2024ರ ಕೇಂದ್ರ ಬಜೆಟ್ ಗ್ರಾಮೀಣ ಭಾರತ, ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸಬಹುದು. ಆದರೆ ಸಮಾಜ ಕಲ್ಯಾಣ ಕಾರ್ಯಗಳಿಗಾಗಿ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಗೋಲ್ಡ್‌ಮನ್ ಸ್ಯಾಕ್ಸ್‌ನ ಅರ್ಥಶಾಸ್ತ್ರಜ್ಞರು ಸೋಮವಾರ ತಿಳಿಸಿದ್ದಾರೆ.
2025ರ ಮಾರ್ಚ್‌ಗೆ ಕೊನೆಯಾಗುವ ಹಣಕಾಸು ವರ್ಷದ ಬಜೆಟ್ ಅನ್ನು ಜುಲೈ 23ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಕಳೆದ ವಾರಾಂತ್ಯದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಜಿಡಿಪಿಯ ಶೇಕಡ 5.1ರಷ್ಟು ಹಣಕಾಸಿನ ಕೊರತೆಯ ಗುರಿಯನ್ನು ನಿಗದಿಪಡಿಸಿದ್ದು 2024-25ನೇ ಸಾಲಿನ ಬಜೆಟ್‌ನಲ್ಲಿಯೂ ಇದೇ ಗುರಿಯನ್ನು ನಿಗದಿಪಡಿಸುವ ನಿರೀಕ್ಷೆಯಿದೆ. ಆದರೆ ಈ ಬಾರಿ ದೀರ್ಘಾವಧಿಯ ಆರ್ಥಿಕ ನೀತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಗೋಲ್ಡ್‌ಮನ್ ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2024-25 | ಜುಲೈ 23ರಂದು ಆಯವ್ಯಯ ಮಂಡನೆ
“ಕಾರ್ಮಿಕ ಉತ್ಪಾದನೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಸೌಲಭ್ಯ, ಸೇವಾ ರಫ್ತಿನ ಮೇಲೆ ಅಧಿಕ ಗಮನ, ದೇಶೀಯ ಆಹಾರ ಪೂರೈಕೆ ಸರಪಳಿಯ ಮೇಲೆ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಬಹುದು” ಎಂದು ವಾಲ್ ಸ್ಟ್ರೀಟ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸಂತನು ಸೇನ್ ಗುಪ್ತಾ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆದ್ದು ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ನಿರಾಶೆಯಾಗಿದೆ. ಬಹುಮತವನ್ನೂ ಕೂಡಾ ಪಡೆಯಲು ಸಾಧ್ಯವಾಗದೆ ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರವನ್ನು ರಚಿಸಿಕೊಂಡಿದೆ. ಪ್ರಬಲವಾದ ಇಂಡಿಯಾ ಒಕ್ಕೂಟದ ವಿಪಕ್ಷವು ಎನ್‌ಡಿಎ ಸರ್ಕಾರವನ್ನು ನಿರಂತರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ.
ಈದಿನ.ಕಾಮ್ ಸೇರಿದಂತೆ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿಯ ಈ ಹಿನ್ನೆಡೆಗೆ ನಿರುದ್ಯೋಗ, ಹಣದುಬ್ಬರ ಕಾರಣವಾಗಿದೆ. ಭಾರತದ ಆರ್ಥಿಕತೆಯು ಶೇಕಡ 7.2ರಷ್ಟು ವೇಗದಲ್ಲಿ ಬೆಳೆಯುತ್ತಿದ್ದರೂ ಕೂಡಾ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲವಾಗಿದೆ. ಜೊತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದೆ.