ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಅವರ ಜೈಲಿನ ಅನುಭವ ಕಥನ: ಪಂಜರದ ಬಣ್ಣಗಳು

Date:

Advertisements

ನಕ್ಸಲ್ ಎಂಬ ಆರೋಪದಡಿ ಮಹಾರಾಷ್ಟ್ರ ಪೊಲೀಸರಿಂದ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅರುಣ್, ತಮ್ಮ ಸಂಗಾತಿಗೆ ಬರೆದ ಪತ್ರದ ರೂಪದಲ್ಲಿರುವ ಬರೆಹದಲ್ಲಿ ನಾಗಪುರದ ಜೈಲಿನಲ್ಲಿ ತಾವು ಕಳೆದ ದಿನಗಳನ್ನು ಬಣ್ಣಿಸಿದ್ದಾರೆ. ಜೈಲಿನ ಕ್ರೂರ ವ್ಯವಸ್ಥೆ ಹಾಗೂ ಪೊಲೀಸರ ಅಮಾನುಷ ದೌರ್ಜನ್ಯವನ್ನು ಅವರು ಇಲ್ಲಿ ದಾಖಲಿಸಿದ್ದಾರೆ. ಅರುಣ್ ಫೆರೈರಾ ಅವರ ‘ಕಲರ್ಸ್ ಆಫ್ ಕೇಜ್’ ಕೃತಿಯ ಆಯ್ದ ಭಾಗವನ್ನು ಡಾ.ಎನ್ ಜಗದೀಶ್ ಕೊಪ್ಪ ಅವರು ಅನುವಾದಿಸಿದ್ದಾರೆ.

ಖೈದಿ ನಂ-೩೪೭೯

ಆಗಸ್ಟ್. ೧೩, ೨೦೦೭ರ ಸೋಮವಾರ,

Advertisements

ಪ್ರಿಯ ಸಂಗಾತಿ,

ನಾನು ಬಲ್ಲೆ; ನೀನು ನನ್ನಿಂದ ಕಾಗದವನ್ನು ನಿರೀಕ್ಷಿಸುತ್ತಿದ್ದೀಯಾ ಎಂದು. ನಾನಿಲ್ಲಿ ಬರೆಯಬಹುದಾದ ಹಲವಾರು ಸಂಗತಿಗಳಿವೆ. ಆದರೆ,  ಈ ಬಂಧಿಖಾನೆಯಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ. ಇಲ್ಲಿನ ವಾತಾವರಣಕ್ಕೆ ಮತ್ತು ಅನುಭವಗಳಿಗೆ ನಾನಿನ್ನೂ ಹೊಸಬ. ನೀನು ಕಳುಹಿಸಿರುವ ಪಾರ್ಸಲ್ ಮತ್ತು ಹಣ ಎರಡೂ ನನಗೆ ತಲುಪಿವೆ. ನಾನು ಹಣವನ್ನು ಜೈಲಿನ  ಕೂಪನ್‌ಗಳಿಗೆ ಬದಲಾಯಿಸಿಕೊಂಡು, ಒಂದು, ಎರಡು ಮತ್ತು ಐದು ರೂಪಾಯಿಗಳ ಕೂಪನ್‌ಗಳನ್ನು ಪಡೆದುಕೊಂಡಿದ್ದೇನೆ. ಅವುಗಳ ಮೂಲಕ ತಿಂಡಿ, ಸೋಪ್, ಟೂತ್ ಪೇಸ್ಟ್ ಇತ್ಯಾದಿಗಳನ್ನು ಕ್ಯಾಂಟೀನ್‌ನಲ್ಲಿ ಪಡೆಯಬಹುದು. ನೀನು ದೂರದ ಮುಂಬೈ ನಗರದಿಂದ ನಾಗಪುರಕ್ಕೆ ಪ್ರಯಾಣ ಮಾಡಿ ನನ್ನನ್ನು ಭೇಟಿ ಮಾಡಲು ಬರುವುದು ಬೇಡ. ಅನವಶ್ಯಕವಾಗಿ ಹಣ ಮತ್ತು ಸಮಯ ಪೋಲಾಗುತ್ತವೆ ಎಂದು ನನ್ನ ಭಾವನೆ ಅನ್ಯಥಾ ಭಾವಿಸಬೇಡ.

