ದಡ್ಡುಗಟ್ಟಿದ ಪ್ರಭುತ್ವಕ್ಕೆ ಅಕ್ಷರಗಳು ನಾಟುವುದಿಲ್ಲ: ಕಲ್ಯಾಣ ಕರ್ನಾಟಕ ಸೀಮೆಯ ಹಕೀಕತ್ತುಗಳು

Date:

Advertisements
ಮನುಷ್ಯರೆಂದರೆ ಬರೀ ಮತಹಾಕುವ ಯಂತ್ರಗಳಲ್ಲ. ಸಂವಿಧಾನ ಓದು ಅರಿಯಬೇಕಾದುದು ಮೊದಲು ಜನ ಪ್ರತಿನಿಧಿಗಳು. ಅವರು ತಮ್ಮ ಅಧಿಕಾರದ ಗಟ್ಟಿತನಕ್ಕೆ ಬೇಕಾದ ಓಟುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಿಧಾನದ ಬಳಕೆ ಮಾಡಿಕೊಳ್ಳುತ್ತಿರುವ ಒಳಮುಸುಕು ಸತ್ಯ ಯಾರೂ ಅರಿಯದ್ದೇನಲ್ಲ. ಇಂತಹ ನಿರಪೇಕ್ಷ ಸೂಕ್ಷ್ಮಗಳನ್ನು ಅರಿಯದೇ ಹೋದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ.

ಏನಿಲ್ಲವೆಂದರೂ ವರುಷಕ್ಕೆ ನಾಕೈದು ಬಾರಿಯಾದರೂ ಹುಟ್ಟೂರಿಗೆ ಹೋಗಿ ವಾರವೊಪ್ಪತ್ತು ಅಲ್ಲಿದ್ದು ಬರುತ್ತೇನೆ.‌ ಜನುಮದೂರಿನ ಮುಕ್ಕಾಮೆಂದರೆ ಬಹುಸ್ವರದ ಬದುಕಿನ ಸಜೀವ ಸಂತಸ ಸಂಕಟಗಳ ಅನುಸಂಧಾನ. ಅಲ್ಲಿ ನಿನದಿಸುವ ಒಂದೊಂದು ಘಟನೆಗಳೂ ಮೆಟಾಫಿಜಿಯೋಥೆರಪಿ ಅನುಭವ. ಆ ಮೂಲಕ ಊರಿನ‌ ಜೀವ ಸಂವೇದನೆಗಳೊಂದಿಗೆ ನವೀಕರಣಗೊಳ್ಳುವ ಜೀರ್ಣಕ್ರಿಯೆ. ಅದೇನೋ ಒಂದು ಬಗೆಯ ವರ್ತಮಾನೀಕರಣದ ಅಮೂರ್ತ ಉಮೇದು. ಅವು ಕೇವಲ ನನ್ನ ಊರಿನ ಸಂಕೀರ್ಣಾನುಭವಗಳ ಅನಾವರಣ ಮಾತ್ರವಲ್ಲ. ಅವು ಇವತ್ತಿನ ಕಲ್ಯಾಣ ಕರ್ನಾಟಕದ ಎಲ್ಲ ಹಳ್ಳಿಗಳ ಹಕೀಕತ್ತುಗಳು.

ಅಂದರೆ, ಹಳೆಯ ಹೈದರಾಬಾದ್ ಕರ್ನಾಟಕದ ಮಾಯದ ಗಾಯಗಳ ಹಳೆಯ ಕಥನಗಳೇ ಆಗಿರಬಲ್ಲವು. ಊರೆಂದರೆ ಬರೀ ಓಣಿ, ವಠಾರ, ವಸ್ತಿ ಮನೆಗಳಲ್ಲ. ಆಯಾ ಊರುಗಳ ಜಡವೇದಿ ಆತ್ಮಕಥನಗಳೇ ಆಗಿವೆ. ಅವು ಮನುಷ್ಯರ ಸಂವೇದನಾಶೀಲ ಮನಸುಗಳ ಜ್ಞಾತ ಸಂಗತಿಗಳು. ಜಂಗಮ ಸ್ವರೂಪಿ ಸಂಬಂಧಗಳು. ನಿತ್ಯ ಬದುಕಿನ‌ ಜೀವಕಳೆಯ ಸಂತಸ ಸಂಕಟಗಳು. ಕೆಲವಂತು ಎದೆ ತೋಯಿಸುವ ಅಪ್ರಕಟಿತ ಪ್ರೀತಿ, ಅನುಕಂಪಗಳು. ಮತ್ತೆ ಮತ್ತೆ ಅಂತಹ ನೋವುಭರಿತ ಹಲ್ಲಿನೆಡೆಗೇ ನಾಲಗೆ ಹೊರಳಾಡುವ ನೆನಪುಗಳು.

