ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದಲ್ಲಿ ಮತದಾನ ಆರಂಭವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಅದರ ಪ್ರಬಲ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ (BJP) ಚುನಾವಣಾ ಭವಿಷ್ಯವನ್ನು ನಿರ್ಧರಿಸುವ ಈ ಹೈ-ವೋಲ್ಟೇಜ್ ಸ್ಪರ್ಧೆಗೆ ಚಾಲನೆ ಸಿಕ್ಕಿದೆ. ಉಳಿದ 142 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ಏಪ್ರಿಲ್ 29 ರಂದು ನಡೆಯಲಿದೆ.
ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಪ್ರಾದೇಶಿಕವಾಗಿಯೂ ಈ ಮೊದಲ ಹಂತದ ಚುನಾವಣೆ ಕುತೂಹಲಕಾರಿಯಾಗಿದೆ. 152 ಕ್ಷೇತ್ರಗಳ ಪೈಕಿ 54 ಕ್ಷೇತ್ರಗಳು ಉತ್ತರ ಬಂಗಾಳದ ಜಿಲ್ಲೆಗಳಾದ ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್ಪೈಗುರಿ, ಅಲಿಪುರ್ದುವಾರ್, ಕೂಚ್ ಬೆಹಾರ್, ಉತ್ತರ ದಿನಾಜ್ಪುರ, ದಕ್ಷಿಣ ದಿನಾಜ್ಪುರ ಮತ್ತು ಮಾಲ್ಡಾದಲ್ಲಿವೆ. ಇವು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿವೆ. ಇನ್ನುಳಿದ 98 ಕ್ಷೇತ್ರಗಳು ಮುರ್ಷಿದಾಬಾದ್, ಪೂರ್ವ ಮಿಡ್ನಾಪುರ, ಪಶ್ಚಿಮ ಮಿಡ್ನಾಪುರ, ಝಾರ್ಗ್ರಾಮ್, ಪುರುಲಿಯಾ, ಬಂಕುರಾ, ಪಶ್ಚಿಮ ಬರ್ಧಮಾನ್ ಮತ್ತು ಬೀರ್ಭೂಮ್ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಇವು ದೀರ್ಘಕಾಲದಿಂದ ತೃಣಮೂಲ ಕಾಂಗ್ರೆಸ್ನ ಭದ್ರಕೋಟೆಗಳಾಗಿವೆ. ಈ ಮೊದಲ ಹಂತದ ಚುನಾವಣೆ ಕಾಂಗ್ರೆಸ್ ಮತ್ತು ಎಡ ರಂಗದ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ನಂತರದ ಮತದಾರರ ಪಟ್ಟಿಯಿಂದ 91 ಲಕ್ಷ ಮತದಾರರನ್ನು ಅಳಿಸಿಹಾಕಲಾಗಿದೆ. ಕೇಂದ್ರ ಚುನಾವಣಾ ಆಯೋಗ ನಡೆಸಿದ ಎಸ್ಐಆರ್, ಆಡಳಿತಾರೂಢ ಪಕ್ಷದ ಭ್ರಷ್ಟಾಚಾರ, ಹಗರಣಗಳು, ಮಹಿಳಾ ಪರ ಯೋಜನೆಗಳು, ಒಳನುಸುಳುವಿಕೆ ಮತ್ತು ಬುಡಕಟ್ಟು ಜನಾಂಗದವರ ಅಸಮಾಧಾನ, ಅಲ್ಪ ಸಂಖ್ಯಾತ ಮತದರಾರ ಒಟ್ಟುಗೂಡುವಿಕೆಯಂತಹ ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ರಾಜಕೀಯವಾಗಿ ಪ್ರಭಾವ ಬೀರುವ ಸಾಧ್ಯತೆ ಇದೆ.
ಈ ಹಂತದಲ್ಲಿ 1.75 ಕೋಟಿ ಮಹಿಳೆಯರು ಸೇರಿದಂತೆ 3.60 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣಾ ಆಯೋಗ ದಾಖಲೆಯ 2,450 ಕೇಂದ್ರ ಪಡೆಗಳ ಕಂಪನಿಗಳನ್ನು ನಿಯೋಜಿಸಿದ್ದು, 8,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಿದೆ. ಪ್ರತಿ ಕಂಪನಿಯು 75 ಸಿಬ್ಬಂದಿಯನ್ನು ಒಳಗೊಂಡಿದೆ.
