ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ -1 | ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿವೆ ಆಸ್ಪತ್ರೆಗಳು    

Date:

Advertisements
ಜನ ಆರೋಗ್ಯದ ಮೇಲೆ ಖರ್ಚು ಮಾಡುವ ಹಣದಲ್ಲಿ ಶೇ.70ರಷ್ಟು ಔಷಧಿಗಳಿಗೇ ವೆಚ್ಚವಾಗುತ್ತಿದೆ. ಔಷಧಿಗಳ ಬೆಲೆ ಹಾಗೂ ರೋಗನಿರ್ಣಯದ ವೆಚ್ಚ ಕಡಿಮೆಯಾದರೆ, ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸುತ್ತದೆ. ಆದರೆ, ಔಷಧಿಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ವಿಪರೀತ ವೇಗವಾಗಿ ಏರುತ್ತಿವೆ. ಈದಿನ.ಕಾಮ್ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸರಣಿಯನ್ನು ಪ್ರಕಟಿಸುತ್ತಿದ್ದು, ಅದರ ಮೊದಲ ಭಾಗ ಇಲ್ಲಿದೆ. 

ನಮ್ಮ ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ. ಬೆಂಗಳೂರಿನಲ್ಲಿ ವಿಕ್ರೋರಿಯಾ, ಬೌರಿಂಗ್ ಸೇರಿದಂತೆ ಹತ್ತಾರು ದೊಡ್ಡ ಸಾರ್ವಜನಿಕ ಆಸ್ಪತ್ರೆಗಳು, ವಾರ್ಡ್ ಆಸ್ಪತ್ರೆಗಳು, ನಗರ ವ್ಯಾಪ್ತಿಯ 225 ಸೇರಿದಂತೆ ರಾಜ್ಯದಲ್ಲಿ 400ಕ್ಕೂ ಹೆಚ್ಚು ‘ನಮ್ಮ ಕ್ಲಿನಿಕ್‌’ಗಳು ಇವೆ. ಇವೆಲ್ಲವೂ ಸರ್ಕಾರದ ಆರೋಗ್ಯ ಇಲಾಖೆಯಡಿಯಲ್ಲಿ ಬರುತ್ತಿದ್ದು, ನೇರ ಸರ್ಕಾರದ ಉಸ್ತುವಾರಿಯಲ್ಲಿ ನಡೆಯುತ್ತಿವೆ.

ಸರ್ಕಾರದ ನಿಯಮದ ಪ್ರಕಾರ, ಬಿಪಿಎಲ್ ಕಾರ್ಡುದಾರರಿಗೆ ಮತ್ತು ನಿರ್ದಿಷ್ಟ ಜನವರ್ಗಗಳಿಗೆ ಈ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ ಔಷಧಿಗಳನ್ನಾದರೂ ಉಚಿತವಾಗಿ ನೀಡಬೇಕು. ಕೆಲವು ಸೇವೆಗಳಿಗೆ ರಿಯಾಯಿತಿ ದರ ವಿಧಿಸಿ, ಆದಷ್ಟು ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸಬೇಕು. ಆದರೆ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಈ ಎಲ್ಲ ನಿಯಮಗಳು ಪಾಲನೆ ಆಗುತ್ತಿವೆಯೇ? ನಿರ್ದಿಷ್ಟ ಜನರಿಗಾದರೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ, ಔಷಧಿಗಳು ಸಿಗುತ್ತಿವೆಯೇ?

ಈ ಬಗ್ಗೆ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ) ಇತ್ತೀಚೆಗೆ ರಾಜ್ಯದ ವಿವಿಧೆಡೆ ಒಂದು ಸಮೀಕ್ಷೆ ನಡೆಸಿದೆ. ಅದರ ವರದಿಯು ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ.

