ಶಾಸಕ ಎಚ್ ಡಿ ರೇವಣ್ಣ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಹಾಸನದ ಜನರನ್ನು ಇನ್ನಿಲ್ಲದಂತೆ ಬಾಧಿಸಿದೆ. ಜಿಲ್ಲೆಯಲ್ಲಿ ಯಾವುದೇ ಸಂಘಟನೆ, ಚಳವಳಿ ತಲೆಯೆತ್ತದಂತೆ ಮಾಡಿರುವ ಕುಟುಂಬ, ಈಗ ಅದೇ ನೆಲದಲ್ಲಿ ಬೃಹತ್ ಪ್ರತಿಭಟನೆಯನ್ನು ಎದುರಿಸುವಂತಾಗಿದೆ.
ಹಾಸನದಲ್ಲಿ ಶಾಸಕ ಎಚ್ ಡಿ ರೇವಣ್ಣ ಕುಟುಂಬದ ದುರಾಡಳಿತ ಎಷ್ಟಿದೆಯೆಂದರೆ ಅದು ಕಮಿಷನ್ ದಂಧೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ದಲಿತರ ದೌರ್ಜನ್ಯ, ಅಧಿಕಾರಿಗಳ ಮೇಲಿನ ದಬ್ಬಾಳಿಕೆ, ಭೂಕಬಳಿಕೆ ಇಷ್ಟೇ ಅಲ್ಲ. ಅದನ್ನೂ ಮೀರಿ ಸಾಂಸ್ಕೃತಿಕ ವಲಯವನ್ನು ದಶಕಗಳಿಂದ ಕಾಡಿತ್ತು.
ಈ ದಿನ.ಕಾಮ್ ನಲ್ಲಿ ಬರುತ್ತಿರುವ ಗ್ರೌಂಡ್ ರಿಪೋರ್ಟ್ ಗಮನಿಸಿದ, ರೇವಣ್ಣ ಅವರ ಕುಟುಂಬವನ್ನು ನಾಲ್ಕು ದಶಕಗಳಿಂದ ಬಲ್ಲ ಸಾಹಿತ್ಯ ಪರಿಚಾರಕರೊಬ್ಬರು ಕರೆ ಮಾಡಿದ್ದರು.
“ಹೊಳೆನರಸೀಪುರ ಸಾಹಿತ್ಯ ಪರಿಷತ್ತಿನಲ್ಲಿ 2008ರಲ್ಲಿ ಒಬ್ಬರು ಸಾಹಿತ್ಯಾಭಿಮಾನಿ ದತ್ತಿನಿಧಿ ಸ್ಥಾಪಿಸಿದ್ದರಂತೆ. ಆದರೆ, ಈವರೆಗೆ ಒಂದೇ ಒಂದು ಕಾರ್ಯಕ್ರಮ ಏರ್ಪಡಿಸಿಲ್ಲ. ದತ್ತಿ ನಿಯಮದಂತೆ ವರ್ಷಕ್ಕೊಮ್ಮೆ ದತ್ತಿ ಉಪನ್ಯಾಸ ನಡೆಸಬೇಕಿತ್ತು. ಈವರೆಗೆ ಮೂರ್ನಾಲ್ಕು ಅಧ್ಯಕ್ಷರು ಬದಲಾದರು. ರೇವಣ್ಣನ ಕೇಳಿಯೇ ಕಾರ್ಯಕ್ರಮ ಆಯೋಜನೆ ಮಾಡಬೇಕು. ಆತ ಒಪ್ಪಿದವರನ್ನೇ ಕರೆಸಬೇಕು. ಈ ಕಾರಣದಿಂದ ದತ್ತಿ ಉಪನ್ಯಾಸ ನಡೆಸಿಲ್ಲ. ಹಾಸನಕ್ಕೆ ಹಿಡಿದ ಗ್ರಹಣ ಈಗ ಬಿಡುವ ಲಕ್ಷಣ ಗೋಚರಿಸುತ್ತಿದೆ. ಇನ್ನಾದರೂ ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತವಲ್ಲದೆ ಸಾಹಿತ್ಯ ಚಟುವಟಿಕೆ ನಡೆಯುತ್ತಾ ಕಾದು ನೋಡಬೇಕಿದೆ” ಎಂದು ಅವರು ಹೇಳಿದರು.
