ಹಿಂದುತ್ವ ಅಂದರೆ ಹಿಂದುಗಳಿಗೆ ಹಿಂದುಗಳೇ ಅನ್ಯಾಯ ಮಾಡಿದರೆ ಬಾಯಿ ಮುಚ್ಚಿ ಕೂರುವುದಾ?‌

Date:

Advertisements

ಕಾರ್ಕಳದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯು ಪಾಲನೆ ಮಾಡುವ ಧರ್ಮ ಹಿಂದೂ ಧರ್ಮ ಎಂದು ಗೊತ್ತಾದಾಗ ನಿಮ್ಮ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದ್ದು ಯಾಕೆ ಸುನೀಲ್ ಅವರೇ ?

ಕಾರ್ಕಳ ಶಾಸಕ ಸುನೀಲ್ ಕುಮಾರ್‌ ಅವರೇ, ಹಿಂದುತ್ವ ಅಂದರೆ ಹಿಂದುಗಳಿಗೆ ಹಿಂದುಗಳೇ ಅನ್ಯಾಯ ಮಾಡಿದರೆ ಬಾಯಿ ಮುಚ್ಚಿ ಕೂರುವುದಾ? ಮುಸಲ್ಮಾನ ಮತ್ತು ಕ್ರಿಶ್ಚಿಯನ್ನರು ಮಾಡಿದರೆ ಬಿಜೆಪಿ ಹಾಗೂ ಸಂಘ ಪರಿವಾರದವರು ದಾರಿಯಲ್ಲಿ ಶಿಕ್ಷೆ ಕೊಡಬೇಕು ಎನ್ನುತ್ತೀರಿ! ಹಿಂದುಗಳು ಮಾಡಿದರೆ, ಅದನ್ನು ಕಾನೂನು‌ ನೋಡಿಕೊಳ್ಳಬೇಕು, ಆಗ ನಿಮ್ಮ ಬಾಯಿಗೆ ಬೀಗ ಅಲ್ಲವಾ?

ಕಾರ್ಕಳದ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯು ಪಾಲನೆ ಮಾಡುವ ಧರ್ಮ ಹಿಂದೂ ಧರ್ಮ ಎಂದು ಗೊತ್ತಾದಾಗ ನಿಮ್ಮ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದ್ದು ಯಾಕೆ ಸುನೀಲ್ ಅವರೇ ?

Advertisements

ನೀವಾಗಲಿ, ನಾನಾಗಲೀ ಅರ್ಜಿ ಹಾಕಿ ಹುಟ್ಟುವುದಿಲ್ಲ, ಎಲ್ಲರ ಹುಟ್ಟು ಆಕಸ್ಮಿಕ. ಆದರೆ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಲಿಕ್ಕೆ ಎರಡು ದಶಕಗಳಿಂದ ಅದೆಷ್ಟೋ ಬಾರಿ ಸಾವು ಹಾಗೂ ಕೊಲೆಗಳಲ್ಲಿ ಧರ್ಮ ನೋಡಿ ರಾಜಕೀಯ ಮಾಡುತ್ತಾ ಬಂದಿದ್ದೀರಿ. ಒಬ್ಬ ವ್ಯಕ್ತಿ ಮಾಡುವ ಒಳ್ಳೆ ಕೆಲಸಕ್ಕೆ ಆ ವ್ಯಕ್ತಿಯ ಧರ್ಮ ಕಾರಣ ಇರಬಹುದು, ಯಾಕೆಂದರೆ ಎಲ್ಲಾ ಧರ್ಮಗಳು ಬೋಧಿಸುವುದು ಒಳ್ಳೆಯದನ್ನೇ,ಕೆಟ್ಟ ಕೆಲಸ ಮಾಡುವ ವ್ಯಕ್ತಿ ಧರ್ಮ ಮಾರ್ಗವನ್ನು ತ್ಯಜಿಸಿದ್ದಾನೆಂದೇ ಅರ್ಥ. ಯಾವ ಧರ್ಮವೂ ಕೊಲೆ, ಅತ್ಯಾಚಾರ ಮಾಡಲು ಬೋಧಿಸುವುದಿಲ್ಲ.

