ನಾವು ಚೂರಲ್ಮಲಾದಲ್ಲಿ ಗ್ರಾಮಸ್ಥರೆಲ್ಲರೂ ದೊಡ್ಡ ಕುಟುಂಬವಾಗಿ ವಾಸಿಸುತ್ತಿದ್ದೆವು. ಆದರೆ, ಅರ್ಧದಷ್ಟು ಹಳ್ಳಿಗರು ಈಗ ಇಲ್ಲವಾಗಿದ್ದಾರೆ. ಚೂರಲ್ಮಲಾ ಇನ್ನೆಂದಿಗೂ ನಮಗೆ ಸಂತೋಷದ ಸ್ಥಳವಾಗದು ಎಂದು ಭೂಕುಸಿತದಿಂದ ಮನೆ ಕಳೆದುಕೊಂಡು, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜಮಾಲ್ ಕಣ್ಣೀರು ಹಾಕಿದ್ದಾರೆ.
ಮಂಗಳವಾರ ನಡು ರಾತ್ರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಎಸ್ಟೇಟ್ ಕಾರ್ಮಿಕನಾಗಿರುವ ಜಮಾಲ್ ತನ್ನ ಮನೆ ಮತ್ತು ಇತರ ಎಲ್ಲ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಮೆಪ್ಪಾಡಿಯ ಪರಿಹಾರ ಶಿಬಿರದಲ್ಲಿ ತಂಗಿರುವ ಅವರು, “ನಮ್ಮ ಕೈಯಲ್ಲಿ ಏನೂ ಇಲ್ಲ. ಭೂಕುಸಿತವು ಇಡೀ ಗ್ರಾಮವನ್ನು ಕೊಚ್ಚಿಕೊಂಡು ಹೋಗಿದೆ. 300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾನು ನನ್ನ ಎಲ್ಲ ವಸ್ತುಗಳನ್ನು ಕಳೆದುಕೊಂಡಿದ್ದರೂ, ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಉಳಿಸಿದ್ದಕ್ಕಾಗಿ ನಾನು ಅಲ್ಲಾಹನಿಗೆ ಕೃತಜ್ಞನಾಗಿದ್ದೇನೆ,” ಎಂದು ಆಂತಕ, ಹತಾಶೆ, ನೋವಿನಿಂದ ಹೇಳಿದ್ದಾರೆ.
ಮತ್ತೊಬ್ಬ ನಿವಾಸಿ ಪಾತುಮ್ಮ, “ನನ್ನ ಮನೆಗೆ ನೀರು ನುಗ್ಗಿದಾಗ ನಾನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದೆ. ನನ್ನ ಮಗ ಎಲ್ಲರನ್ನೂ ಹೊರಗೆ ಕರೆತಂದನು. ನಮ್ಮ ಕುಟುಂಬದವರು ಈಗ ಸುರಕ್ಷಿತವಾಗಿದ್ದೇವೆ. ಆದರೆ, ನಮ್ಮ ಗ್ರಾಮ ನಾಶವಾಗಿದೆ,” ಎಂದು ನೋವು ತೋಡಿಕೊಂಡರು.
ಭೂಕುಸಿತದಲ್ಲಿ ಕುಟುಂಬವು ಆಧಾರ್ ಕಾರ್ಡ್‌ಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದೆ. ಅಧಿಕಾರಿಗಳಿಗೆ ವಿವರ ನೀಡಲು ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಪಾತುಮ್ಮ ಹೇಳುತ್ತಾರೆ.
“ನಾವು ಪರಿಹಾರ ಶಿಬಿರದದಲ್ಲಿ 10 ದಿನ ಅಥವಾ ಅದಕ್ಕಿಂತ ಕೆಲ ಹೆಚ್ಚು ದಿನ ಇರಬಹುದು. ಆದರೆ, ನಂತರ ನಾವು ಎಲ್ಲಿಗೆ ಹೋಗುವುದೆಂದು ನನಗೆ ಗೊತ್ತಿಲ್ಲ. ನಮ್ಮ ಮನೆ ಹಾಳಾಗಿದೆ” ಎನ್ನುತ್ತಾರೆ ಪಾತುಮ್ಮ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಸ್ಪಿರಿಚುಯಲ್ ಟೂರಿಸಂ ಕುರಿತು ಮರು ಆಲೋಚಿಸುವ ಕಾಲ ಬಂದಿದೆ
ಜಮಾಲ್ ಮತ್ತು ಇತರ ಬದುಕುಳಿದ ಸಂತ್ರಸ್ತರಿಗೆ ಅವರ ಸ್ನೇಹಿತರು ಮತ್ತು ನೆರೆಹೊರೆಯವರ ಸಾವು ಹೆಚ್ಚು ನೋವುಂಟುಮಾಡಿದೆ. “ಮತ್ತು ಚೂರಲ್ಮಲಾಗೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ಚೂರಲ್ಮಲಾ ನನಗೆ ಮತ್ತೆ ಸಂತೋಷದ ಸ್ಥಳವಾಗುವುದಿಲ್ಲ. ನಾವು ನಮ್ಮ ನೆರೆಹೊರೆಯವರು, ನಮ್ಮ ಆತ್ಮೀಯರು ಮತ್ತು ಬಂಧುಗಳನ್ನು ಕಳೆದುಕೊಂಡಿದ್ದೇವೆ. ನಾವು ಹಿಂತಿರುಗಿದಾಗ ಅವರು ಇರುವುದಿಲ್ಲ. ಹಣ ಮತ್ತು ಮನೆಗಿಂತ ಹೆಚ್ಚಾಗಿ ನಮ್ಮ ಆತ್ಮೀಯರನ್ನು ಕಳೆದುಕೊಂಡಿರುವುದು ನನಗೆ ಹೆಚ್ಚು ನೋವು ತಂದಿದೆ,” ಎಂದು ಶಿಬಿರದಲ್ಲಿರುವವರು ಹೇಳುತ್ತಾರೆ.
2019ರಲ್ಲಿಯೂ ಭೂಕುಸಿತವಾದ ಮನೆ ಕಳೆದುಕೊಂಡಿದ್ದ ಪುತ್ತುಮಲ ನಿವಾಸಿ ಮುರುಕೇಶನ್ ಪರಿಹಾರ ಶಿಬಿರದಲ್ಲಿರುವ ಜನರಿಗೆ ಭರವಸೆ ಮತ್ತು ಸಾಂತ್ವನ ಹೇಳುತ್ತಿದ್ದಾರೆ. “2019ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾನು ನನ್ನ ಮನೆ ಮತ್ತು ವಸ್ತುಗಳನ್ನು ಕಳೆದುಕೊಂಡೆ. ನಾವು ಚಿಂತಿತರಾದೆವು. ಆದರೆ, ಸರ್ಕಾರ, ಸ್ನೇಹಿತರು ಹಾಗೂ ಇತರರ ನೆರವಿನಿಂದ ಎಲ್ಲವನ್ನೂ ಮತ್ತೆ ಕಟ್ಟಿಕೊಳ್ಳಲು ಸಾಧ್ಯವಾಯಿತು,” ಎನ್ನುತ್ತಾರೆ ಮುರುಕೇಶ.