Advertisements

ಎಸ್‌ಎಎಕೆ ವತಿಯಿಂದ ರ‍್ಯಾಪಿಡ್ ಸರ್ವೇ ನಡೆಸಲಾಗಿದೆ. ಈ ಸರ್ವೇ ಜುಲೈ 1ರಿಂದ ಜುಲೈ 19ರವರೆಗೆ ನಡೆದಿದೆ. ಈ ಸರ್ವೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಹೊರಭಾಗದಲ್ಲಿರುವ ಮೆಡಿಕಲ್ ಶಾಪ್‌ಗಳ ಬಳಿ ನಿಂತು ಒಟ್ಟು 600 ರೋಗಿಗಳನ್ನು ಮಾತನಾಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಔಷಧಿ ನೀಡುತ್ತಿಲ್ಲ; ಹೊರಗಡೆ ಅಂಗಡಿಗಳಲ್ಲಿ ತೆಗೆದುಕೊಳ್ಳಿ ಎಂದು ಚೀಟಿ ಬರೆದುಕೊಡುತ್ತಿದ್ದಾರೆ. 600 ಜನ ಹೊರಗಡೆ ಮಾತ್ರೆ ತೆಗೆದುಕೊಳ್ಳಲು ಖರ್ಚು ಮಾಡಿದ್ದು ಬರೋಬ್ಬರಿ ₹2.58 ಲಕ್ಷ ರೂಪಾಯಿ. ಅಂದರೆ, ಒಬ್ಬೊಬ್ಬ ರೋಗಿಗೆ 430 ರೂಪಾಯಿ ಔಷಧಿ ತೆಗೆದುಕೊಳ್ಳಲು ವೆಚ್ಚವಾಗಿದೆ.

ಉಚಿತ ಔಷಧಿ

ಎಸ್‌ಎಎಕೆ ಪ್ರಕಾರ, ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಶೇ.70% ರಷ್ಟು ಜನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಹಾಗೆ ಹೋಗುವವರು ತಮ್ಮ ಶೇ 70ರಷ್ಟು ಹಣವನ್ನು ಔಷಧಿ ಮತ್ತು ರೋಗನಿರ್ಣಯಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ.          

ಉಚಿತ ಆರೋಗ್ಯ ಸೇವೆ ಜನರ ಹಕ್ಕು ಎಂದಾಗಬೇಕು. ಆದರೆ, ಆರೋಗ್ಯ ಸೇವೆ ಎನ್ನುವುದು ಒಂದು ವ್ಯಾಪಾರವಾಗಿದೆ. ಇದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ ಕಂಡುಕೊಂಡು ವಾಸ್ತವ. ಹಾಗೆಂದು ಇದು ಕೇವಲ ಕರ್ನಾಟಕದ ಸ್ಥಿತಿ ಮಾತ್ರವಲ್ಲ. ತಮಿಳುನಾಡು, ಕೇರಳ, ರಾಜಸ್ಥಾನದಂಥ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇಂಥದ್ದೇ ಸ್ಥಿತಿ ಇದೆ.

ಭಾರತದಲ್ಲಿ ಕೋವಿಡ್‌ ನಂತರ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಹಣ ಇತ್ತೀಚಿನ ವರ್ಷಗಳಲ್ಲಿ ಹೆಚ್ದಾಗಿದೆ. ಆರೋಗ್ಯಕ್ಕಾಗಿ ಜನ ಖರ್ಚು ಮಾಡುವ ಪ್ರತಿ ನೂರು ರೂಪಾಯಿಯಲ್ಲಿ ಸರ್ಕಾರದ ಪಾಲು ಶೇ.40.6 ಆಗಿದ್ದರೆ, ಉಳಿದ ಶೇ.48.2% ರಷ್ಟು ಜನರ ‘ಸ್ವಂತ ಹಣ’ (out of the pocket expenditure) ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳು, ಔಷಧ ವ್ಯಾಪಾರಿಗಳ ಪಾಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಜನ ಆರೋಗ್ಯಕ್ಕಾಗಿ ಅತಿ ಹೆಚ್ಚು ‘ಸ್ವಂತ ಹಣ’ವನ್ನು ಖರ್ಚು ಮಾಡುತ್ತಿದ್ದು, ಅದರ ಪ್ರಮಾಣ ಶೇ.71.3 ಆಗಿದೆ.

ಇದಕ್ಕೆ ಪರಿಹಾರವಾಗಿ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕವು ರಾಜ್ಯವೂ ಕೂಡ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿದೆ. ಆಧಾರ್, ಪಡಿತರ ಇತ್ಯಾದಿ ಯಾವುದೇ ದಾಖಲೆ ಇಲ್ಲದೇ ಚಿಕಿತ್ಸೆ ನೀಡುವುದು, ಸಿಬ್ಬಂದಿ ಕೊರತೆ ತುಂಬುವುದು, ಆಶಾ ಕಾರ್ಯಕರ್ತೆಯರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವುದು ಇತ್ಯಾದಿಯಾಗಿ ಒಂದಿಷ್ಟು ಶಿಫಾರಸುಗಳನ್ನು ಮಾಡಿದೆ. ಅವುಗಳ ಪೈಕಿ ಅತ್ಯಂತ ಮುಖ್ಯವಾದದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತಮಿಳುನಾಡು ಮಾದರಿಯನ್ನು ಅಳವಡಿಸಿಕೊಳ್ಳುವುದು.