ನನ್ನನ್ನು ನಾಗಪುರದ ಬಂಧಿಖಾನೆಯಲ್ಲಿ ಹಲಾವಾರು ಕೊಠಡಿಗಳಿಂದ ಸುತ್ತವರೆದಿರುವ ಹಾಗೂ ಎರಡು ವಿಭಾಗಗಳಿರುವ ವಿಶೇಷ ಕೊಠಡಿಯಲ್ಲಿ ಇರಿಸಲಾಗಿದೆ. ನಾನು ಮತ್ತು ನನ್ನ ಜೊತೆ ಬಂಧಿಸಲಾದ ಇತರೆ ವ್ಯಕ್ತಿಗಳನ್ನು ಮತ್ತೊಂದು ವಿಭಾಗದಲ್ಲಿ ಇರಿಸಿದ್ದಾರೆ. ಇಲ್ಲಿನ ಕೆಲವು ಕೊಠಡಿಗಳು ಖಾಲಿ ಇವೆ. ಖೈದಿಗಳನ್ನು ನಾಗಪುರ ಜೈಲಿನಿಂದ ಬೇರೆಡೆಗೆ ವರ್ಗಾಯಿಸಲಾಗಿದೆ. ಹಾಗಾಗಿ ನಮ್ಮನ್ನು ಈ ವಿಶೇಷ ಕೊಠಡಿಯಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಗಾಳಿ ಬೆಳಕು ಇಲ್ಲದ ವಿಶೇಷವಾದ ಹಾಗೂ ಮೊಟ್ಟೆಯಾಕಾರದ ಈ ಕೊಠಡಿಯನ್ನು ನಾಗಪುರ ಬಂಧಿಖಾನೆಯಲ್ಲಿ ಅಂಡಾ ಶೆಲ್ ಎಂದು ಕರೆಯಲಾಗುತ್ತದೆ.

ಈ ಕೊಠಡಿಯು ಕಿಟಕಿಗಳಿಲ್ಲದ, ಮೊಟ್ಟೆಯ ಆಕಾರದಲ್ಲಿದ್ದು, ಇದರ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತುಂಬಾ ಅಪಾಯಕಾರಿ ಎನಿಸಿದ ಖೈದಿಗಳನ್ನು ನಾಗಪುರದ ಕೇಂದ್ರ ಬಂಧಿಖಾನೆಯ ಈ ಕೊಠಡಿಯಲ್ಲಿ ಇರಿಸುವುದು ಸಾಮಾನ್ಯವಾಗಿ ವಾಡಿಕೆಯಾಗಿದೆ. ಇನ್ನಿತರೆ ಬಹುತೇಕ ಖೈದಿಗಳ ಕೊಠಡಿಗಳು ಈ ಅಂಡಾ ಶೆಲ್ ಗೆ ಬರುವ ಮುಖ್ಯ ದ್ವಾರದ ಬಳಿ ಎಡ ಬಲಗಳಲ್ಲಿ ಇದ್ದು, ಅವುಗಳಲ್ಲಿ ಸಾಮಾನ್ಯ ಖೈದಿಗಳನ್ನು ಇರಿಸಲಾಗಿದೆ. ನೀನು ಇಲ್ಲಿಗೆ ಆಗಮಿಸಬೇಕಾದರೆ, ಕೇಂದ್ರ ಕಾರಾಗೃಹದ ಮುಖ್ಯ ದ್ವಾರದ ಮೂಲಕ ಒಳಗೆ ಪ್ರವೇಶಿಸಿದ ನಂತರ, ಇತರೆ ಐದು ದ್ವಾರಗಳನ್ನು ದಾಟಿ ಒಳಬರಬೇಕು. ಅನೇಕ ಕಾಂಪೌಂಡ್, ಕಿರುದಾರಿಗಳನ್ನು ಬಳಸಿ ಬರಬೇಕು. ಇಲ್ಲಿ ಬಹುತೇಕ ಖೈದಿಗಳ ಕೊಠಡಿಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಒಂದು ಕೊಠಡಿಯ ಖೈದಿಗಳು ಮತ್ತೊಂದು ಕೊಠಡಿಯ ಖೈದಿಗಳ ಜೊತೆ ಮಾತನಾಡುವುದಕ್ಕೆ ಅಥವಾ ನೋಡುವುದಕ್ಕೆ ಅವಕಾಶವಿರದ ಹಾಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬಾಗಿಲುಗಳನ್ನಿರಸಿ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಕೊಠಡಿಗೆ ಸೀಮಿತವಾಗಿ ಬೆಳಕು ಬರುವಂತೆ ಗವಾಕ್ಷಿ ಮಾದರಿಯಲ್ಲಿ ಎತ್ತರದಲ್ಲಿ ಸಣ್ಣ ಕಿಟಿಕಿಗಳನ್ನು ಇರಿಸಲಾಗಿದೆ. ಇಲ್ಲಿಂದ ಹೊರಜಗತ್ತಿನ ಯಾವ ನೋಟವೂ ಖೈದಿಗಳಿಗೆ ನೋಡಲು ಸಿಗುವುದಿಲ್ಲ. ಹಸಿರು, ಆಕಾಶ, ಏನೇನೂ ಕಾಣದಂತಹ ಸ್ಥಿತಿ ಇಲ್ಲಿಯದು. ಕಾವಲು ಗೋಪುರಗಳಷ್ಟೇ ನಮಗೆ ಕಾಣಲು ಸಾಧ್ಯ. ನಾನು ಬಂಧಿಯಾಗಿರುವ ಮೊಟ್ಟೆಯಾಕಾರದ ಕೊಠಡಿಯೂ ಸೇರಿದಂತೆ ಇಲ್ಲಿನ ಬಂಧಿಖಾನೆಯ ಕೊಠಡಿಗಳನ್ನು ಭೇದಿಸಿ ಹೊರಹೋಗುವುದು ಯಾರಿಗೂ ಸಾಧ್ಯವಿಲ್ಲ. ನಾಗಪುರದ ಕೇಂದ್ರ ಕಾರಾಗೃಹವೆಂದರೆ ಒಂದು ರೀತಿಯಲ್ಲಿ ಏಳು ಸುತ್ತಿನ ಕೋಟೆ. ಅದರಲ್ಲೂ ಇಲ್ಲಿನ ಅಂಡಾ ಶೆಲ್ ಎಂದರೆ, ಖೈದಿಗಳ ಪಾಲಿಗೆ ನೆಲದ ಮೇಲಿನ ನರಕ ಎಂಬಂತಿದೆ.

