ಏಕರೂಪ ನಾಗರಿಕ ಸಂಹಿತೆ | ಶೋಷಿತ ವರ್ಗಗಳನ್ನು ನಿರಂತರ ದಾಸ್ಯಕ್ಕೆ ದಬ್ಬುವ ಹುನ್ನಾರ

Date:

Advertisements
ಬಹುತ್ವ ರಕ್ಷಣೆಯೆಂದರೆ ಬಹುಸಂಸ್ಕೃತಿ, ಬಹುಮೌಲ್ಯಗಳು ಮತ್ತು ಬಹುಜನರ ರಕ್ಷಣೆಯೆಂದೇ ಅರ್ಥ. ಭಾರತವೆಂದರೆ ಏಕತ್ವ ಅಥವಾ ಹಿಂದುತ್ವ ರಾಷ್ಟ್ರವಲ್ಲ. ಬಹುತ್ವ ಕೇಂದ್ರಿತ ಪ್ರಭುತ್ವವನ್ನು ರೂಪಿಸುವ ಸಾಮಾಜಿಕ ಜವಾಬ್ದಾರಿ ಪ್ರಜೆಗಳ ಮೇಲಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಹೇಳಿದೆ. ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ಭರವಸೆ ನೀಡಿದೆ. ಆ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಗಟ್ಟಿಗೊಳಿಸಿ ಧರ್ಮನಿರಪೇಕ್ಷತೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿದೆ.

ಬಹುತ್ವ ರಕ್ಷಣೆಯೆಂದರೆ ಬಹುಸಂಸ್ಕೃತಿ, ಬಹುಮೌಲ್ಯಗಳು ಮತ್ತು ಬಹುಜನರ ರಕ್ಷಣೆಯೆಂದೇ ಅರ್ಥ. ಭಾರತವೆಂದರೆ ಏಕತ್ವ ಅಥವಾ ಹಿಂದುತ್ವ ರಾಷ್ಟ್ರವಲ್ಲ. ಲೋಕಾಯತ, ಚಾರ್ವಾಕ, ಬುದ್ಧ, ಫುಲೆ, ಪೆರಿಯಾರ್, ಅಂಬೇಡ್ಕರ್ ಮೊದಲಾದವರ ದರ್ಶನಗಳು ಪ್ರಕೃತಿ ಮತ್ತು ವಿಜ್ಞಾನಗಳಿಗೆ ಅನುಗುಣವಾಗಿ ಬಹುಜನರಿಗೆ ವಿಮೋಚನೆಯ ಹಾದಿಯನ್ನು ಸೂಚಿಸುತ್ತದೆ. ವೇದಾಂತವು ಏಕತ್ವ ಪ್ರತಿಪಾದಕರಾದ ಹಿಂದುತ್ವವಾದಿಗಳಿಗೆ ಪ್ರಬಲವಾದ ಅಸ್ತ್ರವಾಗಿದ್ದರೆ, ಅಂಬೇಡ್ಕರ್ ವಿರಚಿತ ಸಂವಿಧಾನ ಬಹುಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಆಶಯಗಳನ್ನು ಒಳಗೊಂಡಿದೆ. ಭಗವದ್ಗೀತೆ ಬೌದ್ಧ ತಾತ್ವಿಕತೆ ಮತ್ತು ಬಹುತ್ವಗಳಿಗೆ ವಿರುದ್ಧವಾಗಿದೆ. ಭಾರತದಲ್ಲಿ ಬಹುತ್ವ ಕೇಂದ್ರಿತ ಪ್ರಭುತ್ವವನ್ನು ರೂಪಿಸುವ ಸಾಮಾಜಿಕ ಜವಾಬ್ದಾರಿ ಪ್ರಜೆಗಳ ಮೇಲಿದೆ.

