ಭಾರತ ಚುನಾವಣಾ ಆಯೋಗ ಮತ್ತು ಸುಪ್ರೀಮ್ ಕೋರ್ಟು ಎರಡೂ ನಿರೀಕ್ಷೆಯನ್ನು ಹುಸಿಗೊಳಿಸಿ ದೇಶದ ಜನತಂತ್ರವನ್ನು ವಿಪತ್ತಿಗೆ ಸಿಲುಕಿಸಿವೆ. ಆಯೋಗದ ಸೃಷ್ಟಿಯಾದ ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (ಇವಿಎಂ) ‘ಬಂಗಾರ ಗುಣಮಾನ’ದ್ದು ಮತ್ತು ಅದರ ಈಗಿನ ಎಲ್ಲ ಕ್ರಿಯೆಗಳು ತಪ್ಪಾಗಲು ಆಸ್ಪದವೇ ಇಲ್ಲದಂತಹವು ಎಂಬ ವಾದಕ್ಕೆ ಸುಪ್ರೀಮ್ ಕೋರ್ಟ್ ಮಣೆ ಹಾಕಿಬಿಟ್ಟಿದೆ.
ತಜ್ಞರು, ಸಿವಿಲ್ ಸೊಸೈಟಿ ಸದಸ್ಯರು ಹಾಗೂ ಹಲವು ಅರ್ಜಿದಾರರು ಈ ವಾದವನ್ನು ಪ್ರಶ್ನಿಸಿದ್ದರೂ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿಲ್ಲ. ಮುಖ್ಯ ಅರ್ಜಿದಾರ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎ.ಡಿ.ಆರ್) ಅರ್ಜಿಯನ್ನು ಒಂದು ವರ್ಷ ಕಾಲ ವಿಚಾರಣೆಗೇ ಎತ್ತಿಕೊಳ್ಳದೆ ನಿರ್ಲಕ್ಷ್ಯ ತೋರಲಾಯಿತು. ತೀರ್ಪು ನೀಡಲು ಯಾವುದೇ ತುರ್ತು ತೋರದ ದ್ವಿಸದಸ್ಯ ನ್ಯಾಯಪೀಠ, ಕಡೆಗೂ ಲೋಕಸಭಾ ಚುನಾವಣೆಗಳ ಆರಂಭಕ್ಕೆ ಎರಡೇ ದಿನಗಳು ಬಾಕಿ ಉಳಿದಿರುವ ಹಂತದಲ್ಲಿ ಏಪ್ರಿಲ್ 16ರಂದು ಈ ಅರ್ಜಿಗಳ ವಿಚಾರಣೆ ಆರಂಭಿಸಿತು. 10 ದಿನಗಳ ನಂತರ ಅಂದರೆ ಏಪ್ರಿಲ್ 26ರಂದು ತೀರ್ಪನ್ನೂ ನೀಡಿತು.
ದ್ವಿಸದಸ್ಯ ಪೀಠ ಎಲ್ಲ ಅರ್ಜಿಗಳನ್ನೂ ತಳ್ಳಿ ಹಾಕಿತು. ಸೋತ ಅಭ್ಯರ್ಥಿಗಳಿಗೆ ‘ಇವಿಎಂ ಆಡಿಟ್’ ಕೋರುವ ಅವಕಾಶವನ್ನು ನೀಡಿತು. ಈ ಅವಕಾಶಕ್ಕೆ ಷರತ್ತುಗಳನ್ನು ವಿಧಿಸಿತು. ಈ ಷರತ್ತುಗಳು ‘ಆಡಿಟ್’ ಅನ್ನು ತಾಂತ್ರಿಕವಾಗಿ ಅಸಂಬದ್ಧಗೊಳಿಸುತ್ತವೆ. ಸೂಚಿಸಿರುವ ಆಡಿಟ್ ತಂಡ ವಿಶ್ವಾಸಾರ್ಹ ಎನಿಸುವುದಿಲ್ಲ. ವಿಶ್ವಾಸಾರ್ಹ ಚುನಾವಣೆಗಳನ್ನು ನಡೆಸಲು ಸೂಚಿಸಲಾದ ಉತ್ತಮ ಪರ್ಯಾಯಗಳನ್ನು ತಿರಸ್ಕರಿಸಲಾಯಿತು.