ಬಿಜೆಪಿಗೆ ಕಳೆದ 2019 ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಪೂರಕ ಫಲಿತಾಂಶ ಈ ಮೊದಲ ಹಂತದ ಕ್ಷೇತ್ರಗಳಿಂದ ಬಂದಿದ್ದರಿಂದ ಟಿಎಂಸಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಇನ್ನು, 2021ರ ವಿಧಾನಸಭಾ ಚುನಾವಣಾ ಫಲಿತಾಂಶದ ಗೆಲುವಿನ ಅಂತರಕ್ಕಿಂತ ಎಸ್ಐಆರ್ ಪ್ರಕ್ರಿಯೆಯ ಮೂಲಕ ಅಳಿಸಿ ಹಾಕಿದ ಮತದಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳು ಈ ಮೊದಲ ಹಂತದಲ್ಲಿ ಚುನಾವಣೆಯನ್ನು ಎದುರಿಸಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.
2021ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಈ 152 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳನ್ನು ಗೆದ್ದಿತ್ತು, ಟಿಎಂಸಿ 93 ಕ್ಷೇತ್ರಗಳಲ್ಲಿ ಗೆದ್ದಿತ್ತು. ಮಮತಾ ಬ್ಯಾನರ್ಜಿ ಅವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸುವಂತೆ ಮಾಡುವುದಕ್ಕೆ ಬಿಜೆಪಿ ಎಲ್ಲಾ ರೀತಿಯಲ್ಲಿ ಹರಸಾಹಸ ಪಡುತ್ತಿದೆ. ಈ ಮೊದಲ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವ ಕ್ಷೇತ್ರಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ : ಸಿದ್ದರಾಮಯ್ಯ: ‘ಹಠವಾದಿ’ಯಿಂದ ‘ರಾಜಿ’ ರಾಜಕಾರಣದತ್ತ?
ನೋಟಾಗೆ ಹೆಚ್ಚು ಮತ ಚಲಾಯಿಸಿದ ಕ್ಷೇತ್ರಗಳು (2021)
2021ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 14 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ʼನೋಟಾʼಗೆ ಚಲಾವಣೆಯಾದ ಮತಗಳೇ ಹೆಚ್ಚಿವೆ ಎನ್ನುವುದು ಕೂಡ ಉಲ್ಲೇಖನೀಯ.
ಜಲ್ಪೈಗುರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಡಾ. ಪ್ರದೀಪ್ ಕುಮಾರ್(ಟಿಎಂಸಿ) 2021ರ ವಿಧಾನಸಭಾ ಚುನಾವಣೆಯಲ್ಲಿ 941 ಮತಗಳಿಂದ(ಒಟ್ಟು ಮತ 95,668) ಗೆಲುವು ಸಾಧಿಸಿದ್ದರು. 3381 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ರಾಣಿಬಂದ್ ವಿಧಾನಸಭಾ ಕ್ಷೇತ್ರದ ಹಾಲ ಶಾಸಕ ಜೋತ್ಸ್ನಾ ಮಾಂಡಿ(ಟಿಎಂಸಿ) 3939 ಮತಗಳ (ಒಟ್ಟು ಮತ 90,928) ಅಂತರದಿಂದ ಗೆಲುವು ಸಾಧಿಸಿದ್ದರು. 4,226 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಬಂಕುರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ನೀಲಾದ್ರಿ ಶೇಖರ್ 1468 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 4507 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಬರ್ಜೋರಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಹಾಲಿ ಶಾಸಕ ಅಲೋಕ್ ಮುಖರ್ಜಿ 2021ರ ವಿಧಾನಸಭಾ ಚುನಾವಣೆಯಲ್ಲಿ 3269 ಮತಗಳ ಅಂತರದಿಂದ ಗೆದ್ದಿದ್ದರು(ಒಟ್ಟು ಮತ 93,290) 4903 ಮತಗಳು ಈ ಕ್ಷೇತ್ರದಲ್ಲಿ ʼನೋಟಾʼಗೆ ಚಲಾವಣೆಯಾಗಿದ್ದವು.
ತಮ್ಲುಕ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಶಾಸಕ ಸೌಮೇನ್ ಕುಮಾರ್ 793 ಮತಗಳ ಅಂತರದಲ್ಲಿ ಗೆದ್ದಿದ್ದರು (ಒಟ್ಟು ಮತ 1,08,243). 1136 ಮತಗಳು ʼನೋಟಾʼಗೆ ಚಲಾವಣೆಯಾಗಿತ್ತು.
ಕುಲ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಅಜಯ್ ಕುಮಾರ್ 679 ಮತಗಳಿಂದ 2021ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು(ಒಟ್ಟು ಮತ 81112). 3553 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಮೊಯ್ನಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಶೋಕ್ ದಿಂಡಾ 1260 ಮತಗಳ ಅಂತರದಲ್ಲಿ ಗೆದ್ದಿದ್ದರು(ಒಟ್ಟು ಮತ 108109). 1335 ಮತಗಳು ಈ ಕ್ಷೇತ್ರದಲ್ಲಿ ʼನೋಟಾʼಗೆ ಚಲಾವಣೆಯಾಗಿದ್ದವು.
ತಪನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಂದುರಾಜ್ 1650 ಮತಗಳ ಅಂತರದಲ್ಲಿ ಗೆದ್ದಿದ್ದರು(84381 ಒಟ್ಟು ಮತಗಳು). 1703 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ದಂತನ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯ ಬಿಕ್ರಂ ಚಂದ್ರ ಪ್ರಧಾನ್ 623 ಮತಗಳ ಅಂತರದಲ್ಲಿ ಗೆದ್ದಿದ್ದರು (95209 ಒಟ್ಟು ಮತಗಳು). 1250 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಮುರ್ಷಿದಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೌರಿ ಶಂಕರ್ ಘೋಷ್ 2491 ಮತಗಳ ಅಂತರದಿಂದ ಗೆದ್ದಿದ್ದರು (ಒಟ್ಟು ಮತಗಳು). 2904 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಘಾಟಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಿತಾಲ್ ಕಾಪಟ್ 966 ಮತಗಳಿಂದ ಗೆದ್ದಿದ್ದರು (105812 ಒಟ್ಟು ಮತಗಳು). 1305 ಮತಗಳು ಈ ವಿಧಾನಸಭಾ ಕ್ಷೇತ್ರದಲ್ಲಿ ʼನೋಟಾʼಗೆ ಚಲಾವಣೆಯಾಗಿತ್ತು.
ದಿನಹಾಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಿತೀಶ್ ಪ್ರಾಮಾಣಿಕ್ ಕೇವಲ 57 ಮತಗಳ ಅಂತರದಲ್ಲಿ ಗೆದ್ದಿದ್ದರು (116035 ಒಟ್ಟು ಮತಗಳು) 1537 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಬಲರಾಮ್ಪುರ ವಿಧಾನಸಭಾ ಕ್ಷೇತ್ರದ 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬನೇಸ್ವರ್ ಮಹಾಟೋ 423 ಮತಗಳಿಂದ ಗೆದ್ದಿದ್ದರು (89521 ಒಟ್ಟು ಮತಗಳು). 2441 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಕಲ್ಯಾಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಂಬಿಕಾ ರಾಯ್ 2206 ಮತಗಳಿಂದ ಗೆದ್ದಿದ್ದರು(97026 ಒಟ್ಟು ಮತಗಳು). 2577 ಮತಗಳು ʼನೋಟಾʼಗೆ ಚಲಾವಣೆಯಾಗಿದ್ದವು.
ಇದನ್ನೂ ಓದಿ : ಮಹಿಳಾ ಮೀಸಲಾತಿ | ಧ್ವನಿ ಕಳೆದುಕೊಂಡ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ!
ಇನ್ನು, ಎಸ್ಐಆರ್ ಪ್ರಕ್ರಿಯೆಗಳ ಮೂಲಕ ಎಂಟು ಉತ್ತರ ಬಂಗಾಳ ಜಿಲ್ಲೆಗಳು ಮತ್ತು ಮುರ್ಷಿದಾಬಾದ್ನಲ್ಲಿ ಅಳಿಸಲಾದ ಮತದಾರರಲ್ಲಿ ಸುಮಾರು ಶೇ.70ರಷ್ಟು ಮುಸ್ಲಿಮರಾಗಿದ್ದಾರೆ. ನಾಡಿಯಾದಲ್ಲಿ 4.85 ಲಕ್ಷಕ್ಕೂ ಹೆಚ್ಚು, ಮಾಲ್ಡಾದಲ್ಲಿ 4.59 ಲಕ್ಷ, ಉತ್ತರ ದಿನಾಜ್ಪುರದಲ್ಲಿ 3.63 ಲಕ್ಷ ಮತ್ತು ಕೂಚ್ ಬೆಹಾರ್ನಲ್ಲಿ 2.42 ಲಕ್ಷ ಮತದಾರರ ಹೆಸರನ್ನು ಅಳಿಸಲಾಗದೆ. 2021ರ ವಿಧಾನಸಭಾ ಚುನಾವಣೆಯಲ್ಲಿ, ಟಿಎಂಸಿ ಈ 152 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು 20,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿತ್ತು. ಈ ಎಸ್ಐಆರ್ ಪ್ರಕ್ರಿಯೆಯೂ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವಿಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಮೊದಲ ಹಂತ ಸುವೇಂದು ಅಧಿಕಾರಿ, ದಿಲೀಪ್ ಘೋಷ್, ಬೆಹ್ರಾಂಪೋರ್ನ ಮಾಜಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವಾರು ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧರಿಸುತ್ತದೆ.