ಶಂಕರಾಚಾರ್ಯರ ಪ್ರತಿಗಾಮಿತನವನ್ನು ಆಧರಿಸಿದ ಹಿಂದೂ ಸಾಮ್ರಾಜ್ಯಶಾಹಿ ಬಹುತ್ವಕ್ಕೆ ಬಹುದೊಡ್ಡ ಕೊಡಲಿ ಪೆಟ್ಟಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಜರುಗಿದ ಬಹುಜನ ಚಳವಳಿಗಳು ಬಹುತ್ವವನ್ನು ಪ್ರಧಾನವಾಗಿ ಕೇಂದ್ರೀಕರಿಸಿದ್ದವು. ಬಹುತ್ವ ಬ್ರಾಹ್ಮಣ ಶ್ರೇಷ್ಟತೆಯ ಹುಸಿ ಕಲ್ಪನೆಗೆ ನೇರ ಸವಾಲೆಸೆಯುವುದರ ಜೊತೆಗೆ ಬಹುಜನರ ಮೂಲಭೂತ ಹಕ್ಕುಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಧರ್ಮನಿರಪೇಕ್ಷ ರಾಷ್ಟ್ರೀಯತೆಯ ಉತ್ತೇಜನದಿಂದ ಅನ್ಯಾಯಗಳು ಮತ್ತು ಶೋಷಣಾ ಪ್ರವೃತ್ತಿಗಳಿಂದ ಭಾರತದ ಬಹುಜನರನ್ನು ರಕ್ಷಿಸಬಹುದೆಂದು ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ ಮೊದಲಾದ ರಾಷ್ಟ್ರನಾಯಕರು ಬಲವಾಗಿ ಪ್ರತಿಪಾದಿಸಿದ್ದಾರೆ.

Advertisements

ಏಕತ್ವದ ಆಧಾರದ ಮೇಲೆ ದೇಶವನ್ನು ಕಟ್ಟಿ ಶೋಷಿತ ಜನವರ್ಗಗಳನ್ನು ನಿರಂತರ ದಾಸ್ಯಕ್ಕೆ ದಬ್ಬುವ ಹಿಂದುತ್ವ ಪ್ರತಿಪಾದನೆ ದೇಶದ ಬಹುತ್ವಕ್ಕೆ ಅಪಾಯವುಂಟು ಮಾಡಿದೆ. ಭಾರತದ ಇತಿಹಾಸವೆಂದರೆ ಮೂಲನಿವಾಸಿಗಳ ಇತಿಹಾಸವೇ ಆಗಿದ್ದು ಬಹುತ್ವ ಭಾರತೀಯ ಪರಂಪರೆಯ ಜೀವಾತ್ಮವೇ ಆಗಿದೆಯೆಂದು ಹೆಸರಾಂತ ಸಂಸ್ಕೃತಿ ಚಿಂತಕರಾದ ರೊಮಿಲಾ ಥಾಪರ್ ಪ್ರತಿಪಾದಿಸಿದ್ದಾರೆ. ಪ್ರಸ್ತುತ ಮೋದಿ ಆಡಳಿತದಲ್ಲಿ ಬಹುಜನರ ಆಶಯಗಳು ಮತ್ತು ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಸತ್ಯವನ್ನು ಮಂಡಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪ್ರಜ್ಞಾವಂತರನ್ನು ರಾಷ್ಟ್ರದ್ರೋಹಿಗಳೆಂದು ಬಣ್ಣಿಸಿ ಸೆರೆಮನೆಗೆ ದಬ್ಬುವ ಮೋದಿ ಆಡಳಿತ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ವಾಸ್ತವವಾಗಿ ಭಾರತದಲ್ಲಿ ಹಿಂದುತ್ವ ಮತ್ತು ರಾಜ್ಯಾಧಿಕಾರ ಒಂದೇ ನಾಣ್ಯದ ಎರಡು ಮುಖಗಳೆಂದು ಮೋದಿ ಸರ್ಕಾರ ಅಕ್ಷರಶಃ ಪ್ರತಿಪಾದಿಸಿದೆ.

ಪ್ರಭುತ್ವ ಪ್ರಾಯೋಜಿತ ಹಿಂದುತ್ವವಾದ ಬಹುಜನರ ಬುಡವನ್ನೇ ಅಲ್ಲಾಡಿಸುತ್ತಿದೆ. ನೈತಿಕ ಮೌಲ್ಯವಾಗಿ ಬಹುತ್ವವು ಸಾಮಾಜಿಕ ಬಹುತ್ವವನ್ನು ರಾಜಕೀಯ ಮಟ್ಟಕ್ಕೆ ವರ್ಗಾಯಿಸಲು ಪ್ರಯತ್ನಿಸುತ್ತದೆ ಮತ್ತು ಪ್ರಜಾಪ್ರಭುತ್ವದೊಂದಿಗೆ ಬಹುತ್ವವನ್ನು ನಿರೂಪಿಸುವ ಶಕ್ತಿ ಹೊಂದಿದೆ. ಅಂಬೇಡ್ಕರ್ ತಮ್ಮ ಕೊನೆಯ ಉಸಿರು ಇರುವ ತನಕ ಸಾಂವಿಧಾನಿಕ ಮೌಲ್ಯಗಳ ಸಮರ್ಥಕರಾಗಿ ಮತ್ತು ಬಹುಜನರ ಉದ್ಧಾರಕರಾಗಿ ದುಡಿದರು. ಭಾರತದ ಮನುವಾದಿಗಳು ಅಂಬೇಡ್ಕರರನ್ನು ಅತ್ಯುಗ್ರವಾಗಿ ಅವಮಾನಿಸಿರುವುದು ಸತ್ಯವಾಗಿದೆ. ರಾಜಕೀಯ ಕಾರಣದಿಂದ ಅಂಬೇಡ್ಕರ್‌ಗೆ ಕಾಂಗ್ರೆಸ್ ಪಕ್ಷ ಮಾಡಿರುವಷ್ಟು ಅನ್ಯಾಯವನ್ನು ಬೇರೆ ಯಾರೂ ಮಾಡಿಲ್ಲ ಎಂಬ ಸುಳ್ಳನ್ನು ದಲಿತ ನಾಯಕರಿಂದಲೇ ಹೇಳಿಸುತ್ತಿರುವುದು ಸತ್ಯಕ್ಕೆ ಬಗೆದ ಅಪಚಾರವಾಗಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯಪರ ಮೌಲ್ಯಗಳನ್ನು ಬಿಜೆಪಿ ನಾಶಮಾಡುತ್ತಾ ಧರ್ಮ ಕಾರಣ ಮತ್ತು ರಾಜಕಾರಣ ಎರಡೂ ಒಂದೇ ಎಂದು ಪ್ರತಿಪಾದಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ.

