥಾನ ಗೆದ್ದಿದ್ದ ಪಕ್ಷವು, ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಆದರೂ 2018ರಲ್ಲಿ ಸುಮಾರು 119ರ ಪೈಕಿ 100 ಕ್ಷೇತ್ರಗಳಲ್ಲಿ ಬಿಜೆಪಿ ಠೇವಣೆ ಕಳೆದುಕೊಂಡಿತ್ತು. ಆದರೀಗ ಪಕ್ಷವು ತನ್ನ ತಂತ್ರಗಾರಿಕೆ ಬದಲಿಸಿಕೊಂಡಿದೆ. ಸಂಸದರಾದ ಧರ್ಮಪುರಿ ಅರವಿಂದ್ ಕೊರಟ್ಲ ಕ್ಷೇತ್ರದಿಂದ ಹಾಗೂ ಬಂಡಿ ಸಂಜಯ್ ಕುಮಾರ್ ಕರೀಂನಗರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಜೊತೆಗೆ ಪಕ್ಷವು ಅಧಿಕಾರಕ್ಕೆ ಬಂದರೆ, ಹಿಂದುಳಿದ ವರ್ಗದವರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಬಿಜೆಪಿ ಘೋಷಿಸಿದೆ.
ಇನ್ನು ಮಲ್ಕಾಜ್‌ಗಿರಿಯಂತಹ ಕ್ಷೇತ್ರದಲ್ಲಿ ತಮಿಳಿನ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ ಅಣ್ಣಾಮಲೈ ಮತ್ತು ನಟಿ-ರಾಜಕಾರಣಿ ಖುಷ್ಬು ಅವರಂತಹ ಸ್ಟಾರ್ ಪ್ರಚಾರಕರು ಪ್ರಚಾರ ಮಾಡಿದ್ದಾರೆ. ಮೋದಿ, ಅಮಿತ್ ಶಾ ಹಲವು ಬಾರಿ ಹೈದರಾಬಾದ್‌ಗೆ ಬಂದುಹೋಗಿದ್ದಾರೆ. ಇದೆಲ್ಲದರಿಂದ ಈ ಬಾರಿ ಕನಿಷ್ಠ 30ರಿಂದ 40 ಸ್ಥಾನಗಳಲ್ಲಿ ಪ್ರಬಲ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿದೆ. ಮುದೋಳ್, ನಿರ್ಮಲ್, ಕೊರಟ್ಲ, ನಿಜಾಮಬಾದ್ ನಗರ, ಹುಜೂರಾಬಾದ್, ಘೋಷಮಹಲ್, ಕರೀಂನಗರ್ ಮುಂತಾದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಇಲ್ಲವೇ ತೀವ್ರ ಪೈಪೋಟಿ ನೀಡಲಿದೆ. ಉಳಿದ ಕನಿಷ್ಠ 15 ಕ್ಷೇತ್ರಗಳಲ್ಲಿ ಬಿಆರ್‌ಎಸ್ ಹಾಗೂ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದ್ದು, ತ್ರಿಕೋನ ಸ್ಪರ್ಧೆಗೆ ಕಾರಣವಾಗಲಿದೆ.
ಕರೀಂನಗರ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಬಿಜೆಪಿಯ ಸಂಸದರಾದ ಬಂಡಿ ಸಂಜಯ್ ಕುಮಾರ್ ಮತ್ತು ಧರ್ಮಪುರಿ ಅರವಿಂದ್ ಅವರು ಗಮನಾರ್ಹ ಹಿಡಿತ ಹೊಂದಿರುವುದು ಪಕ್ಷಕ್ಕೆ ನೆರವಾಗಲಿದೆ. ಕರೀಂನಗರ್, ಕೊರುಟ್ಲ, ಜಗಿತ್ಯಾಲ್, ವೇಮುಲವಾಡ, ಮತ್ತು ಹುಜೂರಬಾದ್ ಕ್ಷೇತ್ರಗಳಲ್ಲಿ ಬಿಜೆಪಿಗೆ ವ್ಯಾಪಕ ಜನಬೆಂಬಲ ಹೊಂದಿದೆ.
ಈ ಸುದ್ದಿ ಓದಿದ್ದೀರಾ: ದೇಶ ವಿಭಜನೆ ಕಾಲಘಟ್ಟದ ಒಂದು ಉಪಕತೆ : ಹಸನ್ ನಯೀಂ ಸುರಕೋಡ ಬರೆಹ
ಹುಜೂರಬಾದ್ ಶಾಸಕರಾಗಿದ್ದ ಈಟೆಲ ರಾಜೇಂದರ್ 2020ರಲ್ಲಿ ಬಿಆರ್‌ಎಸ್ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು. ದೇಶದ ಗಮನ ಸೆಳೆದಿದ್ದ ಆ ಹೈವೋಲ್ಟೇಜ್ ಕದನದಲ್ಲಿ ಈಟೆಲ ರಾಜೇದರ್ ಅವರನ್ನು ಸೋಲಿಸಬೇಕೆಂದು ಕೆಸಿಆರ್ ಪಣ ತೊಟ್ಟಿದ್ದರು. ಇಡೀ ಸರ್ಕಾರವೇ ಎದುರಾಗಿ ನಿಂತರೂ ಬಿಜೆಪಿ ಅಭ್ಯರ್ಥಿಯಾಗಿ ಈಟೆಲ ರಾಜೇಂದರ್ ಗೆದ್ದಿದ್ದರು. ಹಾಲಿ ವಿಧಾನಸಭಾ ಚುನಾವಣೆಯಲ್ಲೂ ಅಂಥದ್ದೇ ಮ್ಯಾಜಿಕ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಅದರ ಪ್ರಯತ್ನಗಳಿಂದ ಕಾಂಗ್ರೆಸ್ ವಿರೋಧಿ ಮತಗಳು ಒಡೆದು ಬಿಆರ್‌ಎಸ್ ಪಾಲಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಆರ್‌ಎಸ್, ಕಾಂಗ್ರೆಸ್ ನಡುವೆ ಗದ್ದುಗೆಗಾಗಿ ತೀವ್ರ ಜಿದ್ದಾಜಿದ್ದಿ ನಡೆಯಲಿದೆ.