‘ದಹಿ’ ವಿವಾದ | ಕರ್ನಾಟಕ, ತಮಿಳುನಾಡು ಆಕ್ರೋಶಕ್ಕೆ ಮಣಿದ ಎಫ್‌ಎಸ್‌ಎಸ್‌ಎಐ; ಪರಿಷ್ಕರಿಸಿ ಆದೇಶ

Date:

  • ನಂದಿನಿ ಕನ್ನಡಿಗರ ಆಸ್ತಿ ಮತ್ತು ಸ್ವಾಭಿಮಾನ ಎಂದು ಮಾಜಿ ಸಿಎಂ ಹೆಚ್‌ ಡಿಕೆ ಆಕ್ರೋಶ
  • ದಹಿ ಆದೇಶದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್

ಮೊಸರು ಮತ್ತು ಮುಂತಾದ ಹಾಲಿನ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಹಿಂದಿ ಹೆಸರು ‘ದಹಿ’ ಎಂದು ಮುದ್ರಿಸಬೇಕೆಂದು ಆದೇಶ ಹೊರಡಿಸಿದ್ದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆಕ್ರೋಶದ ಕಿಚ್ಚು ಹೆಚ್ಚಾದ ಹಿನ್ನಲೆಯಲ್ಲಿ ಆದೇಶವನ್ನು ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಫ್‌ಎಸ್‌ಎಸ್‌ಎಐ, “ಇತ್ತೀಚೆಗೆ ‘ದಹಿ’ ಎಂಬ ಪದವನ್ನು ಬಿಟ್ಟುಬಿಡುವುದರ ಕುರಿತು ಪ್ರತಿನಿಧಿಗಳಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಹೈನುಗಾರಿಕೆ ಸಂಘಸಂಸ್ಥೆಗಳು ‘ಕರ್ಡ್’ ಎಂಬ ಇಂಗ್ಲಿಷ್ ಪದನಾಮದೊಂದಿಗೆ ಆವರಣದಲ್ಲಿ ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರುಗಳನ್ನು ಬಳಸಬಹುದು” ಎಂದು ತಿಳಿಸಲಾಗಿದೆ.

ಕೆಲವು ದಿನಗಳ ಮೊದಲು ಪ್ರಾದೇಶಿಕ ಹೈನುಗಾರಿಕೆ ಉತ್ಪನ್ನಗಳಾದ ಮೊಸರಿನ ಪ್ಯಾಕೆಟುಗಳ ಮೇಲೆ ಕಡ್ಡಾಯವಾಗಿ ‘ದಹಿ’ ಪದ ಬಳಸಬೇಕು ಹಾಗೂ ಆವರಣದಲ್ಲಿ ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರುಗಳಾದ ಮೊಸರು, ತೈರ್, ಪೆರುಗು ಮುಂತಾದ ಸ್ಥಳೀಯ ಹೆಸರುಗಳನ್ನು ಆವರಣದಲ್ಲಿ ಮುದ್ರಿಸಬೇಕು” ಎಂದು ಎಫ್‌ಎಸ್‌ಎಸ್‌ಎಐ ಆದೇಶ ಹೊರಡಿಸಿತ್ತು.

ಈ ಸುದ್ದಿ ಓದಿದ್ದೀರಾ? ನಂದಿನಿ ಮೊಸರಿನ ಪೊಟ್ಟಣದಲ್ಲಿ ಹಿಂದಿ ಪದ ಬಳಸಲು ಆದೇಶ : ಕರ್ನಾಟಕ, ತಮಿಳುನಾಡಿನಲ್ಲಿ ಆಕ್ರೋಶ

