ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹೊಳೆಯೊಂದರಿಂದ 23 ವರ್ಷದ ಕಾರ್ಮಿಕನ ಶವ ಪತ್ತೆಯಾಗಿದೆ. ಈ ಯುವಕನನ್ನು ಕೆಲವು ದಿನಗಳ ಹಿಂದೆ ಸೇನೆ ಬಂಧಿಸಿತ್ತು. ಇದೀಗ ಯುವಕನ ಮೃತದೇಹ ಪತ್ತೆಯಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ವಿರೋಧ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಸಿಪಿಐಎಂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
ಮೃತನನ್ನು ಇಮ್ತಿಯಾಝ್ ಅಹ್ಮದ್ ಮಗ್ರೆ ಎಂದು ಗುರುತಿಸಲಾಗಿದೆ. ಇಮ್ತಿಯಾಝ್ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳ ಹೇಳುವ ಪ್ರಕಾರ ಯುವಕನನ್ನು ಹಲವು ದಿನಗಳ ಹಿಂದೆ ಸೇನೆ ವಶಕ್ಕೆ ಪಡೆದುಕೊಂಡಿತ್ತು.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕಾಶ್ಮೀರ ಬುಕಿಂಗ್ ರದ್ದು ಮಾಡಿ ಹಿಮಾಚಲಕ್ಕೆ ತಿರುಗಿದ ಪ್ರವಾಸಿಗರು
ಭಾನುವಾರ ಯುವಕನ ಶವವನ್ನು ಕುಲ್ಗಾಮ್ ಹೊಳೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆದರೆ ಈ ಘಟನೆಯು ಕಸ್ಟಡಿಯಲ್ಲಿರುವವರ ಮೇಲೆ ದೌರ್ಜನ್ಯ ನಡೆಯುವ ಆರೋಪದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, “ಕುಲ್ಗಾಮ್ನ ನದಿಯಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಬಳಿಕ ಗಂಭೀರ ಆರೋಪಗಳು ಕೇಳಿಬಂದಿದೆ. ಇಮ್ತಿಯಾಝ್ ಮಗ್ರೆ ಅವರನ್ನು ಎರಡು ದಿನಗಳ ಹಿಂದೆ ಸೇನೆಯು ವಶಕ್ಕೆ ಪಡೆದುಕೊಂಡಿತ್ತು. ಈಗ ನಿಗೂಢವಾಗಿ ಅವರ ಶವ ನದಿಯಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಹಾಗೆಯೇ ಭದ್ರತಾ ಬೆದರಿಕೆ ಮತ್ತು ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. “ಒಂದು ಹಿಂಸಾಚಾರದ ಕೃತ್ಯವು ಇಡೀ ವ್ಯವಸ್ಥೆಯನ್ನು ಅಲುಗಾಡಿಸಬಹುದಾದರೆ, ಹಲವು ಬಂಧನ, ಮನೆ ಧ್ವಂಸ, ಮುಗ್ಧ ನಾಗರಿಕರ ಮೇಲೆ ಗುರಿಯಾಗಿಸುವುದು ಮೊದಲಾದವುಗಳಿಗೆ ಕಾರಣವಾದರೆ, ಅಪರಾಧಿಗಳು ಈಗಾಗಲೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ ಎಂದರ್ಥ” ಎಂದೂ ಹೇಳಿದ್ದಾರೆ.
Yet another body has been recovered from a river in Kulgam raising serious allegations of foul play. Local residents allege that Imtiyaz Magray was picked up by the army two days ago and now mysteriously his body has surfaced in the river.
