ಮಾಜಿ ಸಿಜೆಐ ಡಿ ವೈ ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿಯಂತಹ ಪ್ರಮುಖ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನಿಲುವುಗಳಿಗೆ “ಅತಿಯಾದ ವಿನಮ್ರತೆ” ತೋರುತ್ತಿದ್ದರು ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಗಂಭೀರ ಆರೋಪ ಮಾಡಿದ್ದಾರೆ.
ಕೊಲಿಜಿಯಂ ಸಭೆ ಔಪಚಾರಿಕವಾಗಿ ನಡೆಯುವ ಮುನ್ನವೇ ಸರ್ಕಾರದ ಸಮ್ಮತಿ ಅಥವಾ ಇಂಗಿತವನ್ನು ಪಡೆಯಲು ಯತ್ನಿಸುತ್ತಿದ್ದುದು ಹಾಗೂ ಅಲ್ಪಸಂಖ್ಯಾತ ಸಮುದಾಯದ ನ್ಯಾಯಮೂರ್ತಿ ಅಭ್ಯರ್ಥಿಯೊಬ್ಬರ ಜಾತಿಯ ಕುರಿತು ಸರ್ಕಾರ ಎತ್ತಿದ್ದ ವಿಚಿತ್ರ ಪ್ರಶ್ನೆಯನ್ನು ಸ್ವತಃ ಸಿಜೆಐ ವ್ಯಕ್ತಪಡಿಸಿದ್ದು ತಮ್ಮ ನಡುವೆ ತೀವ್ರ ಶೀತಲ ಸಮರಕ್ಕೆ ಕಾರಣವಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಜಗ್ಗರ್ನಾಟ್ (Juggernaut) ಸಂಸ್ಥೆಯು ಈ ತಿಂಗಳ ಕೊನೆಯಲ್ಲಿ ಪ್ರಕಟಿಸಲಿರುವ ತಮ್ಮ ‘ವಿತ್ಔಟ್ ಫಿಯರ್ ಆಫ್ ಫೇವರ್’ (Without Fear of Favour) ಎಂಬ ಪುಸ್ತಕದಲ್ಲಿ ಈ ಕುರಿತು ವಿಸ್ತೃತವಾಗಿ ಬರೆದುಕೊಂಡಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ನಂತರದ ಅತ್ಯಂತ ಹಿರಿಯ (J1) ನ್ಯಾಯಮೂರ್ತಿಯಾಗಿ 14 ತಿಂಗಳು ಸೇವೆ ಸಲ್ಲಿಸಿ ಡಿಸೆಂಬರ್ 2023 ರಲ್ಲಿ ನಿವೃತ್ತರಾದ ನ್ಯಾಯಮೂರ್ತಿ ಕೌಲ್, ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರದ ಜೊತೆ ನ್ಯಾಯಾಂಗ ನಡೆದುಕೊಳ್ಳುತ್ತಿರುವ ರೀತಿಯನ್ನು ತಮ್ಮ ಆತ್ಮಚಿತ್ರೆಯಲ್ಲಿ ವಿಶ್ಲೇಷಿಸಿದ್ದಾರೆ. “ತನ್ನ ನಿಲುವಿಗೆ ಬದ್ಧವಾಗಿ ನಿಲ್ಲುವ ಗಟ್ಟಿತನವಿರುವ ನ್ಯಾಯಮೂರ್ತಿಗಳಿಗೆ ಹಾಗೂ ತಮ್ಮ ಸ್ವಯಂ ಗೌರವವನ್ನು ಕಾಯ್ದುಕೊಳ್ಳುವ ನ್ಯಾಯಾಂಗಕ್ಕೆ ಸರ್ಕಾರ ಹೆಚ್ಚು ಗೌರವ ನೀಡುತ್ತದೆ ಎಂಬುದನ್ನು ನಾನು ನನ್ನ ಅನುಭವದಿಂದ ಕಂಡುಕೊಂಡಿದ್ದೇನೆ” ಎಂದು ಕೌಲ್ ಹೇಳಿದ್ದಾರೆ. ನ್ಯಾಯಾಲಯವು