ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಇಂಗ್ಲಿಷ್‌ನಲ್ಲಿ ಸಿದ್ದಪಡಿಸಿ ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡಿಸುವ ಕ್ರಮವೇ ಅಕ್ರಮವಾದುದು. ಇಲ್ಲಿನ ಆಡಳಿತ ಭಾಷೆಯಲ್ಲಿ ಮೊದಲು ಅದನ್ನು ಸಿದ್ದಪಡಿಸದೆ ಇಂಗ್ಲಿಷ್‌ನಲ್ಲಿ ಸಿದ್ದಪಡಿಸುವುದು ಅನೈತಿಕ ನಡೆ. ಇದೇ ಸದ್ಯದ ಸಮಸ್ಯೆಯ ಮೂಲ. ಈ ಕ್ರಮ ಇರುವವರೆಗೂ ಇಂತಹ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ…
ಕರ್ನಾಟಕ ಲೋಕಸೇವಾ ಆಯೋಗ ಕಳೆದ ವಾರ ಅಂದರೆ ಆಗಸ್ಟ್ 27ರಂದು ಕೆಎಎಸ್ ಪ್ರಿಲಿಮಿನರಿ ಪರೀಕ್ಷೆ ನಡೆಸಿತ್ತು. ಪರೀಕ್ಷೆ ನಡೆದ ಒಂದು ವಾರದಲ್ಲಿಯೇ ರಾಜ್ಯ ಸರ್ಕಾರ ಅದನ್ನು ರದ್ದುಪಡಿಸಿ ಮರುಪರೀಕ್ಷೆಗೆ ಆದೇಶಿಸಿದೆ. ಇದನ್ನು ರಾಜಕೀಯ ಪಕ್ಷಗಳು, ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಪರೀಕ್ಷೆ ರದ್ದುಪಡಿಸಿ ಎಂದು ಒತ್ತಾಯಿಸಿದ ಮಾಧ್ಯಮಗಳು, ಕನ್ನಡ ಸಂಘಟನೆಗಳು ಎಲ್ಲವೂ ಸ್ವಾಗತಿಸಿವೆ. ಪ್ರಶ್ನೆ ಪತ್ರಿಕೆಯಲ್ಲಿದ್ದ ತಪ್ಪುಗಳು, ತಪ್ಪು ಬಹುಮಾದರಿ ಆಯ್ಕೆ ಉತ್ತರಗಳನ್ನು ಗುರುತಿಸಿ ಅದನ್ನು ಸರ್ಕಾರದ, ಜನರ ಗಮನಕ್ಕೆ ತರಲು ಅನೇಕರು ಶ್ರಮಿಸಿದ್ದರು. ಈ ಪರೀಕ್ಷೆ ನಡೆಯುವ ಮೊದಲೂ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದರು. ಆಯೋಗ ಹಠಹಿಡಿದು ಪರೀಕ್ಷೆಯನ್ನು ನಡೆಸಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿಯೇ ನೆನೆಯಬೇಕು. ಈಗ ಪರೀಕ್ಷೆ ನಡೆದು ಕೀ ಉತ್ತರಗಳನ್ನು ಪ್ರಕಟಿಸಿದ ನಂತರ ಪರೀಕ್ಷೆಯನ್ನೇ ರದ್ದುಪಡಿಸಿರುವುದು ಆಯೋಗಕ್ಕೆ ಮುಖಭಂಗವಾದಂತೆ ಆಗಿದೆ.
