NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳ ಧೈರ್ಯ ಮತ್ತು ಸಂಕಲ್ಪವನ್ನು ಶ್ಲಾಘಿಸಿದ್ದು, ಯುವಕರ ಧ್ವನಿಯನ್ನು ದೇಶ ಕೇಳಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಆಲಿಯಾ ಭಟ್ ಪೋಸ್ಟ್‌ನಲ್ಲಿ ಏನಿದೆ?
“ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ತುಂಬಾ ಬೇಸರವಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿಸಿರುವ ಧೈರ್ಯ ಮತ್ತು ಒಗ್ಗಟ್ಟು ಭರವಸೆಯನ್ನೂ ಮೂಡಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಒಂದು ಕನಸು, ಕುಟುಂಬದ ನಿರೀಕ್ಷೆ ಮತ್ತು ಹಲವು ವರ್ಷಗಳ ಪರಿಶ್ರಮ ಅಡಗಿದೆ. ಅವರು ತಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲ, ತಮ್ಮ ನಂತರ ಬರುವ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ವ್ಯವಸ್ಥೆ ಸಿಗಲೆಂದು ಹೋರಾಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ಧೈರ್ಯ ನನಗೆ ಪ್ರೇರಣೆ ನೀಡಿದೆ. ದೇಶದ ಭವಿಷ್ಯವನ್ನು ರೂಪಿಸುವ ಯುವಕರ ಮಾತನ್ನು ನಾವು ನಿಜವಾಗಿಯೂ ಕೇಳುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕು. ಭವಿಷ್ಯ ಅವರದ್ದು. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಯುವ ಪ್ರತಿಭಟನೆಗೆ ಸುಪ್ರೀಂ ಕೋರ್ಟ್ ವಕೀಲರ ಬೆಂಬಲ; ಸಂವಿಧಾನದ ಪೀಠಿಕೆ ಓದಿ ಪೊಲೀಸ್ ಕ್ರಮ ಖಂಡನೆ
ಪ್ರಸ್ತುತ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಮಗ್ರ ತನಿಖೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.