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಾರು ವರುಷಗಳು ಕಳೆದರೂ ನಮ್ಮೂರಿನ ಮಹಿಳೆಯರಿಗೆ ಬಯಲು ಶೌಚಾಲಯಗಳಿಂದ ಬಿಡುಗಡೆ ಆಗಿಲ್ಲ. ಹಾಗಂತ ಪುರುಷರು ಅದಕ್ಕೆ ಹೊರತಲ್ಲ. ಕಣ್ನಸುಕು ಕತ್ತಲಾಗುವತನಕ ಕಾಯ್ದು, ಕಾಯ್ದು ಮಹಿಳೆಯರು ಊರ ಹೊರಗಿನ ರಸ್ತೆ ಬದಿಯಲ್ಲಿ ಮಲ ವಿಸರ್ಜನೆಗೆ ಹೋಗಬೇಕಾದ ಸ್ಥಿತಿ. ಹಾಗೆ ಹೋದ ಚಣ ಮಾತ್ರದಲ್ಲೇ ಸೂಕ್ಷ್ಮಾತಿಸೂಕ್ಷ್ಮದ ಅಡ್ಡಿ ಆತಂಕಗಳು. ಮೇಲಿಂದ ಮೇಲೆ ತೂರಾಡಿ ಬಂದು ಕಣ್ಣು ಕುಕ್ಕುವಂತಹ ಬೆಳಕು ಹರಿಸುವ ವಾಹನಗಳ ಹಾರ್ನ್ ಹಾವಳಿ. ಮುಜುಗರದಿಂದ ಮತ್ತೆ ಮತ್ತೆ ಎದ್ದು ಕುಂತು, ಎದ್ದು ಕುಂತು ಏಳುವುದರಲ್ಲೇ ಮಲಬಾಧೆ ನಿಯಂತ್ರಣ ರೋಗಗಳಿಗೆ ತುತ್ತಾದ ಮಹಿಳೆಯರದೆಷ್ಟೋ!? ಇನ್ನು ಇರುವ ನಾಲ್ಕು ನೂರು ಮನೆಯ ಊರಲ್ಲಿ ದಿನಕ್ಕೆ ಹತ್ತಾರು ಮಂದಿ ಲೂಸ್ ಮೋಷನ್, ಆಮಶಂಕೆ ಭೇದಿ, ಮತ್ತಿತರೆ ಭೇದಿಸಂವೇದಿ ರೋಗಗಳಿಂದ ಬಳಲುವ ಮಹಿಳೆಯರ ಸ್ಥಿತಿಯಂತೂ ಅಯೋಮಯ. ಹೆಣ್ಣುಮಕ್ಕಳ ಒಟ್ಟಾರೆ ಬಯಲು ಬಹಿರ್ದೆಸೆಯ ಯಾತನೆಗಳು ಬಣ್ಣಿಸಲಸದಳ.

Advertisements

ಸಾಲದ್ದಕ್ಕೆ ತಾಯಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಅಲ್ಲೊಂದು ಆರೋಗ್ಯ ಉಪಕೇಂದ್ರವಿದೆ. ಅದು ನಿರ್ಮಾಣಗೊಂಡ ದಶಕದಿಂದಲೂ ಅದಕ್ಕೆ ಸಂಬಂಧಿಸಿದ ಮಹಿಳಾ ಸಿಬ್ಬಂದಿ ಅದರಲ್ಲಿ ವಾಸವಾಗಿಲ್ಲ. ಕಾರಣ ಸಿಬ್ಬಂದಿ ವಾಸವಾಗಿರಬೇಕೆಂದರೆ ಕನಿಷ್ಠ ಪ್ರಮಾಣದ ಸೌಕರ್ಯಗಳು ಸಹಿತ ಅಲ್ಲಿಲ್ಲ. ಮುಖ್ಯವಾಗಿ ಅದಕ್ಕೆ ಕಾಂಪೌಂಡ್, ಮತ್ತು ನೀರಿನ ಸೌಕರ್ಯವೇ ಇಲ್ಲ. ಅಲ್ಲಿ ಇಲ್ಲಗಳ ದೊಡ್ಡ ಪಟ್ಟಿಯೇ ಇದೆ. ನಾನು ಮೊನ್ನೆ ಭೆಟ್ಟಿ ಕೊಟ್ಟಾಗ ಅದರ ಸುತ್ತಲೂ ತಿಪ್ಪೆ, ಹಂದಿಗಳ ಹಿಂಡು, ಮಲ ಮೂತ್ರಗಳ ರಾಶಿ ತುಂಬಿತ್ತು. ಜನಾರೋಗ್ಯ ಕಾಪಾಡಬೇಕಾದ ಆರೋಗ್ಯ ಕೇಂದ್ರವೇ ಈ ರೀತಿ ರೋಗಪೀಡಿತವಾಗಿರುವಾಗ ಊರಿನ ಜನರ ಆರೋಗ್ಯ ರಕ್ಷಣೆ ಹೇಗೆ ಸಾಧ್ಯ? ಗ್ರಾಮದ ನಿರಾಮಯ ಬದುಕಿನ ಸ್ವಾಸ್ಥ್ಯಪ್ರೀತಿ, ಅನುಭೂತಿ ಇನ್ನೆಲ್ಲಿ ಹುಡುಕಲು ಸಾಧ್ಯ?

ಇದನ್ನು ಓದಿದ್ದೀರಾ?: ಬಿಲ್ಕಿಸ್ ಪ್ರಕರಣ । ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ನ್ಯಾಯಮೂರ್ತಿ ನಾಗರತ್ನ

ಕುಡಿಯುವ ಶುದ್ಧ ನೀರಿನ ‘ಸಮಸ್ಯೆ’ ಅಮೃತ ಮಹೋತ್ಸವವನ್ನೇ ಆಚರಿಸಿಕೊಂಡಿದೆ. ನೀರೆಂಬ ಪದಾರ್ಥ ಸಿಕ್ಕರೆ ಸಾಕು. ಅದು ಶುದ್ಧಾಶುದ್ಧ ಎಂಬ ಮಾತು ಅಪ್ರಸ್ತುತ ಮತ್ತು ದೂರಿನದು. “ನೀರೊಂದೆ ಶೌಚಾಚಮನಕೆ” ಎಂಬ ವಚನ ನೆನಪಿಸಿ ಸಮಾಧಾನ ಪಡುವಂತಹದು. ಮಾಳಿಕಲ್ಲು ಹಳ್ಳದ ಬಳಿ ತೋಡಿದ ತೆರೆದ ಬಾವಿಯ ನೀರು ಊರಿಗೆಲ್ಲ ಪೂರೈಕೆ. ಅದಕ್ಕೆ ಮೊದಲು ಮತ್ತು ಈಗಲೂ ಜನಗಳು ಮತ್ತು ದನಕರುಗಳು ಊರ ಮುಂದಲ ಹಿರೇಹಳ್ಳದ ನೀರನ್ನೇ ಕುಡಿದು ಬದುಕಿದ ರೂಢಿ. ಹೀಗಾಗಿ ನೀರುಮೂಲ ರೋಗಗಳ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಗಳಿಸಿಕೊಂಡಿದ್ದಿರಬಹುದು!?