ಕಾರ್ಯಾಂಗದ ಮೇಲಿನ ನಿಯಂತ್ರಕವಾಗಿ ಕೆಲಸ ಮಾಡಬೇಕೇ ಹೊರತು ವಿರೋಧ ಪಕ್ಷಗಳ ಅಸ್ತ್ರವಾಗಬಾರದು ಎಂದಿದ್ದಾರೆ. ರಫೇಲ್ ಯುದ್ಧ ವಿಮಾನ ಒಪ್ಪಂದದ ಪ್ರಕರಣವನ್ನೂ ನೆನಪಿಸಿಕೊಂಡಿರುವ ಅವರು, ಸರ್ಕಾರವನ್ನು ವಿರೋಧಿಸುವವರು ಪ್ರತಿ ವಿಷಯದಲ್ಲೂ ನ್ಯಾಯಾಲಯ ತಮ್ಮ ನೆರವಿಗೆ ಬರಬೇಕೆಂದು ಬಯಸುವುದು ತಪ್ಪೆಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದ್ದ 2015ರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ (NJAC) ರದ್ದತಿಯ ಕುರಿತು ಮಾತನಾಡುತ್ತಾ, ಎನ್ಜೆಎಸಿ ವ್ಯವಸ್ಥೆಯನ್ನು ತಕ್ಷಣವೇ ರದ್ದುಗೊಳಿಸುವ ಬದಲು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲು ಒಮ್ಮೆ ಅವಕಾಶ ನೀಡಬೇಕಿತ್ತು. ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವುದು ತಪ್ಪಲ್ಲ, ಆದರೆ ಕೊಲಿಜಿಯಂ ಸಭೆಯಲ್ಲಿ ಚರ್ಚೆ ನಡೆಯುವ ಮುನ್ನವೇ ‘ಪೂರ್ವ ಅನುಮೋದನೆ’ ಪಡೆಯುವ ಧೋರಣೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಬಾಗಿಲನ್ನು ಸ್ವಲ್ಪ ತೆರೆದಿಟ್ಟರೂ ರಾಜಕೀಯ ಶಕ್ತಿಗಳು ತಮ್ಮ ಪ್ರಭಾವ ಬೀರಲು ಯತ್ನಿಸುವುದು ಸಹಜ ಎಂದು ಅವರು ಎಚ್ಚರಿಸಿದ್ದಾರೆ.
ಅಂದಿನ ಸಿಜೆಐ ಚಂದ್ರಚೂಡ್ ಅವರ ಕಾರ್ಯವೈಖರಿಯ ಬಗ್ಗೆ ತಮಗಿದ್ದ ಭಿನ್ನಾಭಿಪ್ರಾಯಗಳನ್ನು ತೆರೆದಿಟ್ಟಿರುವ ಕೌಲ್, ಜೂನ್ 2022ರಲ್ಲಿ ತಾವು ಕೊಲಿಜಿಯಂ ಸದಸ್ಯರಾದಾಗ, ಸರ್ಕಾರದ ಮುಂದೆ ಇಬ್ಬರೂ ಒಟ್ಟಾಗಿ ನಿಂತು ಮಾತುಕತೆ ನಡೆಸೋಣ ಎಂಬ ಪ್ರಸ್ತಾಪ ಇಟ್ಟಿದ್ದರು. ತಾವು ಸಿಜೆಐ ಅಲ್ಲದ ಕಾರಣ ಕಠಿಣ ನಿಲುವು ತಳೆಯಲು ತಮಗೆ ಸಾಧ್ಯವಿತ್ತು ಮತ್ತು ಸರ್ಕಾರಕ್ಕೂ ತಮ್ಮ ಗಟ್ಟಿತನದ ಅರಿವಿತ್ತು. ಆದರೆ ಡಿ.ವೈ. ಚಂದ್ರಚೂಡ್ ಅವರು ಸರ್ಕಾರದೊಂದಿಗಿನ ಬಾಂಧವ್ಯ ಮತ್ತು ಮಾತುಕತೆಯನ್ನು ಕೇವಲ ಸ್ವತಃ ತಾವೊಬ್ಬರೇ ನಿರ್ವಹಿಸಲು ಇಷ್ಟಪಡುತ್ತಿದ್ದರು ಎಂದು ಕೌಲ್ ಬರೆದುಕೊಂಡಿದ್ದಾರೆ.
