ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

Date:

ಕುಟುಂಬದಲ್ಲಿ ಸಾವು-ನೋವು ಸಂಭವಿಸಿದರೆ ಕೆಲ ಕಾಲದಲ್ಲಿ ಎಲ್ಲರೂ ಯಥಾಸ್ಥಿತಿಗೆ ಮರಳುತ್ತಾರೆ. ಆದರೆ, ತಮ್ಮ ಅಥವಾ ಮನೆ ಮಗಳ ಖಾಸಗಿ ಕ್ಷಣದ ವಿಡಿಯೊ ಊರಿನ ಜನರ ಮೊಬೈಲ್‌ನಲ್ಲಿ ಇದ್ದಾಗ, ಪದೇ ಪದೇ ಆಗುವ ಅವಮಾನ, ಮಾನಸಿಕ ಹಿಂಸೆ, ಕುಹಕದ ಮಾತುಗಳನ್ನು ಕೇಳುತ್ತಾ ಆ ಕುಟುಂಬಗಳು ಯಥಾಸ್ಥಿತಿಗೆ ಮರಳುವುದು ಸುಲಭದ ಮಾತಲ್ಲ.

 

ದೇಶದ ಸಂಸತ್ತಿನಲ್ಲಿ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ತನ್ನ ಕುಟುಂಬದ ರಾಜಕೀಯ ಪ್ರಭಾವ, ಅಧಿಕಾರದ ಮದ, ಜಮೀನ್ದಾರಿ ಪ್ರವೃತ್ತಿ ಎಲ್ಲವನ್ನೂ ಮೈಗೂಡಿಸಿಕೊಂಡು ಐದು ವರ್ಷಗಳಲ್ಲಿ ನಡೆಸಿದ ಲೈಂಗಿಕ ಹತ್ಯಾಕಾಂಡದಿಂದ ಇಂದು ಹಲವು ಕುಟುಂಬಗಳು ಊರು ಬಿಡುವಂತಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ರೇವಣ್ಣ ಕುಟುಂಬದ ಜೊತೆ ನಂಟಿದ್ದ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ. ಹಲವರು ಮಕ್ಕಳ ಮದುವೆ ನಿಂತುಹೋಗುವ ಆತಂಕದಲ್ಲಿದ್ದಾರೆ. ತಾಯಿ, ಮಗಳು, ಸೊಸೆ, ಸೋದರಿ ಹೀಗೆ ಎಲ್ಲರನ್ನೂ ಸಂಕಟಕ್ಕೆ ದೂಡಿದ ಪರಿಸ್ಥಿತಿಯಿದು.

ತನ್ನ ಪಕ್ಷದ ಗೆಲುವಿಗಾಗಿ ಕರಪತ್ರ ಹಿಡಿದು ಬಿಸಿಲಲ್ಲಿ ತಿರುಗಾಡಿ ಮನೆ ಮನೆಗೆ ಹೋಗಿ ಮತ ಕೇಳುತ್ತಿದ್ದ ಜೆಎಡಿಎಸ್‌ ಕಾರ್ಯಕರ್ತೆಯರನ್ನೆ ತನ್ನ ಕಾಮವಾಂಛೆಗೆ ಬಳಸಿಕೊಂಡವ ಪ್ರಜ್ವಲ್‌. ವಿಡಿಯೊದಲ್ಲಿ ಯಾರೆಲ್ಲ ಇದ್ದಾರೆ ಎಂದು ನೋಡಿದವರು ಮಾತನಾಡಿಕೊಂಡರೆ, ಕಿಡಿಗೇಡಿಗಳು ತಮಗೆ ಆಗದವರ ಮನೆಯ ಹೆಣ್ಣುಮಕ್ಕಳ ಬಗ್ಗೆ ಸುಳ್ಳು ಹಬ್ಬಿಸುವ ಆತಂಕವೂ ಇದೆ. ಹಾಗೆ ನೋಡಿದರೆ ಆ ಪಕ್ಷದ ನಾಯಕಿಯರು, ಕಾರ್ಯಕರ್ತೆಯರು ಸಾಮೂಹಿಕವಾಗಿ ಪಕ್ಷ ತೊರೆಯಬೇಕಿತ್ತು. ಇಡೀ ಸಮಾಜ ತಲೆ ತಗ್ಗಿಸುವ ಕೃತ್ಯ ಎಸಗಿದ ಸಂಸದ ತಲೆಮರೆಸಿಕೊಂಡು ವಿದೇಶದಲ್ಲಿದ್ದಾನೆ. ಆತನಿಂದ ಬಲಿಪಶುವಾದ ಬಹುತೇಕ (ಒಕ್ಕಲಿಗ) ಮಹಿಳೆಯರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅವರೆಲ್ಲ ಎಲ್ಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಮನೆ ಮಠ ಬಿಟ್ಟರೂ ಈ ಆಘಾತದಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ.