ಮರುಪರೀಕ್ಷೆನಡೆಸುವಂತಹ ದುಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಆಯೋಗದ ಬಗೆಗೆ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ. ಸಾರ್ವಜನಿಕ ಸೇವೆಗೆಂದೇ ಇರುವ ಸಾಂವಿಧಾನಿಕ ಸಂಸ್ಥೆಯೊಂದು ಬೇಜಾಬ್ದಾರಿಯಿಂದ ವರ್ತಿಸಿದರೆ ಅದರಿಂದ ಸಂಭವಿಸುವ ಹಾನಿಗಳೇನು? ಎಂಬುದನ್ನು ಇಲ್ಲಿ ಗಮನಿಸಲೇಬೇಕಿದೆ. ಮೊದಲಿಗೆ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ನಡೆಯುವುದು ಐದಾರು ವರ್ಷಗಳಿಗೆ ಒಮ್ಮೆ. ಉದ್ಯೋಗಾಕಾಂಕ್ಷಿಗಳು ಈ ಪರೀಕ್ಷೆಗಾಗಿಯೇ ಚಾತಕ ಪಕ್ಷಿಗಳಂತೆ ಕಾದು ಹಲವು ವರ್ಶಗಳ ಸಿದ್ದತೆ ನಡೆಸಿರುತ್ತಾರೆ. ಲಕ್ಷಾಂತರ ಉದ್ಯೋಗಾಕಾಂಕ್ಶಿಗಳು ಇದನ್ನೇ ನೆಚ್ಚಿಕೊಂಡು ಬದುಕಿಗೊಂದು ಆಸರೆ ಕಂಡುಕೊಳ್ಳುವ ಕನಸು ಕಟ್ಟಿರುತ್ತಾರೆ. ಅದಕ್ಕಾಗಿ ತಮ್ಮ ತಾರುಣ್ಯದ ಅಪರೂಪದ ಕಾಲವನ್ನು ಶ್ರಮವನ್ನು ವ್ಯಯಿಸಿರುತ್ತಾರೆ. ಇಂತಹ ಪರೀಕ್ಷೆಗಳಿಗೆ ಕಠಿಣ ಪರಿಶ್ರಮದಿಂದ ಸಿದ್ಧತೆ ನಡೆಸಿ ಒಂದು ಬಾರಿ ಪರೀಕ್ಷೆ ಬರೆಯುವುದೇ ದೊಡ್ಡ ಸವಾಲಾಗಿರುತ್ತದೆ. ಪರೀಕ್ಷೆ ಸಿದ್ದತೆಯ ಹೊತ್ತಿನಲ್ಲಿ ಅಭ್ಯರ್ಥಿಗಳು ಎದುರಿಸುವ ಮಾನಸಿಕ ಒತ್ತಡವನ್ನು ಅನುಭವಿಸಿದವರಿಗೇ ಗೊತ್ತು. ಆ ಒತ್ತಡ ನಿದ್ದೆ ಆಹಾರವನ್ನು ಕಸಿದುಕೊಂಡಿರುತ್ತವೆ. ಇದನ್ನು ಮೀರಲಾಗದೆ ಅನೇಕರು ಕೆಲವು ಚಟಗಳಿಗೂ ಬಲಿಯಾಗುತ್ತಾರೆ. ಹೀಗೀರುವಾಗ ಪರೀಕ್ಷೆಯೇ ರದ್ದಾಗಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯುವಂತಹ ಪರಿಸ್ಥಿತಿ ಎದುರಾದರೆ ಅವರ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮವೇನು? ಎಂಬುದರ ಅಂದಾಜು ಆಯೋಗಕ್ಕೆ ಇರಬೇಕಲ್ಲವೇ?