2011ರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನೇ ಅವರ ಬೆಂಬಲಿಗರು ಹೊಳೆನರಸೀಪುರ ತಾಲ್ಲೂಕಿನ ಮೂರನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದರು. ಸಾಹಿತಿಯಲ್ಲದವರು ಅದರಲ್ಲೂ ಅಪ್ಪಟ ರಾಜಕಾರಣಿ, ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಮಾಜಿ ಪ್ರಧಾನಿಗಳನ್ನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವ ದಾಖಲೆಯನ್ನು ರೇವಣ್ಣ ಪ್ರತಿನಿಧಿಸುತ್ತಿರುವ ಹೊಳೆನರಸೀಪುರ ಕ್ಷೇತ್ರ ಹೊಂದಿದೆ.
ಸಾಹಿತ್ಯ ಭವನಕ್ಕೆ ಹಣ ಕೇಳಿದ್ರೆ ಇಲ್ಲ ಅಂದಿದ್ರು ಶಾಸಕರು
2012-13ರಲ್ಲಿ ಹೊಳೆನರಸೀಪುರ ಬೈಪಾಸ್ ರಸ್ತೆಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಿದ್ದ ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ಕಟ್ಟುವ ಉದ್ದೇಶದಿಂದ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಟ್ಟಡ ಕಟ್ಟುವ ಮಾತು ಬಂದಾಗ ಸಭೆಯಲ್ಲಿ ಸ್ಥಳೀಯ ಶಾಸಕ ರೇವಣ್ಣನವರ ಗಮನಕ್ಕೆ ತರೋಣ ಎಂಬ ಅಭಿಪ್ರಾಯ ಬಂದಿತ್ತು. ಹಾಗೆಯೇ ರೇವಣ್ಣ ಅವರ ಬಳಿ ನಿಯೋಗ ಹೋಗಿ ಭವನಕ್ಕೆ ಹಣಕಾಸಿನ ನೆರವು ಕೇಳಿದಾಗ ದೇಣಿಗೆ ನೀಡಲು ಆಗಲ್ಲ ಎಂದು ಹೇಳಿದ್ದರು. ಮುಂದಿನ ಕಸಾಪ ಸಭೆಯಲ್ಲಿ ಶಾಸಕರು ಹಣ ಕೊಡಲು ನಿರಾಕರಿಸಿದ ಈ ವಿಷಯ ಪ್ರಸ್ತಾಪ ಮಾಡಿರುವ ಏಕೈಕ ಕಾರಣಕ್ಕೆ ತನ್ನನ್ನು ಕಾರ್ಯದರ್ಶಿ ಸ್ಥಾನದಿಂದ ಕೇವಲ ಅರ್ಧ ಗಂಟೆಯಲ್ಲಿ ಕೆಳಗಿಳಿಸಲಾಯಿತು ಎಂದು ಮಜೀದ್ ʼಈ ದಿನʼಕ್ಕೆ ಪ್ರತಿಕ್ರಿಯೆ ನೀಡಿದರು.
“ಹೊಳೆನರಸೀಪುರ ಸಾಹಿತ್ಯ ಪರಿಷತ್ತಿಗೆ ಅವರ ಪಕ್ಷದ ಬೆಂಬಲಿಗರೇ ಅಧ್ಯಕ್ಷರಾಗುವಂತೆ ರೇವಣ್ಣ ನೋಡಿಕೊಂಡಿದ್ದರು. ಸ್ಥಳೀಯರ ಬದಲಿಗೆ ಮೈಸೂರು, ಚೆನ್ನರಾಯಪಟ್ಟಣದ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಪರಿಷತ್ತು ಸ್ವತಂತ್ರವಾಗಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಎಲ್ಲವೂ ರೇವಣ್ಣರನ್ನು ಕೇಳಿ ನಡೆಸಬೇಕು. 2014ರ ನಂತರ ಒಂದೇ ಒಂದು ಸಾಹಿತ್ಯ ಸಮ್ಮೇಳನ ಅಲ್ಲಿ ನಡೆಸಿಲ್ಲ. ಅನಂತಕುಮಾರ್ ಅಂತ ಒಬ್ಬರು ಅಧ್ಯಕ್ಷರಾಗಿದ್ದರು. ಅವರು ಎರಡೇ ತಿಂಗಳಲ್ಲಿ ರಾಜೀನಾಮೆ ಕೊಟ್ಟು ಹೋಗಿಬಿಟ್ರು. ಅಷ್ಟು ಕಿರುಕುಳ ಕೊಟ್ಟಿದ್ದರು.
