ಆಂಧ್ರಪ್ರದೇಶದ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಸಂಜೆ ಅನಾವರಣಗೊಳಿಸಿದ್ದು, ಇಂದಿನಿಂದ(ಜ.20) ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ.
ಸಾಮಾಜಿಕ ನ್ಯಾಯದ ಪ್ರತಿಮೆ ಇದಾಗಿದ್ದು 125 ಅಡಿ ಎತ್ತರವಾಗಿದೆ. ಪ್ರತಿಮೆ ನಿರ್ಮಾಣದ ಯೋಜನೆಗೆ ಒಟ್ಟು 404.35 ಕೋಟಿ ರೂಪಾಯಿ ವೆಚ್ಚವಾಗಿದೆ. ಪ್ರತಿಮೆಯ ಸುತ್ತಮುತ್ತ 18.81 ಎಕರೆ ಭೂಮಿಯಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣದ ವೇಳೆ ಆಕರ್ಷಕ ಸಿಡಿಮದ್ದುಗಳನ್ನು ಸಿಡಿಸಲಾಯಿತು.
World’s tallest statue of Dr. Ambedkar Unveiled at Vijayawada today. It is a #SymbolOfPride for all Indians.#StatueofSocialJustice pic.twitter.com/hcf8SuqEEk
— Ambedkar International Mission (@AIMUSA_Info) January 19, 2024
“ಇದು ದೇಶದ ಸಂವಿಧಾನ ಸಂಸ್ಥಾಪಕನ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಆಗಿದೆ. ಜಗತ್ತಿನಲ್ಲಿ ಅವರ ಇಷ್ಟು ಎತ್ತರ ಪ್ರತಿಮೆ ಇನ್ನೊಂದು ಇಲ್ಲ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯದ ಸಂಕೇತವಾಗಿ ಈ ಪ್ರತಿಮೆ ನಿಲ್ಲಲಿದೆ. ಈ ಪ್ರತಿಮೆಯು ಅತ್ಯಂತ ಎತ್ತರದ ಧಾರ್ಮಿಕೇತರ ಪ್ರತಿಮೆ ಮಾತ್ರವಲ್ಲದೆ ಭಾರತದಲ್ಲೇ ತಯಾರಾಗಿರುವ ಹೆಮ್ಮೆಯ ಪ್ರತಿಮೆಯಾಗಿದೆ” ಎಂದು ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ನೆಲದಿಂದ 206 ಅಡಿ ಎತ್ತರದಲ್ಲಿರುವ ‘ಸಾಮಾಜಿಕ ನ್ಯಾಯದ ಪ್ರತಿಮೆ’ ಪ್ರತಿಮೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತೆಯ ಪ್ರತಿಮೆ’ ಅಗ್ರಸ್ಥಾನದಲ್ಲಿರುವ ವಿಶ್ವದ 50 ಅತಿ ಎತ್ತರದ ಪ್ರತಿಮೆಗಳ ಪಟ್ಟಿಯಲ್ಲಿರಲಿದೆ. 175 ಅಡಿ ಎತ್ತರದ ಎರಡನೇ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ನೆರೆಯ ತೆಲಂಗಾಣದಲ್ಲಿದೆ.
రాష్ట్ర చరిత్రలో నిలిచిపోయే అద్భుత చారిత్రక ఘట్టం. ప్రపంచంలోకెల్లా అతిపెద్ద అంబేద్కర్ విగ్రహ ఆవిష్కరణ, స్మృతివనం ప్రారంభోత్సవం. కార్యక్రమాన్ని తిలకించేందుకు లక్షలాదిగా తరలివచ్చిన ప్రజలతో జనసంద్రంగా మారిన స్మృతివనం ప్రాంగణం.#StatueOfSocialJustice#DrBRAmbedkarstatue#YSJagan#AP https://t.co/7C0fu4jXgZ pic.twitter.com/3ToYpr9zON
— CMO Andhra Pradesh (@AndhraPradeshCM) January 19, 2024
81 ಅಡಿ ಎತ್ತರದ ಪೀಠದ ಮೇಲೆ 125 ಅಡಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರ ಒಟ್ಟು ಎತ್ತರ 206 ಅಡಿ. 18.81 ಎಕರೆಯಲ್ಲಿ ಸ್ಮಾರಕ ವನ ಸ್ಥಾಪಿಸಲಾಗಿದೆ. 9 ಎಕರೆ ಸಂಪೂರ್ಣ ಹಸಿರಿನಿಂದ ತುಂಬಿದೆ.