ಊರು ಬಿಟ್ಟು ಹೊಟ್ಟೆಪಾಡಿಗಾಗಿ ದೂರದ ಊರಿಗೆ ಹೋಗಿರುವ ನನ್ನಂಥವರಿಗೆ ಹುಟ್ಟೂರಿನ ಉಸಾಬರಿ ಯಾಕೆಂಬ ಕೆಲವರ ಅಂಬೋಣ. ಅದನ್ನು ಅಣಕಿಸುವಂತೆ ಅನೇಕ ಗೆಳೆಯರು, ಬಂಧುಗಳು ನನ್ನನ್ನು ಪ್ರೀತಿಯಿಂದ ಆಗಾಗ ತಿವಿಯುತ್ತಾರೆ. ಹೇಗಿದ್ದರೂ ನೀನು ಸಾಹಿತಿ ಇದ್ದಿರುವಿ. ಕತೆ, ಗಿತೆ ಅಂತ ಬರೆದು ಹೆಸರು ಮಾಡಿರುವಿ. ಅಕಾಡೆಮಿಗಳ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಮೇಲಾಗಿ ವಜೀಫ ಬೇರೆ ಆಗಿರುವಿ, ಅಂತಹ ನಿವೃತ್ತಿ ಜೀವನ ಸುಲಲಿತವಾಗಿ ಕಳೆಯೋದು ಬಿಟ್ಟು “ಮಸೂತಿ ಚಿಂತಿ ಮಾಡಿ ಮುಲ್ಲಾ ಬಡವಾಗುವ ಕೆಲಸ ಬೇಕಾ” ಅಂತ ಕಳಕಳಿಯುಕ್ತ ತೋರುಂಬ ಪ್ರೀತಿಯ ಸೋನೆಮಳೆ ಸುರಿಸುತ್ತಾರೆ. ಅದರ ಜತೆಯಲಿ ಹಸಿ ಕೆಸರಿಗೆ ಬೆಂಕಿ ಹಚ್ಚುವ ಕೆಲ ಕಿಡಿಗೇಡಿಗರು ಇಲ್ಲದಿಲ್ಲ. ಎಂತಹದೇ ಸಂದಿಗ್ಧ ಸ್ಥಿತಿಯಲ್ಲೂ “ಇರುವ ಸಂಕಟವ ಮರೆಯಲು ನಮ್ಮವರು ಇರದ ಸಂತಸದ” ನೇವರಿಕೆಯ ನುಡಿಗಟ್ಟುಗಳ ಸ್ವಯಂ ನುಡಿ ನಿಪುಣರು. ಅದು ಅವರ ಹದುಳ ಪ್ರೀತಿಯ ಲೋಕದೃಷ್ಟಿ.

ಮೊನ್ನೆ 2024ರ ಹೊಸ ವರುಷದ ಮೂರು ಮತ್ತು ನಾಲ್ಕನೇ ದಿನದಂದು ಜರುಗಿದ ಮಡಿವಾಳಪ್ಪನ ಅನುಭಾವದ ಜಾತ್ರೆಗೆ ಕಾಂಡದ ಮೊದಲ ದಿನದ ರಾತ್ರಿ ಕಮ್ಮೀ ಜನ ಬಂದಿದ್ದರು. ಅದರಲ್ಲಿ ಮಹಿಳೆಯರದು ಮೇಲುಗೈ. ಅವತ್ತು ನನ್ನ ಹೊಸ ಪುಸ್ತಕ ‘ಪರಿಮಳದ ಹಾದಿಯ ಪಯಣಿಗರು’ ಬಿಡುಗಡೆ ಆಯಿತು. ನನ್ನ ಪ್ರಾಸ್ತಾವಿಕ ಮಾತುಗಳು‌ ಮುಗಿದ ಮೇಲೆ ಮೀನಾಕ್ಷಿ ಬಾಳಿ ಮಾತುಗಳು ಥಂಡಿಯನ್ನು ಹೊಡೆದೋಡಿಸಿದವು. ಕಾರ್ಯಕ್ರಮ ಮುಗಿದಾಗ ನಡುರಾತ್ರಿಯ ಒಂದುಗಂಟೆ ಮೀರಿತ್ತು. ವೇದಿಕೆಯ ಕೆಳಗಿಳಿದು ಬರುವಾಗ ಕೆಲವು ತರುಣರು ಪ್ರಶ್ನೆಗಿಳಿದರು. ನೀವು ಹಿಂದೂಗಳಲ್ಲವೇ? ಸನಾತನ ಧರ್ಮದ ಬಗ್ಗೆ ನಿಮಗೇಕೆ ಅಸಮಾಧಾನ ಮುಂತಾಗಿ ಕೇಳತೊಡಗಿದರು. ಪಾನಮತ್ತರಾಗಿದ್ದ ಅವರೊಂದಿಗೆ ಚರ್ಚೆ ಸೂಕ್ತವೆನಿಸದೇ ‘ಮುಂಜಾನೆ ನಿಚ್ಚಳಗೊಂಡು ಬರ್ರಿ ಮಾತಾಡೋಣ’ವೆಂದು ಮೀನಾಕ್ಷಿ ತಳ್ಳಿ ಹಾಕಿದರು.