ಅಲ್ಲದೆ ಇಂತಹ ಪರೀಕ್ಷೆಗಳನ್ನು ನಡೆಸಲು ಸಾವಿರಾರು ಜನರ ಶ್ರಮ ಬಳಕೆಯಾಗಿರುತ್ತದೆ. ಈ ಪರೀಕ್ಷೆಯನ್ನು ನಡೆಸಲು ಸುಮಾರು 4 ಕೋಟಿ ಹಣ ಖರ್ಚಾಗಿದೆಯೆಂದು ಪತ್ರಿಕೆಗಳು ವರದಿ ಮಾಡಿವೆ. ಪರೀಕ್ಷೆ ರದ್ದಾದ ಕಾರಣ ಈ ಹಣ ಇಡಿಯಾಗಿ ವ್ಯರ್ಥವಾಗಿ ಹೋಯಿತು. ಈ ನಷ್ಟವನ್ನು ಭರಿಸುವವರು ಯಾರು? ಈಗ ಮತ್ತೆ ಪರೀಕ್ಷೆಯನ್ನು ನಡೆಸುವುದರಿಂದ ಆಯೋಗಕ್ಕೆ ಸರ್ಕಾರಕ್ಕೆ ಅರ್ಥಾತ್ ಅಂತಿಮವಾಗಿ ಜನರಿಗೇ ನಷ್ಟವಲ್ಲವೇ? ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿದಂತಾಗುವುದಲ್ಲವೇ? ಈ ಬಗೆಗೆ ಆಯೋಗಕ್ಕೆ ಎಚ್ಚರ ಇರಬೇಕಲ್ಲವೇ? ಈ ಪ್ರಶ್ನೆಗಳನ್ನು ಆಯೋಗಕ್ಕೆ ಕೇಳಲೇಬೇಕಿದೆ. ಇದು ಕೇವಲ ಈ ಒಂದು ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲ. ಇಂತಹ ಹಲವು ಎಡವಟ್ಟುಗಳನ್ನು ಆಯೋಗ ಮಾಡುತ್ತಲೇ ಬಂದಿರುವ ಉದಾಹರಣೆಗಳಿವೆ. ಹಾಗಾಗಿ ಆಯೋಗ ತನ್ನ ಒಟ್ಟು ಕಾರ್ಯ ಚಟುವಟಿಕೆಗಳಲ್ಲಿಯೇ ಇನ್ನಷ್ಟು ಕಾರ್ಯದಕ್ಷತೆ, ಪಾರದರ್ಶಕತೆಯನ್ನು ಕಂಡುಕೊಳ್ಳಲು ಯತ್ನಿಸಬೇಕಿದೆ. ಇಂತಹ ಸಮಸ್ಯೆಗಳಿಂದ ಸಾರ್ವಜನಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಜನರ ವಿಶ್ವಾಸವೇ ಕಳೆದುಹೋಗುತ್ತದೆ.
ಪ್ರತಿ ನೇಮಕಾತಿಗಳಲ್ಲಿಯೂ ಒಂದಲ್ಲ ಒಂದು ಬಗೆಯ ಹಗರಣಕ್ಕೆ ತುತ್ತಾಗಿಯೇ ನೇಮಕಾತಿಗಳು ನಡೆಯುವುದು ಸಾಮಾನ್ಯವಾಗಿ ಹೋಗಿದೆ. ಪರೀಕ್ಷೆಯ ನಂತರದ ಮೌಲ್ಯಮಾಪನಗಳಂತೂ ಅಧ್ವಾನವಾಗಿರುತ್ತವೆ. ಇಪ್ಪತ್ತೈದು ವರ್ಷಗಳ ಹಿಂದೆ ಎಫ್‍ಡಿಎ ಪರೀಕ್ಷೆಯನ್ನು ಬರೆದಿದ್ದೆ. ಮೌಲ್ಯಮಾಪನವಾಗಿ ಫಲಿತಾಂಶ ಬಂದಾಗ ಮುನ್ನೂರು ಅಂಕಗಳಿಗೆ 90 ಅಂಕಗಳು ಬಂದಿದ್ದವು. ಮೌಲ್ಯಮಾಪನದಲ್ಲಿ ದೋಷಗಳು ಕಂಡುಬಂದವೆಂದು ಮರು ಮೌಲ್ಯಮಾಪನ ಮಾಡಿದಾಗ 180 ಅಂಕಗಳು ಬಂದಿದ್ದವು. ಆದರೂ ಆಯ್ಕೆಯಾಗಲಿಲ್ಲ. ಅದು ಬೇರೆಯ ವಿಚಾರ. ಆದರೆ ಸ್ಪರ್ಧಾತ್ಮಕ ಪರೀಕ್ಷೆಯ ಮೌಲ್ಯ ಮಾಪನವೊಂದರಲ್ಲಿ 180 ಅಂಕಗಳು ಬರುವ ಕಡೆ 90 ಅಂಕಗಳು ಬರುತ್ತವೆ ಎಂದರೆ ಅದರ ಭೀಕರ ಪರಿಣಾಮವನ್ನು ಊಹಿಸಲಾದೀತೆ? ಒಂದು, ಅರ್ಧ ಅಂಕಗಳಲ್ಲಿ ರ್ಯಾಂಕ್ ವ್ಯತ್ಯಾಸವಾಗಿ ಆಯ್ಕೆಯೇ ಆಗದೆ ಹೋಗುವ ಸಾಧ್ಯತೆಗಳಿರುವಾಗ ನೂರು ಅಂಕಗಳು ವ್ಯತ್ಯಾಸವಾಗುತ್ತದೆಯೆಂದರೆ ಆಯೋಗದ ಕ್ಷಮತೆಯೇ ಪ್ರಶ್ನೆಗೆ ಒಳಗಾಗುತ್ತದೆ. ಇಂತಹ ದೋಷಗಳು ಎಲ್ಲ ನೇಮಕಾತಿಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ನಡೆದೇ ಇರುತ್ತದೆ. ಹಗರಣಗಳಿಗಾಗಿಯೇ ದಶಕಗಳಿಂದ ಆಯೋಗ ಕುಖ್ಯಾತಿ ಪಡೆದಿದೆ. ಇದು ಆಯೋಗದಲ್ಲಿ ಸಾಮಾನ್ಯ ಎಂಬಂತಾಗಿ ಜನರು ಅದಕ್ಕೆ ಒಗ್ಗಿ ಹೋಗಿದ್ದಾರೆ.
ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ ಸ್ಪಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲೆಂದೇ ಸ್ಥಾಪಿತವಾಗಿರುವ ಸಾಂವಿಧಾನಿ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗ. ಇದು 1951ರ ಮೇನಲ್ಲಿ ಆರಂಭವಾಯಿತು. ಇಲ್ಲಿಗೆ 74 ವರ್ಷಗಳು ಕಳೆದು ಅಮೃತ ಮಹೋತ್ಸವದ ಕಡೆಗೆ ಮುಖ ಮಾಡಿದೆ. ಅಂದರೆ ಪರೀಕ್ಷೆಗಳನ್ನು ನಡೆಸುವ ಮೂಲಕವೇ ನೇಮಕಾತಿ ನಡೆಸುವುದು ಆಯೋಗದ ಪ್ರಧಾನ ಕೆಲಸ. ಅಂದರೆ ಈ ಸಂಸ್ಥೆಗೆ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಅನುಭವ ಇರಲೇಬೇಕಲ್ಲವೇ? ಇಂತಹ ಅನುಭವಿ ಸಂಸ್ಥೆಯೊಂದು ಅತಿಮುಖ್ಯವಾದ ಪರೀಕ್ಷೆಯೊಂದರ ಪ್ರಶ್ನೆಪತ್ರಿಕೆಯ ಕನ್ನಡ ಆವೃತ್ತಿಯಲ್ಲಿ ತಪ್ಪುಗಳು ಇರುವಂತೆ ಹೊಣೆಗೇಡಿತನ ಪ್ರದರ್ಶಿಸಿರುವುದು ಅಕ್ಷಮ್ಯ. ಎರಡು ಕಾರಣಕ್ಕೆ ಅದು ಅಕ್ಷಮ್ಯ. ಒಂದು, ಅನುಭವಿ ಸಂಸ್ಥೆಯೊಂದು ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಉಳಿದಿರುವಂತೆ ಕಾರ್ಯನಿರ್ವಹಿಸಿದ್ದು. ಎರಡು, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ಅಂತಹ ಭಾಷೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಹೊಣೆ ಆಯೋಗದ ಮೇಲಿದೆ. ಅದು ಸರ್ಕಾರಿ ಸಂಸ್ಥೆ. ಆಡಳಿತ ಭಾಷೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಕನ್ನಡದ ಬಳಕೆಯನ್ನು ಹೆಚ್ಚಿಸಿ ಕನ್ನಡದ ಬೇರುಗಳನ್ನು ಸದೃಢಗೊಳಿಸಬೇಕು. ಅದರ ಗೌರವ ಘನತೆಗಳನ್ನು ಹೆಚ್ಚಿಸಬೇಕು. ಆದರೆ ಕಳಪೆ ಅನುವಾದದಿಂದ ಇಡೀ ಪರೀಕ್ಷಾ ಪ್ರಕ್ರಿಯೆಗಳನ್ನೇ ಹಾಳುಗೆಡವಿದ್ದು ತಪ್ಪು. ಕನ್ನಡಿಗರಿಗೆ ಕರ್ನಾಟಕದ ಜನರಿಗಾಗಿಯೇ ಇರುವ ಸಂಸ್ಥೆಯೊಂದು ಕನ್ನಡದ ಬಳಕೆಯಲ್ಲಿ ಉಡಾಫೆತನ ತೋರುವುದು ಮತ್ತೂ ಅಕ್ಷಮ್ಯ. ವೃತ್ತಿಪರತೆಯಿಂದ ಕೆಲಸ ಮಾಡಬೇಕಾದ ಸಂಸ್ಥೆಯೊಂದು ತನ್ನ ಬೇಜವಾಬ್ದಾರಿತನದಿಂದ ಪರೀಕ್ಷಾ ವ್ಯವಸ್ಥೆಗೆ ಕಳಂಕ ತಂದಿದೆ.
ಇದಲ್ಲದೆ ಈ ಪರೀಕ್ಷೆಗೆ 75 ಪುಟಗಳಷ್ಟು ಉದ್ದವಾಗಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿರುವುದು ಅವೈಜ್ಞಾನಿಕ. ಎರಡು ಗಂಟೆಗಳ ಅವಧಿಯಲ್ಲಿ ಇಷ್ಟು ಉದ್ದವಾದ ಪ್ರಶ್ನೆ ಪತ್ರಿಕೆಯನ್ನು ಓದಿ ಅರ್ಥಮಾಡಿಕೊಂಡು ಉತ್ತರಿಸುವುದು ಕಡು ಕಷ್ಟದ ಕೆಲಸ. ಪ್ರಶ್ನೆ ಪತ್ರಿಕೆ ಓದಿ ಗ್ರಹಿಸಿಕೊಳ್ಳಲಿಕ್ಕೆ ಸಾಕಷ್ಟು ಸಮಯಬೇಕಾಗುತ್ತದೆ. ಇಂತಹ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಾಧ್ಯವಾದಷ್ಟು ಚುಟುಕಾಗಿ ಇರಬೇಕಾಗುತ್ತದೆ. ಆಗ ಮಾತ್ರವೇ ಅದು ಸ್ಪರ್ಧಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ವಿಷಯದಲ್ಲಿ ಆಳವಾದ ಜ್ಞಾನವನ್ನು ಪತ್ತೆ ಹತ್ತುವ ಗುಣ ಪ್ರಶ್ನೆ ಪತ್ರಿಕೆಗೆ ಇರಬೇಕು. ಆದರೆ ಪ್ರಶ್ನೆ ಪತ್ರಿಕೆಯನ್ನು ಅಸಂಬದ್ಧವಾಗಿ ಉದ್ದವಾಗಿ ರೂಪಿಸುವುದರಿಂದ ಅದು ಗೊಂದಲವನ್ನು ಹುಟ್ಟಿಸುತ್ತದೆಯೇ ಹೊರತು ಪರೀಕ್ಷೆಯ ಗುಣಮಟ್ಟವನ್ನು ಹೆಚ್ಚಿಸುವುದಿಲ್ಲ. ಏಳು ದಶಕಗಳಿಂದ ಪರೀಕ್ಷೆಗಳನ್ನೇ ನಡೆಸುತ್ತಿರುವ ಆಯೋಗಕ್ಕೆ ಇಂತಹ ಕನಿಷ್ಠ ತಿಳಿವಳಿಕೆ ಇಲ್ಲದಿರುವುದು ವ್ಯಂಗ್ಯವೇ ಸರಿ. ಹಾಗಾಗಿ ಇಂತಹ ಉದ್ದನೆಯ ಪ್ರಶ್ನೆ ಪತ್ರಿಕೆ ರೂಪಿಸುವುದನ್ನು ಮೊದಲು ಆಯೋಗ ನಿಲ್ಲಿಸಬೇಕು. ಮರುಪರೀಕ್ಷೆಯಲ್ಲಿ ಈ ಬಗೆಗೆ ಎಚ್ಚರ ವಹಿಸಲೇಬೇಕು. ವೈಜ್ಞಾನಿಕವಾದ ಮಾನದಂಡಗಳನ್ನು ಅನುಸರಿಸಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಬೇಕು. ಆಯೋಗ ಈ ದಿಸೆಯಲ್ಲಿ ಗಂಭೀರವಾಗಿ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳಲೇಬೇಕಿದೆ.
ಇಲ್ಲಿ ಗಮನಿಸಲೇಬೇಕಿರುವ ಮತ್ತೊಂದು ಮುಖ್ಯ ಸಂಗತಿಯೆಂದರೆ, ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಇಂಗ್ಲಿಷ್‌ನಲ್ಲಿ ಸಿದ್ದಪಡಿಸಿ ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡಿಸುವ ಕ್ರಮವೇ ಅಕ್ರಮವಾದುದು. ಇಲ್ಲಿನ ಆಡಳಿತ ಭಾಷೆಯಲ್ಲಿ ಮೊದಲು ಅದನ್ನು ಸಿದ್ದಪಡಿಸದೇ ಇಂಗ್ಲಿಷ್‌ನಲ್ಲಿ ಸಿದ್ದಪಡಿಸುವುದು ಅನೈತಿಕ ನಡೆ. ಇದೇ ಸದ್ಯದ ಸಮಸ್ಯೆಯ ಮೂಲ. ಈ ಕ್ರಮ ಇರುವವರೆಗೂ ಇಂತಹ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸುವ ಕ್ರಮ ಮೊದಲು ಬದಲಾಗಬೇಕು. ಕನ್ನಡದಲ್ಲಿ ಮೊದಲು ರಚನೆಯಾಗಿ ನಂತರ ಅದನ್ನು ಇಂಗ್ಲಿಷಿಗೆ ಅನುವಾದಿಸಿಕೊಳ್ಳುವುದು ಸುಲಭವಾದುದು. ಹಾಗಾಗಿ ಆಯೋಗವು ಇಂಗ್ಲಿಷಿನಲ್ಲಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವುದನ್ನು ಮೊದಲು ನಿಲ್ಲಿಸಬೇಕು. ಈ ಬಗೆಗೆ ಸರ್ಕಾರ ಕಠಿಣ ತೀರ್ಮಾನ ಕೈಗೊಳ್ಳಬೇಕು. ಇಂಗ್ಲಿಷಿನ ಯಜಮಾನಿಕೆ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲೇಬೇಕು. ಈ ಬದಲಾವಣೆಗೆ ದೊಡ್ಡ ತೊಡಕಾಗಿರುವುದು ಐಎಸ್‍ಎಸ್ ಅಧಿಕಾರಿಗಳು. ಒಕ್ಕೂಟ ಸರ್ಕಾರದಿಂದ ನೇಮಕವಾಗಿ ಬರುವ ಐಎಎಸ್ ಅಧಿಕಾರಿಗಳು ಹೊರರಾಜ್ಯಗಳಿಂದ ಬರುತ್ತಾರೆ. ಅವರಿಗೆ ಕನ್ನಡ ಬಾರದು. ಈ ಕಾರಣಕ್ಕಾಗಿಯೇ ಇಂಗ್ಲಿಷ್‌ನ ಯಜಮಾನಿಕೆ ಉಳಿದಿದೆ. ಅದನ್ನು ಉಳಸಿಕೊಳ್ಳಲೆಂದೇ ಇಂಗ್ಲಿಷ್ ನಲ್ಲಿ ಸಿದ್ದಪಡಿಸಲಾಗುತ್ತದೆ.
ಹೊರರಾಜ್ಯಗಳಿಂದ ಬಂದ ಅಧಿಕಾರಿಗಳಿಗೆ ಸ್ಥಳೀಯ ಭಾಷೆಗಳ ಬಗೆಗೆ ಕಾಳಜಿಯಿರುವುದಿಲ್ಲ. ಅದರಲ್ಲಿಯೂ ಹಿಂದಿ ಪ್ರದೇಶದಿಂದ ಬಂದವರಿಗೆ ತಮ್ಮದು ರಾಷ್ಟ್ರಭಾಷೆಯೆಂಬ ಹಮ್ಮಿರುತ್ತದೆ. ಅದನ್ನು ಬೆಳೆಸುವ ಉಮೇದೂ ಇರುತ್ತದೆ. ಹಾಗೆಯೇ ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿತು ಬಂದ ಅಧಿಕಾರಿಗಳಿಗೆ ಇಂಗ್ಲಿಷ್ ಮೋಹವಿರುತ್ತದೆ. ಇಂತಹ ಹಿಂದಿ ಇಂಗ್ಲಿಷ್ ಮೋಹವಿರುವ ಅಧಿಕಾರಿಗಳು ಹಾಗೂ ಮೇಲ್ವರ್ಗದ ಹಿತಾಸಕ್ತಿಗಳ ಬಗೆಗೆ ಮಾತ್ರ ಕಾಳಜಿಗಳಿರುವ ಅಧಿಕಾರಿಗಳು ಇದ್ದರೆ ಅಂತಹ ಸಂದರ್ಭದಲ್ಲಿ ಕನ್ನಡ ತಲೆಯೆತ್ತದಂತೆ ನೋಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರ ನೂರಾರು ಆದೇಶಗಳನ್ನು ಮಾಡಿ ಕನ್ನಡಲ್ಲಿಯೇ ಆಡಳಿತ ನಡೆಸಲು ಯತ್ನಿಸಿದರೂ ಅದಕ್ಕೆ ಮಣ್ಣು ಮುಕ್ಕಿಸುವ ಕೆಲಸ ಮಾಡುವುದು ಇಂತಹ ಭಾಷಾ ದುರಭಿಮಾನಿ ಅಧಿಕಾರಿಗಳೇ ಆಗಿರುತ್ತಾರೆ. ಈಗಲೂ ಅಂತಹದೇ ಅಧಿಕಾರಗಳ ಹೊಣೆಗೇಡಿತನದಿಂದಲೇ ಸಮಸ್ಯೆ ಹುಟ್ಟಿರುವುದು. ಹಾಗಾಗಿ ಇಂತಹ ದುರಭಿಮಾನಿ ಅಧಿಕಾರಿಗಳನ್ನು ಆಯೋಗದಿಂದ ದೂರವಿಡುವ ಅನಿವಾರ್ಯತೆ ಇದೆ. ಕನ್ನಡದ ಬಗೆಗೆ ಈ ರಾಜ್ಯದ ಉದ್ದಾರದ ಬಗೆಗೆ ಕಾಳಜಿಯಿರುವ ಅಧಿಕಾರಿಗಳನ್ನು ಆಯೋಗಕ್ಕೆ ವರ್ಗಾಯಿಸಿಕೊಳ್ಳಬೇಕಿದೆ.
ಇದನ್ನೂ ಓದಿ ಕೋವಿಡ್ ಹಗರಣ | 2,200 ಕೋಟಿ ಭ್ರಷ್ಟಾಚಾರ ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗುವುದೇ?
ಇದನ್ನೂ ಓದಿ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆಗಳ ಪರಿಶೀಲಿಸಿ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ
ಇದಲ್ಲದೆ ಆಯೋಗ ತನ್ನ ನೇಮಕಾತಿಗಳಲ್ಲಿ ಪಾರದರ್ಶಕತೆ ತರಬೇಕಿದೆ. ಸ್ವಜನ, ಸ್ವಜಾತಿ ಪಕ್ಷಪಾತಗಳನ್ನು ದೂರವಿಡಬೇಕಿದೆ. ಎಲ್ಲ ಬಗೆಯ ಭ್ರಷ್ಟಾಚಾರದಿಂದ ಆಯೋಗವನ್ನು ಮುಕ್ತಗೊಳಿಸಬೇಕಿದೆ. ರಾಜಕೀಯ ಪಕ್ಶಗಳ ಜೀತದಾಳುಗಳಂತೆ ಆಯೋಗದ ಸದಸ್ಯರು, ಅಧಿಕಾರಿಗಳು ಕೆಲಸ ಮಾಡಬಾರದು. ಬಲಿಷ್ಠ ಜಾತಿಗಳ, ಮಠಗಳ, ನಾಯಕರ ಮರ್ಜಿಗಳಿಗೂ ಬಲಿಯಾಗಬಾರದು. ಆಗ ಮಾತ್ರವೇ ಸಂವಿಧಾನದ ಮೌಲ್ಯಗಳನ್ನು ಜಾರಿಗೆ ತರಲು ಸಾಧ್ಯ. ಅರ್ಹತೆ, ಪ್ರತಿಭೆ ಮತ್ತು ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಲು ಸಾಧ್ಯ. ಇದಾಗದೆ ಆಯೋಗ ಸದಾ ಒಂದಿಲ್ಲೊಂದು ಹಗರಣಕ್ಕೆ ಸುದ್ದಿಯಾಗುವುದು ಎಲ್ಲರಿಗೂ ತಿಳಿದ ಸಂಗತಿ. ಇದು ದಶಕಗಳಿಂದಲೂ ನಡೆದುಕೊಂಡೇ ಬರುತ್ತಿದೆ. ಹಾಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಬಗೆಗೆ ಜನರಲ್ಲಿ ಸದಭಿಪ್ರಾಯವೇ ಇಲ್ಲ. ಅದು ಭ್ರಷ್ಟರಿಂದ ಭ್ರಷ್ಟರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಇಷ್ಟೆಲ್ಲ ಅಕ್ರಮಗಳ ನಡುವೆಯೂ ಆಯೋಗದ ಪರೀಕ್ಷೆಗಳಿಂದ ಸಾವಿರಾರು ಜನರು ತಮ್ಮ ಪ್ರತಿಭೆ ಸಾಮರ್ಥ್ಯಗಳಿಂದ ಆಯ್ಕೆಯಾಗಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಆಯೋಗವೇ ಸಾರ್ವಜನಿಕರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕಾದ ಜರೂರು ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಅಂತಹ ಬದಲಾವಣೆಗಳು ಬಾರದೇ ಹೋದರೆ ಜನರಿಗೆ ಸಾಂವಿಧಾನಿಕ ಸಂಸ್ಥೆಗಳ ಬಗೆಗೆ ಭ್ರಮನಿರಸನವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗಿಬಿಡುತ್ತದೆ. ಇದನ್ನು ಹಾಳಾಗಲು ಬಿಡದೇ ಕಾಪಾಡಿಕೊಳ್ಳುವ ಹೊಣೆ ಇಡೀ ರಾಜ್ಯದ ಜನರ ಮೇಲೆಯೇ ಇದೆ.

ರಂಗನಾಥ ಕಂಟನಕುಂಟೆ
ಲೇಖಕ, ಕನ್ನಡ ಪ್ರಾಧ್ಯಾಪಕ
ನಿಜ. ನೀವೇನೋ ಬರೆದುಬಿಟ್ಟಿರಿ. ನೋಡೋಣ ಪಾರದರ್ಶಕತೆ ಬರಬಹುದೆಂದು ಆಶಿಸೋಣ ಅಲ್ವಾ.
Students kas exam bareyalu madiruva expenses koduvavaru yaru ? Exam center 200 km , journey charge, lodging, food, auto, 3 day’s time to spend on kas exam ( journey, exam day, return day ) total ₹ 5000 andru ,exam atten madiddu 1.60.000 * 5000 haki nodi 80 cr yaru kodthare, e murkha kpsc or government or yenadru prashne madoda maretiruva e society