ನಾಗಪುರ ಜೈಲು

ಅಂಡಾ ಶೆಲ್‌ನಲ್ಲಿ ಭಯಾನಕ ರೌಡಿ ವ್ಯಕ್ತಿತ್ವದ ಖೈದಿಗಳನ್ನು ಮತ್ತು ಜೈಲಿನ ನಿಯಮಾವಳಿಗಳನ್ನು ಉಲ್ಲಂಘಿಸುವ ಖೈದಿಗಳನ್ನು ಕೂಡಿಹಾಕಿ ಗಾಳಿ ಬೆಳಕಿಲ್ಲದ ಈ ಕತ್ತಲ ಕೋಣೆಯಲ್ಲಿ ಏಕಾಂತದ ಶಿಕ್ಷೆಯನ್ನು ನೀಡಲಾಗುತ್ತದೆ. ಇತರೆ ಸಾಮಾನ್ಯ ಖೈದಿಗಳಿಗೆ ಬ್ಯಾರಕ್ ಎನ್ನುವ ಹಾಲ್ ಅಥವಾ ಸಣ್ಣ ಸಭಾಂಗಣದಂತಹ ದೊಡ್ಡ ಕೊಠಡಿಯಲ್ಲಿ ಗಾಳಿ, ಬೆಳಕು, ಫ್ಯಾನ್ ವ್ಯವಸ್ಥೆ ಒದಗಿಸಿಕೊಡಲಾಗಿದೆ. ಹಗಲಿನ ವೇಳೆ ಬ್ಯಾರಕ್‌ಗಳಲ್ಲಿ ಸಮಯ ಕಳೆಯುವುದು ತ್ರಾಸವಾಗಲಾರದು. ಆದರೆ, ನಾನಿರುವ ಅಂಡಾ ಶೆಲ್ ನಿಜಕ್ಕೂ ಯಾತನಾಮಯ ಎನಿಸುತ್ತದೆ. ಒಳಗಿರುವ ಜೀವಿಗಳಿಗೆ ಉಸಿರಾಡಲು ಎಂಬಂತೆ ಗಾಳಿ ಬರಲು ನಿರ್ಮಿಸಿರುವ ಸಣ್ಣ ಕಿಟಿಗಳನ್ನು ಹೊರತುಪಡಿಸಿದರೆ, ಸುತ್ತಲೂ ನಮಗೆ ಕಾಣುವುದು ಕಾಂಕ್ರೀಟ್ ಗೋಡೆಗಳು ಮಾತ್ರ. ಕ್ರೌರ್ಯದ ಪರಮಾವಧಿಯೆಂದರೆ, ಬಾಗಿಲ ಬಳಿ ಬಂದು ನಿಂತರೆ ಕಾಣುವುದು ಎದುರು ಕೊಠಡಿಯ ಗೋಡೆ ಮತ್ತು ಸದಾ ಮುಚ್ಚಲ್ಪಟ್ಟಿರುವ  ಓಡಾಡುವ ಕಿರುದಾರಿಗಳು ಮಾತ್ರ. ಈ ಕೊಠಡಿಯೊಳಕ್ಕೆ ಕೂಡಿ ಹಾಕುವ ಖೈದಿಗಳಿಗೆ ಬೇರೆ ಮನುಷ್ಯರ ಸಣ್ಣ ಸಂಪರ್ಕವೂ ಸಿಗದಂತೆ, ಮೋಟೆಯಾಕಾರದಲ್ಲಿ ಈ ಕಟ್ಟಡವನ್ನು ವಿನ್ಯಾಸ ಮಾಡಲಾಗಿದ್ದು ಇದು ಜೀವವಿರೋಧಿ ಮನಸ್ಸುಗಳ ಸೃಷ್ಟಿ ಎಂದು ನನಗೆ ಮನದಟ್ಟಾಗಿದೆ. ದಿನದ 24 ಗಂಟೆಯ ಅವಧಿಯಲ್ಲಿ ನಾವು ಎಚ್ಚರವಾಗಿರುವ 15 ಅಥವಾ 16 ಗಂಟೆಗಳ ಅವಧಿಯಲ್ಲಿ ನಾವು ಒಮ್ಮೆ ಅಥವಾ ಎರಡು ಬಾರಿ ನೋಡಬಹುದಾದ ಮನುಷ್ಯ ಜೀವಿಗಳೆಂದರೆ, ನಮ್ಮನ್ನು ಕಾವಲು ಕಾಯುತ್ತಿರುವ ಭದ್ರತಾ ಸಿಬ್ಬಂದಿ ಮಾತ್ರ. ಜೊತೆಗೆ ಎದುರು ಕೊಠಡಿಯ ಬಾಗಿಲಿನಲ್ಲಿ ನಿಂತಿರುವ ಖೈದಿಯ ಆಕೃತಿಯನ್ನು ನಾವು ನೋಡಬಹುದು. ಖೈದಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುವಂತೆ ಮಾಡುವ ಪೊಲೀಸರ ತಂತ್ರಗಳಲ್ಲಿ ಈ ವ್ಯವಸ್ಥೆ ಕೂಡ ಒಂದಾಗಿದೆ. ನಾವು ಬುದ್ಧಿಯ ಸ್ಥಿಮಿತತೆಯನ್ನು ಕಳೆದುಕೊಂಡರೆ ಆಶ್ಚರ್ಯವೇನಿಲ್ಲ. ಇಂತಹ ಕ್ರೂರ ವ್ಯವಸ್ಥೆಗಳು ನಾಗಪುರದ ಕೇಂದ್ರ ಕಾರಾಗೃಹದ ಮುಖ್ಯ ಲಕ್ಷಣಗಳಾಗಿವೆ. ಎಂತಹ ಕ್ರಿನಿನಲ್ ಅಪರಾಧಿಯೂ ಸಹ ನಾಗಪುರದ ಬಂಧಿಖಾನೆ ಎಂದರೆ ಸಾಕು ಕನಸಿನಲ್ಲಿಯೂ ಸಹ ಬೆಚ್ಚಿಬೀಳುತ್ತಾನೆ. ಈ ಕಾರಣಕ್ಕಾಗಿ ಭಾರತದಲ್ಲಿ ನಾಗಪುರದ ಸೆರೆಮನೆಯನ್ನು ನೆಲದ ಮೇಲಿನ ನರಕ ಎಂದು ಇಲ್ಲಿ ಶಿಕ್ಷೆ ಅನುಭವಿಸಿದವರು ಬಣ್ಣಿಸುತ್ತಾರೆ.