ವಾಸ್ತವವಾಗಿ ಹಿಂದೂ ಸಾಮ್ರಾಜ್ಯಶಾಹಿ ದೇಶದ ಅಭಿವೃದ್ಧಿಗಿಂತ ಮೇಲ್ಜಾತಿ ಪ್ರಭುತ್ವ ಪರವಾಗಿರುವವರ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. ಮೋದಿ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳು ದುರ್ಬಲಗೊಂಡು ಭಾರತೀಯ ಇತಿಹಾಸವನ್ನು ಹಿಂದೂ ಪುರಾಣದೊಂದಿಗೆ ಬದಲಿಸುವ ಪ್ರಯತ್ನ ಸಂಘ ಪರಿವಾರಿಗಳ ನಿಯಂತ್ರಣದಲ್ಲಿರುವ ಮೋದಿ ಸರ್ಕಾರದಿಂದ ನಡೆಯುತ್ತದೆ. ಹಿಂದೂ ಸಾಮ್ರಾಜ್ಯಶಾಹಿ ಮತ್ತು ಪಾಶ್ಚಿಮಾತ್ಯ ಬಂಡವಾಳಶಾಹಿಗಳನ್ನು ಸೋಲಿಸಿ ಭಾರತೀಯ ಪ್ರಜಾಸತ್ತೆ ಮತ್ತು ಸಂವಿಧಾನಗಳನ್ನು ರಕ್ಷಿಸಲು ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ಮುಕ್ತ ಭಾರತ ಮತ್ತು ಕರ್ನಾಟಕ ನಿರ್ಮಾಣ ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕ ಹಾಗೂ ಅನಿವಾರ್ಯವೆಂಬ ಸತ್ಯವನ್ನು ಶೋಷಿತ ಸಮುದಾಯಗಳು ಇಂದು ಅವಶ್ಯವಾಗಿ ಮನಗಾಣಬೇಕು. ಬಹುಜನರು ತಮಗೆ ಸಮಾನತೆ ಮತ್ತು ಘನತೆಗಳನ್ನು ನಿರಾಕರಿಸಿದ ಹಿಂದುತ್ವ ಕೇಂದ್ರಿತ ಪ್ರಭುತ್ವದ ವಿರುದ್ಧ ಬಂಡೆದ್ದು ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಬಹುತ್ವ, ಪ್ರಜಾಸತ್ತೆ ಮತ್ತು ಸಂವಿಧಾನಗಳ ರಕ್ಷಣೆಗೆ ಯಾವುದೇ ಬೆಲೆಯನ್ನಾದರೂ ತೆತ್ತು ಮುಂದಾಗಬೇಕಿದೆ.

