ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ ಬಡವರಿಗೆ ನೆರವಾಗುವ ಆರೋಗ್ಯ ಕೇಂದ್ರಗಳು

Date:

Advertisements
ಅಮೆರಿಕಾದಲ್ಲಿ ಜನಿಸಿ ಅಲ್ಲಿಯೇ ಹುಟ್ಟಿ ಬೆಳೆದ ಡಾ. ವಿವೇಕ್ ಮೂರ್ತಿ ಅವರಿಗೆ ಗ್ರಾಮ ಭಾರತದ ಸಮಸ್ಯೆಗಳ ಕುರಿತಾಗಿ ಆಳವಾದ ಜ್ಞಾನವಿಲ್ಲ. ಗ್ರಾಮಭಾರತದ ಬಡಜನತೆಯು ಎಂದಿಗೂ ಪೌಷ್ಟಿಕ ಆಹಾರ ತಿಂದು ಶರೀರದ ತುಂಬಾ ಬೊಜ್ಜು ಬೆಳೆಸಿಕೊಂಡವರಲ್ಲ ಮತ್ತು ನಗರ ಸಂಸ್ಕೃತಿಯ ಒತ್ತಡದಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲ. ಅವರಿಗೆ ದೇಹವನ್ನು ಕರಗಿಸಲು ಯೋಗ, ವ್ಯಾಯಾಮ ಬೇಕಿಲ್ಲ ಹಾಗೂ ಮಾನಸಿಕ ನೆಮ್ಮದಿಗಾಗಿ ಧ್ಯಾನವೂ ಬೇಕಾಗಿಲ್ಲ. ಇವೆಲ್ಲವೂ ಉಳ್ಳವರ ಜಗತ್ತಿನ ವ್ಯಸನ ಕೇಂದ್ರಗಳು.

ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯ ಜಿಲ್ಲೆಯ ನನ್ನೂರು ಸಮೀಪ ಇರುವ ಹಲ್ಲೇಗೆರೆ ಗ್ರಾಮಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ದಂಪತಿಗಳು ಮತ್ತು ಬೌದ್ಧ ಧರ್ಮದ ಧರ್ಮಗುರು ದಲೈಲಾಮ ಬರುತ್ತಿದ್ದಾರೆ. ಅಮೇರಿಕಾದಲ್ಲಿರುವ ಹಲ್ಲೇಗೆರೆ ಗ್ರಾಮದ ಡಾ. ವಿವೇಕ್ ಮೂರ್ತಿ ಅವರು ಬರಾಕ್ ಒಬಾಮ ಅವಧಿಯಲ್ಲಿ ಮತ್ತು ಈಗಿನ ಅಧ್ಯಕ್ಷ ಬಿಡೆನ್ ಅವಧಿಯಲ್ಲಿ ಎರಡು ಬಾರಿ ಅಮೆರಿಕಾದ 19 ಮತ್ತು 21ನೇ ಯುನೈಟೆಡ್ ಸ್ಟೇಟ್ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಗೆ ಏರಿದ ಪ್ರಥಮ ಭಾರತೀಯ ವೈದ್ಯ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಇದರ ಜೊತೆಗೆ ಕಳೆದ ವರ್ಷ ಅಧ್ಯಕ್ಷ ಬಿಡೆನ್ ಅವರು ಡಾ.ವಿವೇಕ್ ಮೂರ್ತಿಯವರನ್ನು ವಿಶ್ವಸಂಸ್ಥೆಯ ಅಂಗ ಘಟಕವಾದ ವಿಶ್ವ ಆರೋಗ್ಯ ಸಂಘಟನೆಗೆ ಅಮೆರಿಕಾದ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ..

ವಿವೇಕ್ ಮೂರ್ತಿಯವರ ತಂದೆ ಡಾ.ಲಕ್ಷ್ಮಿನರಸಿಂಹಮೂರ್ತಿಯವರು 1970ರ ದಶಕದಲ್ಲಿ ಅಮೆರಿಕಾಕ್ಕೆ ಹೋಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಅಲ್ಲಿಯೇ ಶಾಶ್ವತವಾಗಿ ನೆಲೆ ನಿಂತರು. 1977 ರಲ್ಲಿ ಜನಿಸಿದ ಡಾ.ವಿವೇಕ್ ಅವರು ತಂದೆಯಂತೆ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಅಲ್ಲಿನ ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಬರಾಕ್ ಒಬಾಮ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಿವೇಕ್ ಮೂರ್ತಿ ಒಬಾಮ ಅಧ್ಯಕ್ಷರಾಗಿದ್ದಾಗ ಸರ್ಜನ್ ಹುದ್ದೆಗೆ ಏರಿದ್ದರು. ಕಳೆದ ಅವಧಿಯಲ್ಲಿ ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದ ಕಾರಣ ಹುದ್ದೆ ತ್ಯಜಿಸಿದ್ದ ಇವರು ಮತ್ತೆ ತಮ್ಮ ಪಕ್ಷದ ಬಿಡೆನ್ ಅಧಿಕಾರಕ್ಕೆ ಬಂದಾಗ ಅದೇ ಹುದ್ದೆಯನ್ನು ಅಲಂಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಣಕ | ಹನಿ ಟ್ರ್ಯಾಪ್ ಎಲ್ಲ ಹಳೇದು, ಈಗ ಏನಿದ್ರು ಗುರು ಟ್ರ್ಯಾಪ್!

Advertisements

ಹಲ್ಲೇಗೆರೆ ಗ್ರಾಮದಲ್ಲಿ ತಮ್ಮ ತಂದೆ ಲಕ್ಷ್ಮಿನರಸಿಂಹಮೂರ್ತಿಯವರ ಪಾಲಿಗೆ ಬಂದಿರುವ ಹದಿಮೂರು ಎಕರೆ ಪಿತ್ರಾರ್ಜಿತ ಆಸ್ತಿಯಾದ ಭೂಮಿಯಲ್ಲಿ ಇದೀಗ ತಂದೆ ಮತ್ತು ಮಗ ಇಬ್ಬರೂ ಸೇರಿ ಮದರ್ ಆಫ್ ಅರ್ಥ್ (ಭೂಮಿತಾಯಿ) ಹೆಸರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಯೋಗ ಮತ್ತು ಧ್ಯಾನದ ಕೇಂದ್ರವನ್ನು ತೆರೆಯುತ್ತಿದ್ದಾರೆ. ಸ್ಕೋಪ್ ಫೌಂಡೇಶನ್ ಸಹಕಾರದಿಂದ ಸುಮಾರು ನೂರು ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ತೆರೆಯುತ್ತಿದ್ದು ಉದ್ಘಾಟನೆಗೆ ಬರಾಕ್ ಒಬಾಮ ಆಗಮಿಸುತ್ತಿದ್ದಾರೆ. ತಂದೆಮಗ ಇಬ್ಬರೂ ವೈಯಕ್ತಿಕವಾಗಿ ಈ ಯೋಜನೆಗೆ ಐವತ್ತೈದು ಕೋಟಿ ರೂಪಾಯಿ ಹಣ ವಿನಿಯೋಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕಾದಲ್ಲಿ ಜನಿಸಿ ಅಲ್ಲಿಯೇ ಹುಟ್ಟಿ ಬೆಳೆದ ಡಾ. ವಿವೇಕ್ ಮೂರ್ತಿಗೆ ಗ್ರಾಮ ಭಾರತದ ಸಮಸ್ಯೆಗಳ ಕುರಿತಾಗಿ ಆಳವಾದ ಜ್ಞಾನವಿಲ್ಲ. ಆದರೆ, ಅಂದಿನ ಬಡತನದ ಭಾರತವನ್ನು ತ್ಯಜಿಸಿ ಅಮೆರಿಕಾಕ್ಕೆ ಹೋದ ಡಾ.ಲಕ್ಷ್ಮಿನರಸಿಂಹಮೂರ್ತಿಯವರಿಗೆ ಇಲ್ಲಿನ ಸಮಸ್ಯೆ ಬಗ್ಗೆ ಅರಿವಿತ್ತು. ಗ್ರಾಮಭಾರತದ ಬಡಜನತೆಯು ಎಂದಿಗೂ ಪೌಷ್ಟಿಕ ಆಹಾರ ತಿಂದು ಶರೀರದ ತುಂಬಾ ಬೊಜ್ಜು ಬೆಳೆಸಿಕೊಂಡವರಲ್ಲ ಮತ್ತು ನಗರ ಸಂಸ್ಕೃತಿಯ ಒತ್ತಡದಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲ. ಅವರಿಗೆ ದೇಹವನ್ನು ಕರಗಿಸಲು ಯೋಗ, ವ್ಯಾಯಾಮ ಬೇಕಿಲ್ಲ ಹಾಗೂ ಮಾನಸಿಕ ನೆಮ್ಮದಿಗಾಗಿ ಧ್ಯಾನವೂ ಬೇಕಾಗಿಲ್ಲ. ಇವೆಲ್ಲವೂ ಉಳ್ಳವರ ಜಗತ್ತಿನ ವ್ಯಸನ ಕೇಂದ್ರಗಳು. ಈ ಕಾರಣದಿಂದಾಗಿ ಇಂದು ಭಾರತದಲ್ಲಿ ಬಾಬಾ ರಾಮದೇವ್, ನಿತ್ಯಾನಂದ, ಜಗ್ಗಿ ವಾಸುದೇವ್ ಮತ್ತು ರವಿಶಂಕರ ಗುರೂಜಿ ಸೇರಿದಂತೆ ದೇಶಾದ್ಯಂತ ಸಾವಿರಾರು ನಕಲಿ ಸನ್ಯಾಸಿಗಳಿಗೆ ಯೋಗ ಮತ್ತು ಧ್ಯಾನ ಎಂಬುದು ಲಾಭದಾಯಕ ಉದ್ದಿಮೆಗಳಾಗಿವೆ.

Vivek murthy

ಮಳೆ ಬಿದ್ದ ನೆಲಕ್ಕೆ ನೇಗಿಲು ಕಟ್ಟುವ ರೈತ ದನಗಳ ಕಾಲಿಗೆ ನೇಗಿಲಿನ ತುದಿ ತಾಗಬಾರದು ಎಂದು ತದೇಕಚಿತ್ತದಿಂದ ಭೂಮಿ ಮತ್ತು ನೇಗಿಲು ನೋಡುತ್ತಾ ಹೊಲ ಉಳುವ ಪರಿ ಇದೆಯೆಲ್ಲಾ ಅದು ಎಲ್ಲಾ ಧ್ಯಾನ ಮತ್ತು ಯೋಗಕ್ಕಿಂತ ಮಿಗಿಲಾದುದು. ನಮ್ಮ ವಸ್ತ್ರಗಳನ್ನು ನೇಯುವ ನೇಕಾರ ಅರೆಬೆತ್ತಲಾಗಿ ಕುಳಿತು ನೂಲಿನ ಎಳೆ ತುಂಡಾಗದಂತೆ ನೋಡುತ್ತಾ ಸೀರೆ ಅಥವಾ ಪಂಚೆ ನೇಯುವ ಪರಿ ಹಾಗೂ ನಮ್ಮ ಅಕ್ಕ ತಂಗಿಯರು ಗದ್ದೆಗಳಲ್ಲಿ ನಡು ಬಗ್ಗಿಸಿ ಪೈರು ನಾಟಿ ಮಾಡುವುದು ಅಥವಾ ಕಳೆ ಕೀಳುವುದು ಇವುಗಳ ಮುಂದೆ ಯೋಗ ಅಥವಾ ಧ್ಯಾನವೆಂಬುದು ಅವರ ಕಾಲಿನ ದೂಳಿಗೆ ಸಮನಾದವು.

ಮೈಬಗ್ಗಿಸಿ ದುಡಿಯುವ ಈ ಜನಕ್ಕೆ ಈಗ ಬೇಕಾಗಿರುವುದು ಹೊಟ್ಟೆ ತುಂಬಾ ಆಹಾರ ಮತ್ತು ವೈದ್ಯಕೀಯ ಸೇವೆ. ಇಂದಿನ ದಿನಗಳಲ್ಲಿ ವೈದ್ಯನಿಂದ ಸೇವೆ ಪಡೆಯುವುದಕ್ಕೆ ಮುನ್ನ ಆತನ ಮುಖವನ್ನು ನೋಡಲು ನಾವು ಕನಿಷ್ಠ ಮುನ್ನೂರ ಐವತ್ತು ರೂಪಾಯಿಗಳಿಂದ ಐನೂರು ರೂಪಾಯಿ ಪಾವತಿಸಬೇಕಿದೆ. ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು ಸಕಾಲಕ್ಕೆ ವೈದ್ಯರು ದೊರಕದೆ ಬಡವರ ಪಾಲಿಗೆ ನೆಲದ ಮೇಲಿನ ನರಕವಾಗಿ ಮಾರ್ಪಟ್ಟಿವೆ. ಒಂದು ಸಣ್ಣ ಕಾಯಿಲೆಗೆ ನಗರಕ್ಕೆ ಬಂದು ವೈದ್ಯರನ್ನು ಕಂಡು ಅವರು ಸೂಚಿಸುವ ದುಬಾರಿ ಔಷಧಗಳನ್ನು ಕೊಳ್ಳಲು ಕನಿಷ್ಠ ಒಂದು ಸಾವಿರ ಬೇಕು. ಅಂದರೆ ಅವರ ಎರಡು ದಿನದ ಕೂಲಿ ಹಣ ಜೊತೆಗೆ ಒಂದು ದಿನದ ಕೆಲಸ ಖೋತ. ಈ ಕಾರಣಕ್ಕಾಗಿ ಬಹುತೇಕ ಹಳ್ಳಿಯ ಜನರು ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ.

ಇಂದು ಹಳ್ಳಿಗಳಲ್ಲಿ ಆಕಸ್ಮಿಕವಾಗಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇಕಡ ಎಂಬತ್ತರಷ್ಟು ಸಾವುಗಳು ಚಿಕಿತ್ಸೆ ಇಲ್ಲದೆ ಹಲವು ಕಾಯಿಲೆಗಳಿಂದ ಸಂಭವಿಸುತ್ತಿವೆ. ತಂದೆ ಮಗ ಇಬ್ಬರೂ ಅಮೆರಿಕಾದಲ್ಲಿ ತಾವು ನೋಡಿದ ದುಂದು ವೆಚ್ಚದ ಐಷಾರಾಮದ ಬದುಕಿಗೆ ಭಾರತದಲ್ಲಿ ಪರ್ಯಾಯ ಮಾರ್ಗ ಹುಡುಕುತ್ತಿರುವುದು ನನ್ನ ದೃಷ್ಟಿಯಲ್ಲಿ ಅರ್ಥಹೀನ ಕ್ರಿಯೆಯಾಗಿದೆ. ಈ ಹಣದಲ್ಲಿ ಸಂಚಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಹಳ್ಳಿಯ ಜನರ ಸಾಮಾನ್ಯ ಕಾಯಿಲೆಗಳಾದ ಕಣ್ಣಿನ ದೃಷ್ಟಿ, ದಂತಗಳ ಸಮಸ್ಯೆ, ಮೂಳೆ ಕಾಯಿಲೆ, ಗರ್ಭಿಣಿಯರಿಗೆ ಸಲಹೆ ಹೀಗೆ ಹಲವಾರು ಸಮಸ್ಯೆಗಳಿಗೆ ಕನಿಷ್ಠ ಒಂದು ಸಂಚಾರಿ ಆಸ್ಪತ್ರೆ ಇಪ್ಪತ್ತು ಹಳ್ಳಿಗಳಿಗೆ ಸೇವೆ ಸಲ್ಲಿಸಬಹುದು. ಈ ಯೋಜನೆಯ ನೂರು ಕೋಟಿ ಹಣದಲ್ಲಿ ಹತ್ತು ಆಸ್ಪತ್ರೆಗಳನ್ನು ತೆರೆಯಬಹುದಾಗಿದೆ.

ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮ ನೆಲಕ್ಕೆ ಸ್ವರ್ಗ ಇಳಿದು ಬರುತ್ತಿದೆ ಎಂಬ ಭ್ರಮೆಯನ್ನು ತೊರೆದು ಡಾ. ವಿವೇಕ್ ಮೂರ್ತಿ ಮತ್ತು ಅವರ ತಂದೆಗೆ ಗ್ರಾಮಾಂತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವುದು ಒಳಿತು. ಗ್ರಾಮ ಭಾರತಕ್ಕೆ ಯೋಗವೂ ಬೇಡ, ಧ್ಯಾನವೂ ಬೇಡ ಅವುಗಳನ್ನು ಅಮೆರಿಕಾದಲ್ಲಿ ಆರಂಭಿಸಿ. ಆದರೆ, ಹುಟ್ಟಿದ ನೆಲಕ್ಕೆ ವೈದ್ಯಕೀಯ ಸೇವೆ ಅಗತ್ಯವಾಗಿದೆ ಎಂದು ಮಂಡ್ಯದ ಜನಪ್ರತಿನಿಧಿಗಳು ಮತ್ತು ಪ್ರಜ್ಞಾವಂತ ನಾಗರಿಕರು ಹೇಳಬೇಕಿದೆ. ಈ ಕಾರ್ಯ ಉಳಿದ ಅನಿವಾಸಿ ಭಾರತೀಯರಿಗೂ ಸ್ಪೂರ್ತಿಯಾಗಬಲ್ಲದು.

Capture 2
ಡಾ. ಎನ್ ಜಗದೀಶ್ ಕೊಪ್ಪ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X