ಚುನಾವಣಾ ಆಯೋಗ ಮತ್ತು ಇವಿಎಂಗಳ ಕುರಿತು ತಮಗಿರುವ ವಿಶ್ವಾಸವನ್ನು ಒತ್ತಿ ಹೇಳಿದ ನ್ಯಾಯಮೂರ್ತಿಗಳು, ಫಲಿತಾಂಶದ ನಂತರ ಇವಿಎಂ ಆಡಿಟ್ ನಡೆಸುವಂತೆ ಆಯೋಗಕ್ಕೆ ನಿರ್ದೇಶನಗಳನ್ನು ನೀಡಿದರು. ಆದರೆ ಅರ್ಜಿದಾರರು ಇಂತಹ ಯಾವುದೇ ಪರಿಹಾರವನ್ನು ಕೋರಿರಲಿಲ್ಲ ಎಂಬುದು ಕೂಡ ಗಮನಾರ್ಹ.
ದೋಷಪೂರಿತ ತೀರ್ಪು
ಜೂನ್ ನಾಲ್ಕರ ಫಲಿತಾಂಶ ಘೋಷಣೆಯನ್ನು ನಿರೀಕ್ಷಿಸಿ ಈ ಕೆಳಕಂಡ ಭವಿಷ್ಯವಾಣಿಗಳನ್ನು ನುಡಿಯಬಹುದು.
‘ಇಂಡಿಯಾ’ ಒಕ್ಕೂಟ ಸೋಲುತ್ತದೆ ಅಥವಾ ಬಿಜೆಪಿ ನೇತೃತ್ವದ ಎನ್.ಡಿ.ಎ.ಸೋಲುತ್ತದೆ. ಈ ಎರಡೂ ಸಾಧ್ಯತೆಗಳು ಇವಿಎಂ ಆಡಿಟ್‌ಗಳ ರಾಶಿ ರಾಶಿ ಕೋರಿಕೆಗಳಿಗೆ ದಾರಿ ಮಾಡಿಕೊಡುತ್ತವೆ. ಈ ಆಡಿಟ್‌ಗಳು ತಾಂತ್ರಿಕವಾಗಿ ಅಸಂಬದ್ಧ ಆಗಿರುವ ಮತ್ತು ಆಡಿಟರ್‌ಗಳು ವಿಶ್ವಾಸಾರ್ಹ ಅಲ್ಲದ ಕಾರಣ ಆಯೋಗವು ಪ್ರಕ್ಷುಬ್ದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಸುಪ್ರೀಮ್ ಕೋರ್ಟ್ ಸೂಚಿಸಿದ್ದೇನು?
ಅ) ಮೇ ಒಂದರಂದು ಅಥವಾ ಆನಂತರ ವಿವಿಪ್ಯಾಟ್‌ಗಳಿಗೆ ಚುನಾವಣೆ ಚಿಹ್ನೆಗಳನ್ನು ಲೋಡ್ ಮಾಡುವ ಪ್ರಕ್ರಿಯೆ ಮುಗಿದ ನಂತರ ಈ ಲೋಡಿಂಗ್ ಘಟಕಗಳನ್ನು ಪೆಟ್ಟಿಗೆಯಲ್ಲಿ ಭದ್ರಪಡಿಸಿ ಇಡಬೇಕು. ಇವಿಎಂಗಳನ್ನು ತೆರೆಯುವ ರೀತಿಯಲ್ಲಿಯೇ ಇವುಗಳನ್ನೂ ತೆರೆದು ಪರಿಶೀಲಿಸಿ ವ್ಯವಹರಿಸಬೇಕು.
