‘ಶಕ್ತಿ ಯೋಜನೆ’ಯ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು 2023-24ನೇ ಸಾಲಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗಿದ್ದ ₹581 ಕೋಟಿ ಮೊತ್ತದಷ್ಟು ಮೋಟಾರು ವಾಹನ ತೆರಿಗೆಯ ಪಾವತಿ ಮಾಡುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜ.5) ನಡೆಸಿದ ಸಚಿವ ಸಂಪುಟದ 2024ನೇ ಸಾಲಿನ ಮೊದಲನೇ ಸಚಿವ ಸಂಪುಟ ಸಭೆಯ ನಂತರ ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ವೇಳೆ ಮಾಹಿತಿ ನೀಡಿದರು.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಸರ್ಕಾರಕ್ಕೆ ಮೋಟಾರು ವಾಹನ ತೆರಿಗೆಯ ರೂಪದಲ್ಲಿ ಸುಮಾರು 581.47 ಕೋಟಿಯಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲು ಬಾಕಿ ಇತ್ತು. ಶಕ್ತಿ ಯೋಜನೆಯಿಂದ ಅವರಿಗೆ ಇದು ಹೊರೆ ಎಂದು ಎನಿಸಿದೆ. ಹಾಗಾಗಿ, ಈ ಎಲ್ಲ ಮೊತ್ತವನ್ನು ಪಾವತಿ ಮಾಡುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ನಾಲ್ಕು ಸಾರಿಗೆ ಸಂಸ್ಥೆಗಳ ಪೈಕಿ ಕೆಎಸ್ಆರ್ಟಿಸಿಯು 243.52 ಕೋಟಿ , ಬಿಎಂಟಿಸಿ 119.88 ಕೋಟಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 103.91 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು 114.16 ಕೋಟಿ ಬಾಕಿ ಇತ್ತು. ಇವೆಲ್ಲವೂ ಸೇರಿ ಒಟ್ಟು 581.47 ಕೋಟಿಯಷ್ಟಾಗುತ್ತದೆ. ಇದನ್ನು ಪಾವತಿ ಮಾಡುವುದರಿಂದ ಸರ್ಕಾರ ವಿನಾಯಿತಿ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.