ಯಾರದೋ ಪ್ರತಿಷ್ಠೆ, ಇನ್ಯಾರದೋ ರಾಜಕೀಯ ಬೇಳೆ ಬೇಯಿಸಲಿಕ್ಕೆ ನಾಡು ನುಡಿಯ ಹೆಸರಲ್ಲಿ ಅವಕಾಶವಿರಬಾರದು. ಸಾಹಿತ್ಯ ಪರಿಷತ್ತನ್ನು ಮತ್ತು ಕನ್ನಡವನ್ನು ಕಟ್ಟಿ ಬೆಳೆಸಿದವರು ಇಂತಹ ಹುಚ್ಚಾಟಗಳಿಗೊಂದು ಕೊನೆ ಹಾಡಬೇಕಿದೆ.
ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಇದರೊಂದಿಗೆ ಸಮ್ಮೇಳನದ ಕುರಿತು, ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಕುರಿತು ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ನೀಡಿದ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. “ನನ್ನಂತೆ ಸಾಹಿತ್ಯೇತರ ವ್ಯಕ್ತಿಗಳು ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷʼ ರಾಗಬಹುದಾದರೆ, ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಅಲ್ಲದ ಯಾರಾದರೂ ಯಾಕೆ ಅಧ್ಯಕ್ಷರಾಗಬಾರದು?” ಇಂತಹ ಒಂದು ಪ್ರಶ್ನೆಯನ್ನು ಸಮಾಜದ ಮುಂದಿರಿಸುವ ಮೂಲಕ, ಸಾಹಿತಿಯಲ್ಲದವರಿಗೆ ಅಧ್ಯಕ್ಷರಾಗುವ ಅವಕಾಶ ನೀಡಿದ ಕನ್ನಡಿಗರ ಔದಾರ್ಯ ಎಂತಹ ಅವಾಂತರ, ಅಪಸವ್ಯಗಳಿಗೆ ಕಾರಣವಾಗಬಹುದು ಎನ್ನುವುದಕ್ಕೊಂದು ಸರಿಯಾದ ಉದಾಹರಣೆಯೇ ಆಗಿದ್ದಾರೆ.
ಕನ್ನಡ ನಾಡಿನ ಜನ ಸಾಹಿತ್ಯ ಪರಿಷತ್ತಿನಂತಹ ನುಡಿಯ ಗುಡಿಗೆ, ನಾಡು ನುಡಿಯನ್ನು ಜತನದಿಂದ ಪೊರೆಯುವ ಮತ್ತು ಸೃಜನಾತ್ಮಕ ಕಾರ್ಯಗಳ ಮೂಲಕ ಬೆಳೆಸುವ ಸಾಹಿತಿಯಲ್ಲದವರನ್ನು ಆಯ್ಕೆ ಮಾಡುವ ಮೂಲಕ ತಾವು ಎಂತಹ ತಪ್ಪು ಮಾಡಿದ್ದೇವೆ ಎನ್ನುವುದು ಈಗಲಾದರೂ ಅರ್ಥವಾಗಿದ್ದರೆ ಸಾಕು. ಜನಮನದ ಆಸೆ ಆಕಾಂಕ್ಷೆಗಳನ್ನು, ನೋವು ಸಂಕಟಗಳನ್ನ, ವರ್ತಮಾನದ ತವಕ, ತಲ್ಲಣಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಗಳು ಸಂವಾದಗಳು ಗೋಷ್ಠಿಗಳನ್ನು ಆಯೋಜನೆ ಮಾಡಿ. ಕನ್ನಡದ ನೆಲ, ಜಲ, ನುಡಿ, ಸಂಸ್ಕೃತಿಯ ಬೆಳೆವಣಿಗೆಗಳನ್ನು ಕೇಂದ್ರವಾಗಿರಿಸಿದ ಒಂದು ಕಾರ್ಯಸೂಚಿಯನ್ನು ಸಾಹಿತ್ಯ ಸಮ್ಮೇಳನಗಳು ಲಾಗಾಯ್ತಿನಿಂದಲೂ ಆಳುವವರ ಮತ್ತು ಉಳುವವರ ಎದುರು ಪ್ರಸ್ತುತಪಡಿಸುತ್ತಾ ಬಂದಿವೆ. ಈ ಕೆಲಸವನ್ನು ಮುಂದುವರಿಸಬೇಕಿದ್ದರೆ ಅಧಿಕಾರ, ಅಹಂಕಾರ, ರಾಜಕೀಯ ನಂಟು ಇದ್ದರಷ್ಟೇ ಸಾಕಾಗುವುದಿಲ್ಲ. ಜನಮನದ ಆಸೆ, ಆಕಾಂಕ್ಷೆ, ದುಡಿಯುವ ಜನರ ಬೇನೆ, ಬೇಸರಿಕೆಗಳು, ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸಮೀಕರಣದ ಹಿಂದಿನ ಕಾರ್ಯ, ಕಾರಣಗಳ ಬಗ್ಗೆ ಆಳವಾದ ಜ್ಞಾನ ವಿಲ್ಲದೇ ಹೋದರೂ ಕನಿಷ್ಠ ತಿಳಿವಳಿಕೆಯಾದರೂ ಇರಬೇಕು. ಒಂದು ವೇಳೆ ಅದಿಲ್ಲದೇ ಹೋದರೆ, ತಮ್ಮ ಅರಿವಿನ ಮಿತಿ, ಪರಿಮಿತಿಗಳ ಎಚ್ಚರವಿದ್ದರೂ ಸಾಕಾಗುತ್ತದೆ.

