ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಿದ್ದೀಕಿ ಅವರನ್ನು ಹತ್ಯೆಗೈದ ಬಳಿಕ, ಅವರು ಸತ್ತಿದ್ದಾರೆ ಎಂಬುದನ್ನು ದೃಢಪಡಿಸಿಕೊಳ್ಳಲು ಲೀಲಾವತಿ ಆಸ್ಪತ್ರೆಯ ಹೊರಗೆಯೇ ಸುಮಾರು 30 ನಿಮಿಷಗಳ ಕಾಲ ಕಾದುಕುಳಿತಿದ್ದ ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಸಿದ್ದೀಕಿ ಅವರ ಮೆಲೆ ಗುಂಡಿನ ದಾಳಿ ನಡೆಸಿದ ಶೂಟರ್, ತಕ್ಷಣವೇ ತನ್ನ ಅಂಗಿಯನ್ನು ಬದಲಾಯಿಸಿದ್ದಾನೆ. ಆಸ್ಪತ್ರೆಯ ಹೊರಗೆ 30 ನಿಮಿಷಗಳ ಕಾಲ ಜನರ ಗುಂಪಿನ ನಡುವೆ ನಿಂತಿದ್ದಾಗಿಯೂ, ಅವರು ಬದುಕುಳಿಯುವುದಿಲ್ಲ ಎಂಬುದು ಖಚಿತವಾದ ಬಳಿಕ, ಅಲ್ಲಿಂದ ತೆರಳಿದ್ದಾಗಿಯೂ ತಿಳಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಅಕ್ಟೋಬರ್ 12ರಂದು ರಾತ್ರಿ 9:11ರಲ್ಲಿ ಮುಂಬೈನ ಬಾಂದ್ರಾದಲ್ಲಿ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಎದೆಗೆ ಎರಡು ಗುಂಡುಗಳು ತಗುಲಿದ್ದ ಅವರನ್ನು, ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಸ್ಪಂದಿಸದೆ ಅವರು ಸಾವನ್ನಪ್ಪಿದರು.
ಆರೋಪಿಗಳು ಹೇಳುವಂತೆ, ಅವರ ಆರಂಭಿಕ ಯೋಜನೆಯಂತೆ ಆರೋಪಿಗಳು ತಮ್ಮ ಸಹಚರರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತು. ಅಲ್ಲಿಂದ ಅವರನ್ನು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೊಬ್ಬರು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಆದರೆ, ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಅವರ ಯೋಜನೆ ವಿಫಲವಾಗಿದೆ.
ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದು ಹೇಗೆ?
ಸಿದ್ದೀಕಿ ಮೇಲೆ ದುಂಡಿನ ದಾಳಿ ನಡೆಸಿದ ಗೌತಮ್, ಬಳಿಕ ಕುರ್ಲಾಗೆ ತೆರಳಿದ್ದಾನೆ. ಅಲ್ಲಿಂದ, ಥಾಣೆಗೆ ರೈಲಿನಲ್ಲಿ ತೆರಳಿದ್ದಾನೆ. ಬಳಿಕ, ಪುಣೆಗೆ ಹೋಗಿದ್ದಾನೆ. ಅಲ್ಲಿ ಆತ ತನ್ನ ಬಳಿಯಿದ್ದ ಫೋನ್‌ಅನ್ನು ಬಿಸಾಡಿದ್ದಾನೆ. ಏಳು ದಿನಗಳ ಕಾಲ ಪುಣೆಯಲ್ಲಿಯೇ ಉಳಿದಿದ್ದ ಗೌತಮ್, ನಂತರ ಉತ್ತರ ಪ್ರದೇಶದ ಝಾನ್ಸಿ ಮತ್ತು ಲಕ್ನೋಗೆ ಹೋಗಿದ್ದಾನೆ. ಭಾನುವಾರ, ಉತ್ತರ ಪ್ರದೇಶದ ನನ್ಪಾರಾ ಪಟ್ಟಣದಿಂದ ಸುಮಾರು 10 ಕಿಮೀ ದೂರದಲ್ಲಿರುವ ತೀರಾ ಹಿಂದುಳಿದ ಕುಗ್ರಾಮದಲ್ಲಿ ಆತ ಬಚ್ಚಿಟ್ಟುಕೊಂಡಿದ್ದ. ಆತನನ್ನು ಅಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗೌತಮ್‌ನ ನಾಲ್ವರು ಸ್ನೇಹಿತರ ಮೊಬೈಲ್ ಫೋನ್‌ಗಳಲ್ಲಿ ನಡೆದಿದ್ದ ತಡರಾತ್ರಿಯ ಸಂಭಾಷಣೆಗಳು ಅನುಮಾನ ಹುಟ್ಟುಹಾಕಿದ್ದವು. ಲಕ್ನೋದಲ್ಲಿ ಖರೀದಿಸಿದ ಮೊಬೈಲ್ ಫೋನ್‌ಗಳಲ್ಲಿ ಇಂಟರ್ನೆಟ್ ಕರೆಗಳ ಮೂಲಕ ಗೌತಮ್‌ನೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಮುಂಬೈ ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪ್ರಮುಖ ಆರೋಪಿ ಗೌತಮ್‌ನನ್ನು ಬಂಧಿಸುವಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು. ಗೌತಮ್‌ನ ಸಹಚರ ಅನುರಾಗ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಹಾಗೂ ಅಖಿಲೇಂದ್ರ ಪ್ರತಾಪ್ ಸಿಂಗ್ ಎಂಬ ಆರೋಪಿಗಳನ್ನು ನೇಪಾಳ ಗಡಿಯ ಬಳಿ ಬಂಧಿಸಿದ್ದಾರೆ.
ಈ ನಾಲ್ವರು ಸಹಚರರು ಪ್ರಮುಖ ಆರೋಪಿ ಗೌತಮ್ ದೇಶದಿಂದ ಪರಾರಿಯಾಗಲು ಸಹಾಯ ಮಾಡಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.