‘ಹತ್ತು ನಿಮಿಷದ ಆಝಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ನಿಮ್ಮ ಡಿಜೆ, ಭಜನೆಗಳ ಕತೆ ಏನು?’ ಹೀಗಂತ ಪ್ರಶ್ನಿಸಿದ್ದು ಗುಜರಾತ್ ಹೈಕೋರ್ಟ್.
“ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಆಝಾನ್ ಕರೆ ನೀಡಿದ ಮಾತ್ರಕ್ಕೆ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ” ಎಂದು ಗುಜರಾತ್ ಹೈಕೋರ್ಟ್ ಹೇಳಿರುವುದಾಗಿ ‘ಬಾರ್ & ಬೆಂಚ್’ ವರದಿ ಮಾಡಿದೆ.
ಮಸೀದಿಗಳಲ್ಲಿ ಆಝಾನ್ ನೀಡಲು ಬಳಸಲಾಗುವ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯವಾಗುತ್ತಿದೆ. ಹಾಗಾಗಿ, ಅದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಗುಜರಾತ್ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿತು.
“ಧ್ವನಿವರ್ಧಕಗಳ ಮೂಲಕ ಹೊರಡಿಸಲಾಗುವ ಮನುಷ್ಯ ಧ್ವನಿಯು ಅನುಮತಿಸಲಾದ ಮಿತಿಯನ್ನು ಮೀರುತ್ತಿದೆ ಎಂಬುದನ್ನು ಸಾಬೀತುಪಡಿಸಲು ಪಿಐಎಲ್ ಸಲ್ಲಿಸಿದವರಿಗೆ ಸಾಧ್ಯವಾಗಿಲ್ಲ. ಇದು ಸಂಪೂರ್ಣ ತಪ್ಪು ತಿಳಿವಳಿಕೆಯಿಂದ ಕೂಡಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯಿ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸುತ್ತಾ ಉಲ್ಲೇಖಿಸಿದೆ.
If 10 mins of Azaan causes noise pollution, what about loud music, bhajan in temples? Gujarat High Court rejects PIL against Azaan
Read full story: https://t.co/xFzcMUAY7y pic.twitter.com/cI0JkPcO94
— Bar & Bench (@barandbench) November 29, 2023
‘ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ತೊಂದರೆ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅವುಗಳಿಗೆ ನಿಷೇಧ ಹೇರಬೇಕು’ ಎಂದು ವೃತ್ತಿಯಲ್ಲಿ ವೈದ್ಯರೆಂದು ಹೇಳಿಕೊಂಡಿರುವ ಧರ್ಮೇಂದ್ರ ಪ್ರಜಾಪತಿ ಎಂಬುವವರು ಗುಜರಾತ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪೀಠ, ‘ಅರ್ಜಿದಾರರು ಯಾವ ಆಧಾರದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎನ್ನುತ್ತಿದ್ದಾರೆ’ ಎಂದು ಪ್ರಶ್ನಿಸಿತು. ಅಲ್ಲದೇ ಇದೇ ವೇಳೆ, “ವಿಪರೀತ ಶಬ್ದಮಾಲಿನ್ಯ ಉಂಟು ಮಾಡುವ ನಿಮ್ಮ ಡಿಜೆ ಬಗ್ಗೆ ಏನು ಹೇಳುತ್ತೀರಿ? ಅದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆಯಲ್ಲವೇ? ನಾವು ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಆಝಾನ್ ಧಾರ್ಮಿಕ ನಂಬಿಕೆಯಾಗಿದ್ದು ವರ್ಷಗಳಿಂದ ನಡೆದುಕೊಂಡು ಬಂದಿದೆ. ಒಂದು ದಿನದಲ್ಲಿ ಐದು ಬಾರಿ ಕೂಗುವ ಅದಕ್ಕೆ(ಆಝಾನ್) 10 ನಿಮಿಷವೂ ಹಿಡಿಯದು” ಎಂಬುದನ್ನು ಹೈಕೋರ್ಟ್ ಉಲ್ಲೇಖಿಸಿತು.
Azaan is faith and practice going on for years together. It is not even for 10 minutes (a day). What about your DJ? That creates a lot of pollution: Gujarat High Court rejects PIL which alleged Azaan causes noise pollution
Read story: https://t.co/xFzcMUAY7y pic.twitter.com/8XrrI8PLiA
— Bar & Bench (@barandbench) November 29, 2023
ದೇವಾಲಯಗಳ ಆರತಿಗಿಂತಲೂ ಆಝಾನ್ ದಿನಕ್ಕೆ ಐದು ಬಾರಿ ನಡೆಯುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆಗ ನ್ಯಾಯಾಲಯವು, “ದೇವಾಲಯಗಳಲ್ಲಿ ಆರತಿಯೊಂದಿಗೆ ಬಡಿಯುವ ಘಂಟೆ, ಡೋಲು ಮತ್ತಿತರ ವಾದ್ಯಘೋಷಗಳು, ಭಜನೆಗಳಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲವೇ? ಆ ಶಬ್ದ ದೇಗುಲಕ್ಕಷ್ಟೇ ಸೀಮಿತ, ಹೊರಗಡೆ ದಾಟುವುದಿಲ್ಲ ಎಂದು ನೀವು ಹೇಳಲು ಸಾಧ್ಯವೇ?” ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ವಕೀಲರನ್ನು ಪ್ರಶ್ನಿಸುತ್ತಾ, ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.
‘ದಿನದ ಬೇರೆ ಬೇರೆ ಅವಧಿಗಳಲ್ಲಿ 10 ನಿಮಿಷಗಳ ಕಾಲ ಆಝಾನ್ ಕೂಗುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಕುರಿತು ವೈಜ್ಞಾನಿಕ ರೀತಿಯ ಆಧಾರ ಒದಗಿಸಲು ಅರ್ಜಿದಾರರು ವಿಫಲವಾಗಿದ್ದಾರೆ. ಹಾಗಾಗಿ ಇದು ಸಂಪೂರ್ಣ ತಪ್ಪು ತಿಳಿವಳಿಕೆಯಿಂದ ಕೂಡಿದೆ. ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ’ ಎಂದು ಉಲ್ಲೇಖಿಸುತ್ತಾ ಗುಜರಾತ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.