ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವರ್ಗಾವಣೆ ದಂಧೆಯಲ್ಲಿ ₹500 ಕೋಟಿ ವಹಿವಾಟು ನಡೆಸಲಾಗಿದೆ. ಈ ಬಗ್ಗೆ ನನಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಜೆಡಿಎಸ್ ಮುಖಂಡ, ಕಳೆದ ಎರಡು ತಿಂಗಳಲ್ಲಿ ವರ್ಗಾವಣೆಯ ವಿಚಾರವಾಗಿ ₹500 ಕೋಟಿಗೂ ಹೆಚ್ಚಿನ ವ್ಯವಹಾರ ನಡೆದಿದೆ. ನಾನು ಇದನ್ನು ಊಹೆ ಮಾಡಿ ಹೇಳುತ್ತಿಲ್ಲ. ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮಟ್ಟಕ್ಕೆ ಆದರೆ ರಾಜ್ಯ ಉಳಿಯುತ್ತಾ? ಇವುಗಳಿಗೆಲ್ಲ ಎಲ್ಲಿಂದ ಸಾಕ್ಷಿ ತಗೊಂಡು ಬರ್ತಿರಾ ಎಂದು ಪ್ರಶ್ನಿಸಿದರು.
“2008ರಿಂದ 2013ರವರೆಗೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ₹600 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಇದೇ ಸಿದ್ದರಾಮಯ್ಯ ಮತ್ತು ಮಹದೇವಪ್ಪನವರು ವಿರೋಧ ಪಕ್ಷದಲ್ಲಿ ಚರ್ಚೆ ಮಾಡ್ತಾರೆ. ಸದನ ಸಮಿತಿಯ ರಚನೆಯಾಗಿ ಅದರ ವರದಿಯೂ ಬಂದಿತ್ತು. ಆದರೆ ವರದಿಯಲ್ಲಿದ್ದ ಅಧಿಕಾರಿಗಳಿಗೆ ಪದೋನ್ನತಿ ಕೊಟ್ಟದ್ದು ನಾನಲ್ಲ. ಕಪ್ಪ ಕಾಣಿಕೆಗಳು ಹೇಗೆಲ್ಲ ನಡೀತಿತ್ತು ಎನ್ನುವುದು ಗೊತ್ತಿದೆ” ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ನೋಡಿದರೆ ಗೊತ್ತಾಗುತ್ತದೆ. ಏನೆಲ್ಲ ರಾದ್ಧಾಂತ ಆಗಿದೆ ಅನ್ನುವುದು ಪತ್ರಿಕೆ ನೋಡಿದರೆ ಗೊತ್ತಾಗುತ್ತದೆ. ಅದ್ಯಾರೋ ಪಾಯಲ್ ಅಂತ ನೇಮಕವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸಂಬಂಧಿಕರಿದ್ದಾರಂತೆ. ಅವರು ಯಾರು ಅಂತ ನನಗೆ ಗೊತ್ತಿಲ್ಲ. ಸರ್ವರಿಗೂ ಸಮಪಾಲು, ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಿಎಂ ಹೇಳುತ್ತಿದ್ದಾರೆ. ಇವರ ಸಿದ್ದಾಂತ ನೋಡಿದರೆ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.
ಹೆಸರನ್ನು ಎತ್ತದೆ ಪರೋಕ್ಷವಾಗಿ ಶಾಸಕರೋರ್ವರ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ಒಬ್ಬರು ಮಜ್ಜಿಗೆ ಮಾರುತ್ತಿದ್ದರು. ಆಮೇಲೆ ಜಿ.ಪಂ. ಸದಸ್ಯರಾದರು. ಆಮೇಲೆ ತಮ್ಮನನ್ನು ಬಿಟ್ಟುಕೊಂಡು ಗುತ್ತಿಗೆ ಮಾಡುತ್ತಿದ್ದರು. ಆಮೇಲೆ ಶಾಸಕರಾದರು. ಅವರು ಟವೆಲ್ ಕೊಡವಿದ್ರೆ ಹಣ ಉದುರುತ್ತದೆ. ಹೀಗಂತ ಅಧಿಕಾರಿಗಳೇ ಹೇಳುತ್ತಿದ್ದರು ಎಂದರು.
ಎನ್ಡಿಎ ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ಯಾರೂ ಕರೆ ಕೂಡ ಮಾಡಿಲ್ಲ. ಅದೇ ರೀತಿಯಾಗಿ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮಹತ್ವದ ಸಭೆಗೆ ಜೆಡಿಎಸ್ಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ.
ಮಹಾಘಟಬಂಧನ್ ಸಭೆಗೆ ಕಾಂಗ್ರೆಸ್ ಹಲವು ಪಕ್ಷಗಳ ನಾಯಕರಿಗೆ ಆಹ್ವಾನಿಸಿದ್ದಾರೆ. ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ, ಹಾಗಾಗಿ ಒಂದು ಅವಕಾಶ ಕೊಡಿ ಎಂದು ಜನರಲ್ಲಿ ಕೇಳಿದ್ದೆ. ಸಿದ್ದರಾಮಯ್ಯ ಅವರನ್ನು ಕನ್ನಡ ಪಂಡಿತರು ಎಂದು ತಿಳಿದುಕೊಂಡಿದ್ದೆ. ಆದರೆ, ಅವರಿಗೆ ಕನ್ನಡ ಅರ್ಥ ಆಗಲ್ಲ ಅನ್ನಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.