ಮಹಿಳೆಯರು ಒಪ್ಪಿತ ಸಂಬಂಧ ಬೆಳೆಸಿದ್ದಾರೆ ಎನ್ನುವುದು ಕೆಲವರ ವಾದ. ಆದರೆ, ಅಷ್ಟೊಂದು ಮಹಿಳೆಯರ ಜೊತೆ ಸಂಸದನಾದವನು ಲೈಂಗಿಕ ಸಂಪರ್ಕ ಬೆಳೆಸಿದ್ದು ಸರಿಯೇ ಎಂಬ ಪ್ರಶ್ನೆಯನ್ನೂ ಕೇಳಬೇಕಲ್ವಾ? ಜನಪ್ರತಿನಿಧಿಯ ಮುಂದೆ ಅಹವಾಲು ಹಿಡಿದು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೆವಲಿನ ಬಲೆಗೆ ಬೀಳಿಸಿರುವುದೇ ಈ ಸಂಸದನ ಐದು ವರ್ಷದ ಸಾಧನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆ ಮಹಿಳೆಯರನ್ನು ಭವಾನಿ ರೇವಣ್ಣ ಎಲ್ಲಿಗೆ ಕಳಿಸಿದ್ದಾರೆ?

ವಿಡಿಯೊದಲ್ಲಿರುವ ಅನೇಕ ಮಹಿಳೆಯರು ಊರು ತೊರೆದಿದ್ದಾರೆ ಎಂದು ಹೇಳಲಾಗಿದೆ. ಮಾಹಿತಿಯೊಂದರ ಪ್ರಕಾರ ವಿಡಿಯೊ ಬಹಿರಂಗಗೊಂಡ ತಕ್ಷಣ ಭವಾನಿ ರೇವಣ್ಣ ಅವರು ಅವರನ್ನು ಝೂಮ್‌ ಮೀಟಿಂಗ್‌ ಕರೆದು ಹಣದ ಆಮಿಷವೊಡ್ಡಿ ಊರು ಬಿಡುವಂತೆ ಹೇಳಿದ್ದಾರೆ. ಫೋಟೋ, ವಿಡಿಯೊ ಕಾಲ್‌ ಸ್ಕ್ರೀನ್‌ ಶಾಟ್‌ನಲ್ಲಿರುವವರಿಗೆ ರೂ. 50 ಲಕ್ಷ, ವಿಡಿಯೊದಲ್ಲಿರುವವರಿಗೆ ರೂ.1 ಕೋಟಿಯವರೆಗೆ ಹಣದ ಭರವಸೆ ನೀಡಿದ್ದು, ನಿಮ್ಮ ರಕ್ಷಣೆಗೆ ನಾನಿದ್ದೇನೆ. ಸದ್ಯ ಊರಲ್ಲಿ ಕಾಣಿಸಿಕೊಳ್ಳಬೇಡಿ. ರೆಸಾರ್ಟ್‌ಗಳಲ್ಲಿ ಉಳಿಯಿರಿ. ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ” ಎಂದು ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್‌ ಮುಖಂಡರ ಜೊತೆ ಭವಾನಿ ರೇವಣ್ಣ

