ಪ್ರತಿಯೊಬ್ಬ ಭಾರತೀಯರ ಸಾಮಾಜಿಕ ಮಾಧ್ಯಮಗಳ ಖಾತೆಗಳು, ಇಮೇಲ್ಗಳು, ಬ್ಯಾಂಕ್ ಖಾತೆಗಳು, ಆನ್ಲೈನ್ ಹೂಡಿಕೆಗಳು ಹಾಗೂ ವ್ಯಾಪಾರ ಸಂಬಂಧಿತ ಖಾತೆಗಳ ‘ಆ್ಯಕ್ಸೆಸ್’ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪಡೆಯಲಾಗಿದ್ದಾರೆ. ಈ ಎಲ್ಲ ಖಾತೆಗಳ ತನಿಖೆ ಮಾಡಲು ಅವರು ಖಾತೆಗಳಿಗೆ ಪ್ರವೇಶಿಸಲಿದ್ದಾರೆ. ಅದಕ್ಕಾಗಿ ಅವರು ಕಾನೂನುಬದ್ಧ ಹಕ್ಕನ್ನೂ ಪಡೆಯಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ಅದಾಯ ತೆರಿಗೆ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ದಪಡಿಸುತ್ತಿದೆ. ಅದು ಅಂಗೀಕಾರವಾಗಿ, ಜಾರಿಗೆ ಬಂದರೆ, ಮುಂದಿನ ವರ್ಷದಿಂದ ಅದಾಯ ತೆರಿಗೆ ಅಧಿಕಾರಿಗಳು ಭಾರತದಲ್ಲಿ ಯಾರದ್ದೇ ಖಾತೆಗಳಿಗೆ ನೇರವಾಗಿ ‘ಆ್ಯಕ್ಸೆಸ್’ ಪಡೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ. ಭಾರತೀಯರಲ್ಲಿ ಯಾರಾದರೂ ತೆರಿಗೆ ಪಾವತಿಸಿಲ್ಲದಿದ್ದರೆ ಅಥವಾ ಯಾವುದೇ ಅಘೋಷಿತ ಆಸ್ತಿಗಳು, ನಗದು, ಚಿನ್ನ, ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರಬಹುದು ಎಂದು ತೆರಿಗೆ ಅಧಿಕಾರಿಗಳು ಅನುಮಾನಿಸಿದರೆ, ಅಂತಹವರ ಖಾತೆಗಳನ್ನು ಅಧಿಕಾರಿಗಳು ತನಿಖೆ ಮಾಡಲು ಮಸೂದೆಯು ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ.
ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಈ ಹೊಸ ನಿಬಂಧನೆಯನ್ನು ಆದಾಯ ತೆರಿಗೆ ಮಸೂದೆಯಲ್ಲಿ ಆದಾಯ ತೆರಿಗೆ ಇಲಾಖೆ ಪ್ರಸ್ತಾಪಿಸಿದೆ. ಇದರ ಉದ್ದೇಶ ಆರ್ಥಿಕ ವಂಚನೆ, ಅಘೋಷಿತ ಆಸ್ತಿಗಳು ಮತ್ತು ತೆರಿಗೆ ವಂಚನೆಯನ್ನು ತಡೆಯುದಾಗಿದೆ ಎಂದು ವರದಿಯ ಹೇಳಿದೆ.
ತೆರಿಗೆ ಅಧಿಕಾರಿಗಳು ಡಿಜಿಟಲ್ ಮಾಹಿತಿಯನ್ನು ಯಾವಾಗ ಪಡೆಯುತ್ತಾರೆ ಅಥವಾ ಪ್ರವೇಶಿಸುತ್ತಾರೆ?
ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆ-1961ರ ಸೆಕ್ಷನ್ 132ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಆದಾಯ, ಆಸ್ತಿಗಳು ಅಥವಾ ಹಣಕಾಸು ದಾಖಲೆಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಇದ್ದರೆ, ಅಂತಹ ವ್ಯಕ್ತಿಯ ಖಾತೆಗಳ ‘ಆ್ಯಕ್ಸೆಸ್’ಅನ್ನು ತೆರಿಗೆ ಅಧಿಕಾರಿಗಳು ಪಡೆಯಬಹುದು. ತನಿಖೆ ನಡೆಸಬಹುದು. ವಶಕ್ಕೂ ಪಡೆಯಬಹುದು.