ಮಡಿವಾಳಪ್ಪ11

ಮಠದ ಮುಂದೆ ದೊಡ್ಡದಾದ ಫ್ಲೆಕ್ಸ್ ರಾರಾಜಿಸುತ್ತಿತ್ತು. ಅದರಲ್ಲಿ ಮಡಿವಾಳಪ್ಪ ಮತ್ತು ಹಿರಿಯ ಗುರುಗಳ ಭಾವಚಿತ್ರಗಳೊಂದಿಗೆ ಸಾವರ್ಕರ್ ಭಾವಚಿತ್ರವಿತ್ತು. ‘ಸಾವರ್ಕರ್ ಸರಕಾರ್’ ಎಂಬ ಘೋಷಣೆಯೊಂದಿಗೆ ಅದರಲ್ಲಿ ಕೆಲವು ಅಮಾಯಕ ಯುವಕರ ಫೋಟೋಗಳಿದ್ದವು. ಚೆನ್ನೂರು ಜಲಾಲ ಸಾಹೇಬನಂತಹ ಖಾದರಲಿಂಗ ಪ್ರಜ್ಞೆಯ ಸಂತ ಫಕೀರ ಮತ್ತು ಜೀತಪೀರ ಮಹಾಂತ ಪ್ರಜ್ಞೆಯ ಮಡಿವಾಳಪ್ಪನಂತಹ ಬಹುತ್ವದ ಮಹಾಬೆಳಕುಗಳು. ಇಂತಹ ಲೋಕಬೆಳಕನ್ನು ಏಕಮುಖಿ ಧರ್ಮದ ವ್ಯಕ್ತಿ ಸಾವರ್ಕರ್ ಜತೆ ತಳಕು ಹಾಕುತ್ತಿರುವ ಹುನ್ನಾರ ಮತ್ತು ಅಪಾಯಗಳು ನಮಗೆ ಗೋಚರಿಸಿದವು. ಅದಾದ ವಾರದಲ್ಲೇ ಗದಗ ಬಳಿಯ ಸೂರಣಗಿಯಲ್ಲಿ ಸಿನೆಮಾ ಲೋಕದ ಸೆಲೆಬ್ರಿಟಿ ನಾಯಕನೊಬ್ಬನ ಹುಟ್ಟುಹಬ್ಬದ ಕಟೌಟ್ ಕಟ್ಟಲು ಹೋಗಿ ಪ್ರಾಣ ಕಳೆದುಕೊಂಡ ಮುಗ್ದತೆಯ ತರುಣರು ಅದೇಕೋ ಗಾಢವಾಗಿ ಕಾಡಿದರು.

