‘ವಚನ ದರ್ಶನ’ದ ನೆಪದಲ್ಲಿ ಹಿಂದುತ್ವದ ರಾಡಿ ಎಬ್ಬಿಸುತ್ತಿದೆಯೇ RSS?

Date:

Advertisements

ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಮುಕ್ತ ಅವಕಾಶವಿದೆ. ಟೀಕೆ ಟಿಪ್ಪಣಿಗಳಿಗೆ ಬಾಗಿಲು ತೆರೆದಿದೆ” ಎಂಬ ಸುಳ್ಳನ್ನು ಬಿತ್ತಲಾಗುತ್ತಿದೆ. ಆ ಮುಕ್ತ ಅವಕಾಶವಿದ್ದಿದ್ದರೆ ಬಹುಶಃ ಡಾ. ಕಲಬುರಗಿ, ಗೌರಿ ಲಂಕೇಶ್, ಪಾನ್ಸರೆ, ದಾಬೋಲ್ಕರ್ ಅವರ ಹತ್ಯೆಗಳು ನಡೆಯುತ್ತಿರಲಿಲ್ಲ

ಇತ್ತೀಚೆಗೆ ವೇದ ಮತ್ತು ಲಿಂಗತತ್ವದ ಸಮನ್ವಯಕಾರರೆಂದು ಬಿಂಬಿಸುವ ಮನುವಾದಿಗಳ ಪ್ರಯತ್ನ ಮುಂದುವರೆದಿದೆ. ಅದರ ಜೊತೆಗೆ ಕರ್ನಾಟಕ ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮೇಲೆ ಸಂಘ-ಪರಿವಾರ ಅತ್ಯಂತ ಹೆಚ್ಚು ಚಿಂತೆಗೊಳಗಾದಂತೆ ಕಾಣುತ್ತಿದೆ. ಅದರಿಂದ ಘಾಸಿಗೊಂಡು ಸಾವರಿಸಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘವು “ವಚನ ದರ್ಶನ” ಎನ್ನುವ ಪುಸ್ತಕವನ್ನು ನೆಪವಾಗಿಟ್ಟುಕೊಂಡು ರಾಜ್ಯಾದ್ಯಂತ ಹಿಂದುತ್ವದ ರಾಡಿ ಎಬ್ಬಿಸುತ್ತಿದೆ. ಕೇವಲ 40-50ಸಾವಿರ ರೂಪಾಯಿಗಳಲ್ಲಿ ಈ ಪುಸ್ತಕದ ಬಿಡುಗಡೆಗೆ ಕನಿಷ್ಠ ಪ್ರತಿ ಜಿಲ್ಲೆಯಲ್ಲಿ 5-6 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಇದು ಜನರನ್ನು ದಾರಿತಪ್ಪಿಸುವ ಹಾಗೂ ಸತ್ಯವನ್ನು ತಿರುಚುವ ಒಂದು ಹುಸಿ ಪ್ರಯತ್ನವಾಗಿದೆ. ಇಡೀ ಬಸವಾದಿ ಶರಣರ ಲಿಂಗಾಯತ ಧರ್ಮ ಸಿದ್ಧಾಂತವನ್ನು ಹಾಗೂ ಧರ್ಮದ ಜನಾಂಗವನ್ನು ಸನಾತನ ವೈದಿಕತೆಯ ಕರಾಳ ಕಪಿಮುಷ್ಟಿಯಲ್ಲಿರಿಸುವ ಹುನ್ನಾರ ಹೊಂದಿದೆ.

ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಮುಕ್ತ ಅವಕಾಶವಿದೆ ಹಾಗೂ ಟೀಕೆ ಟಿಪ್ಪಣಿಗಳಿಗೆ ಬಾಗಿಲು ತೆರೆದಿದೆ ಎಂಬ ಸುಳ್ಳನ್ನು ಬಿತ್ತಲಾಗುತ್ತಿದೆ. ಆ ಮುಕ್ತ ಅವಕಾಶವಿದ್ದಿದ್ದರೆ ಬಹುಶಃ ಡಾ. ಕಲಬುರಗಿ, ಗೌರಿ ಲಂಕೇಶ್, ಪಾನ್ಸರೆ, ದಾಬೋಲ್ಕರ್ ಅವರ ಹತ್ಯೆಗಳು ನಡೆಯುತ್ತಿರಲಿಲ್ಲ ಹಾಗೂ ಸನಾತನ ವೈದಿಕ ಧರ್ಮ ಬುದ್ಧ- ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿತ್ತು. ಅವನ್ನು ಅನುಸರಿಸದೆ ಸನಾತನ ಧರ್ಮವು ಇಂದು ಮನುವಿನ ಸಿದ್ಧಾಂತದ ಕೊಚ್ಚೆಯಲ್ಲಿ ಕೊಳೆಯುತ್ತಿದೆ. ತನ್ನ ಯಥಾಸ್ಥಿತಿವಾದದ ಕೆಸರಿನಲ್ಲಿಯೇ ಹೊರಳಾಡುತ್ತಿದೆ. ಬಸವಾದಿ ಶರಣರು ಶತಮಾನಗಳಿಂದ ನಡೆದು ಬಂದ ವೈದಿಕ ಸಂಪ್ರದಾಯವನ್ನು ತೀಕ್ಷ್ಣವಾದ ಶಬ್ದಗಳಲ್ಲಿ ಟೀಕಿಸಿದ್ದಲ್ಲದೆ ಒಂದು ಪರ್ಯಾಯ ಜೀವನ ಮಾರ್ಗವನ್ನುˌ ಪ್ರತಿ ಕಾಲದಲ್ಲೂ ಪ್ರಸ್ತುತವಾಗುವ ನವಸಮಾಜದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ. 12ನೇಯ ಶತಮಾನದಲ್ಲಿ ಬಸವಾದಿ ಶರಣರು ಸತ್ಯದ ಪಥ, ಸಮಾನ ಬದುಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಾನು ಇಚ್ಛಿಸಿದ ಧರ್ಮವನ್ನು ಆಚರಿಸುವ, ಮುಕ್ತವಾಗಿ ಬದುಕುವ, ಸರ್ವರಿಗೂ ಒಂದೇ ನ್ಯಾಯ (Common Civil Code)ದ ನವಸಮಾಜದ ತತ್ವವನ್ನು ಪ್ರತಿಪಾದಿಸಿದೆ. ಸನಾತನ ವೈದಿಕ ಧರ್ಮ ಹೊಸತನಕ್ಕೆ ತೆರೆದುಕೊಂಡಿದ್ದರೆ 12ನೇ ಶತಮಾನದಲ್ಲಿ ಶರಣರ ಹತ್ಯೆಗೆ ಮುಂದಾಗುತ್ತಿರಲಿಲ್ಲ.