ಆಂಫಿಥಿಯೇಟರ್ ಮತ್ತು ವಸ್ತುಸಂಗ್ರಹಾಲಯವನ್ನು ಕೂಡ ಸ್ಥಾಪಿಸಲಾಗಿದೆ. ಗ್ರಂಥಾಲಯದ ಜತೆಗೆ ಅನುಭವ ಕೇಂದ್ರವನ್ನೂ ಇಲ್ಲಿ ಸ್ಥಾಪಿಸಲಾಗಿದೆ. ಕಂಚಿನ ಪ್ರತಿಮೆಯನ್ನು ದೆಹಲಿಯಲ್ಲಿ ಮಾಡಲಾಗಿತ್ತು. ಅದನ್ನು ಭಾಗಗಳಾಗಿ ವಿಜಯವಾಡಕ್ಕೆ ಸ್ಥಳಾಂತರಿಸಿ ನಿಯಮಿತ ರೀತಿಯಲ್ಲಿ ಸ್ಮೃತಿವನದಲ್ಲಿ ಸ್ಥಾಪಿಸಿ ಸುಂದರವಾಗಿ ಅಲಂಕರಿಸಲಾಗಿದೆ.
ನೆಲ ಮಹಡಿಯಲ್ಲಿ ನಾಲ್ಕು ಸಭಾಂಗಣಗಳಿದ್ದು, ಪ್ರತಿಯೊಂದೂ ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಅವುಗಳಲ್ಲಿ ಒಂದು ಸಿನಿಮಾ ಹಾಲ್ ಮತ್ತು ಉಳಿದ ಮೂರು ಹಾಲ್‌ಗಳಲ್ಲಿ ಅಂಬೇಡ್ಕರ್ ಅವರ ಇತಿಹಾಸವನ್ನು ಹೇಳುವ ಡಿಜಿಟಲ್ ಮ್ಯೂಸಿಯಂ ಅನ್ನು ಸ್ಥಾಪಿಸಲಾಗಿದೆ. 2000 ಆಸನ ಸಾಮರ್ಥ್ಯದ ಸಮ್ಮೇಳನ ಸಭಾಂಗಣ, ಉಪಾಹಾರ ಗೃಹ ಹಾಗೂ ಮಕ್ಕಳಿಗೆಂದೇ ಮೀಸಲಾಗಿರುವ ಆಟದ ಆವರಣವನ್ನೂ ಒಳಗೊಂಡಿದೆ.
ಈ ಯೋಜನೆಯನ್ನು ನೊಯ್ದಾ ಮೂಲದ ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಯು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ.
ಜನವರಿ 20ರಂದು ಪ್ರತಿಮೆ ಪ್ರತಿಷ್ಠಾಪನೆಗೊಂಡಿರುವ ಸ್ವರಾಜ್ ಮೈದಾನದ ದ್ವಾರಗಳು ತೆರೆಯಲಿದ್ದು, ಆ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿರುವ 125 ಅಡಿ ಎತ್ತರದ ಪ್ರತಿಮೆಯ ವೀಕ್ಷಣೆಯು ಸಾರ್ವಜನಿಕರಿಗೆ ಅಧಿಕೃತವಾಗಿ ತೆರೆದುಕೊಂಡಿದೆ.