ಜಿಲ್ಲೆಯಲ್ಲಿ ಯಾವುದೇ ಸಂಘಟನೆ, ಚಳವಳಿ ತಲೆ ಎತ್ತದಂತೆ ರೇವಣ್ಣ ಕುಟುಂಬ ನೋಡಿಕೊಂಡಿದೆ. ಆದರೆ, ಅದೇ ಪ್ರಗತಿಪರರು, ಸಾಮಾಜಿಕ ಹೋರಾಟಗಾರರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೆಳೆಯಬೇಕು ಎಂಬ ಉದ್ದೇಶದಿಂದ ಜೆಡಿಎಸ್‌ಗೆ ದಶಕಗಳಿಂದ ಬೆಂಬಲಿಸಿದ್ದಾರೆ. ದೇವೇಗೌಡರ ಬೆಳವಣಿಗೆಯಲ್ಲಿ ಪ್ರಗತಿಪರರ ಪಾಲೂ ಇದೆ” ಎಂದರು ಮಜೀದ್.
ರೇವಣ್ಣ ಅವರು ಜಿಲ್ಲೆಯ, ಕ್ಷೇತ್ರದ ಜನರನ್ನು ಕಾಡಿದ ಪರಿ ಊಹಿಸಲೂ ಸಾಧ್ಯವಿಲ್ಲ. ಜಿಲ್ಲೆಯ ಹಾಲಿನ ಡೈರಿಗೆ ಕಾಂಗ್ರೆಸ್ ಬೆಂಬಲಿತ ರೈತರು ಹಾಲು ಹಾಕದಂತೆ ತಡೆಯುತ್ತಿದ್ದರಂತೆ. ಇದಕ್ಕಿಂತ ದುಷ್ಟತನ ಬೇರೆ ಇದೆಯೇ? ಶಾಸಕನೊಬ್ಬ ರೈತರಲ್ಲೂ ಜಾತಿ, ಪಕ್ಷ ಹುಡುಕಿ ಅನ್ಯಾಯವೆಸಗಿದ್ದು ಅಕ್ಷಮ್ಯ. ಜೆಡಿಎಸ್ ಬೆಂಬಲಿಗರಲ್ಲದವರು ಮುನಿಸಿಪಾಲಿಟಿಯಲ್ಲಿ ಖಾತೆ ಮಾಡಿಸಲು ಹೋದರೆ ನಾನಾ ಕಾರಣ ಹೇಳಿ ತಡೆ ಹಿಡಿಯುವಂತೆ, ವಿಳಂಬ ಮಾಡುವಂತೆ ಒತ್ತಡ ಅಧಿಕಾರಿಗಳ ಮೇಲೆ ಇತ್ತು ಎಂದು ಮಜೀದ್ ಹೇಳುತ್ತಾರೆ.
ಪಕ್ಷನಿಷ್ಠರಿಗೂ ಸಹಾಯ ಮಾಡಿಲ್ಲ
2019ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಬಂದಿತ್ತು. ಹೊಳೆನರಸೀಪುರದ ಯಾಸಿನ್‌ನಗರದ 30 ಮನೆಗಳು ಮುಳುಗಡೆಯಾಗಿದ್ದವು. ಆಗ ರೇವಣ್ಣ ಅವರು ಸಚಿವರಾಗಿದ್ದರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮುಳುಗಡೆಗೊಂಡ ಕುಟುಂಬಗಳಿಗೆ ಕೇವಲ 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಒಂದು ಲಕ್ಷದಲ್ಲಿ ಮನೆ ಕಟ್ಟಿಕೊಳ್ಳುವುದು ಸಾಧ್ಯವೇ? ಸುಮಾರು 26 ಕುಟುಂಬಗಳು ದಿಕ್ಕಾಪಾಲಾಗುವಂತಾಯಿತು. ಈ ಕುಟುಂಬಗಳು ಜೆಡಿಎಸ್‌ಗೆ ನಿಷ್ಠರಾಗಿದ್ದ ಕುಟುಂಬಗಳೇ! ವಕ್ಫ್ ಬೋರ್ಡ್‌ನಿಂದ ವಾಸಕ್ಕೆ ಕೊಟ್ಟಿರುವ ಜಾಗ ಅದು. ಅನಧಿಕೃತ ವಾಸವಾಗಿರುವ ಕಾರಣ ಹೆಚ್ಚು ಪರಿಹಾರ ಕೊಡಲು ಸಾಧ್ಯವಿಲ್ಲ ಅಂದಿದ್ದರು. ಸ್ವಂತ ಭೂಮಿಯೇ ಇಲ್ಲದ ಕೂಲಿ ಮಾಡೋ ಜನರಿಗೆ ಅಧಿಕೃತ ಭೂಮಿ ಎಲ್ಲಿ ಇರುತ್ತೆ?