ನಾಗಪುರದ ಸೆರೆಮನೆಯಲ್ಲಿ ನಾನು ಸಾಮಾನ್ಯ ಖೈದಿಯಾಗಿರಲ್ಲ. ಮಹಾರಾಷ್ಟ್ರ ಪೊಲೀಸರ ದೃಷ್ಟಿಕೋನದಲ್ಲಿ ನಾನೊಬ್ಬ ಭಯಾನಕ ಹಾಗೂ ನಟೋರಿಯಸ್ ನಕ್ಸಲನಾಗಿದ್ದೆ ಜೊತೆಗೆ ಮಾವೋವಾದಿಗಳ ನಾಯಕನಾಗಿದ್ದೆ. 2007 ರ ಮೇ 8 ರಂದು ಪೋಲಿಸರು ನನ್ನನ್ನು ಬಂಧಿಸಿದಾಗ ಮಾಧ್ಯಮಗಳಿಗೆ ನನ್ನನ್ನು ಕುರಿತು ಈ ರೀತಿಯ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದರು. ಸಾಮಾನ್ಯವಾಗಿ ಮರಣ ದಂಡನೆಗೆ ಗುರಿಯಾದ ಖೈದಿಗಳನ್ನು ಗಲ್ಲು ಶಿಕ್ಷೆ ವಿಧಿಸುವ ಮುನ್ನ  ಕೆಲವು ವಾರಗಳ ಕಾಲ  ಮೊಟ್ಟೆಯಾಕಾರದ ಕೊಠಡಿಯಲ್ಲಿ  ಕೂಡಿ ಹಾಕುತ್ತಿದ್ದರು. ಆದರೆ, ನಾನು ಮಾತ್ರ ಈ ಕತ್ತಲ ಕೋಣೆಯಲ್ಲಿ ನಾಲ್ಕು ವರ್ಷ, ಎಂಟು ತಿಂಗಳು ಕಾಲ ಕಳೆಯಬೇಕಾಯಿತು.