Advertisements

ಸನಾತನಿಗಳು ಹೊಸತನವನ್ನು ಒಪ್ಪಿಕೊಳ್ಳುವುದಾದಲ್ಲಿ 12ನೇಯ ಶತಮಾನದಲ್ಲಿ ಶರಣರು ಬರೆದ ಅಸಂಖ್ಯಾತ ವಚನ ರಾಶಿಯನ್ನು ಸುಟ್ಟು ಹಾಕುತ್ತಿರಲಿಲ್ಲ. ಬಸವಾದಿ ಶರಣರ ಟೀಕೆ ಟಿಪ್ಪಣಿಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡುತ್ತಿದ್ದರು. ಸನಾತನಿಗಳು ಮುಕ್ತತೆಯನ್ನು ಒಪ್ಪುವದಿರಲಿ ಬಸವಾದಿ ಶರಣರ ಹೊಸ ಧರ್ಮವನ್ನು ತನ್ನ ಪಾಡಿಗೆ ಬೆಳೆಯುವ ಅವಕಾಶವನ್ನು ಕೊಡಲಿಲ್ಲ. ಹರಳಯ್ಯನ ಮಗನ ವಿವಾಹ ವಿಪ್ರ ಮಧುವರಸರ ಮಗಳ ಜೊತೆ ನಡೆದಿದ್ದನ್ನು ವಿರೋಧಿಸಿ ಅವರಿಗೆ ಮರಣದಂಡನೆಯ ಶಿಕ್ಷೆ ನೀಡಿದ್ದರ ಕಾರಣ “ಶರಣರ ಜೀವನಕ್ರಮ, ಸಿದ್ದಾಂತ, ಆಚರಣೆಗಳು ವೈದಿಕ ಸಂಪ್ರದಾಯಕ್ಕಿಂತ ವಿಭಿನ್ನವಾಗಿದ್ದವು” ಎಂಬುದಾಗಿತ್ತು. ಅಂದರೆ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗತತ್ವವು ಸನಾತನಿಗಳ ವೇದತತ್ವಕ್ಕೆ ವಿರೋಧವಾಗಿತ್ತು ಎಂದರ್ಥ ಅಲ್ಲವೆ? ಬಸವಣ್ಣನವರಾಗಲಿ, ಶರಣರಾಗಲಿ ವೇದದ ಯಾವ ಅಂಶವನ್ನು ಒಪ್ಪಿಕೊಂಡಿದ್ದರು ಎಂಬುದು ಸನಾತನಿಗಳು ಸ್ಪಷ್ಟಪಡಿಸಲಿ. ಸನಾತನಿಗಳ ಬಹುದೇವೋಪಾಸನೆಯನ್ನು ಶರಣರು ಒಪ್ಪಿಕೊಂಡಿರಲಿಲ್ಲ. ವೇದಪುರುಷರೆಂದು ಹಾಗೂ ಗೋತ್ರಪುರುಷರೆಂದು ಹೇಳುವ ಮಹರ್ಷಿಗಳನ್ನು ಒಪ್ಪಿಕೊಂಡಿರಲಿಲ್ಲ. ವೇದಗಳಲ್ಲಿನ ಹೀನ ಕರ್ಮಕಾಂಡ ಒಪ್ಪಿಕೊಂಡಿರಲಿಲ್ಲ.