ಆ) ಫಲಿತಾಂಶಗಳ ಘೋಷಣೆಯ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಅಥವಾ ಲೋಕಸಭಾ ಕ್ಷೇತ್ರದ ಶೇ.5ರಷ್ಟು ಇವಿಎಂಗಳ ಕಂಟ್ರೋಲ್ ಯೂನಿಟ್‌ಗಳನ್ನು (ಮೈಕ್ರೋಕಂಟ್ರೋಲರ್ ಅಥವಾ ಬರ್ನ್ಟ್ ಮೆಮರಿ) ಇವಿಎಂ ತಯಾರಿಸಿದ ಕಂಪನಿಗಳ ಎಂಜಿನಿಯರುಗಳ ತಂಡ ಏನಾದರೂ ಅಕ್ರಮ ಅಥವಾ ವಿರೂಪ ಮಾಡಲಾಗಿದೆಯೇ ಎಂದು ಪರಿಶೀಲಿಸಿ ತಾಳೆ ನೋಡಬೇಕು. ಅತಿ ಹೆಚ್ಚು ಮತ ಗಳಿಸುವ ಅಭ್ಯರ್ಥಿಯ ನಂತರ ಎರಡನೆಯ ಮತ್ತು ಮೂರನೆಯ ಸ್ಥಾನ ಗಳಿಸುವ ಅಭ್ಯರ್ಥಿಗಳ ಲಿಖಿತ ಕೋರಿಕೆಯ ಮೇರೆಗೆ ಮಾತ್ರವೇ ಈ ಪರಿಶೀಲನೆ ನಡೆಯಬೇಕು.
ತಾನು ಅನುಸರಿಸುವ ಆಡಿಟ್ ಪ್ರಕ್ರಿಯೆಯ ಯಾವುದೇ ವಿವರಗಳ ದಸ್ತಾವೇಜನ್ನು ಚುನಾವಣಾ ಆಯೋಗ ಈವರೆಗೆ ಪ್ರಕಟಿಸಿಲ್ಲ.
ಏನೇ ಆದರೂ, ಇವಿಎಂ ಮತ್ತು ಸಿಂಬಲ್ ಲೋಡಿಂಗ್ ಯೂನಿಟ್‌ಗಳ ಫಲಿತಾಂಶೋತ್ತರ ಆಡಿಟ್ ಪ್ರತಿಪಾದನೆಯೇ ತರ್ಕರಹಿತ. ಹಾಲಿ ಹ್ಯಾಕ್ ಮಾಡಬಹುದಾದ ಸ್ಥಿತಿಯಲ್ಲಿರುವ ಸಾಧನವನ್ನು ಆಡಿಟ್ ಮಾಡುವುದು ಸಾಧ್ಯವೇ ವಿನಾ, ಈಗಾಗಲೆ ಹ್ಯಾಕ್ ಮಾಡಿ ಅದರ ಗುರುತುಗಳು ಪತ್ತೆಯಾಗದಂತೆ ಅಳಿಸಿ ಹಾಕಿರುವ ಸಾಧನವನ್ನು ಆಡಿಟ್ ಮಾಡುವುದು ಅಸಾಧ್ಯ.
ಇವಿಎಂಗಳನ್ನು ಹ್ಯಾಕ್ ಮಾಡುವವನು ಸಾಧಾರಣ ಹ್ಯಾಕರ್ ಆಗಿರುವುದಿಲ್ಲ. ರಾಷ್ಟ್ರೀಯ ಭದ್ರತೆ ಅಡಗಿರುವ ಮತ್ತು ಸಾವಿರಾರು ಕೋಟಿ ರುಪಾಯಿ ವೆಚ್ಚದ ಚುನಾವಣೆಯ ಪ್ರಶ್ನೆಯಿದು.