ಈ ಕಾರಣದಿಂದ ಅವರೆಲ್ಲ ಊರು ಬಿಟ್ಟಿದ್ದಾರೆ, ಮೊಬೈಲ್‌ ಸ್ವಿಚ್‌ಆಫ್‌ ಮಾಡಿದ್ದಾರೆ. ಯಾರಿಗೂ ಸಿಗುತ್ತಿಲ್ಲ. ಈ ಮಾಹಿತಿ ಅಧಿಕೃತವಲ್ಲವಾದರೂ ಭವಾನಿ ರೇವಣ್ಣ ಅವರಿಗೆ ತನ್ನ ಮಗನ ರಕ್ಷಣೆಗಾಗಿ ಇಷ್ಟು ಮಾಡುವುದು ಕಷ್ಟವೇನಲ್ಲ. ದಶಕಗಳಿಂದ ಜಿಲ್ಲೆಯ ಜನರನ್ನು ತಾರತಕ್ಕಡಿ ಮಾಡಿದ ಕುಟುಂಬ ಈಗ ಸ್ವಂತ ಮಗನನ್ನು ಉಳಿಸಿಕೊಳ್ಳಲು ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸದೇ ಇರಲಾರದು ಎಂಬುದು ಹಾಸನದ ಬಹುತೇಕರ ಉತ್ತರ. ಈಗ ಭವಾನಿ ಅವರೇ ನಾಪತ್ತೆಯಾಗಿದ್ದಾರೆ! ಎಸ್‌ಐಟಿ ನೋಟಿಸ್‌ ಮೇಲೆ ನೋಟಿಸ್‌ ಕೊಟ್ಟರೂ ಹಾಜರಾಗಿಲ್ಲ.

ಮಾಧ್ಯಮಗಳ ಭಯ, ಆತ್ಮಹತ್ಯೆ ಯತ್ನ

ಪ್ರಜ್ವಲ್‌ ಪ್ರಕರಣದ ಆಳ ಅಗಲ ತಿಳಿಯುವ ಸಂಬಂಧ ಈ ದಿನ. ಕಾಮ್‌ ತಂಡ ಹಾಸನಕ್ಕೆ ತೆರಳಿತ್ತು. ಅಲ್ಲಿನ ಕೆಲವು ಪ್ರಗತಿಪರರು ಮತ್ತು ಈ ಪ್ರಕರಣವನ್ನು ನಿರ್ಣಾಯಕ ಘಟ್ಟದತ್ತ ಕೊಂಡೊಯ್ಯಲು ಹೋರಾಟ ನಡೆಸುತ್ತಿರುವವರನ್ನು ಮಾತನಾಡಿಸುವ ಪ್ರಯತ್ನ ಮಾಡಿತ್ತು.

ಆರಂಭದಲ್ಲಿ ಪ್ರಜ್ವಲ್‌ನ ಕಾಮಕೃತ್ಯಕ್ಕೆ ಬಲಿಯಾದವರಲ್ಲಿ ಕೆಲವರು ವಿಡಿಯೊ ಬಹಿರಂಗಗೊಂಡ ನಂತರ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆಯರಿಗೆ ಫೋನ್‌ ಮಾಡಿ ನೋವು ತೋಡಿಕೊಂಡಿದ್ದಾರೆ. “ಕೆಲವರು ಆತ್ಮಹತ್ಯೆಯ ಮಾತುಗಳನ್ನು ಆಡಿದ್ದಾರೆ. ಅವರೆಲ್ಲರಿಗೆ ಧೈರ್ಯ ತುಂಬಿ, ನಿಮ್ಮದೇನೂ ತಪ್ಪಿಲ್ಲ, ನೀವು ವಿಡಿಯೊ ಮಾಡಿಕೊಂಡಿಲ್ಲ ಅಥವಾ ಹನಿ ಟ್ರ್ಯಾಪ್‌ ಮಾಡಿಲ್ಲ. ತಪ್ಪು ಸಂಸದನದ್ದು, ನೀವು ಹೆದರುವ ಅಗತ್ಯ ಇಲ್ಲ ಎಂದು ಧೈರ್ಯ ತುಂಬಿದ್ದೆವು. ಆ ನಂತರ ಅವರಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಷ್ಟೇ ಅಲ್ಲ ದೂರು ಕೊಡಲು ಮುಂದಾಗಿದ್ದ ಒಬ್ಬ ಸಂತ್ರಸ್ತೆ ಫೋನ್‌ ಮಾಡಿ, ಟಿವಿಯಲ್ಲಿ ನಮ್ಮನ್ನು ತೋರಿಸಿದರೆ ಮನೆಯವರಿಗೆ ಗೊತ್ತಾಗುತ್ತದೆ. ನಾವು ದೂರು ಕೊಡಲ್ಲ” ಎಂದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ರೂಪ ಹಾಸನ ಹೇಳಿದರು.