ಇಂತಹ ಕೊಳಕು ರಾಜಕೀಯ ಮಾಡುತ್ತಾ, ನೀವು ಧರ್ಮ ಮಾರ್ಗದಿಂದ ಬಹಳ ದೂರ ಬಂದಾಗಿದೇ. ನೀವು ಮಾಡುವ ಎಲ್ಲಾ ಕೆಟ್ಟ ಕೆಲಸಗಳಿಗೆ ನಾವು ಹಿಂದೂ ಧರ್ಮವನ್ನು ದೂರಲು ಆಗುತ್ತಾ? ನಿಮಗೆ ಸರಿಯಾದ ಸಮಯದಲ್ಲಿ ಸರಿಯಾದ ಧರ್ಮ ಭೋಧನೆ ಆಗಲಿಲ್ಲ. ಹೊಡಿ-ಬಡಿ ಸಂಸ್ಕೃತಿಯ ಭಜರಂಗದಳದ ಪ್ರಭಾವದಿಂದ, ಸಂಘ ಪರಿವಾರದ ತರಬೇತಿಯಿಂದ ನೀವು ಅಧರ್ಮ ಮಾರ್ಗದಲ್ಲಿ ಸಾಗುತ್ತಾ ಇದ್ದೀರಿ ಅಷ್ಟೇ.

ನಿಮ್ಮ ಪರಿವಾರವು ಸೌಜನ್ಯ ಕೊಲೆ ವಿಚಾರಲ್ಲೂ ಮೊದಲು ಮುಸಲ್ಮಾನರ ಮೇಲೆ ಆರೋಪ ಹೊರಿಸಲು ಗದ್ದಲ ಮಾಡಿ ಕೊನೆಗೆ ಮೌನಕ್ಕೆ ಶರಣಾಯಿತು. ಪರೇಶ ಮೇಸ್ತಾನ ಕೊಲೆ ಜಿಹಾದಿಗಳಿಂದಾಗಿದೆ ಎಂದು ಚುನಾವಣೆಯನ್ನೇ ಗೆದ್ದ ಬಳಿಕ ಸಿಬಿಐ ಅದೊಂದು ಸಹಜ ಸಾವು ಅಂದಿತು. ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಾವು, ತಮ್ಮ ಪಕ್ಷದವರು ಬಹಿರಂಗವಾಗಿ ಕ್ಷಮೆ ಕೇಳಬೇಕಿತ್ತು. ಶಿವಮೊಗ್ಗದಲ್ಲಿ ಹರ್ಷ ಕೊಲೆಗೆ ತಮ್ಮ ಸಂಸದರು ಶವಯಾತ್ರೆ ಮಾಡುತ್ತಾರೆ. ಮಂಗಳೂರಿನ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಸದ, ಶಾಸಕರು ಮೌನವೃತ ಮಾಡುತ್ತಾರೆ.

ಸುನೀಲ್ ರವರೇ, ನೀವು ಹೆಬ್ರಿ ಸುಚೇತಾ ಕೊಲೆ ಪ್ರಕರಣದಿಂದ ರಾಜಕೀಯದಲ್ಲಿ ಅಬ್ಬರಿಸಲು ಪ್ರಾರಂಭಿಸಿದಿರಿ. ಶ್ರೀರಾಮ ದೇವರ ಮೇಲೆ ಆಣೆ ಹಾಕಿ ಹೇಳಿ ತಾವು ಸುಚೇತಾಗೆ ನ್ಯಾಯ ದೊರಕಿಸಿಕೊಟ್ಟಿರಾ? ತಾವು ಶಾಸಕರಾದ ಮೇಲೆ ತಮಗೆ ಆಕೆಯ ನೆನಪಿದೆಯಾ?

ಪರಶುರಾಮ ಸೃಷ್ಟಿ ಈ ಕರಾವಳಿ ಅನ್ನುತ್ತಾರೆ. ಪರಶುರಾಮ ಕಂಚಿನದ್ದೋ, ಫೈಬರ್‌ನದ್ದೋ ಎಂದು ಕರಾವಳಿಯ ಜನ ನೋಡಿದರು. ಅದರ ಉದ್ಘಾಟನಾ ಸಭೆಯನ್ನು ಅದ್ದೂರಿಯಾಗಿ ಮಾಡಿದಾಗ ಆ ಪ್ರತಿಮೆ ಪೂರ್ತಿ ಕಂಚಿನದ್ದೇ ಎಂದು ಹೇಳಿ ಕರಾವಳಿ ಜನರಿಗೆ ಕಿವಿ ಮೇಲೆ ದಾಸ್ವಾಳ ಇಟ್ಟದ್ದು ಹಿಂದೂ ವಿರೋಧಿ ಕೆಲಸವಲ್ಲವೇ ? ನಿಮ್ಮ ಆವೇಶ ನಿಮ್ಮ ಕೋಪ ನಿಮ್ಮ ಪ್ರತಿಭಟನೆಯನ್ನು ಬಿಜೆಪಿ ಪರ ಇರುವವರು ಆರೋಪಿಗಳಾಗಿರುವ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಏಕೆ ಇಲ್ಲ ಸುನೀಲ್? ನಾವೆಲ್ಲ ಭಾರತೀಯರು. ದಂಡ ಸಂಹಿತೆಯಲ್ಲಿ ಅಪರಾಧ ಮಾಡುವ ಹಾಗೂ ಅನ್ಯಾಯಕ್ಕೊಳಪಡುವ ವ್ಯಕ್ತಿಗಳ ಧರ್ಮ ಜಾತಿ ನೋಡಿ ಶಿಕ್ಷೆ ನೀಡುವ ಕ್ರಮ ಇಲ್ಲದಾಗ ನಿಮಗೆ ಏಕೆ ಉಸಾಬರಿ ಎಲ್ಲದರಲ್ಲೂ ‌ಧರ್ಮ ನೋಡುವ?

ಕಳೆದ ವರ್ಷ ಉಡುಪಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿಯರ ವೀಡಿಯೊ ಪ್ರಕರಣದಲ್ಲಿ ಹಿಂದು -ಮುಸ್ಲಿಮ್ ಮುಂದೆ ಮಾಡಿ, ಲವ್ ಜಿಹಾದ್‌ ಎಂದೆಲ್ಲ ಅರಚಾಡುತ್ತಾ ದೊಡ್ಡ ಗದ್ದಲ ಮಾಡಿದ ಬಿಜೆಪಿ ಕೊನೆಗೆ ಪ್ರಕರಣದಲ್ಲಿ ಹುರುಳಿಲ್ಲ ಎಂದು ಗೊತ್ತಾದ ತಕ್ಷಣ ಬಾಯಿ ಮುಚ್ಚಿತು. ಈಗ ಅರುಣ್ ಕುಮಾರ್ ಪುತ್ತಿಲ ಎಂಬ‌ ಭಜರಂಗದಳ ಬಿಜೆಪಿ ನಾಯಕರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅನೇಕ ಪ್ರಕರಣಗಳಲ್ಲಿ ಅತ್ಯಾಚಾರದ ಆರೋಪಿಗಳು ಹಿಂದುಗಳಾಗಿರುತ್ತಾರೆ. ವೀಡಿಯೋ ಮಾಡಿದ ಪ್ರಕರಣಗಳೂ ನಡೆದಿವೆ. ಪ್ರಜ್ವಲ್ ರೇವಣ್ಣ ಪ್ರಕರಣವೂ ನಡೆದಿದೆ, ಇವೆಲ್ಲಾ ಯಾವ ಜಿಹಾದ್?

ಸುನೀಲ್ ರವರೇ ಲವ್ ಜಿಹಾದ್ ಎಂಬ ಆರೋಪ ಹಾಕಿ ತಾವು ಒಂದು ಸಮುದಾಯವನ್ನೇ ಆರೋಪಿ‌ ಮಾಡುವಾಗ ಪುತ್ತಿಲ ಪ್ರಕರಣದಲ್ಲಿ ಏಕೆ ಸಂಘ ಪರಿವಾರವನ್ನೇ ಆರೋಪಿ ಮಾಡಬಾರದು? ಏಕೆ ಬಿಜೆಪಿಯನ್ನೇ ಅಪರಾಧಿ ಎನ್ನಬಾರದು? ನಿಮ್ಮ ಭಾಷೆ, ವರ್ತನೆ ಎಲ್ಲರಿಗೂ ಇಲ್ಲ. ಎಲ್ಲರೂ ಆರೋಪಿಯನ್ನು ಓರ್ವ ವ್ಯಕ್ತಿಯನ್ನಾಗಿ ನೋಡುತ್ತಾರೆ. ನಿಮ್ಮಂತಹ ಸ್ವಾರ್ಥ ರಾಜಕಾರಣಿಗಳು ಮಾತ್ರ ಆರೋಪಿಯ ಧರ್ಮವನ್ನು ನೋಡುತ್ತಾರೆ ಅಷ್ಟೇ.

ನೀವು ನಿಜವಾಗಿ ಹಿಂದೂ ವಿರೋಧಿ, ಧರ್ಮ ಶಾಸ್ತ್ರಗಳನ್ನೂ, ಸಂವಿಧಾನದ ಆಶಯಗಳನ್ನೂ ಎರಡನ್ನೂ ಗಾಳಿಗೆ ತೂರಿ ರಾಜಕೀಯ ಮಾಡುವ ತಮಗೆ ಶ್ರೀರಾಮ‌ ಮಾತ್ರ ಅಲ್ಲಾ ಪರಶುರಾಮ ಮಹರ್ಷಿಗಳೂ ತಕ್ಕ ಬುದ್ದಿ ಖಂಡಿತಾ ಕಲಿಸುತ್ತಾರೆ. ನನ್ನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ನೀಡಲು ತಮ್ಮಿಂದ ಸಾಧ್ಯ ಇದೆಯಾ?

ಅಮೃತ್ ಶೆಣೈ
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X