ಅತ್ಯಧಿಕ ಉಷ್ಣಾಂಶವಿರುವ ನಾಗಪುರದ ಬೇಸಿಗೆಯ ದಿನಗಳ ಒಂದು ದಿನ ಬೆಳಗಿನ ಸಮಯದಲ್ಲಿ ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ನನಗೆ ಪರಿಚಿತರಾದ ಸಾಮಾಜಿಕ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದಾಗ ನಾನು ಮಹಾರಾಷ್ಟ್ರ ಪೊಲೀಸರಿಂದ ಬಂಧಿಸಲ್ಪಟ್ಟೆ. ಸಾಧಾರಣಾ ಉಡುಪಿನಲ್ಲಿ ಬಂದ ಎಂಟತ್ತು ಮಂದಿ ಪೋಲಿಸರು ನನ್ನನ್ನು ಅನಾಮತ್ತಾಗಿ ತಮ್ಮ ವಾಹನಕ್ಕೆ ಎತ್ತಿಹಾಕಿಕೊಂಡು ಅತ್ಯಂತ ವೇಗದಲ್ಲಿ ಹೊರಟರು. ವಾಹನದೊಳಗೆ ಅಕ್ಕಪಕ್ಕ ಕುಳಿತ ಅವರು ಒಂದೇ ಸಮನೆ ನನ್ನ ಮುಖದ ಮೇಲೆ, ತಲೆಯ ಮೇಲೆ ಹೊಡೆಯುತ್ತಾ, ಒದೆಯುತ್ತಾ ಸಾಗಿದರು. ಐದಾರು ನಿಮಿಷದ ಪ್ರಯಾಣದ ನಂತರ ಕಟ್ಟಡವೊಂದರ ಮೊದಲ ಮಹಡಿಯ ಕೊಠಡಿಗೆ ಕರೆದೊಯ್ದು ಅಲ್ಲಿ ನನ್ನನ್ನು ಕೂಡಿಹಾಕಿದರು. ಆನಂತರ ಆ ವ್ಯಕ್ತಿಗಳು “ ನಾವು ನಾಗಪುರದ ಜಂಖಾನ ಪೋಲಿಸ್ ಠಾಣೆಯ ಸಿಬ್ಬಂದಿ’ ಎಂದು ನನ್ನ ಮುಂದೆ ಹೇಳಿಕೊಂಡರು. ನನ್ನ ಮತ್ತು ಅವರ ನಡುವೆ ನಡೆದ ಕೆಲವು ಮಾತುಕತೆಯಲ್ಲಿ ಅವರು ಮಹಾರಾಷ್ಟ್ರದ ನಕ್ಸಲ್ ನಿಗ್ರಹ ಪಡೆಯ ಪೋಲಿಸರು ಎಂದು ನನಗೆ ತಿಳಿಯಿತು. ಅವರು ನನ್ನ ಕೈಗಳನ್ನು ಬೆನ್ನ ಹಿಂದಕ್ಕೆ ಹಾಕಿ, ನನ್ನ ಪ್ಯಾಂಟಿನ ಬೆಲ್ಟ್ ಮೂಲಕ ಬಿಗಿಯಾಗಿ ಕಟ್ಟಿ ಹಾಕಿದರು. ಜೊತೆಗೆ ನನ್ನ ಕಣ್ಣುಗಳಿಗೆ ಕಪ್ಪು ಬಟ್ಟೆಯನ್ನು ಬಿಗಿದರು.

ಹೊಡೀರಿ ಸೂಳೆಮಗನಿಗೆ, ಎನ್‌ಕೌಂಟರ್ ಮೂಲಕ ಈ ನನ್ ಮಕ್ಕಳನ್ನ  ಮುಗಿಸಿಹಾಕಿ ಎಂಬ ಅಬ್ಬರದ ಮತ್ತು ಆರ್ಭಟಗಳ  ಬೈಗಳುಗಳ ಮೂಲಕ ನನ್ನನ್ನು ಕೊಲ್ಲುವ ಬೆದರಿಕೆಯನ್ನು ಸಹ ಹಾಕಲಾಯಿತು. ನ್ಯಾಯಾಲಯದ ಮುಂದೆ ಹಾಜರುಪಡಿಸದೆ ಗೌಪ್ಯವಾಗಿ ಕೊಲ್ಲುವ ಯೋಜನೆಯನ್ನು ಸಹ ಅವರು ರೂಪಿಸತೊಡಗಿದರು. ಕಾನೂನು ಬಾಹಿರವಾಗಿ ಅಮಾಯಕರನ್ನು ಬಂಧಿಸಿ, ಯಾವ ರೀತಿಯಲ್ಲಿ ಪ್ರಾಣ ಭಯ ಒಡ್ಡಬಹುದೊ, ಅವೆಲ್ಲವನ್ನೂ ನನ್ನ ಮೇಲೆ ಪ್ರಯೋಗಿಸಲಾಯಿತು.

ಪಕ್ಕದ ಕೊಠಡಿಯಿಂದ ವ್ಯಕ್ತಿಯೊಬ್ಬನ ಚೀರಾಟ ಕೇಳಿಬರುತ್ತಿತ್ತು. “ಸತ್ಯ ಹೇಳು ನಿನ್ನನ್ನು ಬಿಟ್ಟು ಬಿಡುತ್ತೇವೆ” ಎಂದು ಹೇಳುವ ಮೂಲಕ ಪೋಲಿಸರು ಆತನ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದರು. ಆತನ ಉತ್ತರಕ್ಕೆ ಕಾಯುವ ತಾಳ್ಮೆ ಅವರಿಗೆ ಇದ್ದಂತೆ ಕಾಣುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡವರಂತೆ ಆತನ ಮೇಲೆ ಪ್ರಹಾರ ಮುಂದುವರೆಸಿದ್ದರು.