ಕಾಂಡದ ಮಾರನೇ ದಿನದ ಕಜ್ಜ ಭಜ್ಜಿ ಪ್ರಸಾದ ಮತ್ತು ರಥೋತ್ಸವಕ್ಕೆ ಸಹಸ್ರಾರು ಮಂದಿ ಸೇರಿದ್ದರು. ಅದಕ್ಕೆಲ್ಲ ಸಾಧು ಸಂತರು, ಫಕೀರರ ಪದಗಳ ಪರಿಮಳದ ಧೂಪ. ಪುರವಂತರಾಟದ ತರಹೇವಾರಿ ವೀರಭದ್ರವತಾರಗಳು. ಭಜ್ಜಿ ತಯಾರಿಕೆಯ ಆಳೆತ್ತರದ ಕಡಾಯಿಗಳ ಹತ್ತಿರದಲ್ಲೇ ಕುಂತು ಮುಲ್ಲಾ ಅಲ್ಲೀಸಾಬ ಹಾಡುತ್ತಲಿದ್ದ “ಗಂಡ ಕಲಿಸಿದ ಹಾದರ” ಎಂಬ ಖೈನೂರು ಕೃಷ್ಣಪ್ಪನ ತತ್ವಪದಗಳು ವ್ಯವಸ್ಥೆಯ ವಿರುದ್ಧದ ಕಟು ವ್ಯಂಗ್ಯದ ದನಿಗಳಾಗಿ ನನಗೆ ಕೇಳಿಸ ತೊಡಗಿದವು.

ಮನುಷ್ಯರನ್ನು ತನ್ನ ಓಟಿನ ಬುಟ್ಟಿಯ ಮತ ಯಂತ್ರದ ಮಾರುಕಟ್ಟೆ ವಸ್ತುಗಳಂತೆ ಭಾವಿಸುವ ರಾಜಕಾರಣಿಗಳದ್ದೇ ಬಾಹುಳ್ಯ. ಒಬ್ಬನೇ ಒಬ್ಬ ಲೋಹಿಯಾ, ಶಾಂತವೇರಿ ಇಲ್ಲವೇ ನಮ್ಮ ಕಲಬುರಗಿಯ ವೀರಣ್ಣ ತಿಮ್ಮಾಜಿಯಂಥವರು ನಮ್ಮ ನಡುವೆ ಇಲ್ಲವೇ ಇಲ್ಲ. ಕಟು ಮತ್ತು ಕಹಿ ವಾಸ್ತವ ಹೀಗಿರುವಾಗ ನನ್ನಂಥವನ ಅಕ್ಷರಗಳು ಇಂಥ ವ್ಯವಹಾರಸ್ಥರಿಗೆ ಅದ್ಹೇಗೆ ಅರ್ಥ ಆದಾವು? ಜೀವ ಸಂಕುಲದ ಸೂಕ್ಷ್ಮತೆಗಳನ್ನು ಕಳೆದುಕೊಂಡ ಯಾವುದೇ ಪ್ರಭುತ್ವಕ್ಕೆ ಅಕ್ಷರಗಳು ನಾಟುವುದಿಲ್ಲ. ಸಾಹಿತ್ಯ, ಸಂಸ್ಕೃತಿ, ಸಿದ್ಧಾಂತ ಓದುವ ಸಂಸ್ಕೃತಿಯಿಂದ ರಾಜಕಾರಣಿಗಳು ವಿಮುಖಗೊಂಡಿದ್ದಾರೆ. ನಾನು ಕಂಡಂತೆ ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ್ ಗಂಭೀರ ಓದುಗರಾಗಿದ್ದರು. ನಾನು ಎಂ.ಪಿ. ಪ್ರಕಾಶ್ ಅವರನ್ನು ಭೇಟಿಯಾದಾಗೆಲ್ಲ ನನ್ನನ್ನು ಕೇಳುತ್ತಿದ್ದುದು ‘ಇತ್ತೀಚೆಗೆ ಯಾವ ಪುಸ್ತಕ ಓದಿದೆ’ ಅಂತ. ಜತೆಗೆ ತಾವು ಓದಿದ ಪುಸ್ತಕಗಳ ಕಂಟೆಂಟ್ ಸಮೇತ ಉಲ್ಲೇಖಿಸುತ್ತಿದ್ದರು. ಭಾಷಣಗಳಲ್ಲಿ ತಾವು ಓದಿದ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ವಿವರಗಳನ್ನು ಪ್ರಸ್ತಾಪಿಸುತ್ತಿದ್ದರು.