ಕೊಲಿಜಿಯಂ ಒಳಗೆ ನಡೆದ ವೈಚಾರಿಕ ಘರ್ಷಣೆಗಳಿಗೆ ಕೌಲ್ ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ನೀಡಿದ್ದಾರೆ. ಒಮ್ಮೆ ಸುಪ್ರೀಂ ಕೋರ್ಟ್ನ ಆರು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೊಲಿಜಿಯಂ ಸಭೆಗೆ ತೆರಳುವಾಗ, ಸಿಜೆಐ ಚಂದ್ರಚೂಡ್ ಅವರು ಹಠಾತ್ತನೆ ಆರನೇ ಹೆಸರೊಂದನ್ನು ಪ್ರಸ್ತಾಪಿಸಿದರು. ಆ ಹೆಸರು ಸರ್ಕಾರದ ಕಡೆಯಿಂದ ತಳ್ಳಲ್ಪಟ್ಟಿದೆ ಎಂದು ಶಂಕಿಸಿದ ಕೌಲ್ ಮತ್ತು ಇತರ ನ್ಯಾಯಮೂರ್ತಿಗಳು ಅದನ್ನು ವಿರೋಧಿಸಿದರು. ಅಷ್ಟೇ ಅಲ್ಲದೆ ಸಿಜೆಐ ಅವರು “ಸರ್ಕಾರದ ಅಭಿಪ್ರಾಯವೇನು ಎಂದು ಫೋನ್ ಮಾಡಿ ಕೇಳಲೇ?” ಎಂದು ಕೌಲ್ ಅವರಲ್ಲಿ ವಿಚಾರಿಸಿದಾಗ, “ಕೊಲಿಜಿಯಂ ಸಭೆಯ ಮಧ್ಯದಲ್ಲಿ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಕೌಲ್ ಖಡಕ್ ಆಗಿ ಹೇಳಿದರು. ಕೊನೆಗೆ ಸಭೆಯಲ್ಲಿ ಒಪ್ಪಂದವಾಗಿದ್ದ ಐದು ಹೆಸರುಗಳು ಮಾತ್ರ ಶಿಫಾರಸುಗೊಂಡವು.
ಇನ್ನೊಂದು ಗಂಭೀರ ಘಟನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ನ್ಯಾಯಮೂರ್ತಿ ಅಭ್ಯರ್ಥಿಯೊಬ್ಬರ ಹೆಸರನ್ನು ಪರಿಶೀಲಿಸುವಾಗ ಸರ್ಕಾರವು ಅಲ್ಪಸಂಖ್ಯಾತರಿಗೆ ಈಗಾಗಲೇ ನ್ಯಾಯಾಂಗದಲ್ಲಿ ಸಾಕಷ್ಟು ಪ್ರಾತಿನಿಧ್ಯವಿದೆ ಎಂಬ ವಾದ ಮುಂದಿಟ್ಟಿತ್ತು. ಇದಾದ ಬಳಿಕ, ಆ ಅಭ್ಯರ್ಥಿಯ ಕುಟುಂಬದ ‘ಜಾತಿ’ ಯಾವುದು ಎಂಬ ವಿಚಿತ್ರ ಪ್ರಶ್ನೆಯನ್ನು ಸರ್ಕಾರ ಎತ್ತಿತ್ತು. ತಲೆಮಾರುಗಳಿಂದ ಆ ಧರ್ಮದಲ್ಲಿದ್ದ ಕುಟುಂಬದ ಜಾತಿ ಕೇಳುವುದು ಅತ್ಯಂತ ಅನಗತ್ಯ ಮತ್ತು ವಿಚಿತ್ರವಾಗಿತ್ತು. ಇದರ ಜೊತೆಗೆ ಸಿಜೆಐ ಚಂದ್ರಚೂಡ್ ಅವರು ಸರ್ಕಾರದ ಮತ್ತೊಂದು ನಿಲುವನ್ನು ಕೌಲ್ ಅವರೊಂದಿಗೆ ಹಂಚಿಕೊಂಡಾಗ ತೀವ್ರ ಕ್ಷೋಭೆಗೊಂಡ ಕೌಲ್, “ಈ ರೀತಿಯಲ್ಲಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದಾದರೆ ಸಿಜೆಐ ಅವರೇ ಸ್ವತಃ ನೇಮಕ ಮಾಡಿಕೊಳ್ಳಬಹುದು. ಕೊಲಿಜಿಯಂ ವ್ಯವಸ್ಥೆ ಬರುವ ಮುನ್ನ ಸಿಜೆಐಗಳೇ ನೇಮಕ ಮಾಡುತ್ತಿದ್ದರು. ಇಂತಹ ನಿರ್ಧಾರಕ್ಕೆ ನಾನು ಭಾಗಿಯಾಗುವುದಿಲ್ಲ” ಎಂದು ಹೇಳಿ ಫೈಲ್ ಮುಚ್ಚಿ ಸಭೆಯಿಂದ ಹೊರನಡೆದರು. ಆ ಬಳಿಕ ಕೆಲವು ದಿನ ಸಭೆ ನಡೆಯಲಿಲ್ಲ ಮತ್ತು ಕೊನೆಗೆ ಸರ್ಕಾರ ನಮ್ಯತೆ ತೋರಿದ ನಂತರವೇ ಆ ಅಭ್ಯರ್ಥಿಯ ನೇಮಕಾತಿ ಪೂರ್ಣಗೊಂಡಿತು.
ತಮ್ಮ ನ್ಯಾಯಪೀಠದ ಕಲಾಪಗಳ ಮೇಲೆಯೂ ಕಾರ್ಯಾಂಗದ ಪ್ರಭಾವ ಮತ್ತು ಆಡಳಿತಾತ್ಮಕ ಬದಲಾವಣೆಗಳು ಹೇಗೆ ಪರಿಣಾಮ ಬೀರಿದವು ಎಂಬುದನ್ನು ಕೌಲ್ ಉಲ್ಲೇಖಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ತೀರ್ಪಿನ ಪುನರ್ಪರಿಶೀಲನೆಯ ಅಗತ್ಯತೆಯನ್ನು ತಮ್ಮ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆಗೆ ಕೈಗೆತ್ತಿಕೊಂಡಾಗ ಸರ್ಕಾರಕ್ಕೆ ಅದು ಇಷ್ಟವಾಗಲಿಲ್ಲ. ತಮಗೆ ತಿಳಿಸದೇ ಆ ಪ್ರಕರಣವನ್ನು ಸಂಪೂರ್ಣವಾಗಿ ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ತಾವು ನಿವೃತ್ತರಾಗಬೇಕಾಯಿತು. ಹಾಗೆಯೇ ಹಿರಿಯ ವಕೀಲರ ಪದನಾಮ ಪ್ರಕ್ರಿಯೆಯನ್ನು ಕೌಲ್ ನಿವೃತ್ತರಾಗುವವರೆಗೂ ಮುಂದೂಡುವಂತೆ ಸಿಜೆಐಗೆ ಕೆಲವರು ಸಲಹೆ ನೀಡಿದ್ದರು ಎಂಬ ವಿಚಾರ ತಮಗೆ ಆನಂತರ ತಿಳಿಯಿತು ಎಂದು ಅವರು ಬರೆದಿದ್ದಾರೆ.