“ಪತಿ-ಪತ್ನಿ ಇಬ್ಬರೂ ಫೋನ್‌ ಮಾಡಿ, ನಾವು ಎಸ್‌ಐಟಿ ಮುಂದೆ ದಾಖಲೆಗಳ ಸಹಿತ ಎಲ್ಲವನ್ನೂ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ನಂತರ ಅವರನ್ನು ಸಮಾಧಾನಪಡಿಸಲಾಯಿತು. ಈಗ ಆ ದಂಪತಿ ಖಿನ್ನತೆಯಲ್ಲಿದ್ದಾರೆ. ಒಬ್ಬ ಸಂತ್ರಸ್ತೆ ಆತ್ಮಹತ್ಯೆ ಯತ್ನ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ” ಎಂದು ಅವರು ವಿವರಿಸಿದರು.

ಮನೆಗೆಲಸದ ವೃದ್ಧ ಸಂತ್ರಸ್ತೆಯನ್ನು ಹೊಳೆನರಸೀಪುರದ ರೇವಣ್ಣ ಅವರ ಮನೆಗೆ ಮಹಜರಿಗಾಗಿ ಕರೆದೊಯ್ದಾಗ ಮಾಧ್ಯಮಗಳು ತಮ್ಮ ಘನತೆ ಮರೆತು ಸಂತ್ರಸ್ತೆಯನ್ನು ತೋರಿಸಿದ್ದವು. ಆಕೆ ಮುಖ ಮುಚ್ಚಿಕೊಂಡಿದ್ದರೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದರಿಂದ ಸಹಜವಾಗಿಯೇ ಅವರ ಕುಟುಂಬವನ್ನು ಇನ್ನಷ್ಟು ಮುಜುಗರಕ್ಕೆ ಈಡು ಮಾಡುತ್ತದೆ. ಈ ದೃಶ್ಯ ನೋಡಿ ಸಂತ್ರಸ್ತೆಯರು ದೂರು ಕೊಡಲು ಹಿಂಜರಿದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಮಗಳ ನಿಶ್ಚಿತಾರ್ಥ ಮುರಿಯುವ ಆತಂಕ ಅಮ್ಮನದು

ಸಂತ್ರಸ್ತೆಯೊಬ್ಬರ ಮಗಳ ನಿಶ್ಚಿತಾರ್ಥವಾಗಿದೆ. ಆಕೆಗೆ ತನ್ನ ವಿಡಿಯೊ ಇರುವುದು ಬೀಗರ ಮನೆಯವರಿಗೆ ಗೊತ್ತಾದರೆ ಏನು ಮಾಡುವುದು ಎಂಬ ಸಂಕಟ. ಆಪ್ತರೊಬ್ಬರಿಗೆ ಫೋನ್‌ ಮಾಡಿ ತನ್ನ ಆತಂಕ ಹೇಳಿಕೊಂಡಿದ್ದಾರೆ.

ಎಸ್‌ಐಟಿ ರಚನೆಯಾದ ಮೇಲೂ ಕಂತಿನಲ್ಲಿ ವಿಡಿಯೊಗಳು ಬಿಡುಗಡೆಯಾಗುತ್ತಿರುವುದು ಹಲವು ಮಹಿಳೆಯರ ನೆಮ್ಮದಿ ಕಸಿದಿದೆ. ಹಾಸನದಿಂದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುವ ಸಂದರ್ಭ ಬಂದರೂ ಅಚ್ಚರಿಯಿಲ್ಲ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಶನಿವಾರ(ಏ.18) ಹಾಸನದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು

ಊರಿಗೆ ವಾಪಸ್‌ ಯಾವಾಗ?

ಪ್ರಜ್ವಲ್‌ ರೇವಣ್ಣನಿಗೆ ಇಂದಲ್ಲ ನಾಳೆ ಕಾನೂನು ಕೋಳ ತೊಡಿಸಬಹುದು. ಆತ ಜಾಮೀನು ಪಡೆದು ವಿದೇಶದಲ್ಲಿಯೇ ಬದುಕು ಕಳೆಯಬಹುದು. ಆದರೆ ಕುಟುಂಬದ ಜೊತೆ ನೆಮ್ಮದಿಯಾಗಿದ್ದ ಹೆಣ್ಣುಮಕ್ಕಳು ತಿಂಗಳ ಕಾಲ ಎಲ್ಲೋ ಹೋದವರು ಮತ್ತೆ ಕುಟುಂಬವನ್ನು ಸೇರಲೇಬೇಕು. ಮಕ್ಕಳಿಗೆ ಶಾಲೆ ಶುರುವಾಗಲಿದೆ. ಮಕ್ಕಳ ದಾಖಲಾತಿಯಾಗಬೇಕು, ಪುಸ್ತಕ, ಯೂನಿಫಾರಂ ಅಂತ ಶಾಪಿಂಗ್‌ ಮಾಡಬೇಕು. ಸಾಮಾನ್ಯ ಕುಟುಂಬಗಳಲ್ಲಿ ಅವೆಲ್ಲ ಅಮ್ಮಂದಿರ ಜವಾಬ್ದಾರಿಯಾಗಿರುತ್ತದೆ. ಅಮ್ಮ ಎಲ್ಲಿ ಹೋಗಿದ್ದಾರೆ ಎಂದು ಮಕ್ಕಳು ಕೇಳಿದರೆ ಎಷ್ಟು ದಿನ ಸುಳ್ಳು ಹೇಳಲು ಸಾಧ್ಯ?

