ಸಂಶೋಧನಾ ವಿದ್ಯಾರ್ಥಿಯೊಬ್ಬರು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾಗ ವಿಶ್ವವಿದ್ಯಾಲಯ ಒಳಗಡೆ ಪ್ರವೇಶ ನೀಡದೆ, ಜಾತಿ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆಳಂದ ತಾಲೂಕಿನ ನರೋಣ ಪೊಲೀಸ್ ಠಾಣೆಯಲ್ಲಿ ಸಿಯುಕೆ ಕುಲಪತಿ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಕುಲ ಸಚಿವ ಹಾಗೂ ಭದ್ರತಾ ಅಧಿಕಾರಿ ವಿರುದ್ಧ ಕನ್ನಡ ವಿಭಾಗದಲ್ಲಿ ಸಂಶೋಧನೆ ಮಾಡಿರುವ ನಂದಪ್ಪ ಪರಮಣ್ಣ ದೂರು ದಾಖಲಿಸಿದ್ದಾರೆ.
ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಯಾಗಿದ್ದ ನಂದಪ್ಪ ಅವರಿಗೆ ವಿಭಾಗದ ವತಿಯಿಂದ ಗುರುವಾರ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು. ಅದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಬಂದಾಗ ಅವರನ್ನು ಮುಖ್ಯದ್ವಾರದಲ್ಲಿಯೇ ತಡೆಯಲಾಯಿತು. ಏಕೆ ಎಂದು ಕೇಳಿದಾಗ ಪ್ರೊ.ಬಟ್ಟು ಸತ್ಯಾನಾರಾಯಣ, ಕುಲ ಸಚಿವ ಪ್ರೊ. ಆರ್.ಆರ್.ಬಿರಾದರ್ ಅವರ ನಿರ್ದೇಶನದ ಮೇರೆಗೆ ಒಳಗೆ ಬಿಡುತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ವರ್ಗಾವಣೆಗೊಂಡು ಬೀಳ್ಕೊಡುಗೆ ಸ್ವೀಕರಿಸಿದ್ದ ಪಿಎಸ್‌ಐ ಹೃದಯಾಘಾತದಿಂದ ನಿಧನ
ʼಈ ಹಿಂದೆಯೂ ಕೂಡ ಪರಿಶಿಷ್ಠ ಜಾತಿಗೆ ಸೇರಿದವನೆಂಬ ಕಾರಣಕ್ಕಾಗಿ ಅನೇಕ ರೀತಿಯ ಕಿರುಕುಳ ನೀಡಿದ್ದಾರೆ, ನನ್ನ ಪಿ.ಎಚ್.ಡಿ. ರದ್ದುಗೊಳಿಸಿದರು. ನಾನು ದಲಿತ ವಿದ್ಯಾರ್ಥಿ ಎಂಬ ಕಾರಣಕ್ಕಾಗಿಯೇ ಈ ರೀತಿಯ ಕಿರುಕುಳ ನೀಡುತ್ತಿದ್ದಾರೆ. ಈ ರೀತಿಯ ಸಾಮೂಹಿಕ ಬಹಿಷ್ಕಾರ, ಜಾತಿ ತಾರತಮ್ಯ ತೋರುತ್ತಿರುವ ಸಿಯುಕೆ ಕುಲಪತಿ, ಕುಲ ಸಚಿವ ಹಾಗೂ ಸಂಬಂಧಿಸಿದ ಇತರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆʼ ದೂರಿನ ಮೂಲಕ ಮನವಿ ಮಾಡಿದ್ದಾರೆ.