rss shakha

ಮೊದಲನೆಯದಾಗಿ ಸನಾತನಿಗಳ ದೇವತೆಗಳಾದ ಇಂದ್ರ, ವರುಣ, ಅಗ್ನಿ, ಮಿತ್ರ, ವಾಯು ಮುಂತಾದ ಯಾವ ದೇವತೆಗಳನ್ನು ಕೂಡಾ ಶರಣರು ಮಾನ್ಯ ಮಾಡಿರಲಿಲ್ಲ. ಅದಕ್ಕೆ ಶರಣರು ಬರೆದ ವಚನಗಳೇ ಸಾಕ್ಷಿಯಾಗಿವೆ. ಎರಡನೆಯದಾಗಿ, ಗೋತ್ರಪುರುಷರೆಂದು ಬಣ್ಣಿಸಲ್ಪಡುವ ಕಶ್ಯಪ, ಅತ್ರಿ, ಭಾರದ್ವಾಜ, ಶಾಂಡಿಲ್ಯ ಬ್ರಘು, ಗೌತಮ, ವಶಿಷ್ಠ, ಉಪಮನ್ಯು ಮುಂತಾದ ಮಹರ್ಷಿಗಳನ್ನು ಶರಣರು ಮಾನ್ಯ ಮಾಡಿರಲಿಲ್ಲ. ಸನಾತನಿಗಳ ಜನವಿರೋಧಿ ಋಷಿ ಸಂಸ್ಕೃತಿಯನ್ನು ಶರಣರು ದಿಕ್ಕರಿಸಿ ನೆಲಮೂಲದ ಕೃಷಿ ಸಂಸ್ಕೃತಿಯನ್ನು ಮಾನ್ಯ ಮಾಡಿದ್ದರು. ಸನಾತನಿಗಳ ವೇದಗಳು ಯಾರನ್ನು ದಶ್ಯೂˌ ರಾಕ್ಷಸˌ ದಾನವˌ ಶೂದ್ರರೆಂದು ತಿರಸ್ಕರಿಸಲ್ಪಟ್ಟಿದರೊ ಅದೇ ಸಮುದಾಯಗಳಿಗೆ ಸೇರಿದ ಶರಣ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಶಿವನಾಗಿಮಯ್ಯ, ಉರಿಲಿಂಗಪೆದ್ದಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಶ್ವಪಚಯ್ಯ, ಅಲ್ಲಮಪ್ರಭುಗಳು, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಹೂಗಾರ ಮಾದಯ್ಯ, ಮಾದಾರ ಧೂಳಯ್ಯ, ಕುರುಬ ಗೋಲ್ಲಾಳ, ಸತ್ಯಕ್ಕ, ಕಾಳವ್ವೆ, ಹಡಪದ ಲಿಂಗಮ್ಮ ಮುಂತಾದವರನ್ನು ಬಸವಣ್ಣನವರು ಗೋತ್ರಪುರುಷರೆಂದು ಹೇಳಿದ್ದಾರೆ.