ನಂದಿನಿ ಕನ್ನಡಿಗರ ಆಸ್ತಿ; ಹೆಚ್‌ಡಿಕೆ

ಎಫ್‌ಎಸ್‌ಎಸ್‌ಎಐನ ಹಿಂದಿ ಹೇರಿಕೆಯ ಏಕಪಕ್ಷೀಯ ನಿರ್ಧಾರದಿಂದ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ,“ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿದ್ದೇವೆ ಎಂದರೆ ಇಷ್ಟ ಬಂದಹಾಗೆ ಒಳ ನುಸುಳುವುದಲ್ಲ, ಸೌಮ್ಯವಾಗಿದ್ದೇವೆ ಎಂದರೆ ಸುಮ್ಮನಿದ್ದೇವೆ ಎಂದಲ್ಲ. ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮುಲ್ ಅಡಿಯಾಳಲ್ಲ. ಕರ್ನಾಟಕ ಭಾರತ ಗಣರಾಜ್ಯದ ಒಂದು ಭಾಗವೇ ಹೊರತು ಗುಜರಾತಿನ ವಸಾಹತುವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಂ ಕೆ ಸ್ಟಾಲಿನ್, ಅಣ್ಣಾಮಲೈ ವಿರೋಧ  

ದಹಿ ಆದೇಶಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿ, “ಹಿಂದಿ ಹೇರಿಕೆಯ ನಾಚಿಕೆಗೇಡುತನದ ಒತ್ತಾಯಗಳು ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುತ್ತವೆ. ಇದು ಮೊಸರು ಪೊಟ್ಟಣಕ್ಕೂ ಹಿಂದಿಯಲ್ಲಿ ಲೇಬಲ್ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸುವುದನ್ನು ಈ ಆದೇಶ ಖಚಿತಪಡಿಸುತ್ತದೆ” ಎಂದು ತಿಳಿಸಿದ್ದರು.

ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಬುಧವಾರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದಿದ್ದು,”ಈ ಅಧಿಸೂಚನೆಯು ಪ್ರಧಾನಿ ನರೇಂದ್ರ ಮೋದಿಯವರ ಪ್ರಾದೇಶಿಕ ಭಾಷೆಗಳ ಪ್ರಚಾರಕ್ಕೆ ಅನುಗುಣವಾಗಿಲ್ಲ. ರಾಜ್ಯ-ಚಾಲಿತ ಸಹಕಾರಿ ಹಾಲು ಸಂಘಗಳು ತಮ್ಮ ಪ್ರಾದೇಶಿಕ ಭಾಷೆಯನ್ನು ಬಳಸಲು ಅನುಮತಿಸಿ. ಈ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆಗಳು ತಯಾರಿಸುವ ಮೊಸರು ಸಾಕೆಟ್‌ಗಳಲ್ಲಿ ‘ದಹಿ’ ಅನ್ನು ಬಳಸುವ ಅಧಿಸೂಚನೆಯನ್ನು ಹಿಂಪಡೆಯಿರಿ” ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ವರ್ಷಗಳ ನಂತರ ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್‌ ನೀಡಿಕೆ

ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ ಮೆಹಬೂಬಾ ಮುಫ್ತಿ ಜಮ್ಮು- ಕಾಶ್ಮೀರ ಹೈಕೋರ್ಟ್‌ನಲ್ಲಿ ಮೆಹಬೂಬಾ...

ರೈತರಿಂದ ಖರೀದಿಸುವ ಹಾಲಿನ ನಿಗದಿ ದರ ಕಡಿತ ಮಾಡಬೇಡಿ; ಸಿಎಂ ಸೂಚನೆ

ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆ ಸಿಎಂ ಸೂಚನೆ ಹಾಲು...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...

ಒಡಿಶಾ ರೈಲು ದುರಂತ : ಘಟನಾ ಸ್ಥಳದ ಪಕ್ಕದಲ್ಲಿರುವುದು ಮಸೀದಿಯಲ್ಲ, ಮಂದಿರ

ಒಡಿಶಾದ ಬಾಲಾಸೋರ್‌ ಬಳಿ ನಡೆದ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದು,...