ಒಟ್ಟಾರೆ, ಕೊಲಿಜಿಯಂ ವ್ಯವಸ್ಥೆಯು “ಸಂಪೂರ್ಣ ಅಪಾರದರ್ಶಕತೆ, ಅಧಿಕಾರದ ಕೇಂದ್ರೀಕರಣ ಮತ್ತು ಅಪ್ರತ್ಯಕ್ಷ ಮಾರ್ಗಗಳ ಮೂಲಕ ಸರ್ಕಾರದ ಒತ್ತಡಕ್ಕೆ ಒಳಗಾಗುವ ದುರ್ಬಲತೆ”ಯಿಂದ ಕೂಡಿದೆ ಎಂದು ಕೌಲ್ ಕಟುವಾಗಿ ಟೀಕಿಸಿದ್ದಾರೆ. 2015 ರಲ್ಲಿ ಎನ್ಜೆಎಸಿ ಕಾಯ್ದೆಯನ್ನು ರದ್ದುಗೊಳಿಸಿದ್ದನ್ನು ರಾಜಕೀಯ ವ್ಯವಸ್ಥೆಯು ಇಂದಿಗೂ ಜೀರ್ಣಿಸಿಕೊಂಡಿಲ್ಲ, ಹೀಗಾಗಿ ಕೊಲಿಜಿಯಂ ರಾಜಕೀಯ ಒತ್ತಡಗಳಿಂದ ಮುಕ್ತವಾಗಿದೆ ಎಂದು ಭಾವಿಸುವುದು ಭ್ರಮೆ ಎಂದಿದ್ದಾರೆ.
ಈ ಎಲ್ಲ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಜೆಐ ಡಿ.ವೈ. ಚಂದ್ರಚೂಡ್, “ಸಂಜಯ್ ಕೌಲ್ ಅವರು ಬರೆದಿರುವ ಪುಸ್ತಕವನ್ನು ನಾನು ಇನ್ನು ಓದಿಲ್ಲ. ಆದ್ದರಿಂದ ಯಾವ ಸಂದರ್ಭದಲ್ಲಿ ಅವರು ಇದನ್ನು ಬರೆದಿದ್ದಾರೆ ಎಂದು ತಿಳಿಯದೆ ವಿಸ್ತೃತವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ, ಸಿಜೆಐ ಆಗಿದ್ದಾಗ ನನ್ನ ಅವಧಿಯಲ್ಲಿ ಅತ್ಯುತ್ತಮ ಕೊಲಿಜಿಯಂ ಸಭೆಗಳು ನಡೆದಿವೆ. ಕೌಲ್ ಅವರೊಂದಿಗೆ ಸದಾ ಗೌರವಯುತ ಹಾಗೂ ಅರ್ಥಪೂರ್ಣ ಸಂವಾದಗಳು ನಡೆದಿವೆ. ಕೌಲ್ ಅವರು ಕೊಲಿಜಿಯಂ ಸಭೆಯಿಂದ ಹೊರನಡೆದ ಯಾವುದೇ ಘಟನೆ ನನಗೆ ನೆನಪಿಲ್ಲ. ಹಾಗೆಯೇ ಯಾವುದೇ ನಿರ್ಧಾರದಲ್ಲೂ ಭಿನ್ನಾಭಿಪ್ರಾಯ ದಾಖಲಾದ ದಾಖಲೆಗಳಿಲ್ಲ” ಎಂದಿದ್ದಾರೆ. ನ್ಯಾಯಮೂರ್ತಿಗಳ ನೇಮಕಾತಿಯ ಅಂತಿಮ ವಾರಂಟ್ಗೆ ರಾಷ್ಟ್ರಪತಿಗಳು ಸಹಿ ಹಾಕುವುದರಿಂದ ಸರ್ಕಾರದೊಂದಿಗೆ ಸಿಜೆಐ ಸಂವಾದ ನಡೆಸುವುದು ಪ್ರಕ್ರಿಯೆಯ ಸ್ವಾಭಾವಿಕ ಭಾಗವಾಗಿರುತ್ತದೆ ಎಂದಿದ್ದಾರೆ.