ಇಡೀ ದಿನ ಬೆನ್ನ ಹಿಂದೆ ನನ್ನ ಕೈಗಳನ್ನು ಕಟ್ಟಿ ಹಾಕಿದ್ದರಿಂದ ಇಡೀ ದೇಹ ನೋವಿನಿಂದ ಬಳಲುತ್ತಿತ್ತು. ಇದರ ನಡೆವೆಯೂ ಸಹ ಪೋಲಿಸರು ನನ್ನ ಕಪಾಳಕ್ಕೆ ಹೊಡೆಯುವುದು, ಬೂಟುಗಾಲಿನಿಂದ ಒದೆಯುವುದನ್ನು ಮುಂದುವರೆಸಿದ್ದರು. ಅವರಿಗೆ ನಾನು ನೀಡಿದ್ದ ಮುಂಬೈ ನಗರದ ಮನೆಯ ಫೋನ್ ನಂಬರಿಗೆ ಯಾರೊಬ್ಬರೂ ಉತ್ತರಿಸದ ಕಾರಣ ನನ್ನ ಮೇಲೆ ಆಕ್ರೋಶ ಹೆಚ್ಚಾಗತೊಡಗಿತು. ನಾನು ನನ್ನ ಮನೆಯ ತಪ್ಪು ವಿಳಾಸ ಹಾಗೂ ದೂರವಾಣಿ ನಂಬರ್ ನೀಡಿದ್ದೀನಿ ಎಂಬ ಗುಮಾನಿಯ ಮೇಲೆ ನನಗೆ ಹೊಡೆಯಲು ಆರಂಭಿಸಿದ್ದರು. ನನ್ನ ಕುಟುಂಬದ ಸದಸ್ಯರು ಪ್ರವಾಸ ಹೋಗಿದ್ದಾರೆ, ಯಾರೊಬ್ಬರೂ ಮನೆಯಲ್ಲಿ ಇಲ್ಲ ಎಂಬ ನನ್ನ ಹೇಳಿಕೆಯನ್ನು ಅವರು ನಂಬಲು ಸಿದ್ಧರಿರಲಿಲ್ಲ.

ನಾಗಪುರ ಪೋಲಿಸರು ನನ್ನನ್ನು ಕೊಂದು ಹಾಕಬಹುದೆಂಬ ಭಯ ಆವರಿಸತೊಡಗಿತು. ಏಕೆಂದರೆ, ನನ್ನನ್ನು ಅವರು ಅಧಿಕೃತವಾಗಿ ಬಂಧಿಸಿರಲಿಲ್ಲ. ಬಂಧನಕ್ಕೆ ಮುನ್ನ ಯಾವುದೇ ವಾರೆಂಟ್ ಅನ್ನು ನ್ಯಾಯಾಲದಿಂದ ಪಡೆದಿರಲಿಲ್ಲ. ಪಡೆದಿದ್ದರೆ ಅದನ್ನು ನನಗೆ ತೋರಿಸಿ ಬಂಧಿಸಬೇಕಿತ್ತು. ಅವರು ನನ್ನನ್ನು ಹತ್ಯೆ ಮಾಡಿ ಆನಂತರ ಅದಕ್ಕೆ ಎನ್‌ಕೌಂಟರ್ ಹಣೆಪಟ್ಟಿ ಹಚ್ಚುವ ಸಾಧ್ಯತೆಗಳಿದ್ದವು. ಆರೋಪಿಯನ್ನು ಬಂಧಿಸಲು ಹೋದಾಗ ಪೋಲಿಸರ ಮೇಲೆ ದಾಳಿ ಮಾಡಿದ್ದರಿಂದ ವಿಧಿಯಿಲ್ಲದೆ ಪೋಲಿಸರು ಗುಂಡು ಹಾರಿಸಿದರು ಎಂಬ ಸಿದ್ಧಉತ್ತರ  ಪೋಲಿಸ್ ಅಧಿಕಾರಿಗಳ ಕಾಯಂ ಹವ್ಯಾಸವಾಗಿರುವುದನ್ನು ಭಾರತದ ಜನತೆ  ಬಲ್ಲವರಾಗಿದ್ದಾರೆ. ಇಂತಹ ದುಷ್ಕೃತ್ಯಗಳಲ್ಲಿ ಮಹಾರಾಷ್ಟ್ರ ಪೋಲಿಸರು ಇಡೀ ದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಂದರೆ, ೨೦೦೨ ರಿಂದ ೨೦೦೭ ನಡುವೆ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದಿರುವ ಎನ್‌ಕೌಂಟರ್ ಗಳಲ್ಲಿ ೩೧ ಕೃತ್ಯಗಳು ನಕಲಿ ಎನ್‌ಕೌಂಟರ್‌ಗಳೆಂದು ಭಾರತದ ಮಾನವ ಹಕ್ಕುಗಳ ಆಯೋಗ ಘೋಷಿಸಿದೆ.