ತಮಿಳುನಾಡು ಆರೋಗ್ಯ ಸೇವೆಗಳ ಮಾದರಿ ಇಡೀ ದೇಶದಲ್ಲಿಯೇ ಇಂದು ಪ್ರಖ್ಯಾತವಾಗಿದೆ. ಅಷ್ಟೇ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮೆಚ್ಚುಗೆ ಪಡೆದಿದೆ. ತಮಿಳುನಾಡು ಮಾದರಿಯ ಬಗ್ಗೆ ತಿಳಿಯುವ ಮುನ್ನ ನಾವು ದೇಶದಲ್ಲಿ ಉಚಿತ ಔಷಧಿ ನೀಡುವ ಯೋಜನೆಗಳ ಜಾರಿ ಪ್ರಯತ್ನಗಳ ಬಗ್ಗೆ ತಿಳಿಯಬೇಕಾಗಿದೆ.              

ಭಾರತದಲ್ಲಿ ಅನೇಕ ವರ್ಷಗಳಿಂದ ಉಚಿತ ಔಷಧಿ ಯೋಜನೆಯ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ, ಉಚಿತ ಔಷಧ ಎನ್ನುವುದು ಕೇವಲ ಮಾತಿನಲ್ಲಿ ಉಳಿದಿದೆಯೇ ಹೊರತು ಯೋಜನೆಯಾಗಿ ಜಾರಿಯಾಗಿಲ್ಲ. ಕಡುಬಡವರು ಕೂಡ ಜೇಬಿನಿಂದ ಹಣ ಕೊಟ್ಟೇ ಔಷಧಿ ಖರೀದಿಸಬೇಕಾದ ಪರಿಸ್ಥಿತಿಯಿದೆ.

ಸರ್ಕಾರಿ ಆಸ್ಪತ್ರೆ

2012ರ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರವು ಶೀಘ್ರ ಉಚಿತ ಔಷಧಿ ಮತ್ತು ರೋಗನಿರ್ಣಯ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದ್ದರು. ಆದರೆ, ಅದು ಜಾರಿಗೆ ಬರಲಿಲ್ಲ. ಅದಾದ ನಂತರ 2014ರಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ನಂತರ, 2014ರ ಬಡ್ಜೆಟ್ ಭಾಷಣದಲ್ಲಿ ಅರುಣ್ ಜೇಟ್ಲಿ ಅವರು ಉಚಿತ ಔಷಧಿ ಮತ್ತು ರೋಗನಿರ್ಣಯ ಸೌಕರ್ಯಗಳನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಆದರೆ, ಅದಕ್ಕೆ ಹಣವನ್ನು ಮೀಸಲಿಡಲಿಲ್ಲ. ನಂತರ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಡಲೇ ಇಲ್ಲ. ಕೊರೊನಾ ನಂತರದಲ್ಲಿಯೂ ಆರೋಗ್ಯ ಕ್ಷೇತ್ರದ ಬಗ್ಗೆ ಕೇಂದ್ರವು ಉದಾಸೀನ ಮನೋಭಾವ ಮುಂದುವರೆಸಿದೆ.