ಸಂವಿಧಾನದಲ್ಲಿ ‘ಕೊಲಿಜಿಯಂ’ ಎಂಬ ಪದದ ನೇರ ಉಲ್ಲೇಖವಿಲ್ಲದಿದ್ದರೂ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷದ ಪರಿಣಾಮವಾಗಿ ಸುಪ್ರೀಂ ಕೋರ್ಟ್ನ ತೀರ್ಪುಗಳ ಮೂಲಕ ಈ ವ್ಯವಸ್ಥೆ ಜಾರಿಗೆ ಬಂದಿದೆ. ಸಂವಿಧಾನದ ವಿಧಿ 124(2) ಮತ್ತು 217ರ ಪ್ರಕಾರ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳ ನ್ಯಾಯಮೂರ್ತಿಗಳನ್ನು ರಾಷ್ಟ್ರಪತಿಗಳು ಸಿಜೆಐ ಅವರೊಂದಿಗೆ ‘ಸಮಾಲೋಚನೆ’ ನಡೆಸಿ ನೇಮಕ ಮಾಡುತ್ತಾರೆ. ಆದರೆ 1993ರ ‘ಸೆಕೆಂಡ್ ಜಡ್ಜಸ್ ಕೇಸ್’ನಲ್ಲಿ ‘ಸಮಾಲೋಚನೆ’ ಎಂದರೆ ಸಿಜೆಐ ಅವರ ‘ಸಮ್ಮತಿ’ ಎಂದೇ ಅರ್ಥೈಸಲಾಯಿತು. ಇದರಿಂದಾಗಿ ನೇಮಕಾತಿಯಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರ ಸಿಕ್ಕು, ಸಿಜೆಐ ಹಾಗೂ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ವ್ಯವಸ್ಥೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
2014ರಲ್ಲಿ ಕೇಂದ್ರ ಬಿಜೆಪಿ ಸರ್ಕಾರವು 99ನೇ ಸಂವಿಧಾನ ತಿದ್ದುಪಡಿಯ ಮೂಲಕ ಕಾರ್ಯಾಂಗ, ನ್ಯಾಯಾಂಗ ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನೊಳಗೊಂಡ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ’ (NJAC) ರಚಿಸಿತ್ತು. ಆದರೆ ‘ನ್ಯಾಯಾಂಗದ ಸ್ವಾಯತ್ತತೆ’ ಯು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂದು ಪ್ರತಿಪಾದಿಸಿ ಸುಪ್ರೀಂ ಕೋರ್ಟ್ 2015ರಲ್ಲಿ NJAC ಅನ್ನು ರದ್ದುಗೊಳಿಸಿತು. ಎನ್ಜೆಎಸಿ ರದ್ದತಿಯ ನಂತರ ನೇಮಕಾತಿ ಪ್ರಕ್ರಿಯೆಯನ್ನು ಸುಧಾರಿಸಲು ಕಾರ್ಯವಿಧಾನದ ಕೈಪಿಡಿ (MoP) ರೂಪಿಸಲು ಕೋರ್ಟ್ ಸೂಚಿಸಿದ್ದರೂ, ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅದು ಇಂದಿಗೂ ಅಂತಿಮಗೊಂಡಿಲ್ಲ. ಈ ಪೂರ್ವಾಪರ ಹಿನ್ನೆಲೆಯೇ ಇಂದಿಗೂ ಕೇಂದ್ರ ಸರ್ಕಾರದೊಂದಿಗೆ ಕೊಲಿಜಿಯಂ ಮುಖಾಮುಖಿಯಾಗಲು ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ನ್ಯಾಯಾಂಗದಲ್ಲಿ ಮಹಿಳಾ ನೇಮಕಾತಿ | ಕರ್ನಾಟಕದಿಂದ ಸಾಮಾಜಿಕ ಪರಿವರ್ತನೆ: ಸಿಜೆಐ ಚಂದ್ರಚೂಡ್