ಉನ್ನತ ಮಟ್ಟದ ಹ್ಯಾಕಿಂಗ್ ಕ್ರಿಯೆಯು ಯಾವುದೇ ಸುಳಿವುಗಳನ್ನು ಉಳಿಸುವುದಿಲ್ಲ. 12 ಲಕ್ಷ ಇವಿಎಂಗಳನ್ನು ಸಿಂಬಲ್ ಲೋಡಿಂಗ್ ಯೂನಿಟ್‌ಗಳನ್ನು ಬಳಸಿ ಪ್ರತಿ ಮತಗಟ್ಟೆಗೆ ಒಂದರಂತೆ ಸಜ್ಜು ಮಾಡಿರಲಾಗುತ್ತದೆ. ಈ ಕೆಲಸಕ್ಕೆ ಎರಡು ವಾರಗಳಿಗೂ ಹೆಚ್ಚು ಕಾಲಾವಧಿ ತಗುಲಿರುತ್ತದೆ. ಪ್ರತಿಯೊಂದು ಕ್ಷೇತ್ರಕ್ಕೂ ಎರಡರಿಂದ ಐದು ಸಿಂಬಲ್ ಲೋಡಿಂಗ್ ಯೂನಿಟ್‌ಗಳನ್ನು ಹೂಡಲಾಗಿರುತ್ತದೆ. ಪ್ರತಿ ಜಿಲ್ಲಾ ಚುನಾವಣಾಧಿಕಾರಿ ತನ್ನ ಲ್ಯಾಪ್‌ಟಾಪನ್ನು ಅಂತರ್ಜಾಲದ ಮೂಲಕ ಚುನಾವಣಾ ಆಯೋಗದ ಸೆಂಟ್ರಲ್ ಸರ್ವರ್ ಜೊತೆಗೆ ಜೋಡಿಸಿ ಅಭ್ಯರ್ಥಿಯ ದತ್ತಾಂಶ ಕಡತವನ್ನು ಡೌನ್‌ಲೋಡ್ ಮಾಡಿಕೊಂಡಿರುತ್ತಾರೆ. ಆನಂತರದ ಅದನ್ನು ಸಿಂಬಲ್ ಲೋಡಿಂಗ್ ಯೂನಿಟ್‌ಗಳಿಗೆ ಕಾಪಿ ಮಾಡಲಾಗುತ್ತದೆ.
ಹೀಗಾಗಿ, ವಿವಿಪ್ಯಾಟ್‌ಗಳನ್ನು ಸ್ವಯಂವಿನಾಶಕ Malwareಗಳನ್ನು (ದತ್ತಾಂಶ ಕದಿಯಲು ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹಾನಿಗೊಳಿಸಲು ಇಲ್ಲವೇ ನಾಶ ಮಾಡಲೆಂದು ಸೈಬರ್ ಅಪರಾಧಿಗಳು ಬಳಸುವ ಸಾಫ್ಟ್ ವೇರ್) ನುಸುಳಿಸುವುದು ಮತ್ತು ಆನಂತರ ಅವುಗಳನ್ನು ಸಿಂಬಲ್ ಲೋಡಿಂಗ್ ಪೇ ಯೂನಿಟ್ ಗಳಿಂದ ಸುಳಿವೇ ಇಲ್ಲದಂತೆ ತೆಗೆದು ಹಾಕುವುದು ಅಸಾಧ್ಯ ಕಾರ್ಯವೇನೂ ಅಲ್ಲ. ಹೀಗಾಗಿಯೇ ಮ್ಯಾಲ್ವೇರ್ ಇಲ್ಲದಂತೆ ಸೂಕ್ಷ್ಮವಾಗಿ ಪರಿಶೀಲಿಸಿದ ಮತ್ತು ಅಧಿಕೃತ ಅಭ್ಯರ್ಥಿಯ ದತ್ತಾಂಶದ ಕಡತಗಳಿರುವ ಸಿಂಬಲ್ ಲೋಡಿಂಗ್ ಯೂನಿಟ್ ಗಳನ್ನು ಮಾತ್ರವೇ ಮತದಾನದ ನಂತರ ಪ್ರತಿ ಕ್ಷೇತ್ರದಲ್ಲಿ ಮೊಹರು ಮಾಡಿ ಇಡಲಾಗುತ್ತದೆ.