ನನ್ನನ್ನು ಬಂಧಿಸಿದ ಹನ್ನೊಂದು ಗಂಟೆಗಳ ನಂತರ ಮಧ್ಯರಾತ್ರಿಯ ವೇಳೆಗೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ನನ್ನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ನನ್ನನ್ನು ಬಂಧಿಸಲಾಗಿತ್ತು (೨೦೦೪ ರ ಕಾಯ್ದೆ ಅನ್ವಯ). ಈ ಕಾಯ್ದೆಯು ಭಯೋತ್ಪಾದನೆ ನಿಗ್ರಹಕ್ಕಾಗಿ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕಾಯ್ದೆಯಾಗಿತ್ತು. ಆ ರಾತ್ರಿ ಠಾಣೆಯ ಒಳಗೆ ಇದ್ದ ಸಣ್ಣ ಲಾಕ್‌ಅಪ್ ಕೊಠಡಿಯಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು. ನನಗೆ ಹಾಸಲು ಮತ್ತು ಹೊದೆಯಲು ತೀರಾ ಕೊಳಕಾಗಿ, ಗಬ್ಬು ವಾಸನೆಯಿಂದ ಕೂಡಿದ್ದ ಎರಡು ಕಪ್ಪು ಕಂಬಳಿಗಳನ್ನು ನೀಡಲಾಯಿತು. ಅವುಗಳ ವಾಸನೆ ಸಹಿಸಲು ಅಸಾಧ್ಯವಾಗಿ ಅವುಗಳನ್ನು ದೂರ ತಳ್ಳಿ ನೆಲದ ಮೇಲೆ ಕುಳಿತು ಗೋಡೆಗೆ ಒರಗಿ ತೂಕಡಿಸತೊಡಗಿದೆ. ಕೊಠಡಿಯಲ್ಲಿ ಮೂತ್ರ ಮಾಡಲು ಮೂಲೆಯೊಂದರಲ್ಲಿ ಸಣ್ಣ ರಂಧ್ರವನ್ನು ಮಾಡಲಾಗಿತ್ತು. ಅಲ್ಲಿನ ಮೂತ್ರದ ವಾಸನೆಯಿಂದಾಗಿ ಇಡೀ ಕೊಠಡಿಯಲ್ಲಿ ಉಸಿರುಕಟ್ಟಿಸುವ ವಾತಾವರಣವಿತ್ತು. ಬಾಗಿಲತ್ತ ಮುಖ ಮಾಡಿ ರಾತ್ರಿಯನ್ನು ಕಳೆಯತೊಡಗಿದೆ.

ಈ ಸುದ್ದಿ ಓದಿದ್ದೀರಾ: ಸೌಜನ್ಯ ಪ್ರಕರಣ | ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆಂದೇ ಸಕ್ರಿಯವಾಗಿವೆಯೇ ಫೇಕ್‌ ಅಕೌಂಟ್‌ಗಳು?

