ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಾತ್ರಿಯ ನಮಾಝ್ ಮಾಡುವಾಗ ಹಲವಾರು ವಿದೇಶಿ ವಿದ್ಯಾರ್ಥಿಗಳನ್ನು ಥಳಿಸಿ, ಹಲ್ಲೆ ನಡೆಸಿದ ಆರೋಪಿಗಳನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ.
ಅಹಮದಾಬಾದ್ ಪೊಲೀಸರು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಮತ್ತು ಹಾಸ್ಟೆಲ್ ಕೊಠಡಿಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಅಪರಾಧ ವಿಭಾಗವು ಇಬ್ಬರನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಹಿತೇಶ್ ರಖುಭಾಯಿ ಮೇವಾಡ ಹಾಗೂ ಭಾರತ ದಾಮೋದರಭಾಯ್ ಪಟೇಲ್ ಎಂದು ಗುರುತಿಸಲಾಗಿದೆ.
“ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ಗುಜರಾತ್ ವಿಶ್ವವಿದ್ಯಾಲಯದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಗುಜರಾತ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 16/03/2024 ರಂದು ನಡೆದ ಘಟನೆಯ ಆರೋಪಿಗಳನ್ನು ಬಂಧಿಸಿದೆ” ಎಂದು ಆರೋಪಿಯ ಫೋಟೋಗಳನ್ನು ಹಂಚಿಕೊಂಡಿದೆ.
ಏನಿದು ಘಟನೆ?
ಶನಿವಾರ ತಡರಾತ್ರಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಐವರು ವಿದೇಶಿ ವಿದ್ಯಾರ್ಥಿಗಳು ತಾವು ತಂಗಿದ್ದ ಕೊಠಡಿಯಲ್ಲಿ ನಮಾಝ್ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. 20ಕ್ಕಿಂತ ಹೆಚ್ಚಿನ ಜನರ ಗುಂಪು ಆವರಣಕ್ಕೆ ನುಗ್ಗಿ ಜೈಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರಿಂದ ಎರಡು ಗುಂಪುಗಳ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು.
ಉಜ್ಬೇಕಿಸ್ತಾನ್, ಅಫ್ಘಾನಿಸ್ತಾನ್, ತಜಕಿಸ್ತಾನ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ಐವರು ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದರು. ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಷಯವನ್ನು ತಿಳಿಯುತ್ತಿದ್ದಂತೆ ಪೊಲೀಸರು 20-25 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಘಟನೆಯ ತನಿಖೆಗಾಗಿ ಒಂಬತ್ತು ತಂಡಗಳನ್ನು ರಚಿಸಿದ್ದರು.
ಇದನ್ನು ಓದಿದ್ದೀರಾ? ಗುಜರಾತ್ | ಹಾಸ್ಟೆಲ್‌ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ; ನೋಡುತ್ತಾ ನಿಂತ ಪೊಲೀಸರು!
ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವಿಷಯವನ್ನು ಕೈಗೆತ್ತಿಕೊಂಡಿದೆ ಮತ್ತು ಗುಜರಾತ್ ಸರ್ಕಾರವು ಹಿಂಸಾಚಾರದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಘಟನೆಯ ಕುರಿತು ಹೇಳಿಕೆ ನೀಡಿದ್ದರು.