ಕುಟುಂಬದಲ್ಲಿ ಯಾವುದಾದರೊಂದು ಸಾವು, ನೋವು ಸಂಭವಿಸಿದರೆ ಕೆಲ ಕಾಲದಲ್ಲಿ ಎಲ್ಲರೂ ಯಥಾಸ್ಥಿತಿಗೆ ಮರಳುತ್ತಾರೆ. ಆದರೆ, ತಮ್ಮ ಅಥವಾ ಮನೆ ಮಗಳ ಖಾಸಗಿ ಕ್ಷಣದ ವಿಡಿಯೊ ಊರಿನ ಜನರ ಮೊಬೈಲ್‌ನಲ್ಲಿ ಇದ್ದಾಗ, ಪದೇ ಪದೇ ಆಗುವ ಅವಮಾನ, ಮಾನಸಿಕ ಹಿಂಸೆ, ಕುಹಕದ ಮಾತುಗಳನ್ನು ಕೇಳುತ್ತಾ ಯಥಾಸ್ಥಿತಿಗೆ ಮರಳುವುದು ಸುಲಭದ ಮಾತಲ್ಲ. ಶಾಶ್ವತವಾಗಿ ಊರು ತೊರೆಯಬೇಕಾದ ಸಂಕಷ್ಟ ಸ್ಥಿತಿ ಅವರದ್ದು. ಬೇರೆ ಊರಿಗೆ ಹೋದರೂ ಹಾಸನದ ಗುರುತು ಹೇಳುವಂತಿಲ್ಲ.

ಗೌಡರ ಕುಟುಂಬದ ಕರಾಳ ಚರಿತ್ರೆ

ಆರೋಪಿ ಪ್ರಜ್ವಲ್‌ ಬಗ್ಗೆ ಹಾಸನದ ಜನ ಹೇಳುವ ಒಂದೊಂದು ಕತೆಗಳು, ಫ್ಯೂಡಲ್‌ ಮನಸ್ಥಿತಿಯ ಕುಟುಂಬದ ದಬ್ಬಾಳಿಕೆ, ಹಣದ ದಾಹ, ಭೂದಾಹದ ಕರಾಳ ಚಿತ್ರಣವನ್ನು ಕಟ್ಟಿಕೊಡುತ್ತದೆ. ಹಾಸನ ಜಿಲ್ಲೆಗೆ ತಾತನಿಂದ, ತಂದೆಯಿಂದ, ಮೊಮ್ಮಗನವರೆಗಿನ ಮೂರ್ನಾಲ್ಕು ದಶಕಗಳ ಕರಾಳ ಚರಿತ್ರೆಯಿದು.

ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಅಪ್ಪ ಮಾಡಿರುವ ಸಂಪತ್ತಿನಿಂದ ಐಷಾರಾಮಿ ಬದುಕು ನಡೆಸುತ್ತಾ ಇದ್ದ ಪ್ರಜ್ವಲ್‌ನನ್ನು ಹಾಗೇ ಬಿಟ್ಟಿದ್ದರೆ ಇಷ್ಟೊಂದು ವಿವಾಹಿತ ಹೆಣ್ಣುಮಕ್ಕಳು, ಅಧಿಕಾರಿಗಳು ಇಂದು ತಮ್ಮ ಬದುಕನ್ನು ಈತನ ವಿಕೃತ ವಾಂಛೆಗೆ ಬಲಿಕೊಡುತ್ತಿರಲಿಲ್ಲವೋ ಏನೋ. ಆದರೆ, ಕುಟುಂಬದವರ ಅಧಿಕಾರದ ದಾಹ ಆತನನ್ನು ಚಿಕ್ಕ ವಯಸ್ಸಿಗೆ ಸಂಸದನನ್ನಾಗಿ ಮಾಡಿದೆ. ಹಣದ ಮದದ ಜೊತೆಗೆ ಅಧಿಕಾರದ ಮದವೂ ಸೇರಿ ಜೆಡಿಎಸ್‌ ಪಕ್ಷದ ಏಕೈಕ ಸಂಸದ ಇಂದು ಸರಣಿ ಅತ್ಯಾಚಾರದ ಆರೋಪಿಯಾಗಿ ತಲೆ ಮರೆಸಿಕೊಳ್ಳುವಂತಾಗಿದೆ.