ಇತ್ತೀಚೆಗೆ ಆರೋಗ್ಯ ವಿಮೆಗಳ ಮೇಲೆ ಜನ ಹೆಚ್ಚು ಖರ್ಚು ಮಾಡುತ್ತಿದ್ದರೂ ಅದು ಜನರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಾಯ ಮಾಡುತ್ತಿಲ್ಲ. ಕೇಂದ್ರ ಸರ್ಕಾರವು ದೇಶದ ಬಡಜನ ಆರೋಗ್ಯ ಸೇವೆಗಾಗಿ ಸ್ವಂತ ಹಣದ ಖರ್ಚನ್ನು (out of the pocket expenditure) ಕಡಿಮೆ ಮಾಡಲು ಆಯುಷ್ಮಾನ್ ಭಾರತ್ ಜನ ಆರೋಗ್ಯ ವಿಮೆ ಯೋಜನೆ ಜಾರಿಗೆ ತಂದಿತು. ಅದರ ಗುರಿ ಇರುವುದು 50 ಕೋಟಿ ಫಲಾನುಭವಿಗಳು. ಆದರೆ, ಇದುವರೆಗೆ ಈ ಯೋಜನೆಯಲ್ಲಿ 21.9 ಕೋಟಿ ಫಲಾನುಭವಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ, ಯೋಜನೆಯ ಗುರಿಯಲ್ಲಿ ಅರ್ಧದಷ್ಟನ್ನೂ ಮುಟ್ಟಲಾಗಿಲ್ಲ. ಜನವರಿ 2023ರ ಹೊತ್ತಿಗೆ ಈ ಯೋಜನೆಯನ್ವಯ 26.055 ಆಸ್ಪತ್ರೆಗಳ ಜಾಲದ ಮೂಲಕ 4.3 ಕೋಟಿ ಆಸ್ಪತ್ರೆ ದಾಖಲಾತಿಗಳಿಗಾಗಿ, 50,409 ಕೋಟಿ ರೂಪಾಯಿ ವ್ಯಯಿಸಲಾಗಿದೆ.

71 ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌) ಪ್ರಕಾರ, ಆರೋಗ್ಯ ವೆಚ್ಚದಿಂದಾಗಿ ಶೇ. 7% ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ಜೊತೆಗೆ ಈ ಅಂಕಿ ಅಂಶವು ಒಂದು ದಶಕದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಏರುತ್ತಿರುವ ಆರೋಗ್ಯ ವೆಚ್ಚಗಳಿಂದಾಗಿ ಸುಮಾರು 23% ರೋಗಿಗಳು ಆರೋಗ್ಯ ಕೆಟ್ಟರೂ ಆಸ್ಪತ್ರೆಗೆ ಹೋಗಲಾಗುತ್ತಿಲ್ಲ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಇದು ಹುಸಿ ದೇಶಭಕ್ತರ ಮೋದಿ ಕಾಲ; ಗಾಂಧಿ ಅವಮಾನಿಸುವ ಕಾಲ

2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳು ಮತ್ತು ರೋಗನಿರ್ಣಯದ ನಿಬಂಧನೆಗಳನ್ನು ನಿರ್ದಿಷ್ಟವಾಗಿ ಒತ್ತಿಹೇಳುತ್ತದೆ. ಆದರೆ, ದೇಶದಲ್ಲಿ ರೋಗಿಗಳಿಗೆ ಉಚಿತ ಅಗತ್ಯ ಔಷಧಿಗಳನ್ನು ಖಾತರಿಪಡಿಸುವ ಯಾವುದೇ ರಾಷ್ಟ್ರೀಯ ಯೋಜನೆ ಇನ್ನೂ ಜಾರಿಯಾಗಿಯೇ ಇಲ್ಲ.

ಒಂದು ಅಂದಾಜಿನ ಪ್ರಕಾರ, ಆರೋಗ್ಯದ ಮೇಲೆ ಖರ್ಚು ಮಾಡುವ ಹಣದಲ್ಲಿ ಶೇ.70ರಷ್ಟು ಔಷಧಿಗಳಿಗೇ ವೆಚ್ಚ ಮಾಡಲಾಗುತ್ತಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾದರೆ, ರೋಗನಿರ್ಣಯದ ವೆಚ್ಚಗಳು ಕಡಿಮೆ ಆದರೆ ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸುತ್ತದೆ. ಆದರೆ,  ಔಷಧಿಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ವಿಪರೀತ ವೇಗವಾಗಿ ಏರುತ್ತಲೇ ಹೋಗುತ್ತಿವೆ. ಔಷಧಿಗಳ ಬೆಲೆಗಳು ಹಾಗೆ ಒಂದೇ ಸಮನೆ ಏರಲು ಕಾರಣಗಳೇನು ಎನ್ನುವುದರಲ್ಲಿಯೇ ಭಾರತದ ಇಂದಿನ ಆರೋಗ್ಯ ಸೇವೆಯ ದುಃಸ್ಥಿತಿಯ ಬೀಜಗಳು ಅಡಗಿವೆ.

ಆ ಕಾರಣಗಳು ಏನು ಅನ್ನುವುದನ್ನು ಮುಂದಿನ ಭಾಗದಲ್ಲಿ ತಿಳಿಯೋಣ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X