ಈ ಶರಣರೇ ತನ್ನ ಹೆತ್ತ ತಂದೆ ತಾಯಿ ಎಂದು ಹಾಗೂ ತಾನು ಅವರ ಇವರ ತೊತ್ತಿನ ಮಗನೆಂದು ಹೇಳಿದ್ದಾರೆ. “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯ ನಮ್ಮಯ್ಯ, ಅಣ್ಣನ್ನು ನಮ್ಮ ಕಿನ್ನರಿ ಬ್ರಮ್ಮಯ್ಯ. ಕುಲತಿಲಕ ನಮ್ಮ ಮಾದಾರಚೆನ್ನಯ್ಯ” ಎನ್ನುವ ಬಸವಣ್ಣನವರ ವಚನವೇ ಇದಕ್ಕೆ ಸಾಕ್ಷಿಯಾಗಿದೆ. ಮುಂದುವರೆದು ಬಸವಣ್ಣನವರು “ಮಾದಾರ ಚೆನ್ನಯ್ಯನು ತಿಂದು ಉಗುಳಿದ ತಾಂಬೂಲವನ್ನು ಸೇವಿಸಿ ಬದುಕುವೆನಯ್ಯ” ಎಂದು ಹೇಳಿದ್ದಾರೆ. ಅಪ್ಪಿ ತಪ್ಪಿಯೂ ಶರಣರು ಸನಾತನಿಗಳ ಗೋತ್ರಪುರುಷರನ್ನು ಹಾಗೂ ಮಹರ್ಷಿಗಳನ್ನು ಒಪ್ಪಿಕೊಂಡಿಲ್ಲ. ಬಸವಣ್ಣನವರು ತಮ್ಮ ವಚನದಲ್ಲಿ “ಭಕ್ತಿ ಇಲ್ಲದ ಬಡವ ನಾನಯ್ಯ, ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ, ಎಲ್ಲ ಪುರಾತನರು ನೆರೆದು ಭಕ್ತಿಯ ಬಿಕ್ಷೆಯನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ” ಎಂದಿದ್ದಾರೆ. “ವೇದಗಳು ಗಡಗಡ ನಡುಗಿದವುˌ ಶಾಸ್ತ್ರಗಳು ಕೈಜಾರಿ ಬಿದ್ದವು” ಎಂದು ವೇದಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಮೂರನೆಯದಾಗಿˌ ಶರಣರು ವೈದಿಕರ ಕರ್ಮಸಿದ್ಧಾಂತ, ಸ್ವರ್ಗನರಕ, ಪುನರ್ಜನ್ಮ, ಯಜ್ಞ ಯಾಗ, ಹೋಮ ಹವನ, ಜಪ ತಪ, ಜಾತಕ ಸೂತಕ, ಪಂಚಾಂಗ ಜ್ಯೋತಿಷ್ಯಗಳನ್ನು ಖಡಾಖಂಡಿತವಾಗಿ ದಿಕ್ಕರಿಸಿದ್ದಾರೆ. ಗಾಯತ್ರಿ ಮಂತ್ರ, ಗೀತಾ ಪಠಣ ಮುಂತಾದವುಗಳನ್ನು ಟೀಕಿಸಿ ಸಾಮಾನ್ಯ ಜನರಿಗೆ ಅರ್ಥವಾಗುವ ಆಡು ನುಡಿ ಕನ್ನಡದಲ್ಲಿ ವಚನಗಳನ್ನು ಬರೆದು ಹೊಸ ಧರ್ಮವನ್ನು ಬೋಧಿಸಿದ್ದಾರೆ. ವೇದ ಉಪನಿಷತ್ತುಗಳಲ್ಲಿನ ತಿರುಳನ್ನೇ ಶರಣರು ಬೋಧಿಸಿದ್ದಾರೆಂದು ವಾದಿರುವ ಸಂಘಿಗಳು ಭಗವದ್ಗೀತೆಯ ಜಾತಿಪೋಷಣೆ ಹಾಗೂ ವಚನ ಸಾಹಿತ್ಯದ ಉದಾತ್ತ ತತ್ವಗಳನ್ನು ಅರ್ಥಮಾಡಿಕೊಂಡಿಲ್ಲ ಎಂದಲ್ಲ. ಶರಣರ ತತ್ವಗಳನ್ನು ತಿರುಚುವ ಕೆಲಸಕ್ಕೆ ಸಂಘಿಗಳು ಕೈ ಹಾಕಿದ್ದಾರೆ. ಗೀತೆಯಲ್ಲಿ ಕೃಷ್ಣನು ತನ್ನ ಅವತಾರದ ಉದ್ದೇಶ ಅಧರ್ಮ ನಾಶ ಮಾಡಿ ಧರ್ಮ ಸ್ಥಾಪನೆ ಮಾಡುವುದಾಗಿ ಹೇಳಿದ್ದಾನಂತೆ. ಹಾಗಾದರೆ ಅಧರ್ಮ ಎಂದರೆ ಯಾವುದು? ಗೀತೆಯ ಅಧ್ಯಾಯ1 ಶ್ಲೋಕ 41ರಿಂದ 45ರಲ್ಲಿ ಅಧರ್ಮ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಆ ಶ್ಲೋಕಗಳಲ್ಲಿ ಸ್ವಯಂ ಕೃಷ್ಣನು ಅರ್ಜುನನಿಗೆ ವರ್ಣಸಂಕರವೇ ಅಧರ್ಮ ಎಂದು ಹೇಳಿದ್ದಾನೆ. ವರ್ಣಸಂಕರವೆಂದರೆ ಚಾತುರ್ವರ್ಣ ವ್ಯವಸ್ಥೆಯ ಉಲ್ಲಂಘನೆ.

ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿ ಗಂಡು ವರಿಸುವಂತಿಲ್ಲ. ಹಾಗೆ ಮಾಡಿದರೆ ಅದು ವರ್ಣಸಂಕರವಾಗುತ್ತದೆ. ಅದುವೇ ಅಧರ್ಮ ಎನ್ನುತ್ತಾನೆ ಕೃಷ್ಣ. ಇಂತಹ ಅಧರ್ಮವನ್ನು ನಾಶ ಮಾಡಿ ವರ್ಣವ್ಯವಸ್ಥೆ ಪುನರ್‌ ಸ್ಥಾಪಿಸುವುದೇ ಧರ್ಮ ಎನ್ನುವ ಗೀತೆಯ ಮರ್ಮವನ್ನು ಶರಣರು ದಿಕ್ಕರಿಸಿದ್ದಾರೆ. ಜಾತಿ ವ್ಯವಸ್ಥೆಯ ನಾಶಕ್ಕೆ ಶರಣರು ಹೋರಾಡಿದ್ದಾರೆ. ಬಸವಣ್ಣನವರು “ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ. ಜಲಬಿಂದು ವ್ಯವಹಾರ ಒಂದೇ ಇರಲು ಕರ್ಣದಲಿ ಜನಿಸಿದವರುಂಟೆ ಜಗದೊಳಗೆˌ” “ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ” ಜಲವೊಂದೆ ಶೌಚಾಚಮನಕ್ಕೆ…” ಎಂದಿದ್ದಾರೆ. ಸಮಗಾರ ಹರಳಯ್ಯನ ಮಗ ಹಾಗೂ ವಿಪ್ರ ಮಧುವರಸನ ಮಗಳ ನಡುವಿನ ಮದುವೆ ಮಾಡುವ ಮೂಲಕ ಜಾತಿನಾಶಕ್ಕೆ ಕಾರಣಕರ್ತರಾದವರು ಬಸವಣ್ಣನವರು. ಅನುಭವ ಮಂಟಪದ ಮಹಾಪೀಠದ ಮೇಲೆ ಶೋಷಿತ ವರ್ಗದ ಅಲ್ಲಮರನ್ನು ಕೂರಿಸಿ ಧರ್ಮದ ಅಧಿಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ವಿಸ್ತರಿಸಿದ್ದಾರೆ. ಬಸವಾದಿ ಶರಣರು ವೈದಿಕ ಪರಂಪರೆಯಾಗಲಿ, ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮಗಳನ್ನು ಪಾಲಿಸಲಿಲ್ಲˌ ವರ್ಣಾಶ್ರಮ ಅನುಸರಿಸಲಿಲ್ಲ.

ವಚನ ದರ್ಶನ

ಹಾಗಾದರೆ, ಶರಣರ ತತ್ವ ಸನಾತನ ಧರ್ಮದ ಮುಂದುವರೆದ ಭಾಗ ಹೇಗಾಗುತ್ತದೆ ಎನ್ನುವುದಕ್ಕೆ ಸಂಘಿಗಳು ಉತ್ತರಿಸಲಿ. ಬೌದ್ದ, ಜೈನ, ಲಿಂಗಾಯತ, ಸಿಖ್‌ ಧರ್ಮ ಪರಂಪರೆಗಳು, ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜ, ಇವೆಲ್ಲವೂ ವೈದಿಕ ಪರಂಪರೆಗೆ ವಿರುದ್ಧವಾಗಿ ಹುಟ್ಟಿದವು ಎನ್ನುವುದು ನಿರ್ವಿವಾದ. ನಮ್ಮ ದೇಶ ರಾಷ್ಟ್ರಕವಿ ಕುವೆಂಪು ಹೇಳಿರುವ ಹಾಗೆ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಅನೇಕ ಭಾಷೆಗಳುˌ ಬಹುಸಂಸ್ಕೃತಿ ಮೈದಳೆದಿವೆ. ಇದು ನಮ್ಮ ದೇಶದ ವಿಶೇಷತೆ. ಅದಕ್ಕಾಗಿ ನಾವೆಲ್ಲರೂ ಅಭಿಮಾನ ಪಡಬೇಕು ಹಾಗೂ ಅವುಗಳನ್ನು ಯಥಾವತ್ತಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಹಿಂದೆ ತಥಾಗತ ಗೌತಮ ಬುದ್ದರನ್ನು ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬರೆಂದು ಹೇಳುವ ಮೂಲಕ ಇಡೀ ಬೌದ್ಧ ಧರ್ಮ ವೈದಿಕ ಧರ್ಮದೆಡೆ ಸೇರಿಸಿಕೊಳ್ಳುವ ವಿಫಲ ಪ್ರಯತ್ನ ನಡೆಯಿತು. ಜನ ಒಪ್ಪಬೇಕಲ್ಲ? ಇಂದಿಗೂ ವೈದಿಕ ಪರಂಪರೆಯವರು ತಥಾಗತ ಬುದ್ದರನ್ನು ವಿಷ್ಣುವಿನ ಎಲ್ಲ ಅವತಾರಗಳನ್ನು ಒಪ್ಪಿ ಪೂಜಿಸುವಂತೆ ಬುದ್ದರನ್ನು ಒಪ್ಪುವುದಾಗಲಿ, ಪೂಜಿಸುವುದಾಗಲಿ ಮಾಡುತ್ತಿಲ್ಲ. ಏಕೆಂದರೆ ಬೌದ್ಧ ಮತ, ವೈದಿಕ ಮತ ಒಂದಕ್ಕೊಂದು ವಿಭಿನ್ನವಾಗಿವೆ. ಇಂದಲ್ಲ ನಾಳೆ, ಕೊನೆಗೆ ಸತ್ಯವೇ ಉಳಿಯುತ್ತದೆ. ಸತ್ಯವನ್ನು ಮರೆಮಾಚುವ ವಿಫಲ ಪ್ರಯತ್ನ ಮಾಡದೇ ಉದಾತ್ತ ಮನೊಭಾವ ಬೆಳೆಸಿಕೊಳ್ಳೋಣ. ಅದೇ ನಿಜವಾದ ಭಾರತೀಯತೆ.

ಪ್ರೊ. ಸಂಜಯ ಮಾಕಲˌ ಕಲಬುರಗಿ
ಪ್ರೊ. ಸಂಜಯ ಮಾಕಲˌ ಕಲಬುರಗಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

17 COMMENTS

    • ವೇದಗಳ ಒಂದು ಶ್ಲೋಕ “ಬ್ರಾಹ್ಮೊಣಸ್ಯ ಮುಖಮಾಸಿದ ˌ ಬಾಹುರಾಜನ್ಯ ಕ್ರುತಃ . ಊರುತಸ್ಯ ಯದ್ವೈಶ್ಯಂ ˌ ಪದಾಭ್ಯಾಂ ಶೂದ್ರೊ ಅಜಾಯತಃ

  1. Well written highlighting the radical views of Vachanakars counterposing with the discriminatory Sanatana religion. The gambit of the Sangh Parivar has been well exposed. The true followers of Basava must take note of this and be skeptical of these events lest they fall into the RSS trap. Unfortunately, many lingayats worship Basavanna almost akin to a Hindu god sidetracking all his radical views. That is also the limitations of many alternative movements which were based on spontaneous materailism failing make more deeper impact.