ಈವರೆಗೆ, ಆಪಾದಿತ ವ್ಯಕ್ತಿಯು ಘೋಷಿತ ಆಸ್ತಿಗಳು ಅಥವಾ ಹಣಕಾಸಿನ ದಾಖಲೆಗಳನ್ನು ಮರೆಮಾಚಿದ್ದಾರೆ ಎಂಬ ಖಚಿತತೆಯ ಮೇಲೆ ಅವರ ನಿವಾಸಗಳು, ಕಚೇರಿಗಳು ಹಾಗೂ ಲಾಕರ್ಗಳ ಮೇಲೆ ದಾಳಿ ಮಾಡಿ, ಶೋಧಿಸಿ, ತನಿಖೆ ಮಾಡುವ ಅಧಿಕಾರವನ್ನು ಅಧಿಕಾರಿಗಳು ಹೊಂದಿದ್ದರು. ಆದರೆ, 2026ರ ಏಪ್ರಿಲ್ 1ರಿಂದ ಅವರ ಅಧಿಕಾರ ಡಿಜಿಟಲ್ ಜಗತ್ತಿಗೂ ವಿಸ್ತರಿಸಿಲಿದೆ. ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಟಲ್ ತಾಣದಲ್ಲಿ ಬಚ್ಚಿಡಲಾಗಿದೆ ಎಂದು ಅಧಿಕಾರಿಗಳು ಅನುಮಾನಿಸಿದರೆ, ಅಧಿಕಾರಿಗಳು ಆರೋಪಿಗಳ ಕಂಪ್ಯೂಟರ್ ಮತ್ತು ಆನ್ಲೈನ್ ಖಾತೆಗಳಿಗೆ ನೇರವಾಗಿ ಪ್ರವೇಶಿಸುವ, ಪರಿಶೀಲಿಸುವ ಅಧಿಕಾರಿವನ್ನು ಪಡೆಯುತ್ತಾರೆ ಎಂದು ವರದಿ ಹೇಳಿದೆ.
ಏನಿದರ ಅರ್ಥ?
ಯಾವುದೇ ವ್ಯಕ್ತಿ ತಮ್ಮ ಆದಾಯ ಅಥವಾ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ತೆರಿಗೆ ಅಧಿಕಾರಿಗಳು ಅನುಮಾನಿಸಿದರೆ, ಅವರು ಆ ವ್ಯಕ್ತಿಯ ಇಮೇಲ್ಗಳು, ಬ್ಯಾಂಕ್ ಖಾತೆಗಳು, ವ್ಯಾಪಾರ ಸಂಬಂಧಿತ ಖಾತೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತನಿಖೆ ಮಾಡಬಹುದು ಎಂದು ವರದಿ ವಿವರಿಸಿದೆ.
ಈ ವರದಿ ಓದಿದ್ದೀರಾ?: ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!
ಹಣಕಾಸಿನ ವಹಿವಾಟುಗಳು ಡಿಜಿಟಲೀಕರಣ ಆಗುತ್ತಿರುವಂತೆ, ತೆರಿಗೆ ಅಧಿಕಾರಿಗಳ ತನಿಖಾ ಪ್ರಕ್ರಿಯೆಯೂ ಕೂಡ ಡಿಜಿಟಲ್ ವೇದಿಕೆಗೆ ವಿಸ್ತಿರಿಸುತ್ತಿದೆ. ಆದರೆ, ತೆರಿಗೆ ಅಧಿಕಾರಿಗಳಿಗೆ ಈ ಅಧಿಕಾರ ನೀಡುವುದು ಪರಿಣಾಮಕಾರಿಯಾಗುತ್ತದೆಯೇ ಅಥವಾ ಜನರ ಗೌಪ್ಯತೆಗೆ ಸಂಬಂಧಿತ ಸಮಸ್ಯೆಗಳನ್ನು ಹುಟ್ಟುಹಾಕಬಹುದೇ ಎಂಬ ಕಳವಳವೂ ಇದೆ. ಮಸೂದೆ ರಚನೆಯಾಗಿ, ಅದು ಚರ್ಚೆಗೆ ಬಂದಾಗ ಮತ್ತಷ್ಟು ಮಾಹಿತಿ ದೊರೆಯಲಿದೆ. ಚರ್ಚೆಗಳು ನಡೆಯಲಿವೆ. ಆಗ, ಗೌಪ್ಯತೆ ವಿಚಾರಗಳ ಕುರಿತು ಸರ್ಕಾರ ಯಾವ ರೀತಿಯ ಸಮಜಾಯಿಷಿ ನೀಡಲಿದೆ. ಕಾದುನೋಡಬೇಕಷ್ಟೇ…!