2010 ಮತ್ತು 2014ರ ನಡುವೆ ಪಂಜಾಬ್ನ ಮಾನ್ಸಾದಲ್ಲಿ 1,980 ಮೆಗಾವ್ಯಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಕಾಮಗಾರಿಗಾಗಿ ಚೀನೀ ಪ್ರಜೆಗಳನ್ನು ಕರೆತರಲು ವೀಸಾಗಳನ್ನು ವಿತರಿಸುವುದಕ್ಕಾಗಿ ಲಂಚ ಪಡೆದಿದ್ದಾರೆ ಎಂದು ಕಾರ್ತಿ ಪಿ ಚಿದಂಬರಂ ಮತ್ತು ಇತರ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಇದಾದ ಬಳಿಕ, ಜಾರಿ ನಿರ್ದೇಶನಾಲಯವು (ಇಡಿ) ಪ್ರಾಸಿಕ್ಯೂಷನ್ ದಾಖಲಿಸಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)-2002ರ ನಿಬಂಧನೆಗಳ ಅಡಿಯಲ್ಲಿ ಹೊಸದಿಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ದಾಖಲಿಸಿರುವ ಎಫ್ಐಆರ್ ಆಧರಿಸಿ ಇಡಿ ತನಿಖೆ ನಡೆಸಿದೆ. ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ, ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್, ಎಸ್ ಭಾಸ್ಕರರಾಮನ್, ತಲವಂಡಿ ಸಾಬೋ ಪವರ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಇಡಿ ದೂರು ದಾಖಲಿಸಿದೆ.
ಮಾರ್ಚ್ 19ರಂದು ನ್ಯಾಯಾಲಯವು ಪ್ರಾಸಿಕ್ಯೂಷನ್ ದೂರನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಮಾನ್ಸಾದಲ್ಲಿ ಪವರ್ ಪ್ರಾಜೆಕ್ಟ್ ನಡೆಸುತ್ತಿರುವ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ಗೆ ಚೀನೀ ವೀಸಾಗಳನ್ನು ಮರುಬಳಕೆ ಮಾಡಲು ಅನುಮೋದನೆ ಕೊಡಿಸಲು ಕಾರ್ತಿ ತಮ್ಮ ಆಪ್ತ ಸಹಾಯಕ ಎಸ್ ಭಾಸ್ಕರರಾಮನ್ ಮೂಲಕ 50 ಲಕ್ಷ ರೂ. ತೆಗೆದುಕೊಂಡಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿರುವುದಾಗಿ ಇಡಿ ಹೇಳಿದೆ.
ಕಾರ್ತಿ ಅವರ ತಂದೆ ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ ಗೃಹ ಸಚಿವಾಲಯದಿಂದ ವೀಸಾಗಳ ಮರುಬಳಕೆಗೆ ಅನುಮೋದನೆ ಪಡೆಯಲು ಕಂಪನಿಯ ಅಧಿಕಾರಿಗಳು ಕಾರ್ತಿ ಅವರನ್ನು ಸಂಪರ್ಕಿಸಿದ್ದರು. ಆಗ, ಕಂಪನಿಯು ಕಾಲ್ಪನಿಕ ಸೇವೆಗಳ ಹೆಸರಿನಲ್ಲಿ ಎಂಟ್ರಿ ಆಪರೇಟರ್ಗೆ ಚೆಕ್ ಮೂಲಕ 50 ಲಕ್ಷ ರೂ.ಗಳನ್ನು ಭಾಸ್ಕರರಾಮನ್ ಮೂಲಕ ಕಾರ್ತಿ ಅವರಿಗೆ ಪಾವತಿಸಿದೆ ಎಂದು ಇಡಿ ಹೇಳಿದೆ.