ಬಹುತ್ವ, ಪ್ರಜಾಸತ್ತೆ, ಸಂವಿಧಾನ ಮತ್ತು ಸಮಾನತೆಗಳ ಪರ ದನಿಯೆತ್ತುವ ಪ್ರಗತಿಪರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಪ್ರವೃತ್ತಿಗಳು ಮೋದಿ ಪ್ರಭುತ್ವದಲ್ಲಿ ಹೆಚ್ಚುತ್ತಿವೆ. ಹಿಂದುತ್ವವಾದಿಗಳಿಂದ ನಮ್ಮ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲವೆಂಬ ಸತ್ಯವನ್ನು 2009ರಿಂದಲೂ ನಮ್ಮನ್ನು ಆಳುತ್ತಿರುವವರ ಹುನ್ನಾರಗಳು ಮತ್ತು ವ್ಯವಹಾರಗಳು ಮನದಟ್ಟು ಮಾಡಿಕೊಟ್ಟಿವೆ. ವೈದಿಕಶಾಹಿ ವಿರುದ್ಧ ಪ್ರಬಲ ವೈಚಾರಿಕ ಕ್ರಾಂತಿಯಿಂದಲೇ ದೇಶದ ಉದ್ಧಾರ ಸಾಧ್ಯವೆಂದು ನುಡಿದ ಗೌತಮಬುದ್ಧರ ವಿಚಾರಧಾರೆ ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ.

ಇದನ್ನು ಓದಿ ವರುಣಾ ಕ್ಷೇತ್ರ | ಸಿದ್ದರಾಮಯ್ಯ ಪರ ದೇವನೂರ ಮಹಾದೇವ ಮತಯಾಚನೆ

ಹಿಂದುತ್ವವಾದಿಗಳು ಮೂಲನಿವಾಸಿಗಳನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಉದ್ದೇಶಪೂರ್ವಕವಾಗಿ ದೂರವಿಡುತ್ತಿರುವುದು ಭಾರತೀಯ ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಭಾರತವನ್ನು ನಿಯಂತ್ರಿಸುತ್ತಿರುವ ಹಿಂದುತ್ವವೆಂಬ ರಾಜಕಾರಣ ಏಕತ್ವವೆಂಬ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪೋಷಿಸಿ ಬಹುಜನರನ್ನು ಶೋಷಿಸುತ್ತಿದೆ. ಈ ಪ್ರವೃತ್ತಿಯನ್ನು ಸುಸ್ಥಿರಗೊಳಿಸುವ ಮನುವಾದಿಗಳ ವಿರುದ್ಧ ಬಿಜೆಪಿಯೇತರ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳು ಮತ್ತು ಹೋರಾಟಗಾರರು ದೇಶದಾದ್ಯಂತ ಪ್ರಬಲ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಹೋರಾಟ ನಡೆಸಬೇಕಿದೆ. ಇಂದು ಚುನಾವಣೆಯೆಂಬುದು ಶಕ್ತಿ ರಾಜಕಾರಣದ ಪ್ರಬಲ ಅಸ್ತ್ರವಾಗಿದ್ದು ಕೋಮುವಾದಿಗಳ ಹಿತರಕ್ಷಣೆಗೆ ಸೀಮಿತವಾಗಿದೆ.

ಓರ್ವ ಮಹಾನ್ ಹಿಂದೂವಾಗಿದ್ದರೂ ಹಿಂದೂ ರಾಷ್ಟ್ರೀಯತೆಯ ಕಡು ವಿರೋಧಿಯಾಗಿದ್ದು ಹಿಂದೂ ರಾಷ್ಟ್ರ ಸ್ಥಾಪನೆಯ ತಮ್ಮ ಗುರಿಯನ್ನು ಸಾಕಾರಗೊಳಿಸಲು ಬಹುದೊಡ್ಡ ಅಡ್ಡಗಲ್ಲಾಗಿದ್ದರು ಎಂಬ ಕಾರಣಕ್ಕಾಗಿಯೇ ಮಹಾತ್ಮ ಗಾಂಧಿಯನ್ನು ಕೋಮುವಾದಿಗಳು ಜನವರಿ 30, 1948ರಂದು ಹತ್ಯೆ ಮಾಡಿದರು. ಗಾಂಧಿಯನ್ನು ಕೊಂದವರು ಇಂದು ಗಾಂಧಿಯ ಮುಖವಾಡ ಧರಿಸಿ ದೇಶವನ್ನಾಳುತ್ತಿದ್ದಾರೆ. ಗಾಂಧೀಜಿಯ ಬಹುತ್ವ ಮತ್ತು ಸರ್ವೋದಯ ಪರಿಕಲ್ಪನೆಗಳನ್ನು ಸಾಂವಿಧಾನಿಕ ಮೌಲ್ಯಗಳನ್ನಾಗಿ ಒಪ್ಪಿಕೊಂಡಿದ್ದರೂ ಸಹ ಹಿಂದೂ ಸಾಮ್ರಾಜ್ಯಶಾಹಿ ಬಹುತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡಿದೆ. ಭಾರತೀಯ ಸಂದರ್ಭದಲ್ಲಿ ಏಕತ್ವವೆಂಬ ಕಳೆಯನ್ನು ಕಿತ್ತೆಸೆದು ಬಹುತ್ವವೆಂಬ ಬೆಳೆಯನ್ನು ಬೆಳೆದಾಗ ಸಮಾಜವು ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಅಭಿವೃದ್ಧಿಯೆಡೆಗೆ ಸಾಗುತ್ತದೆಂದು ಬುದ್ಧನಿಂದ ಹಿಡಿದು ಅಂಬೇಡ್ಕರ್ ತನಕ ದಾರ್ಶನಿಕರು ಪ್ರತಿಪಾದಿಸಿದ್ದಾರೆ.