ಪ್ರಜ್ವಲ್‌ ರೇವಣ್ಣ ಹಾಸನದ ಮುಖ್ಯ ಭಾಗದಲ್ಲಿರುವ ಸರ್ಕಾರಿ ಬಂಗಲೆಯನ್ನು ಬಹುತೇಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಲು ಬಳಸಿದ್ದ. ಈ ಬಂಗಲೆ ಎಚ್‌ ಡಿ ದೇವೇಗೌಡರು ಮಾಜಿ ಪ್ರಧಾನಿಗಳಾದ ನಂತರ ಹಾಸನಕ್ಕೆ ಹೋದಾಗ ಉಳಿಯಲು ಮನೆ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾರಣ ರಾಜ್ಯ ಸರ್ಕಾರ ಕಟ್ಟಿ ಕೊಟ್ಟ ಎರಡು ಅಂತಸ್ತಿನ ಬಂಗಲೆ. ದೇವೇಗೌಡರು ಹಾಸನಕ್ಕೆ ಭೇಟಿ ನೀಡಿದಾಗ ಅಲ್ಲೇ ಉಳಿದುಕೊಳ್ಳುತ್ತಿದ್ದರು.

ಎಚ್‌ ಡಿ ದೇವೇಗೌಡರಿಗೆ ಸರ್ಕಾರ ಕೊಟ್ಟಿರುವ ಬಂಗಲೆ

ಆದರೆ ಹಾಸನದ ಜನ ಇದನ್ನು ಎಂಪಿ ಕ್ವಾಟ್ರಸ್‌ ಎಂದು ಕರೆಯುತ್ತಿದ್ದಾರೆ. ಅಂದರೆ ಗೌಡರ ಮೊಮ್ಮಗ ಎಂಪಿ ಆದ ಮೇಲೆ ಅದನ್ನೇ ತನ್ನ ಮನೆ ಮಾಡಿಕೊಂಡಿದ್ದ. ಆ ಮನೆಯಲ್ಲೇ ಪ್ರಜ್ವಲ್‌ ಅನೇಕ ಮಹಿಳೆಯರನ್ನು ಕರೆಸಿ ಅತ್ಯಾಚಾರ ನಡೆಸಿದ್ದಾನೆ. ಎಸ್‌ಪಿ ಕಚೇರಿಗೆ ಹೊಂದಿಕೊಂಡೇ ಇರುವ ಈ ಬಂಗಲೆಯನ್ನು ಹಾಸನದ ಮುಗ್ಧ ಜನರು ಪ್ರಜ್ವಲನ ಮನೆ ಎಂದೂ ಕರೆಯುತ್ತಿದ್ದಾರೆ. ಮಾಜಿ ಪ್ರಧಾನಿಗಳು ಜಿಲ್ಲೆಗೆ ಬಂದಾಗ ಉಳಿಯಲು ಕೊಟ್ಟ ಮನೆಯನ್ನು ಮೊಮ್ಮಗ, ಹಾಲಿ ಎಂಪಿ ತನ್ನ ಅಕ್ರಮ ಚಟುವಟಿಕೆಯ ಅಡ್ಡ ಮಾಡಿಕೊಂಡಿದ್ದು, ಮಾಜಿ ಪ್ರಧಾನಿಗಳ ಮುಖಕ್ಕೂ ಮಸಿ ಬಳಿದಂತಾಗಿದೆ.