ಆ ರಾತ್ರಿ. ನನಗೆ ಮೊದಲ ಬಾರಿಗೆ ರೊಟ್ಟಿ ಮತ್ತು ದಾಲ್ (ಬೇಳೆಯ ಗೊಜ್ಜು)  ಊಟ ನೀಡಲಾಯಿತು ಪೋಲಿಸರು ಮುಖದ ಮೇಲೆ ಬಲವಾಗಿ ಹೊಡೆದಿದ್ದರಿಂದ ನನ್ನ ದವಡೆ ಹಲ್ಲುಗಳಿಗೆ ಪೆಟ್ಟಾಗಿ ಮುಖ ಬಾತುಕೊಂಡಿತ್ತು. ಏನನ್ನೂ ಅಗಿಯುವ ಸ್ಥಿತಿಯಲ್ಲಿ ನಾನಿರಲಿಲ್ಲ. ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಕೊಟ್ಟಿದ್ದ ದಾಲ್‌ಗೆ ರೊಟ್ಟಿಯ ತುಂಡುಗಳನ್ನು ಹಾಕಿ, ಅವುಗಳು ಮೃದುವಾದ ನಂತರ ಬಾಯಲ್ಲಿಟ್ಟು ಅಗಿಯಲಾರದೆ ನುಂಗತೊಡಗಿದೆ. ಬೆಳಿಗ್ಗೆ ಮತ್ತೆ ನನ್ನನ್ನು ಎಬ್ಬಿಸಿ, ನನಗೆ ಸಂಬಂಧಪಡದ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಚಿತ್ರಹಿಂಸೆ ನೀಡಲು ಆರಂಭಿಸಿದರು. ಮಾವೋವಾದಿಗಳು ಅಡಗಿಸಿಟ್ಟಿರುವ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಕುರಿತು ಪ್ರಶ್ನೆ ಕೇಳುತ್ತಿದ್ದರು. ನನಗೆ ಗೊತ್ತಿಲ್ಲ ಎಂದು ಉತ್ತರಿಸುತ್ತಿದ್ದೆ. ನನ್ನನ್ನು ಮಕಾಡೆ ಮಲಗಿಸಿ ನನ್ನ ಹಿಂಬದಿಯ ಸೊಂಟದಿಂದ ಹಿಡಿದು ತೊಡೆ ಹಾಗೂ ಕಾಲಿನ ಮೀನುಖಂಡಗಳ ಮೇಲೆ ಒನಕೆ ಇಟ್ಟು ಅದರ ಮೇಲೆ ಇಬ್ಬರು ಪೋಲಿಸರನ್ನು ನಿಲ್ಲಿಸಿ ಅದನ್ನು ಉರುಳಾಡಿಸಿದರು. ನಂತರ ಕಿಟಿಕಿ ಸರಳುಗಳಿಗೆ ನನ್ನನ್ನು ತಲೆ ಕೆಳಕಾಗಿ ನೇತು ಹಾಕಿದರು. ಕಿವಿಯಲ್ಲಿ ರಕ್ತ ಹರಿದು ಮೂರ್ಛೆ ಹೋಗುವ ಸ್ಥಿತಿ ತಲುಪಿದ ನಂತರ ನನ್ನನ್ನು ಕೆಳಕ್ಕೆ ಇಳಿಸಿದರು. ನಂತರ ಸೂಜಿಯಿಂದ ನನ್ನ ಕೈ ಮತ್ತು ಕಾಲು ಬೆರಳುಗಳ ಉಗುರುಗಳ ಅಡಿಯಲ್ಲಿ ಚುಚ್ಚುವುದರ ಮೂಲಕ ನನ್ನಿಂದ ಉತ್ತರ ಪಡೆಯಲು ಪ್ರಯತ್ನಿಸಿದರು. ಬಂಧಿತನಿಂದ ಯಾವುದೇ ಮಾಹಿತಿ ದೊರಕುತ್ತಿಲ್ಲ ಎಂದು ಪೊಲೀಸರು ಮೇಲಧಿಕಾರಿಗಳಿಗೆ ದೂರವಾಣಿಯಲ್ಲಿ ತಿಳಿಸಿ, ಅದಕ್ಕೆ ಪ್ರತಿಯಾಗಿ ಅವರಿಂದ ಬೈಗುಳವನ್ನು ಕೇಳುತ್ತಿದ್ದರು. ಈ ಸಿಟ್ಟಿನಲ್ಲಿ ಮತ್ತೆ ನನ್ನ ಬಳಿ ಬಂದು ಮನಸ್ಸೋ ಇಚ್ಛೆ ಥಳಿಸುತ್ತಿದ್ದರು.

ಪೋಲಿಸರು ಚಿತ್ರ ಹಿಂಸೆಯಿಂದ ಇಡೀ ದೇಹ ನೋವಿನಿಂದ ಜಡ್ಡುಗಟ್ಟಿ ಹೋಯಿತು. ನಾನು ಯಾವುದೇ ತಪ್ಪು ಮಾಡಿಲ್ಲದ ಕಾರಣ ನನ್ನೊಳಗಿನ ಆತ್ಮಸಾಕ್ಷಿಯ ಪ್ರಜ್ಞೆ ಧೃಡವಾಗಿತ್ತು. ಮಾವೋವಾದಿಗಳ ಜೊತೆ ನಿಕಟ ಸಂಪರ್ಕ ಇರುವ ವ್ಯಕ್ತಿ ನಾನು ಎಂದು ಊಹಿಸಿದ್ದ ಪೋಲಿಸರು, ನಾನು ಶಸ್ತ್ರಾಸ್ತ್ರ ಸರಬರಾಜು ಮಾಡಿರಬೇಕು ಎಂದು ಗುಮಾನಿಪಟ್ಟಿದ್ದರು. ಸಂಜೆಯ ವೇಳೆಗೆ ಪೋಲಿಸ್ ಠಾಣೆಯಲ್ಲಿ ನನ್ನ ಕೈಗಳನ್ನು ಬಿಚ್ಚಿ, ಅವುಗಳ ಮೂಲಕ ಕಪ್ಪು ಹಲಗೆಯನ್ನು ಹಿಡಿಸಿ (ಸ್ಲೇಟ್) ಪೊಲೀಸ್ ಅಧಿಕಾರಿಗಳ ಮುಂದೆ ಕೂರಿಸಿ ಛಾಯಾಚಿತ್ರಗಾರನ ಮೂಲಕ ಫೋಟೊ ತೆಗೆಯಲಾಯಿತು. ಮರುದಿನ ಪತ್ರಿಕೆಗಳಲ್ಲಿ ಚಿತ್ರ ಸಮೇತ ನನ್ನ ಬಂಧನದ ವರದಿ ಪ್ರಕಟವಾಯಿತು. ಆ ವರದಿಯಲ್ಲಿ ನಾನೊಬ್ಬ ಮಾವೋವಾದಿಗಳ ಸಂಪರ್ಕ ವಿಭಾಗದ ಪ್ರಮುಖ ನಾಯಕ ಎಂದು ಬಿಂಬಿಸಲಾಗಿತ್ತು.

Capture 2
ಡಾ. ಎನ್ ಜಗದೀಶ್ ಕೊಪ್ಪ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X