ಇದನ್ನು ಓದಿ ಸಿದ್ದರಾಮಯ್ಯನವರ ವರುಣದಲ್ಲಿ ಕಂಡ ಮುಖಗಳು

ಭಾರತದಲ್ಲಿ 2019ರಿಂದ 2023ರ ತನಕ ಅನೇಕ ಸಂಕಷ್ಟಗಳು ದೇಶದ ಜನರ ಬದುಕಿನ ಮೇಲೆ ಗಂಭೀರ ಪ್ರಭಾವ ಬೀರಿವೆ. ನಿರುದ್ಯೋಗ, ಬಡತನ, ಅನಾರೋಗ್ಯ, ಹಸಿವು, ಪ್ರವಾಹ, ಬರ, ದುರಾಡಳಿತ ಮೊದಲಾದವುಗಳು ಪ್ರಜೆಗಳ ಬದುಕನ್ನು ಕಸಿದುಕೊಳ್ಳುತ್ತಿರುವ ಸಂದರ್ಭದಲ್ಲಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಮೊದಲಾದ ಸ್ವಘೋಷಿತ ರಾಷ್ಟ್ರ ನಾಯಕರು ವಿವಿಧ ಪ್ರದೇಶಗಳಿಗೆ ಹೋಗಿ ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಲಿಲ್ಲ. ಇಷ್ಟೆಲ್ಲಾ ಕಷ್ಟನಷ್ಟಗಳನ್ನು ಎದುರಿಸಿದ ನಮ್ಮ ಜನರನ್ನು ಪ್ರಭುತ್ವ ನಿರ್ಲಕ್ಷಿಸಿರುವುದು ಅರಾಜಕತೆಗೆ ಸಾಕ್ಷಿಯಾಗಿದೆ. ‘ಇಷ್ಟೆಲ್ಲಾ ದುರಂತಗಳು ಜರುಗಿದರೂ ಇನ್ನೂ ಮೋದಿ ಯಾಕೆ ಬರಲಿಲ್ಲ’ ಎಂಬ ಪ್ರಶ್ನೆಯನ್ನು ನಮ್ಮ ಜನರು ಸಹಜವಾಗಿ ಮುಂದಿಟ್ಟಿದ್ದಾರೆ.

ಈಗ ಮೋದಿ ಮತ್ತು ಬಳಗ ಚುನಾವಣಾ ಸಂದರ್ಭದಲ್ಲಿ ದಿನ ಬಿಟ್ಟು ದಿನ ಕರ್ನಾಟಕದ ಜನರನ್ನು ಭೇಟಿ ಮಾಡಿ ‘ನಮ್ಮದೇ ಶ್ರೇಷ್ಟ ಆಡಳಿತ, ನಮಗೆ ನಿಮ್ಮ ಮತ ನೀಡಿ’ ಎಂದು ಸುಳ್ಳು ಪ್ರಚಾರ ನಡೆಸುತ್ತಿರುವುದು ನಮ್ಮ ಜನರಿಗೆ ಅರ್ಥವಾಗಿದೆ. ಕರ್ನಾಟಕ ಮತ್ತೊಂದು ಉತ್ತರ ಪ್ರದೇಶ ಅಥವಾ ಗುಜರಾತ್ ಆಗಲು ಸಾಧ್ಯವಿಲ್ಲ. ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲಗೌಡ, ಕುವೆಂಪು ಮೊದಲಾದ ದಾರ್ಶನಿಕರು ಮತ್ತು ದೇವರಾಜ ಅರಸು, ಸಿದ್ದರಾಮಯ್ಯ ಮುಂತಾದ ನಾಯಕರ ಪ್ರಭಾವ ಹಸಿರಾಗಿದೆ. ಇಲ್ಲಿ ಯಾವುದೇ ಥಳಕು-ಬಳಕು ನಡೆಯುವುದಿಲ್ಲ ಎಂಬುದನ್ನು ನಮ್ಮ ಪ್ರಜ್ಞಾವಂತ ಮತದಾರರು ಮನಗಂಡಿದ್ದಾರೆ.

ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X