ಹೊಳೆನರಸೀಪುರದಲ್ಲಿ ನೂರಾರು ಎಕರೆ ಜಮೀನು, ಭವ್ಯ ಬಂಗಲೆ ಕಟ್ಟಿಕೊಂಡು ವಾಸವಿರುವ ರೇವಣ್ಣ ಕುಟುಂಬಕ್ಕೆ ಹಾಸನ ನಗರದಲ್ಲಿ ನೂರಾರು ಕೋಟಿ ಬೆಲೆ ಬಾಳುವ ಕಲ್ಯಾಣ ಮಂಟಪ, ವಾಣಿಜ್ಯ ಕಟ್ಟಡಗಳಿವೆ. ಹಾಸನ ಜಿಲ್ಲಾ ಕೋರ್ಟ್‌ ಮುಂದಿನ ವಿಶಾಲ ಕೆರೆಯನ್ನು‌ ರೇವಣ್ಣ ಕುಟುಂಬದವರು ಕಬಳಿಸಿದ್ದಾರೆ ಎಂಬ ಆರೋಪವಿದೆ. ಅಲ್ಲೊಂದು ಬಸ್‌ ನಿಲ್ದಾಣ ಮತ್ತು ಸಮುದಾಯ ಭವನ ಕಟ್ಟಲಾಗಿದೆ. ಆ ಕುಟುಂಬದ ಹಣದ ದಾಹ ಇಡೀ ಜಿಲ್ಲೆಯ ಜನರನ್ನು ಮೂರು ದಶಕಗಳಿಂದ ಬಾಧಿಸಿದೆ. ಆದರೆ ಇದುವರೆಗೆ ಜನ ದಂಗೆ ಎದ್ದಿಲ್ಲ ಎಂಬುದು ನೋವಿನ ಸಂಗತಿ. ಯಾಕೆಂದರೆ ಅವರಿಗೆ ಹಣ, ಜಾತಿ, ಅಧಿಕಾರದ ಬಲ ಇದೆ. ಈ ಕುಟುಂಬದ ಒಬ್ಬರು ಸಮ್ಮಿಶ್ರ ಸರ್ಕಾರದಲ್ಲಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಎಚ್‌ ಡಿ ರೇವಣ್ಣ ಅವರು ಎರಡೆರಡು ಬಾರಿ PWD ಸಚಿವರಾಗಿದ್ದರು. ಆ ಕುಟುಂಬದ ದಬ್ಬಾಳಿಕೆ, ಅಹಂಕಾರ, ಅಧಿಕಾರದ ಮದದ ನಾಗಾಲೋಟಕ್ಕೆ ಪ್ರಜ್ವಲ್‌ನ ಈ ಪ್ರಕರಣ ಲಗಾಮು ಹಾಕಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಈತನ ಸಹೋದರ ಎಂಎಲ್‌ಸಿ ಆಗಿರುವ ಸೂರಜ್‌ ರೇವಣ್ಣ ಕೂಡಾ ಕಮಿಷನ್‌ ಗಿರಾಕಿ. ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡೆದರೂ ಆತನಿಗೆ 5% ಕಮಿಷನ್‌ ಕೊಟ್ಟು ಕೆಲಸ ಶುರುಮಾಡಬೇಕು ಎಂದು ಜನ ಹೇಳುತ್ತಾರೆ. ಜನರ ಹಣ ದೋಚಲೆಂದೇ ಕುಟುಂಬದವರನ್ನೇ ಜೆಡಿಎಸ್‌ ಪಕ್ಷ ಟಿಕೆಟ್‌ ಕೊಟ್ಟು ಗೆಲ್ಲಿಸುತ್ತದೆಯೇನೋ ಎಂಬ ಅನುಮಾನ ಬರುತ್ತದೆ.

ಸೂರಜ್‌ ರೇವಣ್ಣ

ಹೆಣ್ಣುಮಕ್ಕಳನ್ನೇ ಲಂಚ ಪಡೆದಿದ್ದಾನೆ!

“ಬೇರೆ ರಾಜಕಾರಣಿಗಳು ಮಾಡಿಕೊಟ್ಟ ಕೆಲಸಕ್ಕೆ ಲಂಚ ಪಡೆದರೆ, ಈ ಸಂಸದ ಲಂಚದ ರೂಪದಲ್ಲಿ ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾನೆ” ಎಂದು ಹಾಸನದ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಹೇಳಿದರು.