ಸ್ವಯಂವಿನಾಶಕ ಮ್ಯಾಲ್ವೇರ್ ಚುನಾವಣಾಧಿಕಾರಿಯು ವಿವಿಪ್ಯಾಟ್‌ಗೆ ಜೋಡಣೆಯಾದ ತನ್ನ ಕಂಟ್ರೋಲ್ ಯೂನಿಟ್ ಮೇಲೆ ‘ಮತದಾನ ಮುಕ್ತಾಯ’ (ಕ್ಲೋಸ್ ಪೋಲಿಂಗ್) ಗುಂಡಿಯನ್ನು ಅದುಮಿದ ಕೂಡಲೇ ಈ ಸ್ವಯಂವಿನಾಶಕ ಮ್ಯಾಲ್ವೇರ್ ಸಂಬಂಧಪಟ್ಟ ಸಾಧನದ ನೆನಪಿನ ಕೋಶದಿಂದ ತನ್ನನ್ನು ತಾನೇ ಸುಳಿವಿಲ್ಲದಂತೆ ಅಳಿಸಿ ಹಾಕಿಕೊಳ್ಳುತ್ತದೆ. ಹೀಗಾಗಿ ಮತದಾನ ಮುಕ್ತಾಯದ ನಂತರ ಇವಿಎಂ ಮತ್ತು ಸಿಂಬಲ್ ಲೋಡಿಂಗ್ ಯೂನಿಟ್‌ಗಳನ್ನು ಮೊಹರು ಮಾಡಲಾಗುತ್ತಿದ್ದಂತೆಯೇ ಸುಪ್ರೀಮ್ ಕೋರ್ಟ್ ಸೂಚಿಸಿದ ಆಡಿಟ್‌ನಲ್ಲಿ ಮ್ಯಾಲ್ವೇರ್ ಅಥವಾ ಹ್ಯಾಕಿಂಗ್‌ನ ಸುಳಿವೇ ಇಲ್ಲದಂತೆ ಸಾಧನಗಳು ‘ಸ್ವಚ್ಛ’ವಾಗಿ ಬಿಡುತ್ತವೆ.
ಸುಪ್ರೀಮ್ ಕೋರ್ಟ್ ಹೇಳಿಕೆಗೆ ವ್ಯತಿರಿಕ್ತವಾಗಿ ಆಡಿಟ್‌ಗಳನ್ನು ಪೂರ್ಣ ಸಾಧನದ ಮೇಲೆ ನಡೆಸಬೇಕೇ ವಿನಾ ಕೇವಲ ಬರ್ನ್ಟ್ ಮೆಮರಿ ಅಥವಾ ಮೈಕ್ರೋ ಕಂಟ್ರೋಲರ್ ಮೇಲೆ ಅಲ್ಲ. ಯಾಕೆಂದರೆ ವಿವಿಪ್ಯಾಟ್‌ನಂತಹ ಸಾಧನವು ಹೆಚ್ಚುವರಿ ಪ್ರೋಗ್ರ್ಯಾಮ್ ಮೆಮರಿ ಹೊಂದಿರುತ್ತದೆ. ನುಸುಳಿಸಲಾಗುವ ಮ್ಯಾಲ್ವೇರ್ ಈ ಹೆಚ್ಚುವರಿ ಮೆಮರಿಯಲ್ಲಿ ಕುಳಿತು ಯಂತ್ರವನ್ನು ದುರ್ವರ್ತಿಸಿ ಬರ್ನ್ಟ್ ಮೆಮರಿ ಅಥವಾ ಮೈಕ್ರೋಕಂಟ್ರೋಲರ್ ಗೆ ಯಾವ ಮುಕ್ಕೂ ಆಗದಂತೆ ನಿರ್ಗಮಿಸಬಹುದಾಗಿದೆ.
ಎರಡನೆಯದಾಗಿ ಇವಿಎಂಗಳನ್ನು ತಯಾರಿಸುವ ಕಂಪನಿಗಳು (ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಂತಹವು. ಇವುಗಳಿಂದ ಬರುವ ಎಂಜಿನಿಯರುಗಳ ಆಡಿಟ್ ತಂಡವು ನಿಷ್ಪಕ್ಷಪಾತ ತನಿಖೆ ನಡೆಸುವುದು ಸಾಧ್ಯವೇ? ಈ ಕಂಪನಿಗಳಲ್ಲಿ ಒಂದರ ಆಡಳಿತ ಮಂಡಳಿಯಲ್ಲಿ ಬಿಜೆಪಿ ಸದಸ್ಯರು ಇದ್ದಾರೆ.