ನಾಡು ಕಟ್ಟುವ ಕೆಲಸ ಯಾರಾದರೂ ಒಬ್ಬ ಮಾಡುವ ಕೆಲಸವಲ್ಲ. ಒಂದೊಮ್ಮೆ ಹಾಗೇನಾದರೂ ಇದ್ದರೆ ಅದು ನಾಡು ಕಟ್ಟುವ ಕೆಲಸವಾಗದೇ, ಯಾರದೋ ಹಬ್ಬದ ಲಾಡು ಕಟ್ಟುವ ಕೆಲಸವಷ್ಟೇ. ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಬಗ್ಗಿಸುವ, ತನ್ನಿಚ್ಛೆಗೆ ಸರಿಯಾಗಿ ಎಲ್ಲರನ್ನು ಒಗ್ಗಿಸುವ ಕೆಲಸ ಮಾಡುವುದಕ್ಕೆ ಜನರ ತೆರಿಗೆಯ ದುಡ್ಡು ಸುರಿಯುವ ದರ್ದು ಆದರೂ ಏನು?
ಸಾಹಿತ್ಯ ಸಮ್ಮೇಳನಕ್ಕೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದಾದರೆ ಅದು ಸಾಹಿತ್ಯ ಸಮ್ಮೇಳನ ಹೇಗಾಗುತ್ತದೆ? ಅಂತಹ ಸಮ್ಮೇಳನಕ್ಕೆ ಜನರ ತೆರಿಗೆಯ ಹಣ ಯಾಕೆ ವ್ಯಯ ಆಗಬೇಕು? ಯಾರದೋ ಪ್ರತಿಷ್ಠೆ ಬೆಳೆಸುವ, ಇನ್ಯಾರದೋ ಬೇಳೆ ಬೇಯಿಸಲಿಕ್ಕೆ ನಾಡು ನುಡಿಯ ಹೆಸರಲ್ಲಿ ಅವಕಾಶವಿರಬಾರದು. ಸಾಹಿತ್ಯ ಪರಿಷತ್ತನ್ನು, ಕನ್ನಡವನ್ನು ಕಟ್ಟಿ ಬೆಳೆಸಿದವರು ಇಂತಹ ಹುಚ್ಚಾಟಗಳಿಗೊಂದು ಕೊನೆ ಹಾಡಬೇಕಿದೆ. ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಕುರಿತ ನಿಯತ್ತು ಉಳಿಯಬೇಕು, ಬೆಳೆಯಬೇಕು.
ಇದನ್ನೂ ಓದಿ ಮಂಡ್ಯ ಸಮ್ಮೇಳನ | ಜೋಶಿಯವರು ಸಾಹಿತ್ಯ ವೇದಿಕೆಯನ್ನು ರಾಡಿ ಎಬ್ಬಿಸಲು ಹೊರಟಿದ್ದಾರೆಯೇ?
ಇದನ್ನೂ ಓದಿ ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ
ಯಾರು ಬೇಕಾದರೂ ಸಮ್ಮೇಳನಾಧ್ಯಕ್ಷರಾಗಬಹುದಾದ ಸ್ಥಿತಿಗೆ ಕನ್ನಡ ಸಾಹಿತ್ಯ ಪರಿಷತ್ತು ತಲುಪಿದೆ ಎಂದಾದರೆ, ಅದು ಸಾಹಿತ್ಯ ಪರಿಷತ್ತು ಆಗಿ ಉಳಿದಿಲ್ಲ ಎಂದೇ ತಿಳಿಯಬೇಕಾಗಿದೆ. ಮಾತು ಮಾತಿಗೆ ಕಾನೂನು ಹೀಗಿದೆ, ಹಾಗಿದೆ ಎಂದು ಹೇಳುವ ಪ್ರಸ್ತುತ ಅಧ್ಯಕ್ಷರು ಕಾನೂನು ಹೇಳದೇ ಇರುವ, ನಾಡು ನುಡಿಯ ಭವಿಷ್ಯದ ಕುರಿತಂತೆ ಆರು ಕೋಟಿ ಕನ್ನಡಿಗರ ಮಾತು ಕೇಳುವ, ತಾಯಿ ಭುವನೇಶ್ವರಿಯ ಹಿರಿಮೆ- ಗರಿಮೆ ಅರಿತು ನಡೆಯುವ ಸೂಕ್ಷ್ಮತೆ ಕಳೆದುಕೊಂಡಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇಂತಹ ಅನುಮಾನಗಳ ಮಧ್ಯೆ ಸಾಹಿತ್ಯ ಮತ್ತು ಪರಿಷತ್ತು ಎರಡೂ ಬೆಳೆಯಲಾರದು. ಸರಕಾರ ಈ ಕುರಿತು ಚಿಂತನೆ ನಡೆಸಿ ಸಾಹಿತ್ಯ ಮರೆತು, ಇನ್ನೇನನ್ನೋ ಮೆರೆಸಲು ಹೊರಟ ಪರಿಷತ್ತಿನ ಭವಿಷ್ಯ ನಿರ್ಧರಿಸಬೇಕಿದೆ.

ಡಾ ಉದಯ್ ಕುಮಾರ್ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com