ಈ ಮನಸ್ಥಿತಿಯನ್ನು ಊಹಿಸಿಕೊಳ್ಳುವುದೇ ಬಹಳ ನೋವಿನ ಸಂಗತಿ. ಅಷ್ಟಕ್ಕೂ ಆರೋಪಿಯ ವಯಸ್ಸು ಇನ್ನೂ 32. ಈ ವಯಸ್ಸಿಗೆ ಇಷ್ಟೊಂದು ಹೆಣ್ಣುಮಕ್ಕಳನ್ನು ಅದೂ ಬಹುತೇಕ ವಿವಾಹಿತ ಮಹಿಳೆಯರನ್ನು ತನ್ನ ಕಾಮಕಾಂಡದ ಬಲಿಪಶು ಮಾಡಿರುವುದು ದೇಶದ ಇತಿಹಾಸದಲ್ಲಿಯೇ ಮೊದಲನೆಯ ಪ್ರಕರಣ.

ಪ್ರಜ್ವಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಅಂದ್ರೆ 17ನೇ ವಯಸ್ಸಿನಲ್ಲಿಯೇ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಆತನ ತಾಯಿ ಆ ಪ್ರಕರಣವನ್ನು ಹಣ ಕೊಟ್ಟು ಮುಚ್ಚಿ ಹಾಕಿದ್ದರು ಎಂದು ಹಿರಿಯ ಪತ್ರಕರ್ತರೊಬ್ಬರು ನೆನಪು ಮಾಡಿಕೊಂಡರು. ಪೆನ್‌ಡ್ರೈವ್‌ ಪ್ರಕರಣದಿಂದಾಗಿ ಹಾಸನದಲ್ಲಿ ಮುಚ್ಚಿ ಹೋದ ಹಲವು ಫೈಲ್‌ಗಳಿಗೆ ಜೀವ ಬರುವಂತಾದರೆ ಆ ಕುಟುಂಬದ ದಶಕಗಳ ದಬ್ಬಾಳಿಕೆ, ಭೂ ಕಬಳಿಕೆ, ಭ್ರಷ್ಟಾಚಾರಕ್ಕೊಂದು ಅಂತ್ಯ ಕಾಣಿಸಬಹುದು.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಪ್ರಕರಣದಲ್ಲಿ ಆರೋಪಿ ಸ್ವದೇಶಕ್ಕೆ ಬರುತ್ತಾನ?
    ಸಂತ್ರಸ್ತಯರಿಗೆ ನಿಜವಾಗಿ ನ್ಯಾಯ ಸಿಗುತ್ತಾ?
    ಕಾಲ ಮಾತ್ರ ಬಿಡೋಲ್ಲ,ಆದ್ರೆ ಅಲ್ಲಿಯವರೆಗೆ ಇವರ ಭ್ರಷ್ಟಾಚಾರ,ದಬ್ಬಾಳಿಕೆ ನಡೆಯುತ್ತೆ ಏನೊ, ಇದೊಂದು ಒಳ್ಳೆಯ ಸಮಯ ಹಾಸನದ ಈ ಕುಟುಂಬ ಮಟ್ಟ ಹಾಕಬೇಕು, ಆದ್ರೆ ನಿಷ್ಪಕ್ಷ ತನಿಖೆಯಾದ್ರೆ ಮಾತ್ರ,🤔

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮಹಾರಾಣಿ ಕಾಲೇಜು ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರಿನ ಮಹಾರಾಣಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಓರ್ವ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು...

ಪರಿಶಿಷ್ಟ ಪಂಗಡಗಳ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಸುಧಾರಿಸಿಲ್ಲ?: ಅಧಿಕಾರಿಗಳಿಗೆ ಸಿಎಂ ತರಾಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣದಲ್ಲಿ ಪರಿಶಿಷ್ಟ...

ಪಿಎಂ ಕಿಸಾನ್ | ರೈತರಿಗೆ ನೀಡುವ ‘ಪ್ರಸಾದ’ವಲ್ಲ ಕಾನೂನುಬದ್ಧ ಹಕ್ಕು: ಕಾಂಗ್ರೆಸ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (ಪಿಎಂ ಕಿಸಾನ್) 17ನೇ ಕಂತಿನ...

ದರ್ಶನ್ ಬಂಧನ | ಪೊಲೀಸರ ಪ್ರಾಮಾಣಿಕ ತನಿಖೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ಘಟನೆ ಬೆಳಕಿಗೆ: ದಯಾನಂದ

“ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಎಸಿಪಿ...