ಚಂದ್ರಬಾಬು ನಾಯ್ಡು ಬಂಧನ: ಆಂಧ್ರದಲ್ಲಿ ಮುಂದೇನಾಗಲಿದೆ? 

Date:

ಜಗನ್ ಸರ್ಕಾರವು ಈಗ ನಾಯ್ಡು ಅವರನ್ನು ಬಂಧಿಸುವ ಮೂಲಕ ಸಂಘರ್ಷವನ್ನು ತೀವ್ರಗೊಳಿಸಿದೆ. ಟಿಡಿಪಿಯು ಮಾಜಿ ಮುಖ್ಯಮಂತ್ರಿಯ ಬಂಧನವನ್ನೇ ರಾಜಕೀಯ ಅಸ್ತ್ರವಾಗಿ ಬಳಸಿ, ಅವರ ಪರವಾಗಿ ಜನರ ಸಿಂಪಥಿ ಗಿಟ್ಟಿಸಲು ಯತ್ನಿಸುತ್ತಿದೆ. ಆದರೆ, ಟಿಡಿಪಿಗೆ ಅಂಥ ಅವಕಾಶ ಕೊಡಬಾರದೆಂದು ಜಗನ್ ಸರ್ಕಾರವು ಆ ಪಕ್ಷದ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿಟ್ಟಿದೆ. 

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಮತ್ತು ತೆಲುಗು ದೇಶಂ(ಟಿಡಿಪಿ)ನ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ಸಂಘರ್ಷ ಮತ್ತೊಂದು ಹಂತ ಮುಟ್ಟಿದೆ. ಚಂದ್ರಬಾಬು ನಾಯ್ಡು ಅವರನ್ನು ಕೌಶಲ್ಯಾಭಿವೃದ್ಧಿ ನಿಗಮದ (ಎಪಿಎಸ್‌ಎಸ್‌ಡಿಸಿ) ಹಗರಣ ಸಂಬಂಧ ಬಂಧಿಸಲಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಚಂದ್ರಬಾಬು ನಾಯ್ಡು ರಾಜ್ಯದಲ್ಲಿನ ನಿರುದ್ಯೋಗಿ ಯುವ ಜನರಿಗೆ ತರಬೇತಿ ನೀಡಲು ಎಪಿಎಸ್‌ಎಸ್‌ಡಿಸಿ ಸ್ಥಾಪಿಸಿ, ಅದರ ಮೂಲಕ ತರಬೇತಿ ನೀಡುವ ಯೋಜನೆ ಹಮ್ಮಿಕೊಂಡಿದ್ದರು. ಅದರ ಅಡಿಯಲ್ಲಿ 371 ಕೋಟಿ ರೂ. ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎನ್ನುವುದು ಅವರ ವಿರುದ್ಧದ ಆರೋಪ. ಚಂದ್ರಬಾಬು ನಾಯ್ಡು ಅವರೇ ಶೆಲ್ ಕಂಪನಿಗಳ ಮೂಲಕ ಭ್ರಷ್ಟಾಚಾರ ಮಾಡಿದ್ದು, ಅವರೇ ನಿಖರವಾಗಿ ಈ ಹಗರಣವನ್ನು ಯೋಜಿಸಿ, ನಿರ್ದೇಶಿಸಿ ಮತ್ತು ಕಾರ್ಯಗತಗೊಳಿಸಿದ್ದರು ಎಂದು ಆರೋಪಿಸಲಾಗಿದೆ. 2019ರಲ್ಲಿ ಜಗನ್‌ ಅಧಿಕಾರಕ್ಕೆ ಬಂದ ನಂತರ ಈ ಹಗರಣವನ್ನು ಸಿಐಡಿಗೆ ವಹಿಸಲಾಗಿತ್ತು.

ವಿಶೇಷ ಅಂದರೆ, ಎರಡು ದಿನಗಳ ಮುಂಚೆಯೇ ನಾಯ್ಡು ತಾವು ಅರೆಸ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಚಂದ್ರಬಾಬು ನಾಯ್ಡು ಮತ್ತು ಅವರ ಮಗ ನಾರಾ ಲೋಹಿತ್ ಇದು ರಾಜಕೀಯ ದ್ವೇಷದ ಕ್ರಮ ಎಂದು ಕಿಡಿ ಕಾರಿದ್ದಾರೆ. ಪೊಲೀಸರ ಸುಪರ್ದಿಯಲ್ಲಿರುವ ತನ್ನ ತಂದೆಯನ್ನು ಭೇಟಿ ಮಾಡಲು ತನಗೆ ಅವಕಾಶ ನೀಡುತ್ತಿಲ್ಲ ಎಂದು ನಾಯ್ಡು ಮಗ ಲೋಹಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯ್ಡು ಅವರನ್ನು ಪೊಲೀಸರು ಬಂಧಿಸುವಾಗ ಸಿಎಂ ಜಗನ್‌ಮೋಹನ್ ರೆಡ್ಡಿ ಲಂಡನ್‌ ಪ್ರವಾಸದಲ್ಲಿದ್ದರು.    

ಮುಂದಿನ ವರ್ಷ ಲೋಕಸಭಾ ಚುನಾವಣೆಯ ಜೊತೆಗೆ ನಡೆಯಲಿರುವ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯ ಮೇಲೆ ನಾಯ್ಡು ಬಂಧನ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 2019ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ತೋರಿದ ನಂತರ ಟಿಡಿಪಿ ಮತ್ತೆ ಪುಟಿದೇಳಲು ಸಕಲ ಪ್ರಯತ್ನ ಮಾಡುತ್ತಿದೆ. ಆ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ ಜಗನ್‌ರ ವೈಎಸ್‌ಆರ್‌ಸಿಪಿ 151 ಸ್ಥಾನ ಗೆದ್ದರೆ, ಟಿಡಿಪಿ ಕೇವಲ 23 ಸ್ಥಾನ ಗೆದ್ದಿತ್ತು. ಅಂಥದ್ದೊಂದು ಮಹಾಪತನದ ನಂತರ ಪುಟಿದೇಳಲು, ಮತ್ತೆ ರಾಜ್ಯದ ಜನರ ಒಲವು ಗಳಿಸಲು ನಾಯ್ಡು ನಾನಾ ಕಸರತ್ತು ಮಾಡುತ್ತಿದ್ದಾರೆ.

2022ರ ನವೆಂಬರ್‌ನಲ್ಲಿ ಕರ್ನೂಲ್‌ನಲ್ಲಿ ಭಾಷಣ ಮಾಡುವ ವೇಳೆ, ಆಂಧ್ರದ ಜನ ತಮ್ಮ ಪಕ್ಷವನ್ನು ಬೆಂಬಲಿಸದಿದ್ದರೆ 2024ರ ಚುನಾವಣೆಯೇ ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಭಾವುಕವಾಗಿ ನುಡಿದಿದ್ದರು. ಮತ್ತೊಮ್ಮೆ, 2021ರಲ್ಲಿ, ವಿಧಾನಸಭೆಯಲ್ಲಿ ಮಾತನಾಡುತ್ತಾ, ರಾಜಕೀಯ ವಿರೋಧಿಗಳು ತನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದು, ತನ್ನ ಹೆಂಡತಿಯನ್ನು ಅವಮಾನಿಸಿದ್ದಾರೆ ಎಂದು ಕಣ್ಣೀರು ಹಾಕಿದ್ದ ನಾಯ್ಡು, ತಾನು ಅಧಿಕಾರಕ್ಕೆ ಏರುವವರೆಗೆ ಮತ್ತೆ ವಿಧಾನಸಭೆಗೆ ಬರುವುದಿಲ್ಲ ಎಂದು ಶಪಥ ಮಾಡಿ ಹೊರನಡೆದಿದ್ದರು.

ಅದಾದ ನಂತರ ನಾಯ್ಡು ನಿರಂತರವಾಗಿ ರಾಜ್ಯ ಪ್ರವಾಸಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ರೋಡ್ ಶೋಗಳನ್ನು ಮಾಡುತ್ತಾ, ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಚುನಾವಣೆಗೆ ವೇದಿಕೆ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದರು. ಜನ ಅವರ ಸಭೆಗಳಿಗೆ ದೊಡ್ಡ ಸಂಖ್ಯೆಯಲ್ಲಿಯೇ ಸೇರುತ್ತಿದ್ದರು.

ನಾಯ್ಡು‘ಇದೇಮಿ ಕರ್ಮ ಮನ ರಾಷ್ಟ್ರಾನಿಕಿ’ (ಇದೇನು ಕರ್ಮ ನಮ್ಮ ರಾಜ್ಯಕ್ಕೆ) ಎನ್ನುವ ಆಂದೋಲನ ಆರಂಭಿಸಿ, ಜಗನ್ ಸರ್ಕಾರದ ಯೋಜನೆಗಳನ್ನು ಟೀಕಿಸತೊಡಗಿದ್ದರು. ಅದರಿಂದ ವಿಚಲಿತವಾಗಿದ್ದ ಜಗನ್‌ ಸರ್ಕಾರ, ಕಾಲ್ತುಳಿತದ ನೆಪವೊಡ್ಡಿ, ಕೆಲವೆಡೆ ಅವರ ರೋಡ್ ಶೋಗಳಿಗೆ ನಿರ್ಬಂಧ ವಿಧಿಸಿತ್ತು. ಹಲವು ರೀತಿಯಲ್ಲಿ ನಾಯ್ಡು ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿತು.

ಇನ್ನೊಂದೆಡೆ, ಲೋಕಸಭಾ ಚುನಾವಣೆಯೂ ಸೇರಿದಂತೆ ಹಲವು ರೀತಿ ತನಗೆ ನೆರವಾಗಬಹುದೆಂದು ನಾಯ್ಡು ಎಣಿಸಿದ್ದ ಬಿಜೆಪಿ ಜೊತೆಗಿನ ಮೈತ್ರಿ ಇನ್ನೂ ಕೈಗೂಡಿಲ್ಲ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು 2018ರಲ್ಲಿ ನಾಯ್ಡು ಎನ್‌ಡಿಎಯಿಂದ ಹೊರಬಂದಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿ ಅವರ ಹೀನಾಯ ಸೋಲಿಗೆ ಅದೂ ಒಂದು ಕಾರಣ ಎನ್ನಲಾಗಿತ್ತು.

ಈಗ ನಾಯ್ಡು ಬಿಜೆಪಿ ಜೊತೆ ಸೇರಲು ಕಾತರದಿಂದಿದ್ದಾರೆ. ಜನಸೇನಾ ಪಕ್ಷದ ಪವನ್ ಕಲ್ಯಾಣ್ ಕೂಡ ನಾಯ್ಡು ಪರ ವಕಾಲತ್ತು ಮಾಡುತ್ತಿದ್ದಾರೆ. ಬಿಜೆಪಿ-ಜನಸೇನಾ-ಟಿಡಿಪಿ ಸೇರಿದರೆ ಮಾತ್ರ ವೈಎಸ್‌ಆರ್‌ಸಿಪಿಯನ್ನು ಸೋಲಿಸಲು ಸಾಧ್ಯ ಎಂದು ಬಿಜೆಪಿ ಹೈಕಮಾಂಡ್ ಜೊತೆ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಆದರೆ, ಬಿಜೆಪಿ ಈ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ವೈಎಸ್‌ಆರ್‌ಸಿಪಿ ಹಾಗೂ ಟಿಡಿಪಿ ಎರಡೂ ಪಕ್ಷಗಳ ಜೊತೆ ಬಿಜೆಪಿ ಸಮಾನ ಅಂತರ ಕಾಯ್ಡುಕೊಂಡಿದೆ.

ಈ ಸುದ್ದಿ ಓದಿದ್ದೀರಾ: ಭಾರತದೊಳಗಿನ ʼಇನ್ನೊಂದು ಭಾರತʼವನ್ನು ಅನಾವರಣ ಮಾಡುತ್ತಿರುವ ಜಿ-20 ಶೃಂಗಸಭೆ

ಜಗನ್ ಸರ್ಕಾರವು ಈಗ ನಾಯ್ಡು ಅವರನ್ನು ಬಂಧಿಸುವ ಮೂಲಕ ಸಂಘರ್ಷವನ್ನು ತೀವ್ರಗೊಳಿಸಿದೆ. ಟಿಡಿಪಿಯು ಮಾಜಿ ಮುಖ್ಯಮಂತ್ರಿಯ ಬಂಧನವನ್ನೇ ರಾಜಕೀಯ ಅಸ್ತ್ರವಾಗಿ ಬಳಸಿ, ಅವರ ಪರವಾಗಿ ಜನರ ಸಿಂಪಥಿ ಗಿಟ್ಟಿಸಲು ಯತ್ನಿಸುತ್ತಿದೆ. ಆದರೆ, ಟಿಡಿಪಿಗೆ ಅಂಥ ಅವಕಾಶ ಕೊಡಬಾರದೆಂದು ಜಗನ್ ಸರ್ಕಾರವು ಆ ಪಕ್ಷದ ಪ್ರಮುಖ ನಾಯಕರನ್ನು ಗೃಹಬಂಧನದಲ್ಲಿಟ್ಟಿದೆ. ಇಷ್ಟಾದರೂ ಈ ವಿಚಾರದಲ್ಲಿ ನಾಯ್ಡು ಅವರಿಗೆ ಸಿಗುವ ಜನರ ಸಿಂಪಥಿ ಅಲ್ಪಕಾಲದ್ದು ಎನ್ನುತ್ತಾರೆ ಅಲ್ಲಿನ ರಾಜಕೀಯ ವಿಶ್ಲೇಷಕರು.

ಇನ್ನೊಂದೆಡೆ, ಅಮರಾವತಿ ಭೂಮಿ ಹಗರಣ ಸೇರಿದಂತೆ ನಾಯ್ಡು ಅವರ ಬಗೆಗಿನ ಇತರ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆಂಧ್ರದ ಸಿಐಡಿ ಮುಖ್ಯಸ್ಥರು ಹೇಳಿರುವುದು ಇದು ಇಲ್ಲಿಗೇ ನಿಲ್ಲುವುದಿಲ್ಲ ಎನ್ನುವ ಸೂಚನೆ ನೀಡಿದೆ. ಚುನಾವಣೆ ಹತ್ತಿರ ಬಂದಂತೆ ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಸಂಘರ್ಷ ಇನ್ನಷ್ಟು ತೀವ್ರಗೊಂಡರೂ ಅಚ್ಚರಿಯಿಲ್ಲ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದೇಶದೆಲ್ಲೆಡೆ ರಾಜಕೀಯ ಸಂಘರ್ಷ ಮತ್ತು ಕೋಮು ಸಂಘರ್ಷ ಕಾಡ್ಗಿಚ್ಚಿನಂತೆ ಪಸರಿಸುತ್ತಿದೆ. ಇದನ್ನು ತಡೆದು ಆರಿಸುವ ಪ್ರಯತ್ನವನ್ನು “ವಿಶ್ವಗುರು” ಮಾಡಬೇಕು.
    ಚುನಾವಣಾ ಸಭೆಗಳಲ್ಲಿ ಪಕ್ಷದ ಪರ ಮತ ಯಾಚಿಸುವ ರಾಜಕಾರಣಿಗಳು ಯಾವುದೇ ರೀತಿಯ ಪ್ರಚೋದನೆಯನ್ನು ನೀಡದೆ ಪ್ರಮುಖವಾಗಿ ಶಾಂತಿ – ಸೌಹಾರ್ದತೆಯನ್ನು ಕಾಪಾಡಲು ಜನರಿಗೆ ಕರೆಯನ್ನೂ ನೀಡಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯ ಮಲ್ಯ- ಕಳ್ಳನೋ, ಸುಳ್ಳನೋ, ವಂಚಕನೋ ಅಥವಾ ಸಂತನೋ?

ವಿಜಯ ಮಲ್ಯ ಮೇಲಿರುವುದು ಸಾಲ ತೀರಿಸದ ಆರೋಪವೊಂದೇ ಅಲ್ಲ. ಅವರ ಮೇಲೆ...

ವಿಚಿತ್ರ-ವಿಕೃತ ಘಟನೆ: ವರದಕ್ಷಿಣೆಯಾಗಿ ‘ಕಿಡ್ನಿ’ ಕೊಡುವಂತೆ ಸೊಸೆಗೆ ಅತ್ತೆ-ಮಾವ ಕಿರುಕುಳ

ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದರೂ, ಅತ್ಯಾಚಾರ, ಬಾಲ್ಯವಿವಾಹ ಹಾಗೂ...

ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬ: ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬದ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ರಾಕೆಟ್‌ನಲ್ಲಿ ಆಮ್ಲಜನಕ ಸೋರಿಕೆ, ಭಾರತದ ಶುಭಾಂಶು ಇರುವ ಅಂತರಿಕ್ಷಯಾನ ಮುಂದೂಡಿಕೆ

ತಾಂತ್ರಿಕ ದೋಷದಿಂದಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ತಂಡ ತೆರಳಬೇಕಿದ್ದ...

Download Eedina App Android / iOS

X