ಈ ಆಡಿಟ್ ಅನ್ನು ಸ್ವತಂತ್ರ ಎಂಜಿನಿಯರುಗಳಿಂದ ನಡೆಸಬಹುದಿತ್ತು. ಅವರು ಆರೋಗ್ಯಕರ ಇವಿಎಂಗಳನ್ನು ಒದಗಿಸುವುದು ಸಾಧ್ಯವಿತ್ತು. ಇಂತಹ ಎಂಜಿನಿಯರುಗಳು ಇವಿಎಂಗಳ ಮೇಲಿನ ಆಬ್ಜೆಕ್ಟ್ ಕೋಡ್‌ಗಳನ್ನು ಹ್ಯಾಕ್ ಮಾಡಲಾಗಿದೆಯಂದು ಶಂಕಿಸಲಾದ ಇವಿಎಂಗಳ ಮೇಲೆ ನಡೆಸಿ ತಾಳೆ ನೋಡಬಹುದಿತ್ತು. ಕಳವು ಮಾಡಲಾದ ಇವಿಎಂಗಳಿಂದ ಆಬ್ಜೆಕ್ಟ್ ಕೋಡ್ ಅನ್ನು ರಿವರ್ಸ್ ಕಂಪೈಲ್ ಮಾಡಿ ಇವಿಎಂ ದುರ್ವರ್ತಿಸುವಂತೆ ಮಾಡುವುದು ನುರಿತ ಹ್ಯಾಕರ್ ಗೆ ಅಸಾಧ್ಯವೇನೂ ಅಲ್ಲ.
ಇಸಿಐ, ಬಿಇಎಲ್ ಹಾಗೂ ಇಸಿಐಎಲ್‌ನಿಂದ ಸುಮಾರು 19 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ಉತ್ತರವನ್ನು ಆರ್.ಟಿ.ಐ. ಪ್ರಶ್ನೆಯೊಂದಕ್ಕೆ ಒದಗಿಸಲಾಗಿದೆ. ಕ್ಷೇತ್ರ, ವೋಟುಗಳನ್ನು ಯಾವ ಪಕ್ಷದಿಂದ ಕದಿಯಬೇಕು, ಯಾವ ಪಕ್ಷವನ್ನು ಅನುಗ್ರಹಿಸಬೇಕು, ದಿನಾಂಕ, ಸಮಯ, ಮತದಾನ ದರ ಮುಂತಾದ ಹಲವು ಅಂಶಗಳನ್ನು ಮ್ಯಾಲ್ವೇರ್‌ನಿಂದ ಮಾಡಿಸಬಹುದು. ಹೀಗಾಗಿ ಪ್ರೋಗ್ರ್ಯಾಮ್ ಲಾಜಿಕ್ ಮತ್ತು ಬಳಸಲಾದ ಪ್ಯಾರಮೀಟರ್‌ಗಳ ಅರಿವಿಲ್ಲದೆ ಇವಿಎಂ ದುರ್ವರ್ತನೆಯನ್ನು ಮುಂದಾಗಿಯೇ ಗ್ರಹಿಸುವುದು ಸಾಧ್ಯವಿಲ್ಲ.
ಇವಿಎಂಗಳನ್ನು ಮತ್ತು ಸಿಂಬಲ್ ಲೋಡಿಂಗ್ ಯೂನಿಟ್‌ಗಳನ್ನು ಮೊಹರು ಮಾಡಲು ಸುಪ್ರೀಮ್ ಕೋರ್ಟ್ ನೀಡಿರುವ ನಿರ್ದೇಶನಗಳು ಮೇ ಒಂದರಿಂದ ಚಾಲ್ತಿಗೆ ಬರುತ್ತವೆ. ಹಾಗಾದರೆ? ಏಪ್ರಿಲ್‌ನಲ್ಲಿಯೇ ಮತದಾನ ಮುಗಿದಿರುವ ಕ್ಷೇತ್ರಗಳ ಸ್ಪರ್ಧಿಗಳ ಕತೆಯೇನು?