— Mehbooba Mufti (@MehboobaMufti) May 4, 2025
The recent terrorist attack in Pahalgam… https://t.co/z2q3OJPa7m
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಘೋಷಿಸಿದ ಜಮ್ಮು ಕಾಶ್ಮೀರ ಸರ್ಕಾರ
ಸ್ವತಂತ್ರ ತನಿಖೆಗೆ ಕರೆ ನೀಡಿದ ಮೆಹಬೂಬಾ, “ಬಂಡಿಪೋರಾ ಎನ್ಕೌಂಟರ್ನಲ್ಲಿ ಅಥವಾ ಕುಲ್ಗಾಮ್ನಲ್ಲಿ ನಡೆದ ಈ ಇತ್ತೀಚಿನ ಘಟನೆಯಲ್ಲಿ ದುಷ್ಕೃತ್ಯದ ಆರೋಪಗಳು ತೀವ್ರ ಕಳವಳಕಾರಿ. ಈ ಘಟನೆ ಬಗ್ಗೆ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಆಡಳಿತಾರೂಢ ಎನ್ಸಿ ನಾಯಕಿ ಮತ್ತು ಸಂಸದೆ ಅಗಾ ರುಹುಲ್ಲಾ ಮೆಹ್ದಿ ಕೂಡ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಕುಲ್ಗಾಮ್ನ ಹೊಳೆಯಲ್ಲಿ 22 ವರ್ಷದ ಇಮ್ತಿಯಾಝ್ ಅಹ್ಮದ್ ಮಗ್ರೆ ಅವರ ಮೃತದೇಹ ಪತ್ತೆಯಾಗಿರುವುದು ನನಗೆ ತೀವ್ರ ಆತಂಕವನ್ನುಂಟು ಮಾಡಿದೆ. ವಿಶ್ವಾಸಾರ್ಹ ವರದಿಗಳ ಪ್ರಕಾರ, ಇಮ್ತಿಯಾಝ್ ಅವರನ್ನು ಕೆಲವು ದಿನಗಳ ಹಿಂದೆ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದೆ. ಈಗ ಇಮ್ತಿಯಾಝ್ ಅವರನ್ನು ನಿರ್ಜೀವವಾಗಿ ಅವರ ಕುಟುಂಬಕ್ಕೆ ಹಿಂತಿರುಗಿಸಲಾಗಿದೆ” ಎಂದಿದ್ದಾರೆ.
“ಕುಪ್ವಾರಾ ಮತ್ತು ಬಾರಾಮುಲ್ಲಾದಲ್ಲಿ ಇದೇ ರೀತಿಯ ಘಟನೆ ನಡೆದಿರುವ ಆರೋಪಗಳು ಕೇಳಿಬಂದಿದೆ. ಇದೀಗ ಕುಲ್ಗಾಮ್ನಲ್ಲಿಯೂ ಅದೇ ರೀತಿ ನಡೆದಿದೆ. ತಮ್ಮ ಬಲವನ್ನು ದುರುಪಯೋಗ ಮಾಡುತ್ತಿರುವಂತೆ ಕಂಡುಬರುತ್ತಿದೆ. ಈ ಬಗ್ಗೆ ತ್ವರಿತ ಮತ್ತು ಸ್ವತಂತ್ರ ತನಿಖೆ ಅತ್ಯಗತ್ಯ” ಎಂದು ಆಗ್ರಹಿಸಿದ್ದಾರೆ.
ಸಿಪಿಎಂ ನಾಯಕ ಮತ್ತು ಶಾಸಕ ಕುಲ್ಗಾಮ್ ಮೊಹಮ್ಮದ್ ಯೂಸುಫ್ ತಾರಿಗಾಮಿ ಕೂಡ ಸಮಗ್ರ ತನಿಖೆಗೆ ಕರೆ ನೀಡಿದ್ದಾರೆ. “ಕುಲ್ಗಾಮ್ನ ಹೊಳೆಯಲ್ಲಿ ಇಮ್ತಿಯಾಝ್ ಅವರ ಶವ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಸೇನೆ ಅವರನ್ನು ಎತ್ತಿಕೊಂಡು ಹೋಗಿದ್ದು, ಇದೀಗ ನಿಗೂಢವಾಗಿ ಅವರು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿವೆ” ಎಂದು ಹೇಳಿದ್ದಾರೆ. ಹಾಗೆಯೇ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.
ಆದರೆ ಅಧಿಕಾರಿಗಳು ಭಯೋತ್ಪಾದಕ ಅಡಗುತಾಣಕ್ಕೆ ಕರೆದೊಯ್ಯು ಇಮ್ತಿಯಾಝ್ ನದಿಗೆ ಹಾರಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಟ್ಯಾಂಗ್ಮಾರ್ಗ್ ಕಾಡಿನಲ್ಲಿ ಭದ್ರತಾ ಪಡೆಗಳು ಮೊದಲ ಭಯೋತ್ಪಾದಕ ಅಡಗುತಾಣವನ್ನು ಪತ್ತೆ ಮಾಡಿದೆ. ಆ ಅಡಗುತಾಣ ಅವನಿಗೆ ತಿಳಿದಿತ್ತು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