  2. ಸನ್ಮಾನ್ಯ_ ಸಂಜಯ್ ರವರೇ,
    ನಿಮ್ಮ ಈ ಬರಹವನ್ನು ಓದಿದೆ. ನೀವು ವಿಚಾರವಾದಿ ಆಗಿದ್ದರೆ ಕೆಲವೊಂದು ವಿಷಯಗಳನ್ನು ಪ್ರಮಾಣಿಸಿ ನೋಡಬೇಕಲ್ಲವೇ, ಮುಕ್ತವಾಗಿ ಎರಡೂ ಪಕ್ಷವನ್ನು ತಿಳಿದುಕೊಳ್ಳಬೇಕಲ್ಲವೇ ನಿಮ್ಮ ಈ ಲೇಖನ ಓದಿದಮೇಲೆ ಅನ್ನಿಸಿದ್ದು ಹಿಂದೂ ಧರ್ಮದ ಈಗಿನ ವಾಸ್ತವವನ್ನು ತಿಳಿದುಕೊಳ್ಳುವ ಇಚ್ಚೆ ಯೇ ನಿಮಗಿಲ್ಲ ವೆಂದು ತಿಳಿಯುತ್ತದೆ. ಇದು ಇಷ್ಟೆ ಎಂದು ಯಾರೋ ಬರೆದಿರುವುದನ್ನು ಬಟ್ಟಿ ಇಳಿಸಿದೀರಿ. ವಾಸ್ತವವಾಗಿ ಈಗ ಯಾರೂ ಮನುಸ್ಮೃತಿ ಯನ್ನು ಓದುವವರಾಗಿಲ್ಲಿ ಆಚರಿಸುವವರಾಗಲಿ ಇಲ್ಲ. ಹಾಗು ನೀವುತಿಳಿಸುವ ಇಂದ್ರ ಇತ್ಯಾದಿ ದೇವರುಗಳನ್ನು ನಾವು ಪೂಜಿಸುವುದು ಇಲ್ಲ. ಅದಕ್ಕೆ ಬದಲಾಗಿ ಈಗ ನಿಮ್ಮ ಪ್ರಕಾರ ಕೆಳ ಜಾತಿಗೆ ಸೇರಿದ ವ್ಯಾಸಮಹರ್ಷಿ, ಅಗಸ್ತ್ಯ ಮುನಿ ಮುಂತಾದವರನ್ನು ಪೂಜಿಸುತ್ತೇವೆ. ಬ್ರಾಹ್ಮಣನಾದ ರಾವಣನನ್ನು ಪೂಜಿಸುವುದಿಲ್ಲ. ಕ್ಷತ್ರಿಯನಾದ ರಾಮನನ್ನು ಪೂಜಿಸುತ್ತೇವೆ. ಇನ್ನಾದರೂ ವಾಸ್ತವವನ್ನು ತಿಳಿಯಿರಿ . ಒಂದು ಕಾಲದಲ್ಲಿ ಸಮಾಜದಲ್ಲಾದ ತಪ್ಪುಗಳನ್ನು ಸರಿಮಾಡಿಕೊಂಡು, ಸಮಾಜವನ್ನು ಒಡೆದು ಮೇಲು ಕೇಳು ಎನ್ನುವ ವಿಷವನ್ನು ತುಂಬದೆ ಬಗ್ಗೆಟ್ಟಾಗಿ ಬಾಳೊಣ…

    • ಸನ್ಮಾನ್ಯರೆ ನನ್ನ ಆಶಯ ತಾವೆ ಹೇಳಿದ ಹಾಗೆ ಭಾರತದಲ್ಲಿ ಯಾರೂ ಇಂದ್ರನನ್ನಾಗಲಿ ಪ್ರಜಾಪತಿಯನ್ನಾಗಲಿ ˌ ವಾಯುದೇವನಾಗಲಿ ಅಗ್ನಿದೇವನಾಗಲಿ ಬ್ರಹ್ಮನ ದೇವಾಲಯಗಳು 99.9% ಇಲ್ಲ . ಅದೆ ರೀತಿ ಯಾರು ಕಶ್ಯಪ ಭಾರಧ್ವಾಜರನ್ನು ನಮ್ಮ ಗುರುಗಳೆಂದಾಗಲಿ ಯಾರು ಒಪ್ಪುವದಿಲ್ಲ . ಮನುಸ್ರ್ಮುತಿ ತನ್ನ ಶಾಸ್ರ್ತದಲ್ಲಿ ಸ್ಪಷ್ಚಪಡಿಸಿದ್ದಾನೆ . ನಾನು ಬರೆದಿರುವ ಪ್ರತಿ ಶ್ಲೋಕಗಳು ವೇದಗಳಿಂದ ಆಯ್ದದ್ದು ಎಂದು ಹೇಳಿದ್ದಾನೆ. ನಿಮ್ಮ ಪ್ರಕಾರ ಅವುಗಳನ್ನು ಆಚರಿಸದೆ ಇದ್ದ ಮೇಲೆ ˌ ಸುಮ್ಮನೆ ವಚನಗಳನ್ನು ವೇದಗಳಿಗೆ ಹೋಲಿಕೆ ಮಾಡುತ್ತಿರುವವರು ಯಾರು ? ಅವುಗಳನ್ನು ಯಥಾವತ್ತಾಗಿ ಸ್ವೀಕಾರ ಮಾಡುವ ಪ್ರವ್ರುತ್ತಿಬೇಡವೆ ? ದಯವಿಟ್ಟು ನೀವೆ ಹೇಳಿ. ಇದರಿಂದ ಅನೇಕ ಬಸವಪರ ಸಂಘಟನೆಗಳು ದ್ರುವಿಕರಣಗೊಳ್ಳುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಬೇಕು. ˌ