ಹೊಳೆದಡದ ಬೀದಿಯಲ್ಲಿ ಶಾದಿಮಹಲ್ ಪಕ್ಕದಲ್ಲಿರುವ ಜಮೀನು ಎಲ್ಲಿ ಮುಸ್ಲಿಮರಿಗೆ ಸೇರಿಬಿಡುತ್ತೇನೋ ಎಂದು ಉದ್ದೇಶಪೂರ್ವಕವಾಗಿ ಬೇರೆ ಪ್ರಾಜೆಕ್ಟ್ ತಂದು ಕಾಂಪೌಂಡ್ ಕಟ್ಟಲು ಕೂಡ ಬಿಡಲಿಲ್ಲ.
ತಾಲ್ಲೂಕು ಆಫೀಸ್ ಪಕ್ಕ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಗೆ ಗೋಡೆ ಕಟ್ಟಿಸಿದವರು ನಮ್ಮ ಶಾಸಕ ರೇವಣ್ಣ. ಎಲ್ಲೂ ಕಂಡು ಕೇಳರಿಯದ ಘಟನೆಗಳೆಲ್ಲ ಹೊಳೆನರಸೀಪುರದಲ್ಲಿ ನಡೆದು ಹೋಗಿದೆ ಎಂದು ಅವರು ವಿವರಿಸುತ್ತಾ ಹೋದರು.
ಪ್ರಜ್ವಲ್ ರೇವಣ್ಣನ ಈ ಪ್ರಕರಣದಿಂದ ಮುಚ್ಚಿ ಹೋದ ಅಥವಾ ಸುದ್ದಿಯೇ ಆಗದ ಹಲವು ವಿಷಯಗಳು ಬೆಳಕಿಗೆ ಬರುವಂತಾಗಿದೆ. ಜಿಲ್ಲೆಯ ಜನ ಈಗ ಧೈರ್ಯದಿಂದ ಮಾತನಾಡಲು ಶುರು ಮಾಡಿದ್ದಾರೆ. ರಾಜಕೀಯ ಕುಟುಂಬವೊಂದರ ದಶಕಗಳ ಹಿಂಸೆ, ದಬ್ಬಾಳಿಕೆ, ಅಹಂಕಾರಕ್ಕೆ ಅಂತ್ಯ ಹಾಡುವುದಕ್ಕೆ ಆ ಕುಟುಂಬದ ಕುಡಿಯೇ ಕಾರಣವಾಗಿದೆ. ಇದು ಇಂತಹ ಹಲವು ರಾಜಕೀಯ ಕುಟುಂಬಗಳಿಗೆ ಪಾಠವಾಗಬೇಕು.
ಚಳವಳಿ, ಸಂಘಟನೆಗಳು ತಲೆಯೆತ್ತದಂತೆ ಮಾಡಿದ್ದ ಇಡೀ ಕುಟುಂಬ ಇಂದು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಎದುರಿಸುವಂತಾಗಿದೆ. ಮೇ 30 ರಂದು ʼಹಾಸನ ಚಲೋʼ ಮೂಲಕ ಹಾನಸದ ಪ್ರಜ್ಞಾವಂತರ ಜೊತೆಗೆ ರಾಜ್ಯದ ಮೂಲೆ ಮೂಲೆಯಿಂದ ನೂರಕ್ಕೂ ಹೆಚ್ಚು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಇದನ್ನೂ ಓದಿ ʼಈ ದಿನʼ ಗ್ರೌಂಡ್ ರಿಪೋರ್ಟ್ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…
ʼಈ ದಿನʼ ಗ್ರೌಂಡ್ ರಿಪೋರ್ಟ್ 2 | ನಾಲ್ಕು ದಶಕಗಳ ಗೌಡರ ಕುಟುಂಬದ ಅತ್ಯಾಪ್ತರ ಮೊಮ್ಮಗಳೂ ಬಲಿಪಶು!
‘ಈ ದಿನʼ ಗ್ರೌಂಡ್ ರಿಪೋರ್ಟ್ 3 | ವಿಡಿಯೊ ಪ್ರಕರಣ; ಹಲವು ಮಹಿಳೆಯರ ರಾಜಕೀಯ ಮಹತ್ವಾಕಾಂಕ್ಷೆ ಮಣ್ಣುಪಾಲು

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.