ಸಿಂಬಲ್ ಲೋಡಿಂಗ್ ಯೂನಿಟ್‌ಗಳು ಸಾಧನ ಗುರುತುಗಳನ್ನು (ಡಿವೈಸ್ ಐ.ಡಿ.) ಹೊಂದಿಲ್ಲದಿರುವ ಸಾಧ್ಯತೆ ಇದೆ. ಹೀಗಾಗಿ ಫಾರ್ಮ್ 17 ಸಿ ಯ ಒಂದನೆಯ ಭಾಗದಲ್ಲಿ ಇವುಗಳನ್ನು ನಮೂದಿಸಿರುವುದಿಲ್ಲ. ಮತದಾನ ಮುಕ್ತಾಯದ ಹಂತದಲ್ಲಿ ಫಾರ್ಮ್ 17 ಸಿ ಯ ಮೊದಲನೆಯ ಭಾಗವನ್ನು ಭರ್ತಿ ಮಾಡಿ ಚುನಾವಣಾಧಿಕಾರಿ ತನ್ನ ರುಜು ಹಾಕಬೇಕು, ಎಲ್ಲ ಸ್ಪರ್ಧಿಗಳ ಪೋಲಿಂಗ್ ಏಜೆಂಟ್‌ಗಳೂ ಹಸ್ತಾಕ್ಷರ ಮಾಡಬೇಕು. ಈ ಫಾರಂನಲ್ಲಿ ಎಲ್ಲ ಮೂರು ಇವಿಎಂಗಳ ಐ.ಡಿ.ಗಳು ಇರುತ್ತವೆ. ಆದರೆ ಸಿಂಬಲ್ ಲೋಡಿಂಗ್ ಯೂನಿಟ್‌ಗಳ ಐ.ಡಿ.ಗಳು ನಮೂದಾಗಿರುವುದಿಲ್ಲ. ಯಂತ್ರಗಳನ್ನು ಮೊಹರು ಮಾಡಿ ಸ್ಥಳಾಂತರಿಸುವ ಮುನ್ನ 17 ಸಿ ಒಂದನೆಯ ಭಾಗವನ್ನು ಮುಚ್ಚಿಡುವುದು ಮತಗಳ ಸಂಖೆಯನ್ನು ಹೆಚ್ಚಿಸಿ ಹೇಳುವ ಮತ್ತು ಇವಿಎಂಗಳ ಅದಲು ಬದಲು ಮಾಡುವ ಅಕ್ರಮಗಳಿಗೂ ದಾರಿ ಮಾಡಿದಂತಾಗುತ್ತದೆ.
ಇದನ್ನು ಓದಿದ್ದೀರಾ? ಈಶಾನ್ಯ ಭಾರತದ 25 ಸೀಟುಗಳು: ಗುಡಿಸಿ ಹಾಕುವ ಬಿಜೆಪಿಯ ಗುರಿ ಮೂರನೆಯ ಸಲವೂ ಈಡೇರುವುದೇ?
ಫಾರ್ಮ್ 17 ಸಿ ಯ ಮೇಲೆ ರುಜು ಮಾಡಿಲ್ಲದ ಪೋಲಿಂಗ್ ಏಜೆಂಟರನ್ನು ಪೂನಂ ಅಗರವಾಲ್ ಎಂಬ ತನಿಖಾ ಪತ್ರಕರ್ತೆ ಸಂದರ್ಶಿಸಿದ್ದಾರೆ. ಸಹಿ ಮಾಡುವಂತೆ ಯಾರೂ ತಮಗೆ ತಿಳಿಸಲಿಲ್ಲವೆಂದು ಈ ಏಜೆಂಟರು ಹೇಳಿದ್ದಾರೆ. ಚುನಾವಣಾಧಿಕಾರಿಗಳು ತಮ್ಮ ಡಿಜಿಟಲ್ ಸೈನಿಂಗ್ ಸರ್ಟಿಫಿಕೇಟ್ ಬಳಸಿ ಫಾರ್ಮ್ ಸಿ ಮೇಲೆ ಸಹಿ ಹಾಕಬೇಕೆಂದು ಆಯೋಗ ವಿಧಿಸದೇ ಇರುವುದು ದಿಗ್ಬ್ರಾಂತಿ ಹುಟ್ಟಿಸುವ ಸಂಗತಿ.