  3. ನೀವು ಯಾವುದೇ ರೀತಿಯ ಅಧ್ಯಯನವನ್ನು ಮಾಡದೆ ಈ ವಿಚಾರಗಳ ಬರೆದಿದ್ದೀರಿ ಅಂತ ನಾನು ಅನಿಸಿಕೆ…. ಯಾಕಂದ್ರೆ ನಾನು ವೇದಗಳನ್ನು ಓದಿದಾಗ ನನಗೆ ಯಾವುದೇ ರೀತಿಯಾದ ಜಾತಿ,ವರಣ ವ್ಯವಸ್ಥೆ ಆಗಲಿ ಅಥವಾ ಯಾವುದೇ ವಿಚಾರಗಳ ತಿಳಿಯಲಿಲ್ಲ…. ಅಮೂಲ್ ಆಗ್ರಹವಾಗಿ ಅಧ್ಯಯನ ನಡೆಸಿದ ನಂತರವೇ ಇಂತಹ ಲೇಖನವನ್ನು ಬರೆಯಬೇಕು ಹೊರತು ಏನನ್ನು ತಿಳಿಯದೆ ಧರ್ಮದ ಬಗ್ಗೆ ಏನು ತಿಳಿಯದೆ ಮಾತಾಡುವುದು ತಪ್ಪು…… ನೀವು ಹೇಳುವ ಸಮಯದಲ್ಲಿ ಧರ್ಮವೇ ಹುಟ್ಟಿರಲಿಲ್ಲ… ಕೇವಲ ಸನಾತನ ಧರ್ಮ ಹೊಂದಿತ್ತು ಅಂದ್ರೆ ಎಲ್ಲರಿಗೂ ಒಪ್ಪಿಗೆ ಆಗುವಂತಹ ಮುಕ್ತವಾದ ಧರ್ಮ ಇತ್ತು…. ಆ ಸಮಯದಲ್ಲಿ ಕೃಷ್ಣ ಹೇಳಿರುವಂಥದ್ದು ನಾಲ್ಕು ವರ್ಣಗಳಲ್ಲಿ ಒಂದು ವರ್ಣದವರೆ ಇನ್ನೊಂದು ವರ್ಣದವರನ್ನ ಮದುವೆಯಾದರೆ ಅಲ್ಲಿ ಆಚಾರ ವಿಚಾರಗಳು ಸಂಸ್ಕೃತಿ, ಸಂಪ್ರದಾಯಗಳಲ್ಲಿ ವ್ಯತ್ಯಾಸ ಕಂಡು ಬಂದು ಸಮಸ್ಯೆಗೆ ಕಾರಣವಾಗುವುದು ಎಂದು. ಜನ ಹಿಂದಿನಂತೆ ಹಿಂದೆ ಸಹಿಷ್ಣುಗಳಾಗಿರಲಿಲ್ಲ ಒಪ್ಪಿಕೊಳ್ಳುವವರು ಆಗಿರಲಿಲ್ಲ. ಧರ್ಮ ನಂಬಿಕೆ ಸಂಪ್ರದಾಯಗಳು ಅತಿಯಾಗಿದ್ದವು… ಅಂತಹ ಕಾಲದಲ್ಲಿ ಕೆಳಜಾತಿಯ ಹುಡುಗಿಯನ್ನು ಅಥವಾ ಮೇಲ್ಜಾತಿಯ ಹುಡುಗಿಯನ್ನು ಮನೆಗೆ ತಂದು ಸಂಸಾರ ನಡೆಸುವುದು ಹೇಗೆ ಹೇಳಿ? ಪ್ರತಿಯೊಂದು ಜಾತಿಯಲ್ಲಿಯೂ ಪ್ರತಿಯೊಂದು ಪಂಗಡಗಳಲ್ಲಿಯೂ ಆಚಾರ ವಿಚಾರಗಳು ಸಂಪ್ರದಾಯಗಳು ಬೇರೆ ಬೇರೆಯಾಗಿವೆ… ಒಂದೇ ಸಮುದಾಯದ ಒಂದೇ ಜಾತಿ ಅಡಿಯಲ್ಲಿ ಉಪಜಾತಿಗಳು ಉಪಜಾತಿಗಳಲ್ಲಿ ಬೇರೆ ಬೇರೆ ಆದಂತಹ ಸಂಸ್ಕೃತಿ ಸಂಪ್ರದಾಯಗಳಿವೆ….