ಧರ್ಮಸಿಂಗ್ ಅವರು ಭಾಗವಹಿಸಿದ ಸಭೆಯೊಂದರಲ್ಲಿ ಎಂ.ಪಿ ಪ್ರಕಾಶ್, ಸೂಫಿ ಮತ್ತು ತತ್ವಪದಕಾರರು ಕುರಿತು ಮತ್ತು ನಮ್ಮದೇ ನೆಲದ ಸನ್ನತಿಯ ಬೌದ್ಧ ಚಿಂತನೆಗಳ ಕುರಿತು ಸಂಶೋಧಕ, ಸಾಹಿತಿಯಂತೆ‌ ಮಾತಾಡಿದ್ದನ್ನು ಕೇಳಿ ಅವಾಕ್ಕಾಗಿದ್ದೆ. ಅವರ ಓದಿನ ಹರವು, ಒಳನೋಟಗಳು ಯಾವೊಬ್ಬ ಸಂಸ್ಕೃತಿ ಚಿಂತಕನಿಗೆ ಕಡಿಮೆ ಇರಲಿಲ್ಲ. ಅವತ್ತು ಧರ್ಮಸಿಂಗ್ ಸಹಿತ ಒಪ್ಪಿ ಅದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ್ದರು. ಹೀಗಾಗಿ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎಂ.ಪಿ ಪ್ರಕಾಶ್ ಅವರ ಮಾರ್ಗದರ್ಶನ ಮತ್ತು ಸಲಹೆ ಕೇಳಿ ನಿರ್ಧಾರಕ್ಕೆ ಬರುತ್ತಿದ್ದರು.

ಎಂಪಿ ಪ್ರಕಾಶ್- ಧರಂಸಿಂಗ್
ಎಂಪಿ ಪ್ರಕಾಶ್- ಧರಂಸಿಂಗ್

ಗ್ರಾಮ ಭಾರತದ ಒಟ್ಟಾರೆ ಆರೋಗ್ಯ ಕುರಿತು ನಾನು ಮತ್ತು ನನ್ನಂಥವರು ಹೇಳಲೇಬೇಕಾದ ರಾಜಕೀಯ ಪ್ರಜ್ಞೆಯ ಮಾತುಗಳಿವೆ. ಅವು ಹೀಗಿವೆ: ಮನುಷ್ಯರೆಂದರೆ ಬರೀ ಮತಹಾಕುವ ಯಂತ್ರಗಳಲ್ಲ. ಸಂವಿಧಾನ ಓದು ಅರಿಯಬೇಕಾದುದು ಮೊದಲು ಜನ ಪ್ರತಿನಿಧಿಗಳು. ಅವರು ತಮ್ಮ ಅಧಿಕಾರದ ಗಟ್ಟಿತನಕ್ಕೆ ಬೇಕಾದ ಓಟುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಿಧಾನದ ಬಳಕೆ ಮಾಡಿಕೊಳ್ಳುತ್ತಿರುವ ಒಳಮುಸುಕು ಸತ್ಯ ಯಾರೂ ಅರಿಯದ್ದೇನಲ್ಲ. ಇಂತಹ ನಿರಪೇಕ್ಷ ಸೂಕ್ಷ್ಮಗಳನ್ನು ಅರಿಯದೇ ಹೋದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ. ಸೋಜಿಗವೆಂದರೆ ಎಲ್ಲ ಪಕ್ಷಗಳ ರಾಜಕಾರಣ ಇದಕ್ಕೆ ಹೊರತಾಗುತ್ತಿಲ್ಲ ಎಂಬ ಹಳಹಳಿ. ಆಯಾ ಪಕ್ಷದ ಕಾರ್ಯಕರ್ತರಂತೆ ಮಾತಾಡುವುದು ನಿಜವಾದ ರಾಜಕೀಯ ಪ್ರಜ್ಞೆ ಅಲ್ಲ. ದುರಂತವೆಂದರೆ ಸೋಕಾಲ್ಡ್ ಅಧಿಕಾರಸ್ಥ ಯಾವೊಬ್ಬ ರಾಜನೀತಿಜ್ಞರು ನಿಷ್ಪಕ್ಷಪಾತದ ರಾಜಕೀಯ ಪ್ರಜ್ಞೆ ಬೆಳೆಸುತ್ತಿಲ್ಲ.

ಕಡಕೋಳ
ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X