ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ, ಬಳಿಕ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದ ದಿನವೇ ಮೃತಪಟ್ಟಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಈ ಪ್ರಕರಣವು ಈಗ ರಾಜ್ಯದ ಗಮನ ಸೆಳೆಯುತ್ತಿದ್ದು, ಹೊಸ ತಿರುವು ಪಡೆದುಕೊಂಡಿದೆ. “ನನ್ನ ಪತಿ, ಪಿಎಸ್‌ಐ ಪರಶುರಾಮ್ ಅವರ ಸಾವಿಗೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಸನ್ನೇ ಗೌಡ ಕಾರಣ” ಎಂದು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರಿಗೆ ದೂರು ಸಲ್ಲಿಸಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
“ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬೇಡಿಕೆ ಇಟ್ಟಿದ್ದರು. ಈಗ ನಿಯಮ ಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ” ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಪಿಎಸ್ಐ ಪರಶುರಾಮ ಕಳೆದ ಮೂರು ವರ್ಷಗಳಿಂದ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆ 2ರಂದು ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪಿಎಸ್ಐ ಪರಶುರಾಮ ಅವರ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಮತ್ತು ಪುತ್ರ ಸನ್ನೇ ಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
“ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ಗಾಗಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪರಶುರಾಮ 30 ಲಕ್ಷ ರೂ. ನೀಡಿ, ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದ ಪೂರೈಸುವ ಮುನ್ನವೇ ಪರಶುರಾಮ್ ಅವರನ್ನು ಮತ್ತೆ ಯಾದಗಿರಿ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು. ಪಿಎಸ್ಐ ಪರಶುರಾಮ ಸಾಲದ ಸುಳಿಗೆ ಸಿಲುಕಿದ್ದರು. ಪಿಎಸ್ಐ ಪರಶುರಾಮ್ ಶುಕ್ರವಾರ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಪೋನ್‌ನಲ್ಲಿ ಮಾತನಾಡಿದ್ದರು” ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಪರಶುರಾಮ್ ಪತ್ನಿ ಶ್ವೇತಾ, “ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕರು ಪೋಸ್ಟಿಂಗ್ ಕೊಟ್ಟಿಲ್ಲ. ಶಾಸಕರು ತಪ್ಪು ಮಾಡಿದ್ದಾರೆ. ಅವರು ಸ್ಥಳಕ್ಕೆ ಬರಬೇಕು” ಎಂದು ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಒತ್ತಾಯಿಸಿದ್ದಾರೆ.
“ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿ ಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿ ಪೂರ್ವ ವರ್ಗಾವಣೆಯಿಂದ ಪಿಎಸ್ಐ ಪರಶುರಾಮ ನೊಂದಿದ್ದರು. ಏಳು ತಿಂಗಳ ಅವಧಿಯಲ್ಲಿ ಶಾಸಕರು ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ. ವರ್ಗಾವಣೆ ಮಾಡುತ್ತಿರುವುದು ಸಿಎಂ, ಗೃಹ ಸಚಿವರ ಗಮನಕ್ಕೆ ಬರಲಿಲ್ವಾ?” ಎಂದು ಮೃತ ಪಿಎಸ್ಐ ಪರಶುರಾಮ ಮಾವ ವೆಂಕಟಸ್ವಾಮಿ ಗಂಭೀರ ಆರೋಪ ಮಾಡಿದರು.
“ಪೋಸ್ಟಿಂಗ್‌ಗಾಗಿ ನನ್ನ ಅಳಿಯನಿಗೆ ಕಾಂಗ್ರೆಸ್ ಶಾಸಕರು ಹಣ ಕೇಳಿದರು. ಹೆಚ್ಚು ಹಣ ಕೊಟ್ಟವರಿಗೆ ಪೋಸ್ಟಿಂಗ್ ಕೊಡಿಸುವ ಕೆಲಸ ಮಾಡಿದ್ದಾರೆ. ಅವರಿಗಿಂತ ಪರಶುರಾಮ್ ಹಣ ಜಾಸ್ತಿ ಕೊಟ್ಟಿದ್ದರೆ ಅವರಿಗೆ ಪೋಸ್ಟಿಂಗ್ ಆಗುತ್ತಿತ್ತು. ಯಾದಗಿರಿ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳನ್ನು ಹರಾಜಿಗೆ ಇಟ್ಟಿದ್ದಾರೆ” ಎಂದು ಕಿಡಿಕಾರಿದರು.
ದಲಿತ ಸಂಘಟನೆಗಳಿಂದ ಪ್ರತಿಭಟನೆ
ತಪ್ಪಿತಸ್ಥ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗ ಸನ್ನೇಗೌಡರನ್ನು ಕೂಡಲೇ ಬಂಧಿಸುವಂತೆ ವಿವಿಧ ದಲಿತ ಪರ ಸಂಘಟನೆಗಳು ಮತ್ತು ಮೃತ ಪಿಎಸ್ಐ ಪರಶುರಾಮ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಘಟನೆ ನಡೆದು 16 ಗಂಟೆಯಾದರೂ ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದಿರುವ ಪ್ರತಿಭಟನಾಕಾರರು, ಖಾಸಗಿ ಆಸ್ಪತ್ರೆಯಿಂದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸುವಾಗ ಆ್ಯಂಬುಲೆನ್ಸ್ ತಡೆದಿದ್ದಾರೆ.
ದಿಢೀರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳದಲ್ಲಿ ಎಸ್‌ಪಿ ಸಂಗೀತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವರದಿ: ಗೀತಾ ಹೊಸಮನಿ