ಕೊಲಿಜಿಯಂ ಸಭೆಗಳು ಔಪಚಾರಿಕವಾಗಿ ನಡೆಯುವ ಮುನ್ನವೇ ಸರ್ಕಾರದ ಸಮ್ಮತಿ ಪಡೆಯುವ ‘ಪೂರ್ವ ಅನುಮೋದನೆ’ ಧೋರಣೆಯು ಕೊಲಿಜಿಯಂನ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಜಸ್ಟಿಸ್ ಕೌಲ್ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕಾರ್ಯಾಂಗಕ್ಕೆ ಪರೋಕ್ಷವಾಗಿ ‘ವೀಟೋ’ ಅಧಿಕಾರ ನೀಡಿದಂತಾಗುತ್ತದೆ. ಹಾಗೆಯೇ, ಸಿಜೆಐ ಅವರಿಗೆ ಇರುವ ‘ಮಾಸ್ಟರ್ ಆಫ್ ರೋಸ್ಟರ್’ ಅಧಿಕಾರದಡಿ ಪಿಎಂಎಲ್ಎ (PMLA) ನಂತಹ ಮಹತ್ವದ ಪ್ರಕರಣವನ್ನು ಹಠಾತ್ತನೆ ಮತ್ತೊಂದು ಪೀಠಕ್ಕೆ ವರ್ಗಾಯಿಸಿರುವುದು ಹಾಗೂ ಸರ್ಕಾರಕ್ಕೆ ತಕ್ಕಂತೆ ಹೆಸರುಗಳನ್ನು ವಿಳಂಬ ಮಾಡುವುದು ನ್ಯಾಯಾಂಗದ ಆಡಳಿತಾತ್ಮಕ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎನ್ನಬಹುದು.
ಶಾಸಕಾಂಗ ಅಥವಾ ಕಾರ್ಯಾಂಗದ ಪ್ರಭಾವಕ್ಕೆ ನ್ಯಾಯಾಂಗ ಮಣಿದರೆ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕನಿಗೆ ಸರ್ಕಾರದ ವಿರುದ್ಧ ಸಿಗಬೇಕಾದ ನ್ಯಾಯಾಂಗೀಯ ರಕ್ಷಣೆ ದುರ್ಬಲಗೊಳ್ಳುತ್ತದೆ. ಸುಪ್ರೀಂ ಕೋರ್ಟ್ನ ಒಳಾಡಳಿತ ಮತ್ತು ನೇಮಕಾತಿ ಪ್ರಕ್ರಿಯೆಗಳು ಸಾಮಾನ್ಯವಾಗಿ ಅಪಾರದರ್ಶಕತೆಯಿಂದ ಕೂಡಿರುತ್ತವೆ. ಜಸ್ಟಿಸ್ ಕೌಲ್ ಅವರ ಈ ಪುಸ್ತಕ ಈ ಆಂತರಿಕ ವ್ಯವಸ್ಥೆಯ ಕೊರತೆಗಳನ್ನು ಬಹಿರಂಗಪಡಿಸಿದೆ.
ಈ ಎಲ್ಲಾ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ಮತ್ತು ಕೊಲಿಜಿಯಂ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಅಥವಾ ಹೊಸ ಕಾರ್ಯವಿಧಾನ ರೂಪಿಸಲು ಮತ್ತೆ ಸಾರ್ವಜನಿಕ ಮತ್ತು ಕಾನೂನಾತ್ಮಕ ವಲಯದಲ್ಲಿ ಗಂಭೀರ ಚರ್ಚೆಗಳು ಹಾಗೂ ಒತ್ತಡಗಳು ಹೆಚ್ಚಾಗಲು ದಾರಿ ಮಾಡಿಕೊಡಲಿವೆ.