    • ಸನ್ಮಾನ್ಯರೆ ˌ ಬೇರೆ ಜಾತಿಯ ಹುಡುಗ ಹುಡುಗಿ ಮದುವೆಯಾದರೆ ಅವರಲ್ಲಿ ಸಂಸ್ರ್ಕುತಿಕ ಬಿನ್ನತೆ ˌ ಆಚಾರ ವಿಚಾರ ಆಹಾರ ಪದ್ದತಿಗಳು ಬೇರೆಯಾಗಿರುವದರಿಂದ ಮುಂದೆ ಸಂಸಾರ ನಡೆಸುವುದು ದುಸ್ತರವಾಗಬಹುದೆಂಬ ಆಶಯ ವ್ಯಕ್ತಪಡಿಸಿದ್ದಿರಿ . ಮೇಲ್ಜಾತಿಯ ಹುಡುಗ ಕೆಳಜಾತಿಯ ಹುಡುಗಿಯನ್ನು ಮದುವೆಯಾದರೆ ಮನುಶಾಸ್ರ್ತ ಒಪ್ಪುಗೆ ಕೊಡುವದೇಕೆ ? ಅದೆ ಮೇಲ್ಜಾತಿಯ ಹುಡುಗಿ ಕೆಳಜಾತಿಯ ಹುಡುಗನಿಗೆ ಮದುವೆಯಾದರೆ ಅಪರಾಧವೇಕಾಗುತ್ತದೆ ? ಇದು ನ್ಯಾಯವೆ .

  4. ನೀವು ಒಳ್ಳೇ ಬರಹಗಾರರು ಒಳ್ಳೆ ವಿಚಾರ ಇಲ್ಲಾ ಶರಣರು ಎಲ್ಲಾರು ಬಹುದೇವರ ಉಪಸಕರು ಅವರ ಅಂಕಿತನಾಮ ನಾಮ ನೋಡೊದರೆ ಗೋತಾಗುತ್ತೆ ಅದಕ್ಕೆನು phd ಮಾಡಬೇಕಾಗಿಲ್ಲ

    • ಅಂಕಿತನಾಮದಿಂದ ನಾವು
      ಬಸವಾದಿ ಶರಣರನ್ನು ನೋಡಬೇಕೆ ಅಥವಾ ಅದೆ ಬಸವಾದಿ ಶರಣರೆ ಬರೆದ ವಚನಗಳ ಆಶಯ ನೋಡಬೇಕೆ ?

      • ಮೊದಲು ಅವರ‌ ವಚನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ ಸಮಾಜ ವಡೆಯುವದಕ್ಕಲ್ಲ

  5. ಕಮ್ಮಿನಿಷ್ಠೆ ವಿಚಾರಧಾರೆಯ ಒಬ್ಬ ಅಸಂಬಧ್ದ ವ್ಯಕ್ತಿಯ ಆಲಾಪನೆ.
    ಪ್ರೊ. ಅನ್ನುವ ಉಪನಾಮವೊಂದು ಕೇಡು.

  6. ಶರಣರು ವೈದಿಕರ ಕರ್ಮಸಿದ್ಧಾಂತ , ಪುನರ್ಜನ್ಮ ಹಾಗೂ ಸ್ವರ್ಗನರಕಗಳನ್ನು ಖಡಾಖಂಡಿತವಾಗಿ ಧಿಕ್ಕರಿಸಿರುವ ವಚನಗಳು ಯಾವುವು ? ಕೆಲವು ಉದಾಹರಣೆಗಳನ್ನು ದಯವಿಟ್ಟು ಯಾರಾದರೂ ಕೊಡಿ.

    • ಬೇರಿಲ್ಲ ಕಾಣಿರೊ ಸತ್ಯವ ನುಡಿವುದೆ ಸ್ವರ್ಗಲೋಕ ˌಮಿಥ್ಯವ ನುಡಿಯುವುದೆ ಮರ್ಥ್ಯಲೋಕ ˌ ಆಚಾರವೆ ಸ್ವರ್ಗನರಕ ಅನಾಚಾರವೆ ನರಕ ಇದಕ್ಕೆ ನೀವೆ ಪ್ರಮಾಣ ಕೂಡಲಸಂಗಮದೇವ.

      • ಈ ಕೆಳಗಿನ ವಚನ ಪುನರ್ಜನ್ಮವನ್ನು ಸಮರ್ಥಿಸುವದಿಲ್ಲವೇ?

        ಅಯ್ಯಾ
        ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ

        ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ

        ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ

        ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4

      • ಸರ್, ತಾವು ಉದಾಹರಿಸಿರುವ ಈ ಮೇಲಿನ ವಚನ ಸತ್ಯ ಹಾಗೂ ಆಚಾರಗಳ ಮಹತ್ವವನ್ನು ಎತ್ತಿ ಹಿಡಿಯಲು ಹೊರಟಿದೆಯೇ ಹೊರತು ಸ್ವರ್ಗ ನರಕಗಳನ್ನು ಧಿಕ್ಕರಿಸಲು ಅಲ್ಲ. ಈಗ ಉದಾಹರಣೆಗೆ ತಂದೆ ತಾಯಿಯರೇ ದೇವರು ಎಂದಾಗ ಅದು ತಂದೆತಾಯಿಯ ಮಹತ್ವವನ್ನು ಹೇಳುತ್ತದೆಯೇ ಹೊರತು ದೇವರಿಲ್ಲ ಎಂದು ಸಾಧಿಸುವದಿಲ್ಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X