ಫಾರ್ಮ್ 17 ಸಿ ಯ ಮೊದಲ ಭಾಗದಲ್ಲಿನ ಸಹಿಗಳನ್ನು ಪರಿಶೀಲಿಸಿ ಮಶಿನ್ ಐಡಿಗಳು ಮತ್ತು ಒಟ್ಟು ನೋಂದಾಯಿತ ಮತದಾರರ ಸಂಖ್ಯೆ ಮತ್ತು ಒಟ್ಟು ಚಲಾಯಿತ ಮತಗಳ ಸಂಖ್ಯೆಯನ್ನು ತಾಳೆ ನೋಡಿದ ಅಂಶಗಳು ಫಾರ್ಮ್ ಸಿ ಮೊದಲ ಭಾಗದಲ್ಲಿರುತ್ತವೆ. ಸಹಿಗಳನ್ನು ತಾಳೆ ನೋಡಿ ಪರಿಶೀಲಿಸುವ ನಿರ್ದೇಶನ ಸುಪ್ರೀಮ್ ಕೋರ್ಟಿನ ನಿರ್ದೇಶನಗಳಲ್ಲಿ ನಮೂದಾಗಿಲ್ಲ.
ಇದನ್ನೂ ಓದಿ: ದಿಲ್ಲಿ ಗದ್ದುಗೆ ತಲುಪಲು ಹೆದ್ದಾರಿಯಂತಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಯುವಕರ ಸಮಸ್ಯೆಗಳೇ ನಿರ್ಣಾಯಕ
ಚಾರಿತ್ರ್ಯಹೀನ ಆಡಿಟರ್‌ಗಳು ಸಿಂಬಲ್ ಲೋಡಿಂಗ್ ಯೂನಿಟ್‌ಗಳಿಗೆ ಮ್ಯಾಲ್ವೇರ್‌ಗಳನ್ನ ಕಾಪಿ ಮಾಡಲು ಅವಕಾಶ ನೀಡಿ ಆನಂತರ ಆ ಕ್ಷೇತ್ರದಲ್ಲಿ ಟ್ಯಾಂಪರಿಂಗ್ ನಡೆದಿದೆಯೆಂದು ದೂರಬಲ್ಲರು. ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಕ್ಷೇತ್ರದಾದ್ಯಂತ ಬಳಸಲಾಗುವ ಕಾರಣ, ಆ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಮರು ಮತದಾನವನ್ನು ಘೋಷಿಸುವುದೇ?
ಆಡಿಟರ್‌ಗಳ ಮೇಲೆ ನಿಯಂತ್ರಣ ಹೊಂದಿದ ಆಳುವ ಪಕ್ಷ, ಕೆಲ ಡಜನ್‌ಗಳಷ್ಟು ಸಿಂಬಲ್ ಲೋಡಿಂಗ್ ಯೂನಿಟ್‌ಗಳಿಗೆ ಮ್ಯಾಲ್ವೇರ್ ನುಸುಳಿಸುವ ಏರ್ಪಾಡು ಮಾಡಿ, ಇಡೀ ಚುನಾವಣೆಯನ್ನು ರದ್ದು ಮಾಡಬಲ್ಲದೇ?
-ಅನಿಲ್ ಶ್ರೀವಾಸ್ತವ
(ಅನಿಲ್ ಶ್ರೀವಾಸ್ತವ ಅಹ್ಮದಾಬಾದಿನಲ್ಲಿ ನೆಲೆಸಿರುವ ಸಾಫ್ಟ್‌ವೇರ್ ತಜ್ಞರು)
ಕೃಪೆ- ದಿ ವೈರ್
