ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಮಣಿಪುರ ಹಿಂಸಾಚಾರದ ಬಳಿಕ ಅಮಿತ್ ಶಾ ಅವರ ಎರಡನೇ ಭೇಟಿ ಇದಾಗಲಿದೆ.
ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಕಳೆದ 11 ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಿದ್ದು ಈವರೆಗೆ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
2023 ರ ಮೇ 3 ರಂದು ಘರ್ಷಣೆಗಳು ಪ್ರಾರಂಭವಾಗಿದೆ. ಅದಾದ ಬಳಿಕ ಮೇ 29 ರಿಂದ ಜೂನ್ 2 ರವರೆಗೆ ಬಿಜೆಪಿ ಆಡಳಿತದ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳ ಭೇಟಿ ಮಾಡಿದ್ದರು. ಆದರೆ ಅದಾದ ಬಳಿಕ ಮತ್ತೆ ಭೇಟಿ ನೀಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಭೇಟಿ ನೀಡುವ ನಿರೀಕ್ಷೆಯಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಸ್ಥಳಾಂತರಗೊಂಡ ಮತದಾರರಿಗೆ ʼಚುನಾವಣೆʼಗಳು ಅರ್ಥಹೀನ
“ಕೇಂದ್ರ ಸಚಿವರು ಶೀಘ್ರದಲ್ಲೇ ಇಂಫಾಲ್ಗೆ ಬರುವ ಸಾಧ್ಯತೆಯಿದೆ ಮತ್ತು ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿದೆ” ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ. ಇದಲ್ಲದೆ ಶುಕ್ರವಾರ ಕಾಕ್ಚಿಂಗ್ ಜಿಲ್ಲೆಯ ಜನರೊಂದಿಗೆ ತಮ್ಮ ಅಧಿಕೃತ ನಿವಾಸದಲ್ಲಿ “ಸಂವಾದಾತ್ಮಕ ಅಧಿವೇಶನ” ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು, “ಅಮಿತ್ ಶಾ ಅವರು ಮಣಿಪುರಕ್ಕೆ ಭೇಟಿ ನೀಡಬಹುದು” ಎಂದು ಹೇಳಿದ್ದರು. ಆದರೆ ಖಚಿತವಾಗಿ ತಿಳಿಸಿಲ್ಲ ಎಂದು ವರದಿಯಾಗಿದೆ.
ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕೆಲವು ಒಳ ಮಣಿಪುರ ಕ್ಷೇತ್ರಕ್ಕೆ ಏಪ್ರಿಲ್ 19 ರಂದು, ಪರಿಶಿಷ್ಟ ಪಂಗಡ-ಮೀಸಲು ಹೊರ ಮಣಿಪುರ ಕ್ಷೇತ್ರಕ್ಕೆ ಎರಡು ಹಂತಗಳಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಬಿಜೆಪಿಯು ಈಗಾಗಲೇ ಒಳ ಮಣಿಪುರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕುಕಿ ಮತ್ತು ನಾಗಾ ಸಮುದಾಯ ಪ್ರಾಬಲ್ಯವನ್ನು ಹೊಂದಿರುವ ಹೊರ ಮಣಿಪುರದಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
Today, I had the esteemed privilege of meeting with the Hon’ble Union Home Minister, Shri @AmitShah Ji in New Delhi. Engaging in a profound exchange, we discussed matters of paramount importance concerning our state.
Rest assured, the Government of India is set to take some… pic.twitter.com/3nR7S4piJ9
— N.Biren Singh (Modi Ka Parivar) (@NBirenSingh) February 3, 2024
ಫೆಬ್ರವರಿ 3 ರಂದು ದೆಹಲಿಯಲ್ಲಿ ಸಿಎಂ ಬಿರೇನ್ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಸಭೆಯ ನಂತರ, ಸಿಂಗ್ ಅವರು ಎಕ್ಸ್ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ. “ಇಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿದೆ. ನಾವು ನಮ್ಮ ರಾಜ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯಗಳನ್ನು ಚರ್ಚಿಸಿದ್ದೇವೆ. ಭಾರತ ಸರ್ಕಾರವು ಮಣಿಪುರದ ಜನರ ಹಿತಾಸಕ್ತಿಗಳಿಗಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಲೋಕಸಭೆ ಕದನ | ಸಂಘರ್ಷ ಪೀಡಿತ ಮಣಿಪುರದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ?
ಅಮಿತ್ ಶಾ ಅವರಂತೆ ಪ್ರಧಾನಿ ನರೇಂದ್ರ ಮೋದಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಒಂದು ಬಾರಿಯೂ ಅಲ್ಲಿಗೆ ಭೇಟಿ ನೀಡಿಲ್ಲ. ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ನಿರಂತರವಾಗಿ ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿದ್ದಾರೆ. ಹಿಂಸಾಚಾರವು ಮೇ ತಿಂಗಳಲ್ಲಿ ಆರಂಭವಾಗಿದ್ದರೂ ಯಾವುದೇ ಹೇಳಿಕೆಯನ್ನು ನೀಡದ ಪ್ರಧಾನಿ ಮೋದಿ 2023 ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ತಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತ್ರ ಭಾಷಣದಲ್ಲಿ ಮಣಿಪುರದ ಉಲ್ಲೇಖ ಮಾಡಿದ್ದರು. ಭಾರತದ ಜನರು ರಾಜ್ಯದ ಜನರೊಂದಿಗೆ ನಿಂತಿದ್ದಾರೆ ಎಂದು ಹೇಳಿದರು.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಅಮಿತ್ ಶಾ ಮೈತೆ ಮತ್ತು ಕುಕಿಗಳ ನಡುವೆ ಶಾಂತಿ ಸಂವಾದಕ್ಕೆ ಕರೆ ನೀಡಿದರು. ತಮ್ಮ ಭೇಟಿ ವೇಳೆ ಕುಕಿ ಪ್ರಾಬಲ್ಯದ ಚುರಾಚಂದ್ಪುರ ಜಿಲ್ಲೆ ಮತ್ತು ಮ್ಯಾನ್ಮಾರ್ನ ಗಡಿಯಲ್ಲಿರುವ ಮೋರೆಹ್ ಪಟ್ಟಣಕ್ಕೆ ಭೇಟಿ ನೀಡಿದರು. ಆದರೆ ಪ್ರಧಾನಿ ಮೋದಿ ಮಾತ್ರ ಯಾವುದೇ ಹೇಳಿಕೆ ನೀಡಿರಲಿಲ್ಲ, ಭೇಟಿ ಮಾಡಿರಲಿಲ್ಲ.